
ಬೆಂಗಳೂರು, ಡಿಸೆಂಬರ್ 19: ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಆಹಾರ ಇಲಾಖೆ ಭರ್ಜರಿ ಶಾಕ್ ಕೊಟ್ಟಿದ್ದು, ಕಳೆದ 3 ತಿಂಗಳ ಅವಧಿಯಲ್ಲಿ ಬರೋಬ್ಬರಿ 15,056 ಬಿಪಿಎಲ್ ಕಾರ್ಡ್‌ಗಳು ರಾಜ್ಯದಲ್ಲಿ ರದ್ದಾಗಿವೆ. 5,632 ಬಿಪಿಎಲ್ ಕಾರ್ಡ್ಗಳ ವಿಚಾರಣೆ ಕಾಯ್ದಿರಿಸಿ ತಾತ್ಕಾಲಿಕ ಅಮಾನತು ಮಾಡಲಾಗಿದೆ. ಬರೋಬ್ಬರಿ 3.90 ಲಕ್ಷ ಕಾರ್ಡ್‌ಗಳು ಎಪಿಎಲ್ ಆಗಿ ಬದಲಾಗಿವೆ. ಆ ಮೂಲಕ ಒಟ್ಟು 4.10 ಲಕ್ಷ ಬಿಪಿಎಲ್ ಕಾರ್ಡ್ ದಾರರಿಗೆ ಸರ್ಕಾರ ಬಿಸಿ ಮುಟ್ಟಿಸಿದೆ.
2025ರ ಸೆಪ್ಟೆಂಬರ್ 03ರಿಂದ ಡಿಸೆಂಬರ್ 14ರ ವರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಡೆಸಿರುವ ಕಾರ್ಯಾಚಣೆಯ ಮಾಹಿತಿ ಟಿವಿ9ಗೆ ಲಭ್ಯವಾಗಿದ್ದು, ಆ ಪ್ರಕಾರ ಸುಮಾರು 14 ಲಕ್ಷ ಅಕ್ರಮ ಫಲಾನುಭವಿಗಳಿಗೆ ಶಾಕ್ ನೀಡಲಾಗಿದೆ.
ಇದನ್ನೂ ಓದಿ: ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಹಚ್ಚೋದು ಹೇಗೆ, ವಿಧಾನ ಏನು? ಇಲ್ಲಿದೆ ನೋಡಿ
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆದಿದೆ ಎಂದು ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ವಿಧಾನ ಸಭೆಯಲ್ಲಿ ನಿನ್ನೆಯಷ್ಟೇ ತಿಳಿಸಿದ್ದರು. ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್ದಾರರ ಆದಾಯವನ್ನು 1.20ಲಕ್ಷ ರೂ.ಗೆ ಮಿತಿಗೊಳಿಸಿದೆ. ಆದರೆ ಕೂಲಿ ಕೆಲಸಗಾರರಿಗೂ ಪ್ರತಿದಿನ 500 ರೂ. ದೊರೆಯುತ್ತದೆ. ಇದರ ಆಧಾರದಲ್ಲಿ ಅವರ ಆದಾಯವೂ ವರ್ಷಕ್ಕೆ 1.80 ಲಕ್ಷ ರೂ. ಗಿಂತ ಅಧಿಕವಾಗುತ್ತಿದೆ. ಹೀಗಾಗಿ ಈ ಬಗ್ಗೆ ಪರಿಷ್ಕರಣೆ ಕುರಿತು ಚಿಂತನೆ ನಡೆದಿದೆ ಎಂದಿದ್ದರು.
ರಾಜ್ಯದಲ್ಲಿ 7,75,206 ಶಂಕಾಸ್ಪದ ಪಡಿತರ ಫಲಾನುಭವಿಗಳನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಇಲ್ಲಿನ ಜನಸಂಖ್ಯೆಗೆ ಹೊಲಿಸಿದರೆ ಶೇ.73ರಷ್ಟು ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದಿವೆ. ಆದರೆ ಬಿಪಿಎಲ್ ಕುಟುಂಬಗಳ ಪ್ರಮಾಣ ಶೇ.50ರಷ್ಟು ಮಾತ್ರ ಇರಬೇಕಿತ್ತು ಎಂದಿದ್ದರು.
ವರದಿ: ಲಕ್ಷ್ಮೀನರಸಿಂಹ, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:53 pm, Fri, 19 December 25