
ಬೆಂಗಳೂರು: ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ನಿರ್ಧರಿಸಿದೆ. ಅಕ್ಟೋಬರ್ 20ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸುಗ್ರೀವಾಜ್ಞೆಗೆ ಅನುಮೋದನೆ ಪಡೆಯಲಿದೆ. ಅನುಮೋದನೆ ಪಡೆದ ಬಳಿಕ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲಿದೆ. ನಂತರ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕವನ್ನು ಮಂಡನೆ ಮಾಡಲಿದೆ.
ಎಸ್ ಎಸ್ಟಿ ಮೀಸಲಾತಿ ಹೆಚ್ಚಳ ಹಿನ್ನೆಲೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(SC-ST)ಕ್ಕೆ ಬೊಮ್ಮಾಯಿ ಸರ್ಕಾರ ಬಂಪರ್ ಗಿಫ್ಟ್ ನೀಡಿದ್ದು, ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಇಂದು(ಅ.7) ನಡೆದ ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಎಲ್ಲವನ್ನೂ ಅವಲೋಕನ ಮಾಡಿ, ಎಸ್ಸಿ ಗೆ 15% ರಿಂದ 17% ಹಾಗೂ ಎಸ್ ಟಿ ಸಮುದಾಯಕ್ಕೆ 3% ರಿಂದ 7% ಕ್ಕೆ ಮೀಸಲಾತಿ (SC, ST Reservation)ಹೆಚ್ಚಳ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು.
SC, STಗೆ ಮೀಸಲಾತಿ ಹೆಚ್ಚಳ : ಅದು ಅಷ್ಟು ಸುಲಭವೇ? ಕಾನೂನು ಏನು ಹೇಳುತ್ತೆ?
ಕರ್ನಾಟಕ ಸರ್ಕಾರ ರೂಪಿಸುವ ಮೀಸಲಾತಿ ಶೇ.50 ರಷ್ಟನ್ನು ಮೀರಲಿದೆ. ಎಲ್ಲಾ ಮೀಸಲಾತಿ ಸೇರಿದರೂ ಅದು ಶೇ.50 ರಷ್ಟನ್ನು ಮೀರುವಂತಿಲ್ಲ. ಮಹಾರಾಷ್ಟ್ರ ಸರ್ಕಾರ, ಮರಾಠ ಸಮುದಾಯಕ್ಕೆ ಶೇ.16ರಷ್ಟು ಮೀಸಲಾತಿ ನೀಡಿದ್ದನ್ನು ಸುಪ್ರೀಂಕೋರ್ಟ್ 2021 ರಲ್ಲಿ ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಎಸ್ಟಿ, ಎಎಸ್ಸಿ ಸಮುದಾಯಗಳ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಕಾನೂನು ತೊಡಕುಗಳು ಎದುರಾಗಲಿವೆ. ಈ ಬಗ್ಗೆ ಹೈಕೋರ್ಟ್, ಸುಪ್ರೀಂಕೋರ್ಟ್ನಲ್ಲಿ ಸರ್ಕಾರ ಸವಾಲು ಎದುರಿಸಬೇಕಿದೆ.
ಕರ್ನಾಟಕದ ಮೀಸಲಾತಿ ವಿವರ ಇಂತಿದೆ.
ಪ್ರಸ್ತುತ ಕರ್ನಾಟಕದಲ್ಲಿ ಯಾವೆಲ್ಲ ಸಮುದಾಯಗಳಿಗೆ ಎಷ್ಟು ಮೀಸಲಾತಿ ಇದೆ ಎನ್ನುವುದನ್ನು ನೋಡುವುದಾದರೆ ಪ್ರವರ್ಗ 1ಕ್ಕೆ ಶೇ.4 ಮೀಸಲಾತಿ ( 95 ಜಾತಿಗಳು ), ಪ್ರವರ್ಗ 2 (ಎ) ಶೇ.15% ( 102 ಜಾತಿಗಳು), ಪ್ರವರ್ಗ 3ಬಿ ಶೇ.4( ಮುಸ್ಲಿಮರು ), ಪ್ರವರ್ಗ 3ಎ ಶೇ.4 4% (ಒಕ್ಕಲಿಗ&ಬಲಿಜ), ಪ್ರವರ್ಗ 3ಬಿ ಶೇ.5 5% ( ಲಿಂಗಾಯತರು & ಇತರೆ 5), ಪರಿಶಿಷ್ಟ ಜಾತಿಗಳ ಮೀಸಲಾತಿ ಶೇ.15( 101 ಜಾತಿಗಳು) , ಪರಿಶಿಷ್ಟ ಪಂಗಡಗಳ ಮೀಸಲಾತಿಗೆ ಶೇ 3% ((50 ಜಾತಿಗಳು) ಮೀಸಲಾತಿ ಇದೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಎಲ್ಲಾ ಮೀಸಲಾತಿ ಸೇರಿದರೂ ಅದು ಶೇ.50 ರಷ್ಟನ್ನು ಮೀರುವಂತಿಲ್ಲ. ಅಸಾಧಾರಣ, ಅಸಾಮಾನ್ಯ ಸಂದರ್ಭಗಳಲ್ಲಿ ಮಾತ್ರ ಶೇ. 50 ಮೀಸಲಾತಿ ಮೀರಬಹುದು ಎಂದು 1992 ರಲ್ಲಿ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 9 ನ್ಯಾಯಮೂರ್ತಿಗಳ ಸಂವಿಧಾನ ಪೀಠ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ವಿವಿಧ ಸಮುದಾಯಗಳು ಮೀಸಲಾತಿಗಾಗಿ ಹೋರಾಟಗಳನ್ನು ಮಾಡುತ್ತಿದ್ದು, ಇದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನು ಸರ್ಕಾರದ ಮುಂದಿರುವ ಒಂದು ದಾರಿ ಅಂದ್ರೆ ಅದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಸಂವಿಧಾನದ 9ನೇ ಶೆಡ್ಯೂಲ್ ಮೂಲಕ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕಷ್ಟೇ.
ಮೀಸಲಾತಿ ಹೆಚ್ಚಳಕ್ಕೆ ಬೊಮ್ಮಾಯಿ ಸರ್ಕಾರ ಏನು ?
ಸಂವಿಧಾನದ 9ನೇ ಷೆಡ್ಯೂಲ್ ಗೆ ಸೇರಿಸಿದರೆ ಕೋರ್ಟ್ ಹಸ್ತಕ್ಷೇಪ ಮಾಡುವಂತಿಲ್ಲ. ಇನ್ನೊಂದು ಕೆಲವು ವಿಶೇಷ ಸಂದರ್ಭದಲ್ಲಿ ಮಿತಿಗಿಂತ ಹೆಚ್ಚಿನ ಮೀಸಲಾತಿ ನೀಡಬಹುದು ಎಂದು ಕೂಡ ಸುಪ್ರೀಂ ಕೋರ್ಟ್ನ ಆದೇಶ ಇದೆ. ಇದನ್ನೇ ಇಟ್ಟುಕೊಂಡು ಇದೀಗ ರಾಜ್ಯದಲ್ಲಿ ಮೀಸಲಾತಿ ಶೇ.50ರಷ್ಟು ಗರಿಷ್ಠ ಮಿತಿಯನ್ನು ಹೆಚ್ಚಿಸಲು ಮುಂದಾಗಬಹುದು. ಅಂದು ತಮಿಳುನಾಡು ಸರ್ಕಾರ ಅನುಸರಿಸಿದ ವಿಧಾನವನ್ನು ಕರ್ನಾಟಕ ಸರ್ಕಾರ ಸಹ ಅನುಸರಿಸಬಹುದು.
ಮೀಸಲಾತಿ ಪ್ರಮಾಣ ಶೇ. 50ರಷ್ಟು ಮೀರಬಾರದು ಎಂದು ನ್ಯಾಯಾಲಯದ ತೀರ್ಪಿದೆ. ಈಗ ಮೀಸಲಾತಿ ಪ್ರಮಾಣ ಹೆಚ್ಚಾಗುವುದರಿಂದ ನ್ಯಾಯಾಲಯ ತಗಾದೆ ತೆಗೆಯಬಹುದು. ಹಾಗಾಗಿ ಶೆಡ್ಯೂಲ್ 9 ರಲ್ಲಿ ಈ ಮೀಸಲಾತಿ ಏರಿಕೆಯನ್ನು ಸೇರಿಸುವುದರಿಂದ ನ್ಯಾಯಾಲಯ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಲು ಆಗುವುದಿಲ್ಲ. ತಮಿಳುನಾಡು, ರಾಜಸ್ಥಾನ ಸೇರಿದಂತೆ ಬೇರೆ ರಾಜ್ಯಗಳಲ್ಲೂ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿ ಶೆಡ್ಯೂಲ್ 9 ರಲ್ಲಿ ಸೇರ್ಪಡೆ ಮಾಡಲಾಗಿದೆ. ಹಾಗಾಗಿ ರಾಜ್ಯ ಸರ್ಕಾರವೂ ಶೆಡ್ಯೂಲ್ 9 ರಲ್ಲಿ ಈ ಮೀಸಲಾತಿ ಹೆಚ್ಚಳವನ್ನು ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:27 pm, Mon, 17 October 22