ಬೆಂಗಳೂರು: ಕೊವಿಡ್ನಿಂದ (Covid -19) ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರದ ಷರತ್ತಿನಲ್ಲಿ ರಾಜ್ಯ ಸರ್ಕಾರ ಮಾರ್ಪಾಡು ಮಾಡಿದೆ. ಬಿಪಿಎಲ್ (BPL) ಕುಟುಂಬದ ವ್ಯಕ್ತಿ ವಾರಸುದಾರರಿಗೆ ಪರಿಹಾರ ವಿಚಾರದ ಷರತ್ತು ಮಾರ್ಪಾಡು ಮಾಡಿರುವ ಸರ್ಕಾರ ಮೃತ ವ್ಯಕ್ತಿ ದುಡಿಯುವ ಸದಸ್ಯನಾಗಿರಬೇಕೆಂಬ ಅಂಶವನ್ನು ಕೈ ಬಿಟ್ಟಿದೆ. ಮೃತರು ಬಿಪಿಎಲ್ ಕುಟುಂಬದ ಸದಸ್ಯನಾಗಿದ್ದರೆ ₹1 ಲಕ್ಷ ಪರಿಹಾರ ನೀಡುವುದಾಗಿ ಹೇಳಿರುವ ಸರ್ಕಾ ರ ಯಾವುದೇ ವಯಸ್ಸಿನ ನಿಬಂಧನೆ ಇಲ್ಲದೆ ₹1 ಲಕ್ಷ ಪರಿಹಾರ ನೀಡಲಾಗುವುದು ಎಂದಿದೆ. ಮೃತ ಸದಸ್ಯರ ಅರ್ಹ ವಾರಸುದಾರರಿಗೆ ₹1 ಲಕ್ಷ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ. ಏತನ್ಮಧ್ಯೆ , ಕರ್ನಾಟಕದ ಇಬ್ಬರಿಗೆ ಒಮಿಕ್ರಾನ್ ರೂಪಾಂತರದ ಸೋಂಕು ದೃಢಪಟ್ಟಿರುವ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಒಮಿಕ್ರಾನ್ ಹರಡಿದ್ದರೂ ದೊಡ್ಡಮಟ್ಟದ ಆತಂಕವಿಲ್ಲ. ಕೇಂದ್ರ ಆರೋಗ್ಯ ಸಚಿವರೊಂದಿಗೆ ಈ ಕುರಿತು ಸ್ವತಃ ಚರ್ಚಿಸಿದ್ದೇನೆ. ಬೆಂಗಳೂರಿಗೆ ಹಿಂದಿರುಗಿದ ತಜ್ಞರ ಜತೆ ತುರ್ತು ಸಭೆ ಮಾಡಿ ಚರ್ಚೆ ನಡೆಸುತ್ತೇನೆ. ನಂತರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಕಠಿಣ ನಿಯಮ ಜಾರಿ ಸಾಧ್ಯತೆ
ಕರ್ನಾಟಕದ ಇಬ್ಬರಿಗೆ ಕೊರೊನಾ ವೈರಾಣುವಿನ ಒಮಿಕ್ರಾನ್ ರೂಪಾಂತರಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಕಠಿಣ ಕಾನೂನುಗಳು ಜಾರಿಯಾಗುವ ಸಾಧ್ಯತೆಯಿದೆ ಎಂಬ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ. ಒಮಿಕ್ರಾನ್ ಕೇಸ್ ಪತ್ತೆ ಬೆನ್ನಲ್ಲೇ ಆರೋಗ್ಯ ಇಲಾಖೆಯು ನಿಯಮಗಳನ್ನು ರೂಪಿಸಲು ಸಿದ್ಧತೆ ಆರಂಭಿಸಿದೆ. ತಜ್ಞರ ಸಲಹೆ ಪಡೆದು ಮತ್ತೆ ರಾಜ್ಯದಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸುವ ಸಾಧ್ಯತೆಯಿದೆ. ಈ ಹಿಂದೆ ನಡೆದಿದ್ದ ತಜ್ಞರ ಸಮಿತಿ ಸಭೆಗಳಲ್ಲಿ ಒಮಿಕ್ರಾನ್ ಪತ್ತೆಯಾದರೆ ಮತ್ತೆ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಸಲಹೆ ಮಾಡಿದ್ದರು.
ಒಮಿಕ್ರಾನ್ ರೂಪಾಂತರದ ಸೋಂಕು ಪತ್ತೆ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಸಚಿವರಿಗೆ ಮಾಹಿತಿ ಸಂಗ್ರಹಿಸಿದರು. ಸಮಗ್ರ ಮಾಹಿತಿ ಪಡೆದುಕೊಂಡ ನಂತರ ಸರ್ಕಾರವು ತೆಗೆದುಕೊಳ್ಳಲಿರುವ ಮುಂಜಾಗ್ರತಾ ಕ್ರಮದ ಬಗ್ಗೆ ಸಚಿವರು ಪ್ರತಿಕ್ರಿಯೆ ನೀಡಲಿದ್ದಾರೆ.
ರಾಜ್ಯದಲ್ಲಿ ಒಮಿಕ್ರಾನ್ ಪತ್ತೆ ಕುರಿತು ಪ್ರತಿಕ್ರಿಯಿಸಿದರು ಸಚಿವ ಡಾ.ಅಶ್ವತ್ಥ್ ನಾರಾಯಣ, ರಾಜ್ಯದಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರಿಂದ ಸಂಗ್ರಹಿಸಿದ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಗೆ ಕಳಿಸಲಾಗಿತ್ತು. ಇದೀಗ ಸೋಂಕಿತರ ಸಂಪರ್ಕಕ್ಕೆ ಬಂದಿದ್ದವರನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ. ಅಂಥವರನ್ನು ಗುರುತಿಸಿ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು. ಒಮಿಕ್ರಾನ್ ವೈರಸ್ ಕುರಿತು ವಿಶ್ವದ ಹಲವು ದೇಶಗಳಲ್ಲಿ ಅಧ್ಯಯನ ಮಾಡಲಾಗಿದೆ. 11 ದೇಶಗಳ ಸ್ಥಿತಿಗತಿ ನೋಡಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಒಮಿಕ್ರಾನ್ ವೇಗವಾಗಿ ಹರಡುತ್ತೆ, ಜೀವಕ್ಕೆ ಅಪಾಯವಿಲ್ಲ. ಒಮಿಕ್ರಾನ್ ವೈರಸ್ ಕುರಿತು ಸರ್ಕಾರ ಕಟ್ಟೆಚ್ಚರ ವಹಿಸಿದೆ ಎಂದು ನುಡಿದರು.
ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದಿದ್ದ ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ಗಳನ್ನು ಐಸೊಲೇಟ್ ಮಾಡಲಾಗಿದೆ. ವಿಶ್ವದ ಹಲವು ದೇಶಗಳಲ್ಲಿ ಈಗಾಗಲೇ ಈ ಸೋಂಕು ಕಾಣಿಸಿಕೊಂಡಿದೆ, ಹಲವು ಅಧ್ಯಯನಗಳೂ ನಡೆದಿವೆ. ದೈಹಿಕವಾಗಿ ಸೋರ್‌ನೆಸ್, ಮಾಂಸಖಂಡಗಳ ನೋವು ಕಾಣಿಸಿಕೊಳ್ಳಲಿದೆ. 11 ದೇಶಗಳ ಸ್ಥಿತಿಗತಿ ನೋಡಿಕೊಂಡು ಕ್ರಮ ತೆಗೆದುಕೊಂಡಿದ್ದೇವೆ. ಈ ಸೋಂಕು ವೇಗವಾಗಿ ಹರಡುತ್ತದೆ. ಆದರೆ ಜೀವಕ್ಕೆ ಅಪಾಯ ಇಲ್ಲ. ಸರ್ಕಾರ ಕಟ್ಟೆಚ್ಚರ ವಹಿಸಿದೆ. ತಪಾಸಣೆ ಆಗಿದ್ದರೂ ರಿಪೋರ್ಟ್ ಬರುವವರೆಗೂ ಯಾರನ್ನೂ ಜನರೊಂದಿಗೆ ಬೆರೆಯಲು ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಧಾನಸೌಧದ ಸಚಿವಾಲಯದಿಂದಲೂ ಈ ಬಾರಿ ಅಧಿವೇಶನ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಹ ಈ ಬಗ್ಗೆ ಗಮನ ಹರಿಸೋಣ ಎಂದಿದ್ದಾರೆ. ಇದು ಸರ್ಕಾರದ ಎದುರು ಇರುವ ಸವಾಲು ಮತ್ತು ಸಾಧ್ಯತೆ ಎರಡೂ ಹೌದು. ಮುಖ್ಯಮಂತ್ರಿ ಬೆಂಗಳೂರಿಗೆ ಬಂದ ಬಳಿಕೆ ಈ ಬಗ್ಗೆ ಸಭಾಧ್ಯಕ್ಷರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಕೊವಿಡ್ ಎದುರಿಸಿದ ರೀತಿ ಒಮಿಕ್ರಾನ್ ನಿಭಾಯಿಸುತ್ತೇವೆ: ಸಿಎಂ ಬಸವರಾಜ ಬೊಮ್ಮಾಯಿ
Published On - 10:45 pm, Thu, 2 December 21