ಬೆಂಗಳೂರು: ಕರ್ನಾಟಕದಲ್ಲಿ ಶಿಕ್ಷಕರ ಕಡ್ಡಾಯ ವರ್ಗಾವಣೆಯಿಂದ ಸಮಸ್ಯೆ ಆಗಿತ್ತು, ಅದನ್ನು ಸರಿಪಡಿಸುವುದಾಗಿ ನಾವು ಭರವಸೆಯನ್ನೂ ನೀಡಿದ್ದೆವು. ಇದೀಗ ಆ ಬಗ್ಗೆ ಗಮನ ಹರಿಸಲಾಗಿದ್ದು, ಜೂನ್ 30ರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭ ಮಾಡುತ್ತಿದ್ದೇವೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ. ಈ ಬಾರಿ ವರ್ಗಾವಣೆಗೆ 75 ಸಾವಿರ ಅರ್ಜಿ ಸಲ್ಲಿಕೆಯಾಗಿದೆ. ಇದನ್ನು ಹೊರತುಪಡಿಸಿ ವರ್ಗಾವಣೆ ಬಯಿಸಿದರೆ, 2ನೇ ಹಂತದಲ್ಲಿ ವರ್ಗಾವಣೆಗೆ ಅವಕಾಶ ನೀಡಲಾಗುವುದು. ವರ್ಗಾವಣೆಗೆ ಯಾರೂ ಕೌನ್ಸೆಲಿಂಗ್ ಜಾಗಕ್ಕೆ ಹೋಗಬೇಕಿಲ್ಲ ಎಂದು ಭರವಸೆ ನೀಡಿದ್ದಾರೆ.
ವರ್ಗಾವಣೆಯಲ್ಲಿ ವಲಯ, ಹೆಚ್ಚುವರಿ ವರ್ಗಾವಣೆ ಇರುವುದಿಲ್ಲ. ಅವರಿಗೆ ಹತ್ತಿರವಿರುವ ಸ್ಥಳ ಆಯ್ಕೆ ಮಾಡಿಕೊಳ್ಳಬಹುದು. ಶಿಕ್ಷಕ ಮಿತ್ರ ಆ್ಯಪ್ ಮೂಲಕ ಸ್ಥಳ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗುತ್ತದೆ. ಯಾವ ಶಿಕ್ಷಕರಿಗೂ ವರ್ಗಾವಣೆಯಿಂದ ಕಷ್ಟವಾಗಬಾರದು ಅವರು ಕಷ್ಟಪಟ್ಟು ಹೋದರೆ ಪಾಠ ಮಾಡಲು ಆಗುವುದಿಲ್ಲ. ಹೀಗಾಗಿ, ಇಷ್ಟಪಟ್ಟು ಹೋಗುವುದಕ್ಕೆ ಸಹಕಾರವಾಗುವಂತೆ ಶಿಕ್ಷಕ ಸ್ನೇಹಿ ವರ್ಗಾವಣೆ ಮಾಡಲು ಚಿಂತಿಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಜುಲೈ 1ರಿಂದ ಚಂದನ ವಾಹಿನಿಯಲ್ಲಿ ಪಾಠ
ಶಾಲೆ ಆರಂಭದ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ. ಡಾ.ದೇವಿಪ್ರಸಾದ್ ಶೆಟ್ಟಿ ಸಮಿತಿ ಕೂಡ ವರದಿಯನ್ನು ನೀಡಿದೆ. ‘ವಿದ್ಯಾಗಮ 2’ ಜಾರಿ ಮಾಡುವಂತೆ ಸಲಹೆ ನೀಡಿದ್ದಾರೆ. ಶಾಲೆ ಆರಂಭ ಸಂಬಂಧ ಆರೋಗ್ಯ ಇಲಾಖೆ ಜತೆ ಚರ್ಚೆ ಮಾಡಿದ್ದೇವೆ. ಇನ್ನೆರಡು ದಿನದಲ್ಲಿ ವಿಸ್ತೃತ ಚರ್ಚೆ ಮಾಡಲಾಗುವುದು. ಶಾಲೆ ಆರಂಭ ಸಂಬಂಧ ಟಾಸ್ಕ್ ಫೋರ್ಸ್ ರಚಿಸುತ್ತೇವೆ. ಆ ಸಮಿತಿ ಶಾಲೆ ಆರಂಭ ಸಂಬಂಧ ಸಲಹೆಯನ್ನು ನೀಡುತ್ತದೆ, ವಿಷಯ ಪರಿಣಿತರು, ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಮಕ್ಕಳ ತಜ್ಞರು ಈ ಟಾಸ್ಕ್ ಫೋರ್ಸ್‌ನಲ್ಲಿ ಇರುತ್ತಾರೆ ಎಂದು ಸಚಿವ ಎಸ್.ಸುರೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸ್ಥಳೀಯ ಅವಶ್ಯಕತೆಗೆ ಅನುಗುಣವಾಗಿ ಶಾಲೆ ಆರಂಭ, ಮಕ್ಕಳ ಕಲಿಕೆ ನಿರಂತರವಾಗಿರಬೇಕು, ಮೌಲ್ಯಾಂಕ ಅಗತ್ಯ, ಈ ಬಗ್ಗೆ ಟಾಸ್ಕ್ ಫೋರ್ಸ್ ನಮಗೆ ಸಲಹೆ ನೀಡುತ್ತದೆ. ಇದರ ಜತೆಗೆ, ಜುಲೈ 1ರಿಂದು ಚಂದನವಾಹಿನಿಯಲ್ಲಿ ಪಾಠ ಆರಂಭ ಮಾಡುತ್ತಿದ್ದೇವೆ. ಕನ್ನಡ, ಆಂಗ್ಲ ಮಾಧ್ಯಮದಲ್ಲಿ ಪಾಠಗಳು ನಡೆಯುತ್ತೆ. ದೀಕ್ಷಾ ಪೋರ್ಟಲ್‌ನಲ್ಲಿ ಪಾಠಗಳ ವಿಡಿಯೋ ಲಭ್ಯವಿದೆ. ಪೋರ್ಟಲ್‌ನಲ್ಲಿ 22 ಸಾವಿರ ಇ ಕಂಟೆಂಟ್ ಲಭ್ಯವಿದೆ ಎಂದು ವಿವರಿಸಿದ್ದಾರೆ.
ಚಿಕ್ಕ ಮಕ್ಕಳಿಗಾಗಿ ಮಕ್ಕಳ ವಾಹಿನಿ ಆರಂಭಿಸಿದ್ದೇವೆ. ಈ ಬಗ್ಗೆ ಯೂಟ್ಯೂಬ್‌ನಲ್ಲಿ ವಿಡಿಯೋಗಳು ಇವೆ. ಒಂದು ತಿಂಗಳ ‘ಸೇತು ಬಂಧ’ ಕೋರ್ಸ್ ಆರಂಭ ಮಾಡುತ್ತೇವೆ. ಕಳೆದ ವರ್ಷ ವಿದ್ಯಾರ್ಥಿಗಳು ಪಾಠಗಳನ್ನು ಕಲಿತಿಲ್ಲ. ಹೀಗಾಗಿ ಬ್ರಿಡ್ಜ್ ಕೋರ್ಸ್ ಆರಂಭ ಮಾಡುತ್ತಿದ್ದೇವೆ. ವಾರ್ಷಿಕ ಪರೀಕ್ಷೆ ಬಿಟ್ಟು, ನಿರಂತರ ಮೌಲ್ಯಾಂಕ ಬಗ್ಗೆ ಚರ್ಚೆ ಆಗುತ್ತಿದೆ. CBSE ಮಾದರಿಯಲ್ಲಿ ನಿರಂತರ ಮೌಲ್ಯಾಂಕ ಬಗ್ಗೆ ಚರ್ಚೆಯಾಗುತ್ತಿದೆ. ಇನ್ನು ಆನ್‌ಲೈನ್ ಪಾಠಗಳು ಸಿಗದಿದ್ದರೆ ರೆಕಾರ್ಡ್ ಮಾಡಿ ಪಾಠ ಕೇಳುವ ಸೌಲಭ್ಯವನ್ನೂ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ:
Karnataka SSLC Exam 2021 Timetable: ಜುಲೈ 19 ಹಾಗೂ 22ರಂದು ಎಸ್ಎಸ್ಎಲ್ಸಿ ಪರೀಕ್ಷೆ- ಶಿಕ್ಷಣ ಸಚಿವ ಸುರೇಶ್ ಕುಮಾರ್