ಕೊವಿಡ್ನಿಂದ ಮೃತರ ಕುಟುಂಬದ ಸದಸ್ಯರಿಗೆ ಒಟ್ಟು 1.50 ಲಕ್ಷ ರೂ. ಪರಿಹಾರ: ಗೊಂದಲಗಳಿಗೆ ತೆರೆ
Coronavirus: ರಾಜ್ಯ ಸರ್ಕಾರವು ಘೋಷಿಸಿರುವಂತೆ ಸಂಧ್ಯಾ ಸುರಕ್ಚಾ ಯೋಜನೆಯಡಿ 1 ಲಕ್ಚ ರೂಪಾಯಿ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 50 ಸಾವಿರ ರೂಪಾಯಿಗಳನ್ನು ಪಾವತಿಸಲು ನಿರ್ದೇಶನ ನೀಡಲಾಗಿದೆ.
ಬೆಂಗಳೂರು: ಕೊರೊನಾ ಸೋಂಕಿನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಒಬ್ಬ ಕಾನೂನು ಬದ್ಧ ವಾರಸುದಾರರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪರಿಹಾರ ಎರಡನ್ನೂ ಪ್ರತ್ಯೇಕವಾಗಿ ನೀಡುವಂತೆ ಆದೇಶ ಹೊರಡಿಸಲಾಗಿದೆ. ರಾಜ್ಯ ಸರ್ಕಾರವು ಘೋಷಿಸಿರುವಂತೆ ಸಂಧ್ಯಾ ಸುರಕ್ಷಾ ಯೋಜನೆಯಡಿ 1 ಲಕ್ಷ ರೂಪಾಯಿ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ 50 ಸಾವಿರ ರೂಪಾಯಿಗಳನ್ನು ಪಾವತಿಸಲು ನಿರ್ದೇಶನ ನೀಡಲಾಗಿದೆ. ಈ ಮೂಲಕ, ಕೇಂದ್ರ ಸರ್ಕಾರದ ಆದೇಶದ ಬಳಿಕ ಪರಿಹಾರ ಧನ ನೀಡಿಕೆ ವಿಚಾರದಲ್ಲಿ ಉಂಟಾದ ಗೊಂದಲಗಳಿಗೆ ತೆರೆ ಎಳೆದಂತಾಗಿದೆ.
ಕೊವಿಡ್ನಿಂದ ಮೃತರ ಕುಟುಂಬಗಳಿಗೆ ಪರಿಹಾರ ಕಡಿತ ಎಂದು ಇಂದು (ಸೆಪ್ಟೆಂಬರ್ 28) ವೇಳೆ ಗೊಂದಲ ಉಂಟಾಗಿತ್ತು. 1 ಲಕ್ಷ ರೂಪಾಯಿ ಬದಲಿಗೆ 50 ಸಾವಿರ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಲಾಗಿತ್ತು. 1 ಲಕ್ಷ ರೂಪಾಯಿ ಪರಿಹಾರ ಬಿಡುಗಡೆಗೆ ಹೊರಡಿಸಿದ್ದ ಆದೇಶ ವಾಪಸ್ ಪಡೆಯಲಾಗಿದೆ ಎಂದು ಹೇಳಲಾಗಿತ್ತು. ಕೇಂದ್ರದ ಗೃಹ ಸಚಿವಾಲಯದ ಸೂಚನೆ ಹಿನ್ನೆಲೆಯಲ್ಲಿ ಕೋವಿಡ್ ಮೃತರಿಗೆ 50 ಸಾವಿರ ರೂ ಪರಿಹಾರ ಎಂದು ಚರ್ಚೆಯಾಗಿತ್ತು.
ಈ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಟೀಕಾಪ್ರಹಾರ ನಡೆಸಿದ್ದರು. ರಾಜ್ಯ ಸರ್ಕಾರ ಆದೇಶಿಸಿರುವ 1 ಲಕ್ಷ ರೂಪಾಯಿ ಪರಿಹಾರವನ್ನು ನೀಡಿಲ್ಲ. ಈಗ ಪರಿಹಾರ ಧನ ಕಡಿತಗೊಳಿಸಲಾಗಿದೆ. ಈ ಘೋಷಣೆ, ಬದಲಾವಣೆಗಳ ಬಗ್ಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು. ವಿಧಾನಸಭಾ ಅಧಿವೇಶನದಲ್ಲಿ ಕೂಡ ಸಚಿವ ಬಿ. ಶ್ರೀರಾಮುಲು ಹಾಗೂ ಸಿದ್ದರಾಮಯ್ಯ ನಡುವೆ ಪರಿಹಾರ ಧನ ವಿಚಾರವಾಗಿ ವಾಗ್ವಾದ ನಡೆದಿತ್ತು. ಇಂದು ಉಂಟಾಗ ಗೊಂದಲ ಮತ್ತೆ ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಧನ ನೀಡುವ ಬಗೆಗಿನ ಚರ್ಚೆ ಕಾವೇರುವಂತೆ ಮಾಡಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊವಿಡ್ನಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ಪರಿಹಾರ ನೀಡುತ್ತೇವೆ. ಸರ್ಕಾರ ಘೋಷಿಸಿರುವಂತೆ 1 ಲಕ್ಷ ಪರಿಹಾರ ನೀಡುತ್ತೇವೆ. 1 ಲಕ್ಷ ರೂಪಾಯಿ ಪರಿಹಾರ ನೀಡುವ ವಿಚಾರದಲ್ಲಿ ಬದಲಾವಣೆಯಿಲ್ಲ ಎಂದು ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದರು. ಇದೀಗ ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಾಗಿದೆ. ಅದರ ಅನ್ವಯ ಕೇಂದ್ರದ ಆದೇಶದಂತೆ 50 ಸಾವಿರ ರೂಪಾಯಿ ಹಾಗೂ ರಾಜ್ಯ ಸರ್ಕಾರದಿಂದ 1 ಲಕ್ಷ ರೂಪಾಯಿ ಪರಿಹಾರ ಲಭಿಸಲಿದೆ. ಕೊರೊನಾದಿಂದ ಮೃತಪಟ್ಟ ಅರ್ಹ ಸಂತ್ರಸ್ಥ ಕುಟುಂಬದ ಕಾನೂನು ಬದ್ಧ ವಾರಸುದಾರರಿಗೆ ಆ ಮೊತ್ತ ಲಭಿಸಲಿದೆ.
ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 629 ಜನರಿಗೆ ಕೊರೊನಾ ದೃಢ; 17 ಮಂದಿ ಸಾವು
ಇದನ್ನೂ ಓದಿ: Bengaluru: ಒಂದೇ ಕಾಲೇಜಿನ 54 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್
Published On - 11:41 pm, Tue, 28 September 21