ಬೆಂಗಳೂರಿನಲ್ಲಿ ಮಂಕಿಪಾಕ್ಸ್ ಕಟ್ಟೆಚ್ಚರ: ಟೆಸ್ಟಿಂಗ್, ಸ್ಕ್ರೀನಿಂಗ್, ಟ್ರ್ಯಾಕಿಂಗ್ ಶುರು
ಮಂಕಿಪಾಕ್ಸ್ ಭೀತಿ ಬೆನ್ನಲ್ಲೇ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಿತ್ತು. 116 ದೇಶಗಳಲ್ಲಿ ಅಬ್ಬರಿಸುತ್ತಿರುವ ಮಂಕಿಪಾಕ್ಸ್ ಸದ್ಯ ಪಾಕಿಸ್ತಾನಕ್ಕೂ ಕಾಲಿರಿಸಿದೆ. ಈ ಬೆನ್ನಲ್ಲೇ ಕರ್ನಾಟಕ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಲು ಮುಂದಾಗಿದ್ದು, ಟೆಸ್ಟಿಂಗ್- ಟ್ರ್ಯಾಕಿಂಗ್, ಸ್ಕ್ರೀನಿಂಗ್ ಆರಂಭಿಸಿದೆ.
ಬೆಂಗಳೂರು, ಆಗಸ್ಟ್ 30: ಮಂಕಿಪಾಕ್ಸ್ ಮತ್ತೆ ಬಾಲ ಬಿಚ್ಚಿದೆ. 116 ದೇಶಗಳಲ್ಲಿ 537 ಕ್ಕೂ ಅಧಿಕ ಮಂದಿಯನ್ನು ಬಲಿಪಡೆದಿದೆ. ಮಂಕಿಪಾಕ್ಸ್ ಬಗ್ಗೆ ನಿರ್ಲಕ್ಷ್ಯ ಬೇಡ ಎಂದಿರುವ ಕೇಂದ್ರ ಆರೋಗ್ಯ ಇಲಾಖೆ ,ಕಟ್ಟೆಚ್ಚರ ವಹಿಸುವಂತೆ ರಾಜ್ಯಗಳಿಗೆ ಸೂಚಿಸಿದೆ. ದೇಶದಲ್ಲಿ ಸದ್ಯ ಯಾವುದೇ ಮಂಕಿಪಾಕ್ಸ್ ಪ್ರಕರಣ ಕಾಣಿಸದಿದ್ದರೂ ಪಾಕಿಸ್ತಾನದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವುದು ಆತಂಕ ಹುಟ್ಟಿಸಿದೆ. ಹೀಗಾಗಿ ಮತ್ತಷ್ಟು ಕಠಿಣ ಕ್ರಮಕ್ಕೆ ರಾಜ್ಯಗಳು ಮುಂದಾಗಿದ್ದು, ರಾಜಧಾನಿಯಲ್ಲಿ ಮಂಕಿಪಾಕ್ಸ್ಗೆ ಟೆಸ್ಟಿಂಗ್, ಟ್ರ್ಯಾಕಿಂಗ್ ಮತ್ತು ಸ್ಕ್ರೀನಿಂಗ್ ಶುರು ಮಾಡಲಾಗಿದೆ.
ಮಂಕಿಪಾಕ್ಸ್ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚಿಸಿದೆ. ಪಾಸಿಟಿವ್ ಕಂಡುಬಂದ ದೇಶದಿಂದ ಬರುವ ಪ್ರಯಾಣಿಕರನ್ನು ಟೆಸ್ಟಿಂಗ್ಗೆ ಒಳಪಡಿಸಲು ತಿಳಿಸಿದೆ. ಮಂಕಿಪಾಕ್ಸ್ ಗುಣಲಕ್ಷಣಗಳು ಇದ್ದರೆ ಐಸೊಲೇಷನ್ನಲ್ಲಿ ಇಡಲು ತಿಳಿಸಲಾಗಿದೆ. ಶಂಕಿತರ ಚಿಕಿತ್ಸೆಗೆಗಾಗಿ ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಸ್ಥಾಪಿಸಲಾಗಿದೆ.
ಮಹಿಳಾ ಹಾಗೂ ಪುರುಷರಿಗೆ ಪ್ರತ್ಯೇಕ 20 ಬೆಡ್ ಮೀಸಲಿಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಶಂಕಿತರು ಹಾಗೂ ಸೋಂಕಿತರು ಕಂಡು ಬಂದರೆ ನೇರವಾಗಿ ಈ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ಸಿದ್ಧತೆ ನಡೆಸಲಾಗಿದೆ.
ಇದನ್ನೂ ಓದಿ: ಕೃತಕ ಬಣ್ಣ, ರಾಸಾಯನಿಕ ಬಳಸುವ ಹೋಟೆಲ್ಗಳಿಗೆ ಕಾದಿದೆ ಸಂಕಷ್ಟ: ಆಹಾರ ಇಲಾಖೆಯಿಂದ ವಿಶೇಷ ಕಾರ್ಯಾಚರಣೆ
ಮಂಕಿಪಾಕ್ಸ್ ಶಂಕಿತರು ಕಂಡುಬಂದ್ರೆ ಅಂತಹವರ ಮಾದರಿಯನ್ನು ಬಿಎಂಸಿ ಲ್ಯಾಬ್ಗೆ ಕಳಿಸಲು ಸೂಚಿಸಲಾಗಿದೆ. ಮಂಕಿಪಾಕ್ಸ್ ಕಂಡುಬಂದರೆ ಈ ಆಸ್ಪತ್ರೆಯಲ್ಲಿ 21 ದಿನಗಳ ಕ್ವಾರಂಟೈನ್ ಮಾಡಲು ಇಲಾಖೆ ಮುಂದಾಗಿದೆ. ಮೈ ಮೇಲೆ ರಾಶ್, ಜ್ವರ, ತೀವ್ರವಾದ ತಲೆನೋವು, ಬೆನ್ನುನೋವು, ಸ್ನಾಯು ಸೆಳೆತ ಮಂಕಿಪಾಕ್ಸ್ ಪ್ರಮುಖ ಗುಣಲಕ್ಷಣಗಳಾಗಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ