ರಾಜ್ಯ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್: ತುಟ್ಟಿಭತ್ಯೆ ಹೆಚ್ಚಳಕ್ಕೆ ಅನುಮೋದನೆ
ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು 38.75% ರಿಂದ 42.5% ಕ್ಕೆ ಪರಿಷ್ಕರಿಸಲು ಅನುಮೋದಿಸಿದೆ. ಕೇಂದ್ರೀಯ ವೇತನ ಶ್ರೇಣಿಯಲ್ಲಿರುವವರಿಗೆ ಇದು 46% ರಿಂದ 50% ಕ್ಕೆ ಏರಿದೆ.
ಬೆಂಗಳೂರು, ಮಾ.12: ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು (Dearness Allowance) ಶೇಕಡಾ 38.75 ರಿಂದ ಶೇಕಡಾ 42.5 ಕ್ಕೆ ಪರಿಷ್ಕರಿಸಲು ಅನುಮೋದಿಸಿದೆ. ಕೇಂದ್ರೀಯ ವೇತನ ಶ್ರೇಣಿಯಲ್ಲಿರುವವರಿಗೆ ಇದು 46% ರಿಂದ 50% ಕ್ಕೆ ಏರಿದೆ. ಈ ಬದಲಾವಣೆಯು ಪ್ರತಿ ವರ್ಷ 1792.71 ಕೋಟಿ ರೂಪಾಯಿಗಳ ಗಮನಾರ್ಹ ಆರ್ಥಿಕ ಬದ್ಧತೆಯನ್ನು ಪ್ರತಿನಿಧಿಸುತ್ತದೆ. ನಮ್ಮ ಉದ್ಯೋಗಿಗಳಿಗೆ ನಮ್ಮ ಸಮರ್ಪಣೆಯನ್ನು ಪುನರುಚ್ಚರಿಸುತ್ತದೆ ಎಂದು ಸಿಎಂ ಕಚೇರಿ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.
2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇಕಡಾ 38.75 ರಿಂದ ಶೇಕಡಾ 42.5ಕ್ಕೆ ಪರಿಷ್ಕರಿಸಿ ಮಂಜೂರು ಮಾಡಲು ಸರ್ಖಾರವು ಹರ್ಷಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ತುಟ್ಟಿಭತ್ಯೆಯ ಉದ್ದೇಶಕ್ಕಾಗಿ ‘ಮೂಲ ವೇತನ’ ಎಂದರೆ ಸರ್ಕಾರಿ ನೌಕರನು ಧಾರಣ ಮಾಡಿರುವ ಹುದ್ದೆಗೆ ಅನ್ವಯವಾಗುವ ವೇತನ ಶ್ರೇನಿಯಲ್ಲಿ ಪಡೆಯುತ್ತಿರುವ ವೇತನ ಮತ್ತು ಅದರಲ್ಲಿ, 1) ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಅವನಿಗೆ ಸ್ಥಗಿತ ವೇತನ ಬಡ್ತಿಯನ್ನು ನೀಡಲಾಗಿದ್ದರೆ, ಆ ಸ್ಥಗಿತ ವೇತನ ಬಡ್ತಿ. 2) 2018ರ ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ವೇತನ) ನಿಯಮಗಳ ನಿಯಮ 3(ಸಿ)ಯನ್ನು ಓದಿಕೊಂಡು 7ನೇ ನಿಯಮದ (3ನೇ) ಉಪನಿಯಮದ ಮೇರೆಗೆ ಅವನಿಗೆ ನೀಡಲಾದ ವೈಯಕ್ತಿಕ ವೇತನ ಯಾವುದಾದರೂ ಇದ್ದರೆ ಆ ವೈಯಕ್ತಿಕ ವೇತನ, 3) ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಅವನಿಗೆ ಮಂಜೂರು ಮಾಡಲಾಗಿರುವ ಹೆಚ್ಚುವರಿ ವೇತನ ಬಡ್ತಿ ಯಾವುದಾದರೂ ಇದ್ದಲ್ಲಿ ಅವುಗಳು ಸೇರುತ್ತವೆ.
ಇದನ್ನೂ ಓದಿ: ಕರ್ನಾಟಕದ ಐದು ವಿಶ್ವವಿದ್ಯಾಲಯಗಳಿಗೆ ನೂತನ ಕುಲಪತಿಗಳನ್ನು ನೇಮಿಸಿ ರಾಜ್ಯಪಾಲ ಆದೇಶ
ಮೂಲ ವೇತನಕ್ಕೆ ಮೇಲೆ ಸೂಚಿಸಿರುವುದನ್ನು ಹೊರತುಪಡಿಸಿ ಇತರೆ ಯಾವುದೇ ಉಪಲಬ್ಧಗಳನ್ನು ಸೇರಿಸತಕ್ಕದ್ದಲ್ಲ. ರಾಜ್ಯ ಸರ್ಖಾರದ ನಿವೃತ್ತಿ ವೇತನದಾರರು ಅಥವಾ ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವಂತಹ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು ಅಥವಾ ಕುಟುಂಬ ನಿವೃತ್ತಿ ವೇತನದಾರರಿಗೂ ಜನವರಿ 1 ರಿಂದ ಜಾರಿಗೆ ಬರುವಂತೆ ಹಾಲಿ ಲಭ್ಯವಿರುವ ತುಟ್ಟಿಭತ್ಯೆಯ ದರಗಳನ್ನು ಮೂಲ ನಿವೃತ್ತಿ ವೇತನ ಅಥವಾ ಕುಟುಂಬ ನಿವೃತ್ತಿ ವೇತನದ ಪ್ರಸಕ್ತ ಶೇ.38.75 ರಿಂದ ಶೇ.42.5ಕ್ಕೆ ಹೆಚ್ಚಿಸಿ ಮಂಜೂರು ಮಾಡಲು ಆದೇಶಿಸಲಾಗಿದೆ.
ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಗಳ ನಿವೃತ್ತ ವೇತನದಾರರಿಗೂ ಈ ಆದೇಶ ಅನ್ವಯಿಸುತ್ತದೆ. ಸರ್ಕಾರದ ಮತ್ತು ಜಿಲ್ಲಾ ಪಂಚಾಯತ್ಗಳ ಪೂರ್ಣಾವಧಿ ನೌಕರರಿಗೆ, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್ಚಾರ್ಜ್ ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರಿಗೆ ಈ ಆದೇಶ ಅನ್ವಯಿಸುತ್ತದೆ.
ಸಿಎಂ ಕಚೇರಿ ಎಕ್ಸ್ ಪೋಸ್ಟ್
The Government of Karnataka has approved a revision of the Dearness Allowance to state government employees from 38.75% to 42.5%. For those on central pay scales, it’s up from 46% to 50%. This change represents a significant financial commitment of Rs. 1792.71 crores every year,… pic.twitter.com/mEUfXV1wfi
— CM of Karnataka (@CMofKarnataka) March 12, 2024
ಯುಜಿಸಿ, ಎಐಸಿಟಿಇ, ಐಸಿಎಆರ್ ವೇತನ ಶ್ರೇಣಿಗಳಲ್ಲಿ ಹಾಲಿ ವೇತನ ಪಡೆಯುತ್ತಿರುವ ನೌಕರರಿಗೆ ಮತ್ತು ಎನ್ಜೆಪಿಸಿ ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
ಈ ಆದೇಶದ ಮೇರೆಗೆ ಲಭ್ಯವಿರುವ ತುಟ್ಟಿಭತ್ಯೆಯನ್ನು ನಗದಾಗಿ ಪಾವತಿ ಮಾಡಬಹುದು. ತುಟ್ಟಿಭತ್ಯೆಯ ಕಾರಣದಿಂದ ಸಂದಾಯ ಮಾಡಬೇಕಾಗಿರುವ ಐವತ್ತು ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸತಕ್ಕದ್ದು ಮತ್ತು ಐವತ್ತು ಪೈಸೆಗಿಂತ ಕಡಿಮೆ ಇರುವ ಭಿನ್ನಾಂಕಗಳನ್ನು ಕಡೆಗಣಿಸತ್ತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ತುಟ್ಟಿಭತ್ಯೆ ಬಾಕಿ ಮೊತ್ತವನ್ನು 2024ರ ಮಾರ್ಚ್ ತಿಂಗಳ ವೇತನ ಬಡವಾಡೆಗೂ ಮೊದಲು ಪಾವತಿ ಮಾಡತ್ತಕ್ಕದ್ದಲ್ಲ. ತುಟ್ಟಿಭತ್ಯೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ತೋರಿಸುವುದು ಮತ್ತು ಯಾವುದೇ ಉದ್ದೇಶಕ್ಕಾಗಿ ಇದನ್ನು ವೇತನ ಎಂದು ಪರಿಗಣಿಸಲಾಗುವುದಿಲ್ಲ ಎಂದು ಆರ್ಥಿಕ ಇಲಾಖೆಯ (ಸೇವೆಗಳು-2) ಸರ್ಕಾರದ ಜಂಟಿ ಕಾರ್ಯದರ್ಶಿ ಉಮಾ.ಕೆ ಅವರು ಹೊರಡಿಸಿದ ಆದೇಶದಲ್ಲಿ ಸ್ಪಷ್ಟನೆ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:45 pm, Tue, 12 March 24