AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯಲ್ಲಿ ಡಿ.27ರಂದು ಸುರೇಂದ್ರ ದಾನಿ ಜನ್ಮಶತಮಾನೋತ್ಸವ

ಹುಬ್ಬಳ್ಳಿಯಲ್ಲಿ ಡಿಸೆಂಬರ್ 27ರಂದು ಸುರೇಂದ್ರ ದಾನಿ ಜನ್ಮಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಕನ್ನಡ ಮಾಧ್ಯಮ ಕ್ಷೇತ್ರದ ಪ್ರತಿಷ್ಠಿತ ಟಿಎಸ್ಸಾರ್ ಪ್ರಶಸ್ತಿ ಪುರಸ್ಕೃತರಾದ ದಾನಿ, 'ಸಂಯುಕ್ತ ಕರ್ನಾಟಕ'ದಲ್ಲಿ ಸಂಪಾದಕರಾಗಿ, ವರದಿಗಾರರಾಗಿ ಮಹತ್ತರ ಸೇವೆ ಸಲ್ಲಿಸಿದ್ದಾರೆ. ಹಲವಾರು ಪತ್ರಿಕೆಗಳಿಗೆ ಸಂಪಾದಕತ್ವ ವಹಿಸಿದ್ದ ಇವರು, ಸಾಹಿತ್ಯ ಕ್ಷೇತ್ರದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಸೇವೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಹುಬ್ಬಳ್ಳಿಯಲ್ಲಿ ಡಿ.27ರಂದು ಸುರೇಂದ್ರ ದಾನಿ ಜನ್ಮಶತಮಾನೋತ್ಸವ
ಹುಬ್ಬಳ್ಳಿಯಲ್ಲಿ ಡಿ.27ರಂದು ಸುರೇಂದ್ರ ದಾನಿ ಜನ್ಮಶತಮಾನೋತ್ಸವ ಕಾರ್ಯಕ್ರಮ
ಭಾವನಾ ಹೆಗಡೆ
|

Updated on:Dec 19, 2025 | 12:17 PM

Share

ಹುಬ್ಬಳ್ಳಿ, ಡಿಸೆಂಬರ್ 19: ಕನ್ನಡ ಮಾಧ್ಯಮ ಕ್ಷೇತ್ರದ ಪ್ರತಿಷ್ಠಿತ ಟಿಯೇಸ್ಸಾರ್ ಪ್ರಶಸ್ತಿ ಪುರಸ್ಕೃತ ಸುರೇಂದ್ರ ದಾನಿ ಜನ್ಮಶತಮಾನೋತ್ಸವ ಕಾರ್ಯಕ್ರಮ ಇದೇ ತಿಂಗಳು 27ರಂದು ಹುಬ್ಬಳ್ಳಿಯ (Hubli) ಸವಾಯಿ ಗಂಧರ್ವ ಹಾಲ್​ನಲ್ಲಿ ನಡೆಯಲಿದೆ.  ಸುರೇಂದ್ರ ದಾನಿ ಜನ್ಮಶತಮಾನೋತ್ಸವ ಸಮಿತಿ ವತಿಯಿಂದ ಆಯೋಜಿಸಿರುವ ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಚಾಲನೆ ನೀಡಲಿದ್ದಾರೆ. ಹುಬ್ಬಳ್ಳಿಯ ಅದ್ವೈತ ವಿದ್ಯಾಶ್ರಮದ ಶ್ರೀ ಪ್ರಣವಾನಂದ ತೀರ್ಥರು ಸಾನಿಧ್ಯ ವಹಿಸಲಿರುವ ಕಾರ್ಯಕ್ರಮ ಅಧ್ಯಕ್ಷತೆಯನ್ನು ಖ್ಯಾತ ವೈದ್ಯ ಡಾ. ಎಂ ಎಂ ಜೋಶಿ ವಹಿಸಲಿದ್ದಾರೆ.

ಸುರೇಂದ್ರ ದಾನಿ ಕುರಿತ ಸ್ಮರಣೆ ಸಂಚಿಕೆ ಬಿಡುಗಡೆ

ಈ ವೇಳೆ ಎರಡು ಪ್ರತ್ಯೇಕ ಗೋಷ್ಠಿಗಳು ನಡೆಯಲಿದ್ದು, ಶ್ರೀನಿವಾಸ ವಾಡಪ್ಪಿ, ಭಾರತಿ ಜೋಶಿ, ಶ್ರೀಕೃಷ್ಣ ಸಂಪಗಾಂವಕರ್ ಮತ್ತು ಎನ್ ಎಸ್ ನಾಡಿಗೇರ ವಿಷಯ ಮಂಡಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ವೆಂಕಟನಾರಾಯಣ, ಮನೋಜ ಪಾಟೀಲ್, ಅರುಣಕುಮಾರ ಹಬ್ಬು, ವಿಶ್ವನಾಥ್ ಕುಲಕರ್ಣಿ, ಮೋಹನ್ ಹೆಗಡೆ, ಬಂಡು ಕುಲಕರ್ಣಿ, ಮಲ್ಲಿಕಾರ್ಜುನ ಸಿದ್ದಣ್ಣವರ್, ಪ್ರಕಾಶ್ ಶೇಟ್ ಮತ್ತು ಹಿರಿಯ ನ್ಯಾಯವಾದಿ ಸುಧೀಂದ್ರ ದೇಶಪಾಂಡೆ ಭಾಗವಹಿಸಲಿದ್ದಾರೆ. ಬೆಳಗ್ಗೆ 9.30ಕ್ಕೆ ಧಾರವಾಡದ ಗೀತಾ ಆಲೂರು, ಬೆಂಗಳೂರಿನ ಸುಜ್ಞಾನ ದಾನಿ ಮತ್ತು ಸಂಗಡಿಗರು ಲಘು ಸಂಗೀತ ಪ್ರಸ್ತುತ ಪಡಿಸಲಿದ್ದಾರೆ.

ಸುರೇಂದ್ರ ದಾನಿ ಕುರಿತ ಸ್ಮರಣೆ ಸಂಚಿಕೆ ಬಿಡುಗಡೆ ಆಗಲಿದ್ದು, ಸಚಿವ ಎಚ್ ಕೆ ಪಾಟೀಲ್, ಸಂಸದ ಜಗದೀಶ್ ಶೆಟ್ಟರ್, ಮಾಜಿ ಸಂಸದ ಐ ಜಿ ಸನದಿ, ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಉದ್ಯಮಿಗಳಾದ ಕೇಶವರಾಯ ದೇಸಾಯಿ, ಗೋವಿಂದ ಜೋಶಿ, ಹಿರಿಯ ಪತ್ರಕರ್ತ ಬಾಬು ಕೃಷ್ಣಮೂರ್ತಿ, ನಾರಾಯಣ ಡ ಗಳಘಿ, ಪತ್ರಿಕೋದ್ಯಮ ಉಪನ್ಯಾಸಕ ಡಾ. ಜೆ ಎಂ ಚಂದುನವರ ಉಪಸ್ಥಿತರಿರಲಿದ್ದಾರೆ.

ಮೊಹರೆ ಹನುಮಂತ ರಾಯರಿಂದ ಪತ್ರಿಕೋದ್ಯಮಕ್ಕೆ ಪರಿಚಯ

ಸುರೇಂದ್ರ ದಾನಿ ಪತ್ರಿಕಾಲೋಕದಲ್ಲಿ ಅಂದಿನ ಕಾಲದ ಪ್ರಸಿದ್ಧ ಹೆಸರು. ಇಂದಿನ ಕನ್ನಡ ಪತ್ರಿಕೋದ್ಯಮದ ಹಲವಾರು ಹಿರಿಯ ಪತ್ರಕರ್ತರು ಮತ್ತು ಅಗ್ರ ಲೇಖಕರು ದಾನಿಯವರ ಶಿಷ್ಯರು ಎಂದು ಅಭಿಮಾನದಿಂದ ಹೇಳುತ್ತಾರೆ. ಸುರೇಂದ್ರ ದಾನಿ 1925ರ ಆಗಸ್ಟ್ 17ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಭೀಮರಾವ್. ತಾಯಿ ಗಂಗಾಬಾಯಿ. ಸುರೇಂದ್ರ ದಾನಿ ಅವರ ಪ್ರಾರಂಭಿಕ ಶಿಕ್ಷಣ ಧಾರವಾಡ, ಬಾಗಲಕೋಟೆ, ಬಿಜಾಪುರಗಳಲ್ಲಿ ನಡೆಯಿತು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಅರ್ಥಶಾಸ್ತ್ರದಲ್ಲಿ ಬಿ.ಎ. ಪದವಿ ಪಡೆದರು.

ಸುರೇಂದ್ರ ದಾನಿ ಅವರಿಗೆ ಬ್ರಿಟಿಷರ ಗುಲಾಮಗಿರಿಯೊಳಗೆ ನೌಕರಿ ಮಾಡಬಾರದೆಂಬ ಹಠವಿತ್ತು. ಅನಿರೀಕ್ಷಿತವಾಗಿ ಮೊಹರೆ ಹನುಮಂತ ರಾಯರು ಕರೆದುಕೊಟ್ಟ ಉದ್ಯೋಗದಿಂದ ಪತ್ರಿಕೋದ್ಯಮ ಸೇರಿದರು. ಇದಕ್ಕೆಲ್ಲಾ ಗಾಂಧೀಜಿಯವರ ‘ಹರಿಜನ’ ಪತ್ರಿಕೆಯ ಪ್ರೇರಣೆಯೂ ಇತ್ತು. ಸುರೇಂದ್ರ ದಾನಿ ಅವರು 1947ರಲ್ಲಿ ಹುಬ್ಬಳ್ಳಿಯ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ವರದಿಗಾರರಾಗಿ ನೇಮಕಗೊಂಡರು. ನಂತರ ಉಪಸಂಪಾದಕರ ಹುದ್ದೆಗೆ ಏರಿದರು. ಬೆಂಗಳೂರಿನಲ್ಲಿ ಸಂಯುಕ್ತ ಕರ್ನಾಟಕ ಆವೃತ್ತಿ ಪ್ರಾರಂಭವಾದಾಗ ವರ್ಗವಾಯಿತು. ಅಲ್ಲಿ ಸಂಪಾದಕೀಯ ಲೇಖಕರೂ, ಸಾಪ್ತಾಹಿಕ ವಿಭಾಗದ ಸಂಪಾದಕರೂ ಆದರು. ಮತ್ತೆ ಹುಬ್ಬಳ್ಳಿಯಲ್ಲಿ ಸ್ಥಾನಿಕ ಸಂಪಾದಕರ ಹುದ್ದೆಗೆ ಹಿಂದಿರುಗಿದರು. ಹುಬ್ಬಳ್ಳಿ-ಬೆಂಗಳೂರು ಎರಡೂ ಮುದ್ರಣಗಳ ಸಂಪಾದಕರಾಗಿ ಹೊಣೆ ಹೊತ್ತರು. 1983ರಲ್ಲಿ ನಿವೃತ್ತರಾದರು.

ಪತ್ರಿಕೋದ್ಯಮದ ಜೊತೆ ಸಾಹಿತ್ಯ ರಚನೆ

ಸುರೇಂದ್ರ ದಾನಿ ನಿವೃತ್ತಿಯ ನಂತರವೂ ಒಂದೆಡೆ ಸುಮ್ಮನೆ ಕೂಡದ ಜೀವ. ಗುಲ್ಬರ್ಗಾದಿಂದ ಪ್ರಕಟವಾಗುತ್ತಿದ್ದ ‘ಕೇಸರಿಗರ್ಜನೆ’ ದಿನಪತ್ರಿಕೆಯ ಸಂಪಾದಕರಾಗಿ, ಹುಬ್ಬಳ್ಳಿಯ ‘ಖಾದಿಜಗತ್ತು’ ಪತ್ರಿಕೆಯ ಸಂಪಾದಕರಾಗಿ, ‘ಪರಿವಾರ’ ದ್ವೈಮಾಸಿಕ ಪತ್ರಿಕೆಯ ಸಂಪಾದಕರಾಗಿ, ‘ಸುರಾಜ್ಯಪಥ’ ಪಾಕ್ಷಿಕ ಪತ್ರಿಕೆಯ ಸಂಪಾದಕರಾಗಿ ಹೀಗೆ, ನಿರಂತರವಾಗಿ ಒಂದಿಲ್ಲೊಂದು ಜವಾಬ್ದಾರಿ ಹೊತ್ತು ನಡೆದಿದ್ದಾರೆ. ಪತ್ರಿಕಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಸ್ಮರಣ ಸಂಚಿಕೆಗಳ ಸಂಪಾದಕತ್ವವನ್ನೂ ಅವರು ನಿರ್ವಹಿಸಿದ್ದರು.

ಸುರೇಂದ್ರ ದಾನಿ ಅವರು ‘ಪತ್ರಕರ್ತನ’ ಜವಾಬ್ದಾರಿಗಳ ನಡುವೆಯೂ ಸಾಹಿತ್ಯ ಕೃತಿಗಳ ರಚನೆಗಳಲ್ಲಿ ತೊಡಗಿದ್ದರು. ಕೌಜಲಗಿ ಹನುಮಂತ ರಾಯರು, ಮೊಹರೆ ಹನುಮಂತರಾಯರು, ಅಮೆರಿಕದ ಪುಲಿಟ್ಜರ್ ಪಾರಿತೋಷಕ ಸ್ಥಾಪಕ ಜೋಸೆಫ್ ಪುಲಿಟ್ಜರ್ ಕುರಿತು ಕನ್ನಡಾನುವಾದದ ಕೃತಿ ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಜೀವನ ಚರಿತ್ರೆಗಳು, ಪತ್ರಿಕಾ ಪ್ರಬಂಧಗಳು ಎಂಬುದು ಇವರ ಪ್ರಬಂಧ ಸಂಗ್ರಹ. ಸ್ವಯಂ ಸೇವಕರ ನೆನಪುಗಳು, ಸ್ವಾತಂತ್ರ್ಯಸೇನಾನಿ, ಸಾಧನೆ-ಸವಾಲು, ಧಾರವಾಡ ಜಿಲ್ಲಾ ಸ್ವಾತಂತ್ರ್ಯ ಸಂಗ್ರಾಮ, ವ್ಯಾಸಸೃಷ್ಟಿ – ಕುಮಾರವ್ಯಾಸ ದೃಷ್ಟಿ ಮುಂತಾದವು ಅವರ ಇನ್ನಿತರ ವೈವಿಧ್ಯಮಯ ಬರಹಗಳಲ್ಲಿ ಕೆಲವು.

ಸುರೇಂದ್ರ ದಾನಿಗೆ ಸಂದ ಪ್ರಶಸ್ತಿಗಳು

ಸುರೇಂದ್ರ ದಾನಿ ಅವರು ಮೊಹರೆ ಹನುಮಂತರಾವ್ ಸ್ಮಾರಕ ಪ್ರತಿಷ್ಠಾನದ ಕಾರ್ಯದರ್ಶಿ, ಹುಬ್ಬಳ್ಳಿಯ ಕುಮಾರವ್ಯಾಸ ಸೇವಾ ಸಂಘದ ಗೌರವ ಕಾರ‍್ಯದರ್ಶಿ, ಗಾಂಧೀ ವಿಚಾರವೇದಿಕೆ ಸ್ಥಾಪಕ ಅಧ್ಯಕ್ಷ, ಗಮಕ ಸಂಗೀತೋತ್ಸವಗಳ ರೂವಾರಿ ಕೂಡ. ಹೀಗೆ ಹಲವು ರೀತಿಯಲ್ಲಿ ಸದಾ ಕ್ರಿಯಾಶೀಲರಾಗಿದ್ದರು. ಕುಮಾರವ್ಯಾಸ ಕೃತಿಯ ಬಗ್ಗೆ ಅವರಿಗೆ ವಿಶೇಷ ಆಸಕ್ತಿ ಇದ್ದು, ಭಾರತ ವಾಚನ ವ್ಯಾಖ್ಯಾನ ನಿಪುಣರಾಗಿದ್ದರು.

ಸುರೇಂದ್ರ ದಾನಿ ಅವರಿಗೆ ಕರ್ನಾಟಕ ಪತ್ರಿಕಾ ಅಕಾಡಮಿ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಎಚ್.ಆರ್. ಕುಲಕರ್ಣಿ ಸ್ಮಾರಕ ಪತ್ರಿಕಾ ಪ್ರಶಸ್ತಿ, ಜಗನ್ನಾಥರಾವ್ ಟಂಕಸಾಲಿ ಸ್ಮಾರಕ ಪತ್ರಿಕಾ ಪ್ರಶಸ್ತಿ, ಕರ್ನಾಟಕ ಗಮಕ ಕಲಾಪರಿಷತ್ತಿನ ಗಮಕ ವ್ಯಾಖ್ಯಾನ ಪ್ರಶಸ್ತಿ, ಟಿಎಸ್ಸಾರ್ ಪತ್ರಿಕಾ ಪ್ರಶಸ್ತಿಗಳೂ ಸೇರಿ ಅನೇಕ ಗೌರವಗಳು ಸಂದಿದ್ದವು. ಸುರೇಂದ್ರ ದಾನಿ ಅವರು 2010ರ ಮಾರ್ಚ್ 28ರಂದು ವೈಕುಂಠವಾಸಿಗಳಾದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:15 pm, Fri, 19 December 25