ಟೇಸ್ಟ್‌ಲೆಸ್ ಆಗುತ್ತಾ ಕೇಕ್‌? ಗೋಬಿ, ಕಬಾಯ್ ಆಯ್ತು ಈಗ ಕೇಕ್, ಬೇಕರಿ ತಿನಿಸುಗಳ ಮೇಲೆ ಕ್ರಮಕ್ಕೆ ಸಿದ್ಧತೆ

| Updated By: ಗಣಪತಿ ಶರ್ಮ

Updated on: Aug 30, 2024 | 7:37 AM

ಸಿಹಿಯಾದ ರುಚಿ ರುಚಿಯಾದ ಕೇಕ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ವಿವಿಧ ಬಗೆಯ ಕೇಕ್‌ಗಳನ್ನು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟಪಡುತ್ತಾರೆ. ಬರ್ತ್​​ಡೇ ಪಾರ್ಟಿಗಳು ಬಂದರಂತೂ ಕೇಕ್ ಅನಿವಾರ್ಯ. ಆದರೆ ಕೇಕ್‌ ರುಚಿ ಇನ್ಮುಂದೆ ಬದಲಾಗಬಹುದು! ಕಾರಣ ತಿಳಿಯಲು ಮುಂದೆ ಓದಿ.

ಟೇಸ್ಟ್‌ಲೆಸ್ ಆಗುತ್ತಾ ಕೇಕ್‌? ಗೋಬಿ, ಕಬಾಯ್ ಆಯ್ತು ಈಗ ಕೇಕ್, ಬೇಕರಿ ತಿನಿಸುಗಳ ಮೇಲೆ ಕ್ರಮಕ್ಕೆ ಸಿದ್ಧತೆ
ಕೇಕ್ (ಸಾಂದರ್ಭಿಕ ಚಿತ್ರ)
Image Credit source: Getty Images
Follow us on

ಬೆಂಗಳೂರು, ಆಗಸ್ಟ್ 30: ಆರೋಗ್ಯ ಹಾಗೂ ಆಹಾರ ಸುರಕ್ಷತಾ ಇಲಾಖೆ ಜನರ ಹಿತದೃಷ್ಟಿ ಕಾಪಾಡುವ ಸಲುವಾಗಿ, ಅನೇಕ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ‌ಜನರು ಸೇವಿಸುವ ಆಹಾರ ದಿನದಿಂದ ದಿನಕ್ಕೆ ಕಲುಷಿತವಾಗುತ್ತಿದ್ದು, ಕಲಬೆರಕೆ ಆಹಾರದ ವಿರುದ್ಧ ಸಮರ ಸಾರಿದೆ. ಗೋಬಿ, ಕಬಾಬ್, ಕಾಟನ್ ಕ್ಯಾಂಡಿ, ಪಾನಿಪುರಿ ತಿನಿಸುಗಳ ಮೇಲೆ ಆಹಾರ ಇಲಾಖೆ ಒಂದಷ್ಟು ನಿರ್ಬಂಧಗಳನ್ನು ವಿಧಿಸಿತ್ತು. ಜೊತೆಗೆ ಹೋಟೆಲ್‌ಗಳು ಹಾಗೂ ಬೀದಿ ಬದಿ ವ್ಯಾಪಾರಿಗಳ ಮೇಲೂ ಕೂಡಾ ಒಂದಷ್ಟು ನಿರ್ಬಂಧಗಳನ್ನು ಹೇರಲಾಗಿತ್ತು. ಇಲಾಖೆಯ ಮುಂದಿನ ಗುರಿ ಬೇಕರಿ ತಿನಿಸುಗಳಾಗಿವೆ.

ಬೇಕರಿಯ ತಿನಿಸುಗಳ ಮೇಲೆ ನಿರ್ಬಂಧ ತರಲು ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.‌ ಇದಕ್ಕೆ ಪೂರಕವಾಗಿ ಮೊದಲಿಗೆ ಸಾಮಾನ್ಯವಾಗಿ ಜನರು ಹೆಚ್ಚು ಸೇವನೆ ಮಾಡುವ ಕೇಕ್‌ಗಳ ಮೇಲೆ ನಿಗಾ ವಹಿಸಲಾಗುತ್ತಿದೆ.‌ ಕೇಕ್‌ಗೆ ಬಳಸುವ ಮೈದಾಹಿಟ್ಟು, ಕೋಕೋ ಪೌಡರ್, ಕ್ರೀಮ್‌ಗಳಿಗೆ ಬಳಸುವ ಪದಾರ್ಥಗಳು, ಫ್ಲೇವರ್‌ಗಳು ಹಾಗೂ ಬಣ್ಣ ಬಣ್ಣವಾಗಿರಲು ಬಳಸುವ ಕಲರ್‌ಗಳನ್ನ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಪೈನಾಪಲ್, ರೆಡ್ ವೆಲ್ವೆಟ್, ಚಾಕೋಲೇಟ್ ಸೇರಿದಂತೆ ವಿವಿಧ ಫ್ಲೇವರ್‌ಗಳನ್ನ ಜನರು ಇಷ್ಟ ಪಡುವುದರಿಂದ ಅವುಗಳ ತಯಾರಿಕೆ ಅಥವಾ ಅದಕ್ಕೆ ಹಾಕುವ ಪದಾರ್ಥಗಳು ಜನರು ಆರೋಗ್ಯಕ್ಕೆ ಪೂರಕವಾ ಅಥವಾ ಮಾರಕವಾ ಎಂಬುದನ್ನು ತಿಳಿಯಲು ಮುಂದಾಗಿದೆ.

ಕೇಕ್​​ಗಳ ಮಾದರಿ ಪ್ರಯೋಗಾಲಯಕ್ಕೆ

ಸುಮಾರು 264 ಕಡೆಗಳಲ್ಲಿ ಕೇಕ್‌ಗಳ ಸ್ಯಾಂಪಲ್ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.‌ ಇದರ ವರದಿಗೆ ಇಲಾಖೆ ಕಾಯುತ್ತಿದೆ.‌ ಒಂದು ವೇಳೆ, ವರದಿ ಪಾಸಿಟಿವ್ ಬಂದಿದ್ದೇ ಆದಲ್ಲಿ ಕೆಲವೊಂದು ಪದಾರ್ಥಗಳ ಮೇಲೆ ನಿರ್ಬಂಧ ಹೇರಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಕೇಕ್‌ ತನ್ನ ಮೂಲ ಸ್ವಾದವನ್ನು ಕಳೆದುಕೊಳ್ಳಲಿದೆ.

ಬೇಕರಿ ಮಾಲೀಕರ ಸಂಘಟನೆ ಸ್ವಾಗತ

ಇನ್ನು ಆಹಾರ ಸರಕ್ಷತಾ ಹಾಗೂ ಆರೋಗ್ಯ ಇಲಾಖೆ ಸರಣಿ ರೇಡ್‌ಗಳು ಹಾಗೂ ಆಹಾರಗಳಿಗೆ ಬಳಸುವ ಕೆಲವೊಂದು ಪದಾರ್ಥಗಳಿಗೆ ನಿರ್ಬಂಧ ವಿಧಿಸುತ್ತಿರುವುದನ್ನು ಬೇಕರಿ ಮಾಲೀಕರ ಸಂಘಟನೆ ಸ್ವಾಗತ ಮಾಡಿದೆ. ನಾವು ಸಹಜ ಕಲರ್ ಬಳಕೆ ಮಾಡುತ್ತೇವೆ. ಕೆಮಿಕಲ್ ಬಳಕೆ ಮಾಡಲ್ಲ ಆಹಾರ ಇಲಾಖೆಯ ಕ್ರಮ ಸರಿಯಾಗಿದೆ ಎಂದು ಬೇಕರಿ ಮಾಲೀಕರು ಹೇಳಿದ್ದಾರೆ.

4 ಹೋಟೆಲ್​ಗಳ ಪರವಾನಗಿ ರದ್ದು

ಆಹಾರ ಇಲಾಖೆ ಹಾನಿಕಾರ ಕಲರ್ ಬ್ಯಾನ್ ಮಾಡಿದೆ. ಇಷ್ಟಾದರೂ ಕೆಲವು ಹೋಟಲ್​​ಗಳಲ್ಲಿ ಹಾನಿಕಾರಕ ಕಲರ್ ಬಳಕೆ ಮಾಡಲಾಗಿದೆ. ಈ ಬಗ್ಗೆ ಖುದ್ದು ಆಹಾರ ಇಲಾಖೆಯೇ ದಾಳಿ ಮಾಡಿ ಮಾಹಿತಿ ನೀಡಿದೆ. ಜುಲೈ ಹಾಗೂ ಅಗಸ್ಟ್ ನಲ್ಲಿ ಆಹಾರ ಇಲಾಖೆ 3467 ಹೋಟೆಲ್​​ಗಳನ್ನ ತಪಾಸಣೆ ಮಾಡಿದೆ. ಈ ಪೈಕಿ 986 ಹೊಟೆಲ್​ಗಳಿಗೆ ನೋಟಿಸ್ ನೀಡಿದೆ. 142 ಹೋಟೆಲ್​​ಗಳಿಗೆ 4.93 ಲಕ್ಷ ರೂ. ದಂಡ ವಿಧಿಸಿದೆ. ಕಲರ್ ಬಳಕೆ ಸೇರಿದ್ದಂತೆ ಹೋಟೆಲ್​​ಗಳಲ್ಲಿ ನೈರ್ಮಲ್ಯ ಇಲ್ಲ ಎಂದು ದಂಡ ವಿಧಿಸಿದೆ. ಜೊತೆಗೆ ದೇವನಹಳ್ಳಿಯ ಕೆಎಫ್ ಸಿ, ನೂಪ ಟೆಕ್ನಾಲಜಿಸ್, ಮಮತಾ ಏಜೆನ್ಸಿ ಸೇರಿದಂತೆ 4 ಹೋಟೆಲ್ ಲೈಸೆನ್ಸ್ ರದ್ದು ಮಾಡಲಾಗಿದೆ.

ಇದನ್ನೂ ಓದಿ: ಕೃತಕ ಬಣ್ಣ, ರಾಸಾಯನಿಕ ಬಳಸುವ ಹೋಟೆಲ್​ಗಳಿಗೆ ಕಾದಿದೆ ಸಂಕಷ್ಟ: ಆಹಾರ ಇಲಾಖೆಯಿಂದ ವಿಶೇಷ ಕಾರ್ಯಾಚರಣೆ

211 ಗೋಬಿ ಮಂಚೂರಿ ಮಾದರಿ ಸಂಗ್ರಹ ಮಾಡಲಾಗಿತ್ತು. ಈ ಪೈಕಿ 31 ಮಾದರಿಗಳಲ್ಲಿ ಸನ್ ಸೆಟ್ ಯೆಲ್ಲೋ ಮತ್ತು ಕಾರ್ಮೊಸಿನ್ ಅಂಶ ಕಂಡು ಬಂದಿದೆ. ತರಕಾರಿ, ಹಣ್ಣುಗಳಲ್ಲೂ ಕ್ರಿಮಿನಾಶಕ ಕಂಡು ಬಂದಿದೆ. ತರಕಾರಿ ಮತ್ತು ಹಣ್ಣಿನ 385 ಸ್ಯಾಂಪಲ್ ಪಡೆಯಲಾಗಿತ್ತು. ಈ ಪೈಕಿ 27 ಸ್ಯಾಂಪಲ್ ನಲ್ಲಿ ಕ್ರಿಮಿನಾಶಕ ಕಂಡು ಬಂದಿದೆ. ಹೀಗಾಗಿ ವೈದ್ಯರು ಆಹಾರ ಬಳಕೆಯ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಆಹಾರ ತಜ್ಞರು ಸಲಹೆ ನೀಡಿದ್ದಾರೆ.

ಇನ್ನು ಕೇಕ್ ಕಲರ್ ಕಡಿವಾಣಕ್ಕೆ ಮುಂದಾಗಿರುವ ಸರ್ಕಾರದ ಕ್ರಮಕ್ಕೆ ಜನರು ಕೂಡಾ ಸಂತಸ ವ್ಯಕ್ತಪಡಿಸಿದ್ದು, ಇಲಾಖೆಯ ನಡೆಗೆ ಸಾಥ್ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ