ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ವರ್ಗಾವಣೆ, 50 ಪಿಎಸ್ಐ ಟ್ರಾನ್ಸ್ಫರ್
ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆಜೋರಾಗಿದೆ. ಇಷ್ಟು ದಿನ ಐಎಎಸ್-ಐಪಿಎಸ್ ಅಧಿಕಾರಿಗಳ ವರ್ಗಾವಣೆಯಾಗುತ್ತಿದ್ದವು. ಇದೀಗ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಟ್ರಾನ್ಸ್ಫರ್ ಶುರುವಾಗಿದೆ.

ಬೆಂಗಳೂರು (ಆ.02): ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ತಡ ಎಗ್ಗಿಲ್ಲದೆ ಅಧಿಕಾರಿಗಳ ವರ್ಗಾವಣೆ(Transfer) ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯನ್ನು ಆರಂಭಿಸಿದೆ ಎಂದು ವಿಪಕ್ಷಗಳು ಗಂಭೀರ ಆರೋಪಗಳನ್ನು ಮಾಡುತ್ತಿವೆ. ಇದರ ಬೆನ್ನಲ್ಲೇ ಇದೀಗ ಮತ್ತೆ ರಾಜ್ಯ ಸರ್ಕಾರ, ಗೃಹ ಇಲಾಖೆಯಲ್ಲಿ ಮತ್ತೊಂದು ಸುತ್ತಿನ ವರ್ಗಾವಣೆ ಮಾಡಿದೆ. ಮೊನ್ನೇ ಅಷ್ಟೇ ಬರೋಬ್ಬರಿ 211 ಇನ್ಸ್ಪೆಕ್ಟರ್ಗಳನ್ನು(police inspector) ವರ್ಗಾವಣೆ ಮಾಡಿದ್ದು, ಇದರಲ್ಲಿ ಬೆಳಗಾಗುವಷ್ಟರಲ್ಲೇ ವರ್ಗಾವಣೆಗೆ ತಡೆ ನೀಡಿತ್ತು. ಇಂದು(ಆಗಸ್ಟ್ 03) ಮತ್ತೆ 50 ಪಿಎಸ್ಐಗಳನ್ನು ವರ್ಗಾವಣೆಗೊಳಿಸಲಾಗಿದೆ.
ಮೊನ್ನೇ ಅಷ್ಟೇ ರಾಜ್ಯದ 211 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿದ್ದ ಸರ್ಕಾರ, ಬೆಳಗಾಗುವಷ್ಟರಲ್ಲೇ 19 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ತಡೆಹಿಡಿದು ವಿಪಕ್ಷಗಳ ಆರೋಪಕ್ಕೆ ಪುಷ್ಟಿ ನೀಡಿದಂತಾಗಿತ್ತು. ಈಗ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮತ್ತೊಂದು ವರ್ಗಾವಣೆಯಾಗಿದ್ದು, ಈ ಬಾರಿ ಒಟ್ಟು 50 ಪಿಎಸ್ಐಗಳನ್ನು ವರ್ಗಾವಣೆಗೊಳಿಸಲಾಗಿದೆ.
ಸಭೆ ಬಳಿಕವೂ ಬಗೆಹರಿಯದ ಗೃಹ ಇಲಾಖೆ ವರ್ಗಾವಣೆ ಸಮಸ್ಯೆ
ಗೃಹ ಇಲಾಖೆ ವರ್ಗಾವಣೆ ವಿಚಾರ ಬಗೆಹರಿದಿಲ್ಲ. ಸಿಎಂ ಗೃಹ ಸಚಿವರ ರಹಸ್ಯ ಸಭೆ ಬಳಿಕವೂ ಕೂಡ ಸಮಸ್ಯೆ ಬಗೆಹರಿದಿಲ್ಲ. ನಿನ್ನೆ ಮೊನ್ನೆ ಗೃಹ ಇಲಾಖೆ ವರ್ಗಾವಣೆ ಆದ ಬಳಿಕವೂ ಶಾಸಕರು ಮಾಜಿ ಶಾಸಕರು ಬೇಸರಗೊಂಡಿದ್ದಾರೆ. ಮಾಜಿ ಶಾಸಕರ ಪತ್ರಗಳಿಗಂತೂ ಮನ್ನಣೆಯೇ ನೀಡಿಲ್ಲ. ಕೆಲವು ಕಡೆ ಹಾಲಿ ಶಾಸಕರ ಶಿಫಾರಸುಗಳಿಗೂ ಮನ್ನಣೆ ನೀಡದೇ ಇನ್ಸ್ಪೆಕ್ಟರ್ ಗಳ ವರ್ಗಾವಣೆ ಮಾಡಲಾಗಿದೆ. ಸದ್ಯಕ್ಕೆ ಗೊಂದಲಗಳ ಹಿನ್ನೆಲೆಯಲ್ಲಿ ವರ್ಗಾವಣೆಗೆ ತಡೆ ನೀಡಲಾಗಿತ್ತು.
ದೆಹಲಿಯಲ್ಲಿ ಸಭೆ ಬಳಿಕವೂ ಕೂಡ ಸಮಸ್ಯೆ ಬಗೆಹರಿಯದೇ ಇದ್ದರೆ ಶಾಸಕರು ಮತ್ತಷ್ಟು ಅಸಮಧಾನಗೊಳ್ಳಬಹುದು. ಇನ್ನು ಸಿಎಂ ಬಳಿಯೇ ಉಳಿದ ಎಲ್ಲ ಇಲಾಖೆಗಳ ವರ್ಗಾವಣೆ ಫೈಲ್ ಗಳೂ ಕೂಡ ತಲುಪಿವೆ. ವರ್ಗಾವಣೆ ವಿಚಾರದಲ್ಲಿ ಸಿಎಂ ಕೂಡ ತಮ್ಮ ಬೇಡಿಕೆಗಳಿಗೆ ಮನ್ನಣೆ ನೀಡುತ್ತಿಲ್ಲ ಎಂದು ಶಾಸಕರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



