ಮೈಸೂರಿನ ದರೋಡೆ, ಶೂಟೌಟ್ ಪ್ರಕರಣದ 6 ಆರೋಪಿಗಳ ಬಂಧನ; ಪ್ರವೀಣ್ ಸೂದ್ ಮಾಹಿತಿ
ಮೈಸೂರಿನಲ್ಲಿ ನಡೆದ ದರೋಡೆ, ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ 8 ದರೋಡೆಕೋರರಲ್ಲಿ 6 ಜನರನ್ನು ಬಂಧಿಸಲಾಗಿದೆ ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಹೇಳಿದ್ದಾರೆ.
ಮೈಸೂರು: ಮೈಸೂರಿನಲ್ಲಿ ನಡೆದ ದರೋಡೆ ಮತ್ತು ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು 5 ಜನರನ್ನು ಬಂಧಿಸಲಾಗಿತ್ತು, ನಂತರ ಒಬ್ಬರನ್ನು ಬಂಧಿಸಲಾಯಿತು. ಈ ಘಟನೆಗೆ ಸಂಬಂಧಿಸಿದಂತೆ ಒಟ್ಟು 6 ಮಂದಿಯನ್ನು ಬಂಧಿಸಲಾಗಿದೆ ಎಂದು ಮೈಸೂರಿನಲ್ಲಿ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ. ಈ ಕುರಿತು ಇಂದು ಮೈಸೂರಿನಲ್ಲಿ ಪ್ರವೀಣ್ ಸೂದ್ ಸುದ್ದಿಗೋಷ್ಠಿ ನಡೆಸಿದ್ದಾರೆ.
ಆ. 23ರಂದು ಮೈಸೂರಿನಲ್ಲಿ ಅಹಿತಕರ ಘಟನೆ ಆಗಿತ್ತು. ದರೋಡೆ ಮತ್ತು ಶೂಟ್‌ಔಟ್ ಆಗಿತ್ತು. ಈ ಕೃತ್ಯಕ್ಕೆ ಕಂಟ್ರಿ ರಿವಾಲ್ವರ್ ಬಳಸಿದ್ದರು. ಇದು ಸಾಮಾನ್ಯ ಪ್ರಕರಣ ಅಲ್ಲ, ಆರೋಪಿ ಪತ್ತೆಯಾಗಲೇಬೇಕು ಅಂತ ಸೂಚನೆ ನೀಡಲಾಗಿತ್ತು. ಅದಕ್ಕಾಗಿ 5 ತಂಡಗಳನ್ನು ರಚಿಸಲಾಗಿತ್ತು. ನಾಲ್ಕು ದಿನಗಳ ನಂತರ ಇದುವರೆಗೂ 5 ಮಂದಿಯನ್ನು ಬಂಧಿಸಲಾಗಿದೆ, ಪ್ಲ್ಯಾನ್ ಮಾಡಿದ ಇಬ್ಬರ ಬಂಧನವಾಗಿದೆ. ಒಬ್ಬರು ಮೈಸೂರು ಮತ್ತೊಬ್ಬರು ಬೆಂಗಳೂರಿನವರಾಗಿದ್ದಾರೆ. ವೆಸ್ಟ್ ಬೆಂಗಾಲ್ ಮುಂಬಯಿ ರಾಜಸ್ಥಾನದಿಂದ ತಲಾ ಒಬ್ಬರನ್ನು ಬಂಧಿಸಲಾಗಿದೆ. ಆರನೇ ಆರೋಪಿ ಜಮ್ಮು ಮತ್ತು ಕಾಶ್ಮೀರದಿಂದ ಬಂಧಿಸಲಾಗಿದೆ. ಆರೋಪಿಗಳು ದೇಶದ 5 ಕಡೆಗೆ ಓಡಿ ಹೋಗಿದ್ದರು. ಆದರೂ ಅವರನ್ನು ಬಂಧಿಸಲಾಗಿದೆ ಎಂದು ಪ್ರವೀಣ್ ಸೂದ್ ತಿಳಿಸಿದ್ದಾರೆ.
ಕಳ್ಳತನವಾದ ಬಹುತೇಕ ವಸ್ತುಗಳು ಸಿಕ್ಕಿವೆ. ಈ ಕೃತ್ಯವೆಸಗಿದ 8 ದರೋಡೆಕೋರರಲ್ಲಿ 6 ಜನರನ್ನು ಬಂಧಿಸಲಾಗಿದೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮುಂಬೈ, ಜಮ್ಮು-ಕಾಶ್ಮೀರ, ರಾಜಸ್ಥಾನ, ಬೆಂಗಳೂರಿನಲ್ಲಿ ತಲಾ ಒಬ್ಬೊಬ್ಬರನ್ನು ಬಂಧಿಸಿದ್ದೇವೆ. ನಮ್ಮ ಪೊಲೀಸರು ಆಯಾ ರಾಜ್ಯಗಳಿಗೆ ತೆರಳಿ ಬಂಧಿಸಿದ್ದಾರೆ. ಕೋರ್ಟ್ ಪ್ರೊಸೀಜರ್ ಪ್ರಕಾರ ಅಲ್ಲಿಂದ ಕರೆತರಬೇಕಾಗಿದೆ. ಮೈಸೂರಿನ ಒಬ್ಬರು ಸೇರಿ ದರೋಡೆಗೆ ಪ್ಲ್ಯಾನ್ ಮಾಡಿದ್ದರು. ಸಂಚುಕೋರ ಚಿನ್ನಾಭರಣ ಅಂಗಡಿ ಇಟ್ಟುಕೊಂಡಿದ್ದರು. ದರೋಡೆಗೆ ಹೊರಗಿನಿಂದ ಜನರನ್ನು ಕರೆಸಿ ಕೃತ್ಯವೆಸಗಿದ್ದಾರೆ ಎಂದು ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.
ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ಪ್ರಕರಣ ನಡೆಯಬಾರದಿತ್ತು, ಆದರೂ ನಡೆದುಹೋಗಿದೆ. ಇದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದ್ದರಿಂದ ಈಗಲೇ ಏನೂ ಹೇಳಲಾಗದು. ಈ ಪ್ರಕರಣದ ಆರೋಪಿಗಳನ್ನು ಹಿಡಿಯಲು ಹೆಚ್ಚಿನ ಸಮಯ ಬೇಕಾಗಿದೆ ಎಂದು ಪ್ರವೀಣ್ ಸೂದ್ ತಿಳಿಸಿದ್ದಾರೆ.
ಆಗಸ್ಟ್ 23ರಂದು ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಆ್ಯಂಡ್ ಸಿಲ್ವರ್ ಪ್ಯಾಲೇಸ್‍ನಲ್ಲಿ ದರೋಡೆ, ಶೂಟ್‍ಔಟ್ ನಡೆದಿತ್ತು. ಮಳಿಗೆಯ ಮಾಲೀಕನಿಗೆ ಥಳಿಸಿ ಚಿನ್ನಾಭರಣ ದರೋಡೆ ಮಾಡಲಾಗಿತ್ತು. ಅಲ್ಲದೆ ಚಿನ್ನದ ಅಂಗಡಿಗೆ ಬಂದಿದ್ದ ಚಂದ್ರು ಮೇಲೆ ಗುಂಡು ಹಾರಿಸಲಾಗಿತ್ತು. ಪರಿಣಾಮ ದಡದಹಳ್ಳಿ ಗ್ರಾಮದ ಚಂದ್ರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ದರೋಡೆಕೋರರ ಈ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಆರೋಪಿಗಳ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು.
ಇದನ್ನೂ ಓದಿ: ಮೈಸೂರು ಚಿನ್ನದಂಗಡಿ ದರೋಡೆ, ಶೂಟೌಟ್ ಆರೋಪಿಗಳ ಮಾಹಿತಿ ನೀಡಿದವರಿಗೆ 5 ಲಕ್ಷ ಬಹುಮಾನ
ಮೈಸೂರಿನಲ್ಲಿ ಚಿನ್ನದ ಅಂಗಡಿ ದರೋಡೆ ಯತ್ನ, ತಡೆಯಲು ಯತ್ನಿಸಿದವರ ಮೇಲೆ ಗುಂಡು ಹಾರಿಸಿ ಪರಾರಿಯಾದ ದರೋಡೆಕೋರರು
Published On - 5:33 pm, Fri, 27 August 21