Cauvery water to Tamil Nadu: ಹೆಚ್ಚು ಮಳೆ ಬರಲಿ, ತಮಿಳುನಾಡಿಗೂ ನೀರು ಹರಿಯಲಿ: ಡಿಸಿಎಂ ಡಿಕೆ ಶಿವಕುಮಾರ್

| Updated By: Ganapathi Sharma

Updated on: May 23, 2024 | 7:05 AM

DK Shivakumar: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಶಾಕ್ ನೀಡಿದ ಮರುದಿನವೇ ಡಿಸಿಎಂ ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ತಮಿಳುನಾಡಿಗೆ ನೀರು ಹರಿಸುವ ಬಗ್ಗೆ ಅವರು ನೀಡಿದ ಹೇಳಿಕೆಗೆ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ. ಹಾಗಾದರೆ ಡಿಕೆ ಶಿವಕುಮಾರ್ ಹೇಳಿದ್ದೇನು? ಮುಂದೆ ಓದಿ.

Cauvery water to Tamil Nadu: ಹೆಚ್ಚು ಮಳೆ ಬರಲಿ, ತಮಿಳುನಾಡಿಗೂ ನೀರು ಹರಿಯಲಿ: ಡಿಸಿಎಂ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Follow us on

ಬೆಂಗಳೂರು, ಮೇ 22: ಕಳೆದ ಕೆಲವು ದಿನಗಳಿಂದ ಕರ್ನಾಟಕದ ಹಲವೆಡೆ ಮಳೆಯಾಗುತ್ತಿದ್ದರೂ ರಾಜ್ಯ ಕಂಡ ಭೀಕರ ಬರಗಾಲದ ಪರಿಣಾಮವನ್ನು ತಗ್ಗಿಸುವಷ್ಟರ ಮಟ್ಟಿಗೆ ಜಲಾಶಯಗಳಲ್ಲಿ ನೀರು ಸಂಗ್ರಹವಾಗಿಲ್ಲ. ರಾಜ್ಯದ ಅನೇಕ ಕಡೆಗಳಲ್ಲಿ ನೀರಿಗೆ ಹಾಹಾಕಾರ ಇನ್ನೂ ಮುಂದುವರಿದಿದೆ. ಇದೇ ಸಂದರ್ಭದಲ್ಲಿ ತಮಿಳುನಾಡಿಗೆ (Tamil Nadu) 2.5 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management Authority) ಮಂಗಳವಾರ ಸೂಚನೆ ನೀಡಿದೆ. ಪರಿಸ್ಥಿತಿ ಹೀಗಿರುವಾಗಲೇ ರಾಜ್ಯದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ತಮಿಳುನಾಡಿಗೆ ನೀರು ಹರಿಯಲಿ ಎಂದಿದ್ದಾರೆ!

ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಮಳೆಯಾಗಲಿ. ಜಾಸ್ತಿ ಮಳೆಯಾದಷ್ಟೂ ನಮಗೆ ಒಳ್ಳೆಯದು. ಹೆಚ್ಚು ಮಳೆ ಬಂದು ತಮಿಳುನಾಡಿಗೂ ನೀರು ಹರಿಯಲಿ ಎಂದು ಹೇಳಿದ್ದಾರೆ.

ರಾಜ್ಯದಲ್ಲೇ ನೀರಿನ ಬಿಕ್ಕಟ್ಟು ತಾರಕಕ್ಕೇರಿರುವ ಸಂದರ್ಭದಲ್ಲಿ ಡಿಸಿಎಂ ತಮಿಳುನಾಡಿಗೆ ನೀರು ಹರಿಯಲಿ ಎಂದಿರುವುದಕ್ಕೆ ಪ್ರತಿಪಕ್ಷಗಳಿಂದ ಆಕ್ಷೇಪ ವ್ಯಕ್ತವಾಗುವ ಸಾಧ್ಯತೆ ಇದೆ. ಈ ಹಿಂದೆಯೇ ಅನೇಕ ಬಾರಿ ಬಿಜೆಪಿ ಹಾಗೂ ಜೆಡಿಎಸ್ ತಮಿಳುನಾಡಿಗೆ ನೀರು ಬಿಡುತ್ತಿರುವ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಪ್ರತಿಪಕ್ಷಗಳಿಗೆ ಅಸ್ತ್ರವಾಗುವ ಸಾಧ್ಯತೆ ಇದೆ.

ಸಿಟಿ ರೌಂಡ್ ಮಾಡುತ್ತಿದ್ದೇವೆ: ಡಿಕೆ ಶಿವಕುಮಾರ್

ಮಳೆ ಹಾನಿ ವೀಕ್ಷಣೆ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲು ಬೆಂಗಳೂರು ರೌಡ್ಸ್​​ ನಡೆಸುತ್ತಿರುವ ಬಗ್ಗೆಯೂ ಅವರು ಮಾಹಿತಿ ನೀಡಿದರು. ನಾನು ಹಾಗೂ ಸಿಎಂ ಸಿದ್ದರಾಮಯ್ಯ ಸಿಟಿ ರೌಂಡ್ ಮಾಡುತ್ತಿದ್ದೇವೆ. ಕೆಲವು ಜಾಗ ಆಯ್ಕೆ ಮಾಡಿದ್ದೇವೆ. ಎಲ್ಲೆಲ್ಲಿ ರಿಪೋರ್ಟ್ ಬಂದಿದೆ ಅಲ್ಲಿಗೆ ಬೇಟಿ ನೀಡುತ್ತಿದ್ದೇವೆ. ಆಡಳಿತ ಚುರುಕು ಮಾಡಬೇಕು ಎಂದು ಈ ಕ್ರಮ ಕೈಗೊಂಡಿದ್ದೇವೆ ಎಂದರು.

ರಾತ್ರಿ ಔತಣಕೂಟ ಇಟ್ಟುಕೊಂಡಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ. ಲೋಕಸಭೆ ಚುನಾವಣೆಯ ಯಾವ ರೀತಿ ಎದುರಿಸಲಾಗಿದೆ? ಮುಂದಿ ಯಾವ ರೀತಿ ಸಿದ್ಧತೆ ಬೇಕು ಎಂಬ ಕುರಿತು ಔತಣಕೂಟದಲ್ಲಿ ಚರ್ಚಿಸಲಿದ್ದೇವೆ ಎಂದು ಅವರು ಹೇಳಿದರು.

ಫೋನ್ ಕದ್ದಾಲಿಕೆ ಆರೋಪಕ್ಕೆ ತಿರುಗೇಟು

ಫೋನ್ ಕದ್ದಾಲಿಕೆ ಆರೋಪಕ್ಕೆ ತಿರುಗೇಟು ನೀಡಿದ ಡಿಕೆ ಶಿವಕುಮಾರ್, ಗೃಹ ಸಚಿವರಿಗೆ ಲಿಖಿತ ದೂರು ನೀಡಲು ಹೇಳಿ. ಯಾರ ಯಾರ ಕಾಲದಲ್ಲಿ ಕದ್ದಾಲಿಕೆ ಆಗಿದೆ ಗೊತ್ತಿದೆ. ಆರೋಪ ಮಾಡುತ್ತಿರುವವರು ಕೆಲವರು ಹೋಂ ಮಿನಿಸ್ಟರ್ ಆಗಿದ್ದವರು, ಕೆಲವರು ಚೀಫ್ ಮಿನಿಸ್ಟರ್ ಆಗಿದ್ದವರು. ಆಗ ಎಲ್ಲ ರಿಪೋರ್ಟ್ ಬಂದಿತ್ತಲ್ಲ ಫೋನ್ ಕದ್ದಾಲಿಕೆ ಬಗ್ಗೆ ಎಂದು ಹೇಳಿದರು.

ಇದನ್ನೂ ಓದಿ: ಬರದಲ್ಲೂ ಕರ್ನಾಟಕಕ್ಕೆ ಬರೆ, ತಮಿಳುನಾಡಿಗೆ ನೀರು ಬಿಡುವಂತೆ CWMA ನಿರ್ದೇಶನ

ಫೋನ್ ಕದ್ದಾಲಿಕೆ ಬಗ್ಗೆ ಕುಮಾರಸ್ವಾಮಿಗೆ ಯಾರು ಮಾಹಿತಿ ಕೊಟ್ಡಿದ್ದಾರೋ ಆ ಬಗ್ಗೆ ಅಫಿಡವಿಟ್ ಕೊಡಲು ಹೇಳಿ. ಮಾಹಿತಿ ಕೊಟ್ಟಿದ್ದರೆ ಬಹಳ ಸಂತೋಷ ಎಂದು ಡಿಕೆ ಶಿವಕುಮಾರ್ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:05 pm, Wed, 22 May 24