ಬೆಂಗಳೂರು, (ಮಾರ್ಚ್ 20): ತಮಿಳುನಾಡು ಸರ್ಕಾರ ಹೊಸೂರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಪ್ರಸ್ತಾಪವನ್ನು ಕೇಂದ್ರದ ಮುಂದಿಟ್ಟ ಬೆನ್ನಲ್ಲೇ ಕರ್ನಾಟಕ ಸರ್ಕಾರ(Karnataka government )ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ (Bengaluru Second Airport) ನಿರ್ಮಾಣಕ್ಕೆ ವೇಗ ನೀಡಿದೆ. ಇದಕ್ಕೆ ಪೂರಕವೆಂಬಂತೆ ಬೆಂಗಳೂರಿನಲ್ಲಿ(bengaluru) ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಮೂರು ಸ್ಥಳಗಳನ್ನು ಗುರುತಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಐದಾರು ಸ್ಥಳಗಳ ಬಗ್ಗೆ ಚರ್ಚೆಯಾಗಿದ್ದವು. ಆದ್ರೆ, ಅಂತಿಮವಾಗಿ ಐಡೆಕ್ ಸಂಸ್ಥೆ ನೀಡಿದ ವರದಿ ಅನುಗುಣವಾಗಿ ಮೂರು ಸ್ಥಳಗಳ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಐಡೆಕ್ ಸಂಸ್ಥೆಯು ಎಲ್ಲಾ ರೀತಿಯ ಅಧ್ಯಯನ ಮಾಡಿ ಕನಕಪುರ ರಸ್ತೆಯಲ್ಲಿ ಎರಡು ಸ್ಥಳಗಳು ಹಾಗೂ ನೆಲಮಂಗಲ – ಕುಣಿಗಲ್ ನಡುವೆ ಇರುವ ಸೋಲೂರು ಬಳಿ ಸ್ಥಳ ಗುರುತು ಮಾಡಿದ್ದು, ಇದೀಗ ಅದನ್ನೇ ಸಿದ್ದರಾಮಯ್ಯ ಸರ್ಕಾರ, ನಾಗರಿಕರ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ತಾಂತ್ರಿಕ ಸಂಭಾವ್ಯತೆ, ರಸ್ತೆ ಸಂಪರ್ಕ, ಮೆಟ್ರೋ ಸೇರಿದಂತೆ ಎಲ್ಲಾ ರೀತಿಯ ಅಧ್ಯಯನ ನಡೆಸಿ ಐಡೆಕ್ ಸಂಸ್ಥೆಯು ಈ ಮೂರು ಸ್ಥಳಗಳನ್ನು ಗುರುತಿಸಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ. ಈ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವರ್ಷಕ್ಕೆ 10 ಕೋಟಿ ಜನರನ್ನು ನಿರ್ವಹಿಸಲಿದೆ ಎಂದು ಅಂದಾಜಿಸಲಾಗಿದ್ದು, ಇದಕ್ಕಾಗಿ 4,500 ರಿಂದ 5,000 ಎಕರೆ ಭೂಮಿ ಬೇಕಾಗಿದೆ. ಅದರಲ್ಲೂ ಏರ್‌ಪೋರ್ಟ್ ನಿರ್ಮಾಣಕ್ಕೆ ಸಮದಟ್ಟಾದ ಭೂಮಿಯ ಅವಶ್ಯಕತೆ ಇದೆ. ಸರ್ಕಾರದ ಭೂಮಿ ಹೆಚ್ಚಿರೋ ಕಡೆ ಏರ್‌ಪೋರ್ಟ್ ನಿರ್ಮಿಸಿದರೆ ನಿರ್ಮಾಣ ವೆಚ್ಚ ಕಡಿಮೆಯಾಗಲಿದೆ. ಸ್ಥಳ ಫೈನಲ್ ಮಾಡುವ ವೇಳೆ ಸರ್ಕಾರ ಇದನ್ನು ಪ್ರಮುಖವಾಗಿ ಗಮನಕ್ಕೆ ತೆಗೆದುಕೊಳ್ಳಲಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ಮೂರು ಸ್ಥಳಗಳನ್ನು ಶಾರ್ಟ್ ಲಿಸ್ಟ್ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ.
ಇದು ಮೂರ್ನಾಲ್ಕು ತಿಂಗಳಿಂದ ಚರ್ಚೆಯಾಗುತ್ತಿದೆಯಾದರೂ ಕೂಡ ಸ್ಥಳ ಮಾತ್ರ ಅಂತಿಮವಾಗಿಲ್ಲ. ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಅನೇಕ ಪ್ರಭಾವಿಗಳು ಬೆಂಗಳೂರು ದಕ್ಷಿಣದಲ್ಲಿ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂದು ಪಟ್ಟು ಹಿಡಿದಿದ್ದರೆ, ಗೃಹ ಸಚಿವ ಜಿ ಪರಮೇಶ್ವರ್ ಸೇರಿ ಹಲವರು ತುಮಕೂರು ಜಿಲ್ಲೆಯ ಸೋಲೂರು ಬಳಿ ವಿಮಾನ ನಿಲ್ದಾಣ ನಿರ್ಮಾಣ ಆಗಲಿ ಎಂದು ಹೇಳುತ್ತಿದ್ದಾರೆ. ಈ ಹಿನ್ನೆಲೆ ಸರ್ಕಾರ ಎರಡು ಕಡೆ ಮೂರು ಸ್ಥಳಗಳಲ್ಲಿ ಅಗತ್ಯವಿರುವ ಭೂಮಿಯನ್ನು ಗುರುತಿಸಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪಟ್ಟಿ ಕಳುಹಿಸಿದೆ. ಕನಕಪುರ ರಸ್ತೆಯಲ್ಲಿ ಎರಡು ಸ್ಥಳಗಳನ್ನು ಗುರುತಿಸಿರುವುದರಿಂದ ಬೆಂಗಳೂರು ದಕ್ಷಿಣದಲ್ಲಿಯೇ ವಿಮಾನ ನಿಲ್ದಾಣ ಆಗಲಿದೆ ಎನ್ನಲಾಗುತ್ತಿದೆ.
ಸದ್ಯ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಯನ್ನು ಕೇಂದ್ರ ಅವಲೋಕಿಸಲಿದೆ. ರಾಜ್ಯ ನಿಗದಿಪಡಿಸಿರುವ 3 ಸ್ಥಳಗಳಿಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಆ ಬಳಿಕ ಒಂದನ್ನು ಅಂತಿಮಗೊಳಿಸಿ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಲಾಗುತ್ತದೆ. ಈ ಬಳಿಕ ರಾಜ್ಯ ಸರ್ಕಾರ, ವಿಮಾನ ನಿಲ್ದಾಣ ನಿರ್ಮಾಣದ ಕಾರ್ಯ ಸಾಧ್ಯತೆಗಳ ಮೌಲ್ಯಮಾಪನವನ್ನು ಮಾಡಲಿದೆ. ಸಂಪೂರ್ಣ ಅಧ್ಯಯನದ ಬಳಿಕ ಮುಖ್ಯಮಂತ್ರಿಗಳ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಅದಾದ ಬಳಿಕ ವಿಮಾನ ನಿಲ್ದಾಣದ ನಿರ್ಮಾಣದ ಕಾಮಗಾರಿಗೆ ಚಾಲನೆ ಸಿಗಲಿದೆ. ಆದ್ರೆ, ಕೇಂದ್ರ ಸರ್ಕಾರ ಈ ಮೂರು ಸ್ಥಳಗಳ ಪೈಕಿ ಯಾವುದನ್ನು ಅಂತಿಮಗೊಳಿಸುತ್ತೆ ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ.