
ಬೆಂಗಳೂರು, ಮಾರ್ಚ್ 29: ಗಲ್ಫ್ ಯುದ್ಧವೂ 30ನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ಕರುನಾಡಲ್ಲಿ ಸಮರದ ಎಫೆಕ್ಟ್ ಬೀರಿದ್ದು, ಅಡುಗೆ ಅನಿಲ ಅಭಾವ (Gas Cylinder Crisis) ಮುಂದುವರಿದಿದೆ. ವಾಣಿಜ್ಯ ಸಿಲಿಂಡರ್ ಸಿಗದೇ ಹೋಟೆಲ್, ಕೈಗಾರಿಕೆಗಳು ಥಂಡಾ ಹೊಡೆದಿವೆ. ಜನರು ಖಾಲಿ ಗ್ಯಾಸ್ ಸಿಲಿಂಡರ್ ಹಿಡಿದು ಏಜೆನ್ಸಿಗಳತ್ತ ಧಾವಿಸುತ್ತಿದ್ದಾರೆ. ಈ ಮಧ್ಯೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ, ಸಿಲಿಂಡರ್ ಅಭಾವ ಇರುವುದರಿಂದ ಸೌದೆ ಒಲೆ ಬಳಸುವಂತೆ ಕರೆ ನೀಡಿದ್ದಾರೆ.
ಬೆಂಗಳೂರಿನಲ್ಲಿರುವ ಅವರ ಖಾಸಗಿ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೆ.ಹೆಚ್ ಮುನಿಯಪ್ಪ, ಸಿಲಿಂಡರ್ ಅಭಾವ ಇರುವುದರಿಂದ ಹಳ್ಳಿ ಭಾಗದ ಜನರು ಸೌದೆ ಒಲೆಗಳನ್ನು ಬಳಸಿ. ಬೆಂಗಳೂರು ಬಿಟ್ಟು 40 ಕಿಲೋಮೀಟರ್ ಹೋದರೆ ಸೌದೆ ಸಿಗುತ್ತೆ. ಅರಣ್ಯ ಪ್ರದೇಶದ ಹಸಿ ಮರ ಬಿಟ್ಟು ಒಣ ಕಟ್ಟಿಗೆ ಬಳಸುವಂತೆ ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕೊವಿಡ್ ರೀತಿ ಹೋರಾಟ: ಪ್ರಧಾನಿ ಮೋದಿ ಸಭೆ ಬಳಕ ಸಚಿವ ಮುನಿಯಪ್ಪ ಶಾಕಿಂಗ್ ಹೇಳಿಕೆ
ರಾಜ್ಯದಲ್ಲಿ ಸಿಲಿಂಡರ್ ಕೊರತೆಗೆ ಕೇಂದ್ರ ಸರ್ಕಾರವೇ ಕಾರಣ. ಡಿಸ್ಟ್ರಿಬ್ಯೂಟರ್ಗಳ ಮೇಲೆ ದೂರು ಬರುತ್ತಿವೆ. ಡೊಮೆಸ್ಟಿಕ್ ಸಿಲಿಂಡರ್ ಈ ಹಿಂದಿನಂತೆ ಮುಂದುವರಿಯುತ್ತೆ. ಆಯಿಲ್ ಕಂಪನಿಗಳಿಗೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಸಕಾಲಕ್ಕೆ ಗ್ರಾಹಕರ ಮನೆ ಬಾಗಿಲಿಗೆ ಸಿಲಿಂಡರ್ ತಲುಪಿಸಬೇಕು. ಸಿಲಿಂಡರ್ಗಾಗಿ ಯಾರು ಕೂಡ ಕ್ಯೂ ನಿಲ್ಲಬಾರದು. ನೀವು ಬುಕ್ಕಿಂಗ್ ಮಾಡಿದ್ದರೆ ನಿಮ್ಮ ಮನೆಗೆ ಸಿಲಿಂಡರ್ ಬರುತ್ತೆ. ಕೇಂದ್ರ ಸರ್ಕಾರ ಗ್ಯಾಸ್ ಪೂರೈಸಲು ಪ್ರಯತ್ನ ಮಾಡುತ್ತಿದೆ. ಈಗ 40% ಸಿಲಿಂಡರ್ ಪೂರೈಕೆ ಆಗುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯಕ್ಕೆ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಪೂರೈಕೆಯನ್ನು ಶೇ. 68 ಗೆ ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರವು ಇಂದಿನಿಂದಲೇ ಹೆಚ್ಚುವರಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್‌ಗಳನ್ನು ವಿತರಿಸಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳು, ವಸತಿ ನಿಲಯಗಳು, ಆಸ್ಪತ್ರೆ ಮತ್ತು ಇತರೆ ಅವಶ್ಯಕ ಸಂಸ್ಥೆಗಳಿಗೆ 4200 ಸಿಲಿಂಡರ್ ಹಂಚಿಕೆ ಮಾಡಲಾಗಿದೆ. ಸರ್ಕಾರಿ, ಪಿಎಸ್ಯು ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲು, ಬಸ್ ನಿಲ್ದಾಣಗಳ ಕ್ಯಾಂಟೀನ್‌ಗಳಿಗೆ 1200 ಸಿಲಿಂಡರ್ ಹಂಚಲಾಗಿದೆ ಎಂದರು.
ಇದನ್ನೂ ಓದಿ: ಗ್ಯಾಸ್ ಅಭಾವದ ಮಧ್ಯೆ ಮಂಗಳೂರಿನ ಹೋಟೆಲ್ವೊಂದರಿಂದ ಭರ್ಜರಿ ಆಫರ್: ಷರತ್ತು ಅನ್ವಯ
ಹೋಟೆಲ್, ಡಾಬಾ, ರೆಸ್ಟೋರೆಂಟ್, ಕ್ಯಾಂಟೀನ್, ಕೇಫೆ, ಬೇಕರಿ, ಸಮುದಾಯ ಅಡುಗೆ ಕೇಂದ್ರಗಳು, ಪಿ.ಜಿ, ಫುಡ್ ವಸ್ತು ನಿಲಯಗಳಿಗೆ 17500 ಸಿಲಿಂಡರ್, ಬೀಜ ಸಂಸ್ಕರಣೆ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳು, ಜೈವೋದ್ಯಮ, ಮೀನುಗಾರಿಕೆ, ಕೋಳಿ ಸಾಕಣೆ, ರೇಷ್ಮೆ ಹುಳು ಸಾಕಣೆ ಕೇಂದ್ರಗಳಿಗೆ 6000, ಇತರ ಅವಶ್ಯಕತೆ ಆಧಾರದ ಮೇಲೆ 563 ಸಿಲಿಂಡರ್ ಸೇರಿದಂತೆ ಒಟ್ಟು 29463 ಕಮರ್ಷಿಯಲ್ ಸಿಲಿಂಡರ್ ನಿತ್ಯ ವಿತರಿಸಲಾಗುತ್ತಿದೆ.
ಕೆಲವು ಅನಿಲ ವಿತರಕರು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಸಿಲಿಂಡರ್ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ನಮಗೆ ದೂರುಗಳು ಬಂದಿವೆ. ಎಲ್ಲಾ LPG ವಿತರಕರು ಕಡ್ಡಾಯವಾಗಿ ಸರ್ಕಾರ ನಿಗದಿಪಡಿಸಿದ ದರದಲ್ಲೇ ಸಿಲಿಂಡರ್ ವಿತರಿಸಬೇಕು. ಹೆಚ್ಚುವರಿ ದರ ವಸೂಲಿ ಮಾಡಿದರೆ ಕಾನೂನು ಕ್ರಮಕೈಗೊಳ್ಳುವುದರ ಮೂಲಕ ಪರವಾನಗಿ ರದ್ದು ಮಾಡಲಾಗುವುದು. LPG ಸಿಲಿಂಡರ್ ಅಕ್ರಮ ದಾಸ್ತಾನು ಸಂಬಂಧ 1169 ಕೇಸ್ ದಾಖಲಾಗಿವೆ. ವಾಣಿಜ್ಯ ಉದ್ದೇಶಕ್ಕೆ ಬಳಸ್ತಿದ್ದ 1603 ಸಿಲಿಂಡರ್ ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವ ಮುನಿಯಪ್ಪ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:58 pm, Sun, 29 March 26