ಚಾಮರಾಜನಗರ ಜಿಲ್ಲಾಸ್ಪತ್ರೆ ಆಕ್ಸಿಜನ್ ಪ್ರಕರಣ; ತನಿಖಾ ತಂಡ ವರದಿ ನೀಡಿದ್ರೂ ಸರ್ಕಾರ ಸೈಲೆಂಟ್, ಜೀವ ಹಿಂಡಿದವರಿಗೆ ಶಿಕ್ಷೆ ಯಾವಾಗ?
ಅಲ್ಲಿ ಜೀವ ಕಳೆದುಕೊಂಡಿದ್ದು ಒಬ್ರಲ್ಲ.. ಇಬ್ರಲ್ಲ.. ಆಕ್ಸಿಜನ್ ಇಲ್ಲದೆ 37ಮಂದಿ ಉಸಿರು ನಿಲ್ಲಿಸಿದ್ರು. ಜನರ ಆಕ್ರಂದನ ಮುಗಿಲು ಮುಟ್ಟಿತ್ತು. ಇಷ್ಟೆಲ್ಲಾ ಆಗಿ ಎರಡು ವಾರ ಕಳೆದಿದೆ. ಹೈಕೋರ್ಟ್ಗೆ ವರದಿ ಸಲ್ಲಿಸಿ ಒಂದು ವಾರ ಕಳೆದಿದೆ. ಹೀಗಿದ್ರೂ ಸರ್ಕಾರ ಯಾರ ಮೇಲೂ ಕ್ರಮ ಜರುಗಿಸಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಚಾಮರಾಜನಗರ: ಆವತ್ತು ರಾತ್ರಿ ಕಳೆದು ಬೆಳಗಾಗುವಷ್ಟ್ರಲ್ಲಿ ಮಹಾದುರಂತವೇ ನಡೆದು ಬಿಟ್ಟಿತ್ತು. ಎರಡು ದಿನಗಳ ಅಂತರದಲ್ಲಿ 36 ಜನರ ಉಸಿರು ನಿಂತು ಹೋಗಿತ್ತು. ಇಲ್ಲಿನ ಆಕ್ಸಿಜನ್ ದುರಂತ ಇಡೀ ದೇಶದ ಗಮನ ಸೆಳೆದಿತ್ತು. ಪ್ರಕರಣ ಕೋರ್ಟ್‌ವರೆಗೂ ಹೋಗಿತ್ತು. ರಾಜ್ಯಕ್ಕೆ ರಾಜ್ಯವೇ ಬೆಚ್ಚಿಬಿದ್ದಿತ್ತು.
ತಮ್ಮವರು ಬದುಕಿ ಬರ್ತಾರೆ ಅಂತಾ ಕಾದು ಕುಳಿತಿದ್ದ ಕುಟುಂಬಸ್ಥರು ಕುಸಿದು ಬಿದ್ದಿದ್ರು. ತನ್ನ ಮಗ ಮನೆಗೆ ಬರ್ತಾನೆ ಅಂತಾ ದಿಕ್ಕುಗಳನ್ನ ನೋಡ್ತಿದ್ದ ಹೆತ್ತಮ್ಮಗೆ ಜೀವವೇ ಹೋದಂತೆ ಆಗಿತ್ತು. ಯಾಕಂದ್ರೆ, ಕೇವಲ ಆಕ್ಸಿಜನ್ ಕೊರತೆಯಿಂದ ಇಡೀ ಮನೆಯ ನಗು ಉಸಿರುಚೆಲ್ಲಿತ್ತು. ಇಷ್ಟೆಲ್ಲಾ ದುರಂತ ನಡೆದಿದ್ರೂ ಇದುವರೆಗೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅನ್ನೋದೇ ಮತ್ತೊಂದು ದುರಂತ..
ದುರಂತ ನಡೆದು 2 ವಾರ ಕಳೆದ್ರೂ ಸರ್ಕಾರ ಸೈಲೆಂಟ್ ಚಾಮರಾಜನಗರ ಜಿಲ್ಲಾಸ್ಪತ್ರೆಯ ಮುಂಭಾಗ ಮೇ 2 ಮಧ್ಯರಾತ್ರಿ ಮತ್ತು ಮೇ 3 ಬೆಳಗ್ಗೆ ಮಹಾ ದುರಂತವೇ ನಡೆದಿತ್ತು. ಕೆಲವೇ ಕೆಲ ಗಂಟೆಗಳಲ್ಲಿ 36 ಮಂದಿ ಮಸಣ ಸೇರಿದ್ರು. ಈ ವೇಳೆ ಹೈಕೋರ್ಟ್ ತನಿಖಾ ತಂಡ ರಚನೆ ಮಾಡಿತ್ತು. ಅದ್ರಂತೆ, ಕಳೆದ ಒಂದು ವಾರದ ಹಿಂದೆಯೇ ತನಿಖಾ ತಂಡವೂ ವರದಿ ಸಲ್ಲಿಸಿದೆ. ಇದ್ರಲ್ಲಿ ಆಕ್ಸಿಜನ್ ಖಾಲಿ ಆಗಿದ್ರಿಂದ್ಲೇ 36 ಮಂದಿ ಮೃತಪಟ್ಟಿದ್ದಾರೆ ಅಂತಾ ತಿಳಿಸಿದೆ. ಅಲ್ಲದೆ, ದುರಂತದಲ್ಲಿ ಮೆಡಿಕಲ್ ಕಾಲೇಜ್ ನಿರ್ದೇಶಕ ಎಂ.ಜಿ. ಸಂಜೀವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಸಿ.ರವಿ, ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕಾ ಮುರುಗೇಶ್ ಮತ್ತು ಆರ್.ಎಂ.ಕೃಷ್ಣ ಪ್ರಸಾದ್ ಕೂಡ ಹೊಣೆಗಾರರು ಎಂದು ಹೇಳಿದೆ. ಆದ್ರೆ ವರದಿ ನೀಡಿ ಒಂದು ವಾರ ಕಳೆದ್ರೂ, ದುರಂತ ನಡೆದು ಎರಡು ವಾರ ಆಗಿದ್ರೂ ಯಾವ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಂಡಿಲ್ಲ.
ಇನ್ನು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರನ್ನ ಕೇಳಿದರೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ. ದುರಂತದ ತನಿಖಾ ವರದಿ ಕೋರ್ಟ್ ಕೈ ಸೇರಿದೆ. ವರದಿ ಬಗ್ಗೆ ಶೀಘ್ರದಲ್ಲಿಯೇ ನ್ಯಾಯಾಲಯದಲ್ಲಿ ಚರ್ಚೆ ಆಗಲಿದೆ ಅಂತಾ ಡೈಲಾಗ್ ಹೊಡೆದು ಸುಮ್ಮನಾಗಿದ್ದಾರೆ. ಒಟ್ನಲ್ಲಿ, ಸರ್ಕಾರ ಇಂತಹವರ ರಕ್ಷಣೆಗೆ ಮುಂದಾದರೆ, ಬಡವರ ರಕ್ಷಣೆ ಮಾಡುವುದಾದ್ರೂ ಯಾರು ಎಂಬ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ: ಚಾಮರಾಜನಗರ ದುರಂತ: ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರು 24 ಜನರಲ್ಲ, 36 ಜನ; ಹೈಕೋರ್ಟ್ಗೆ ವರದಿ ಸಲ್ಲಿಕೆ
Published On - 8:32 am, Tue, 18 May 21