ಮೂರು ದಿನ ದೆಹಲಿಯಲ್ಲಿಯೇ ಉಳಿಯಲಿರುವ ಡಿಸಿಎಂ ಡಿಕೆ ಶಿವಕುಮಾರ್: ವರಿಷ್ಠರ ಅಂಗಳದಲ್ಲಿ ನಡೆಯುತ್ತಾ ಕುರ್ಚಿ ಕದನದ ಚರ್ಚೆ?

ಕರ್ನಾಟಕ ಕಾಂಗ್ರೆಸ್ ನಾಯಕತ್ವದ ವಿಚಾರ ದಿನಕ್ಕೊಂದು ಮಹತ್ವ ಪಡೆದುಕೊಳ್ಳುತ್ತಿದೆ. ನಾಯಕರು ಒಳಗೊಳಗೆ ತಂತ್ರ ಪ್ರತಿತಂತ್ರ ಹೆಣೆಯುತ್ತಲೇ ಇದ್ದಾರೆ. ಈ ನಡುವೆ ರಾಜ್ಯ ಕಾಂಗ್ರೆಸ್ ಪಡೆ ದೆಹಲಿಗೆ ತೆರಳುತ್ತಿದ್ದು, ವೋಟ್ ಚೋರಿ ಅಭಿಯಾನದ ಜೊತೆಗೆ ಕುರ್ಚಿ ಚರ್ಚೆಯೂ ನಡೆಯಲಿದೆಯಾ ಎಂಬ ಸಂಶಯ ಮೂಡಿದೆ. ಡಿಸಿಎಂ ಡಿಕೆ ಶಿವಕುಮಾರ್ ಮೂರು ದಿನ ದೆಹಲಿಯಲ್ಲಿಯೇ ಉಳಿಯಲಿರುವುದು ಕುತೂಹಲ ಮೂಡಿಸಿದೆ.

ಮೂರು ದಿನ ದೆಹಲಿಯಲ್ಲಿಯೇ ಉಳಿಯಲಿರುವ ಡಿಸಿಎಂ ಡಿಕೆ ಶಿವಕುಮಾರ್: ವರಿಷ್ಠರ ಅಂಗಳದಲ್ಲಿ ನಡೆಯುತ್ತಾ ಕುರ್ಚಿ ಕದನದ ಚರ್ಚೆ?
ಡಿಕೆ ಶಿವಕುಮಾರ್
Updated By: Ganapathi Sharma

Updated on: Dec 13, 2025 | 1:37 PM

ಬೆಂಗಳೂರು, ಡಿಸೆಂಬರ್ 13: ಕರ್ನಾಟಕ ಕಾಂಗ್ರೆಸ್​​ನಲ್ಲಿ (Congress) ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ನಮ್ಮಲ್ಲಿ ಭಿನ್ನಮತವಿಲ್ಲ. ನಾವೆಲ್ಲ ಒಂದೇ ಎಂಬ ಜಪ ಮಾಡಿದ್ದರೂ ಕಾಂಗ್ರೆಸ್​​ ಆಂತರಿಕ ಕದನ ವಿರಾಮ ಮಾತ್ರ ಮೇಲಿಂದ ಮೇಲೆ ಉಲ್ಲಂಘನೆ ಆಗುತ್ತಲೇ ಇದೆ. ಈ ನಡುವೆ ರಾಜ್ಯ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳುತ್ತಿರುವುದು ಒಂದೇ ಕಲ್ಲಿನಲ್ಲಿ ಮೂರು ಹಕ್ಕಿ ಹೊಡೆಯುತ್ತಾರಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.

ದೆಹಲಿಯಲ್ಲಿ ವರಿಷ್ಠರ ಅಂಗಳದಲ್ಲಿ ನಡೆಯುತ್ತಾ ಕುರ್ಚಿ ಕದನದ ಚರ್ಚೆ?

ಮತಗಳ್ಳತನ ಎಂಬ ಆರೋಪ ಕರ್ನಾಟಕದಿಂದಲೇ ಸಿಡಿದಿತ್ತು. ಈ ಅದೀಗ ದೆಹಲಿಯಲ್ಲಿ ಸದ್ದು ಮಾಡಲು ಸಿದ್ಧವಾಗಿದೆ. ನಾಳೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆಯೇ ನಡೆಯಲಿದೆ. ಅದರಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಇದಕ್ಕೆ ಮುಂಚಿತವಾಗಿ ದೆಹಲಿಯಲ್ಲಿ ಠಿಕಾಣಿ ಹೂಡಲು ಡಿಕೆ ಶಿವಕುಮಾರ್ ಸಹ ಸಜ್ಜಾಗಿದ್ದಾರೆ.

ಇಂದು ದೆಹಲಿಗೆ ತೆರಳುವ ಡಿಕೆ ಶಿವಕುಮಾರ್ ಮೂರು ದಿನಗಳ ಕಾಲ ಅಲ್ಲೇ ಉಳಿದುಕೊಳ್ಳಲಿದ್ದಾರೆ. ಇದಕ್ಕೆ ಅನೇಕ ಕಾರಣಗಳಿವೆ. ಅದರಲ್ಲಿ ವೋಟ್ ಚೋರಿ ಪ್ರತಿಭಟನೆ ಕೂಡ ಒಂದು. ಈ ಮಧ್ಯೆ ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಪೊಲೀಸರ ವಿಚಾರಣೆಗೂ ಡಿಕೆ ಸಹೋದರರು ಹಾಜರಾಗಲಿದ್ದಾರೆ. ಮೂರು ದಿನ ರಾಷ್ಟ್ರ ರಾಜಕಾರಣದ ಹೆಡ್​ ಕ್ವಾಟ್ರಸ್​​ನಲ್ಲಿಯೇ ಉಳಿಯಲಿರುವ ಡಿಕೆ ಶಿವಕುಮಾರ್, ಹೈಕಮಾಂಡ್ ನಾಯಕರನ್ನೂ ಭೇಟಿ ಆಗಲಿದ್ದಾರೆ ಎನ್ನಲಾಗಿದೆ. ಒಂದೊಳ್ಳೆ ಸಮಯ ಒದಗಿ ಬಂದರೆ, ನಾಯಕತ್ವದ ವಿಚಾರವನ್ನೂ ಪ್ರಸ್ತಾಪ ಮಾಡುವ ಸಾಧ್ಯತೆಯನ್ನ ತಳ್ಳಿಹಾಕುವಂತಿಲ್ಲ.

ಮಂಡ್ಯದ ಕಾಂಗ್ರೆಸ್ ನಾಯಕರು ದೆಹಲಿಗೆ

ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಮಂಡ್ಯದ ಕಾಂಗ್ರೆಸ್ ನಾಯಕರು ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ವೋಟ್ ಚೋರಿ ನೆಪದಲ್ಲಿ ಹೋಗುತ್ತಿರುವ ನಾಯಕರು, ವರಿಷ್ಠರ ಮುಂದೆ ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ. ಸಿಎಂ ಬದಲಿಸುವಂತೆ ಒತ್ತಡ ಹೇರಲು ತಂತ್ರ ನಡೆಸಿದರೇ ಎಂಬ ಪ್ರಶ್ನೆ ರಾಜಕಾರಣದ ಪಡಸಾಲೆಯಲ್ಲಿ ಮೂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ