ಸಾಲು ಸಾಲು ವಿರೋಧದ ಮಧ್ಯೆ ಬೆಂಗಳೂರಿನಲ್ಲಿ ಟನಲ್ ರಸ್ತೆ ಗುದ್ದಲಿ ಪೂಜೆಗೆ ಮುಹೂರ್ತ ಫಿಕ್ಸ್
ಸಾಲು ಸಾಲು ವಿರೋಧದ ಮಧ್ಯೆ ಕೂಡ ಐಟಿಸಿಟಿಯಲ್ಲಿ ಟನಲ್ ರಸ್ತೆ ನಿರ್ಮಾಣಕ್ಕೆ ಸರ್ಕಾರ ಸಜ್ಜಾಗಿನಿಂತಿದೆ. ಟನಲ್ ರಸ್ತೆಯಿಂದ ಸೂಕ್ಷ್ಮ ಪ್ರದೇಶಗಳಿಗೆ ಹಾನಿಯಾಗುತ್ತೆ, ಎಕ್ಸಿಟ್ ಜಾಗಗಳಲ್ಲಿ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತೆ ಅಂತಾ ಸಾಲು ಸಾಲು ಅಪಸ್ವರ ಕೇಳಿಬಂದಿದ್ರೂ ತಲೆಕೆಡಿಸಿಕೊಳ್ಳದ ಸರ್ಕಾರ ಇದೀಗ ಹೊಸ ವರ್ಷದಲ್ಲೇ ಟನಲ್ ರಸ್ತೆಗೆ ಭೂಮಿ ಪೂಜೆ ನಡೆಸೋಕೆ ಸಜ್ಜಾಗ್ತಿದೆ. ಇತ್ತ ಟನಲ್ ರಸ್ತೆಯಿಂದ ಜಲಮೂಲಗಳಿಗೆ ಕಂಟಕ ಎದುರಾಗುತ್ತೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದರೆ, ಇತ್ತ ಸ್ಯಾಂಕಿ ಕೆರೆ ಅಂಗಳಕ್ಕೂ ಕಂಟಕ ಎದುರಾಗುತ್ತೆ ಎಂದು ಆರೋಪಿಸಿರೋ ಬಿಜೆಪಿ, ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಪ್ರತಿಭಟಿಸಲು ಸಜ್ಜಾಗಿದೆ.

ಬೆಂಗಳೂರು, (ನವೆಂಬರ್ 14): ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ ಟನಲ್ ರಸ್ತೆ (Bengaluru Tunnel Road) ನಿರ್ಮಿಸಲು ಹೊರಟಿರುವ ರಾಜ್ಯ ಸರ್ಕಾರದ ನಡೆಗೆ ಈಗಾಗಲೇ ಹಲವು ಅಪಸ್ವರ ಕೇಳಿಬರುತ್ತಿದೆ. ಲಾಲ್ ಬಾಗ್ ಗೆ ಹಾನಿಯಾಗುತ್ತೆ, ಟ್ರಾಫಿಕ್ ದಟ್ಟಣೆ ಮತ್ತಷ್ಟು ಹೆಚ್ಚಾಗುತ್ತೆ ಎನ್ನುವ ಆರೋಪಗಳ ಜೊತೆಗೆ ಇದೀಗ ಟನಲ್ ರಸ್ತೆಯ ನಿರ್ಮಾಣದಿಂದ ರಾಜಧಾನಿಯ ಅಂತರ್ಜಲಮಟ್ಟಕ್ಕೂ ಹೊಡೆತ ಬೀಳುವ ಆತಂಕ ಎದುರಾಗಿದೆ. ಸದ್ಯ ಹೆಬ್ಬಾಳ ಟು ಸಿಲ್ಕ್ ಬೋರ್ಡ್ ತನಕ ನಡೆಸಲು ಹೊರಟಿರೋ ಟನಲ್ ರೋಡ್ ಕಾಮಗಾರಿ ಆರಂಭವಾದ್ರೆ ಆ ಮಾರ್ಗದ ಅಂತರ್ಜಲ ಮೂಲಗಳಿಗೆ ಕಂಟಕ ಎದುರಾಗುತ್ತೆ ಎಂದು ತಜ್ಞರು, ಪರಿಸರಪ್ರಿಯರು ಆತಂಕ ಹೊರಹಾಕಿದ್ದಾರೆ. ಟನಲ್ ರಸ್ತೆಯಿಂದ ಭೂಮಿಯ ಪದರಗಳ ಮೇಲೆ ಆಗೋ ಒತ್ತಡದ ಜೊತೆಗೆ ಅಂತರ್ಜಲಕ್ಕೂ ಕಂಟಕ ಆಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದ್ರೆ, ಇತ್ತ ಟನಲ್ ರಸ್ತೆಯ ನಿರ್ಮಾಣದ ಬಗ್ಗೆ ಹಲವು ಅಸಮಾಧಾನ ವ್ಯಕ್ತವಾದ್ರೂ ಕೂಡ ಟನಲ್ ರಸ್ತೆಯನ್ನ ನಿರ್ಮಿಸಲು ರಾಜ್ಯ ಸರ್ಕಾರ ಮಾತ್ರ ತುದಿಗಾಲಲ್ಲಿ ಕಾದುನಿಂತಿದ್ದು, ಹೊಸ ವರ್ಷದಲ್ಲೇ ಗುದ್ದಲಿಪೂಜೆ ಪ್ಲಾನ್ ಮಾಡಿದೆ.
ಸದ್ಯ ಸಾಲು ಸಾಲು ವಿರೋಧದ ನಡುವೆಯೇ ಟನಲ್ ರಸ್ತೆ ಕಾಮಗಾರಿ ಆರಂಭಕ್ಕೆ ಮುಹೂರ್ತ ಇಡಲು ಹೊರಟಿರೋ ಸರ್ಕಾರ ಜನವರಿ ಅಂತ್ಯ ಅಥವಾ ಫೆಬ್ರವರಿಯ ಆರಂಭದಲ್ಲಿ ಟನಲ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನಡೆಸೋಕೆ ಸದ್ದಿಲ್ಲದೇ ತಯಾರಿ ನಡೆಸುತ್ತಿದೆ.ಟಿಬಿಎಂ ಮಷಿನ್ ಗಳ ಮೂಲಕ ಸುರಂಗ ಕೊರೆಯೋ ಕಾರ್ಯಕ್ಕೆ ಚಾಲನೆ ನೀಡಲು ಸರ್ಕಾರ ಪ್ಲಾನ್ ರೆಡಿಮಾಡಿಕೊಂಡು ಕಾದು ಕುಳಿತಿದೆ. ಇನ್ನು ಸರ್ಕಾರದ ಟನಲ್ ರಸ್ತೆಯ ಪ್ಲಾನ್ ಗೆ ಆರಂಭದಿಂದಲೂ ಅಸಮಾಧಾನ ಹೊರಹಾಕ್ತಿದ್ದ ವಿಪಕ್ಷ ನಾಯಕರು, ಇದೀಗ ಸರ್ಕಾರದ ವಿರುದ್ಧ ಮತ್ತೊಮ್ಮೆ ಸಮರ ಸಾರಲು ಮುಂದಾಗಿದೆ ಹೊರಟಿದೆ.
ಇದನ್ನೂ ಓದಿ: ಬೇಡ್ತಿ ಮತ್ತು ಬೆಂಗಳೂರಿನ ಟನೆಲ್ ರಸ್ತೆ ವಿವಾದ: ಸೋನಿಯಾ ಗಾಂಧಿ ಮತ್ತು ಜೈರಾಮ್ ರಮೇಶ್ ಪರಿಸರ ಪ್ರೇಮ ತೋರಿಸಲಿ
ಮೊನ್ನೆಯಷ್ಟೇ ಲಾಲ್ ಬಾಗ್ ಮುಂದೆ ಪ್ರತಿಭಟಿಸಿ ಟನಲ್ ರಸ್ತೆ ನಿರ್ಮಾಣದ ವಿರುದ್ಧ ಆಕ್ರೋಶ ಹೊರಹಾಕಿದ್ದ ಬಿಜೆಪಿ ನಾಯಕರು, ನಾಳೆ ಸ್ಯಾಂಕಿ ಕೆರೆಯ ಅಂಗಳದಲ್ಲಿ ಟನಲ್ ರಸ್ತೆ ಹಾದುಹೋಗುವ ಮಾರ್ಗ ಪರಿಶೀಲಿಸೋಕೆ ಸಜ್ಜಾಗಿದ್ದಾರೆ. ಆರ್.ಅಶೋಕ್ ನೇತೃತ್ವದ ನಿಯೋಗ ಸ್ಯಾಂಕಿ ಕೆರೆ ಅಂಗಳದಲ್ಲಿ ರೌಂಡ್ಸ್ ಹಾಕಿ ಜಲಮೂಲಕ್ಕೆ ಟನಲ್ ರಸ್ತೆಯಿಂದ ಆಗೋ ಅಪಾಯದ ಬಗ್ಗೆ ಸರ್ಕಾರದ ಕಣ್ಣು ತೆರೆಸಲು ಸಜ್ಜಾಗಿದ್ದಾರೆ
ಸದ್ಯ ಟ್ರಾಫಿಕ್ ಕಿರಿಕಿರಿಗೆ ಮುಕ್ತಿ ಕೊಡಲು ಅತಿದೊಡ್ಡ ಟನಲ್ ರಸ್ತೆಯ ಪ್ರಾಜೆಕ್ಟ್ ಕನಸು ಕಾಣುತ್ತಿದ್ದ ಸರ್ಕಾರಕ್ಕೆ , ಇದೀಗ ಒಂದಿಲ್ಲೊಂದು ಅಡೆತಡೆ ಎದುರಾಗುತ್ತಿವೆ. ಸದ್ಯ ಟನಲ್ ರಸ್ತೆಯಿಂದ ಲಾಲ್ ಬಾಗ್ ಗೆ ಹಾನಿ ಮಾಡಲ್ಲ ಎಂದು ಸಮರ್ಥನೆ ನೀಡಿದ್ದ ಸರ್ಕಾರ, ಇದೀಗ ಜಲಮೂಲಗಳಿಗೆ ಆಗೋ ಅಪಾಯದ ಬಗ್ಗೆ ಯಾವ ರೀತಿ ಕ್ರಮ ಕೈಗೊಳ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.



