ಬೆಂಗಳೂರು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯನ್ನು(Free Bus Travel For Women Scheme) ರಾಜ್ಯ ಸರ್ಕಾರ ಈಗಾಗಲೇ ಜಾರಿ ಮಾಡಿದ್ದು, ಪ್ರತಿನಿತ್ಯ ಸಾವಿರಾರು ಮಹಿಳೆಯರು(Women) ಫ್ರೀಯಾಗಿ ಓಡಾಡುತ್ತಿದ್ದಾರೆ. ಇದರಿಂದ ಸಾರಿಗೆ ನಿಗಮಗಳಿಗೆ(State Transport Corporation) ನಿತ್ಯ ಕೋಟಿಗಟ್ಟಲೇ ಹಣ ಹೊರೆಯಾಗುತ್ತಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ನಾಲ್ಕು ಸಾರಿಗೆ ನಿಗಮಗಳಿಗೆ ಮತ್ತೊಂದು ಶಾಕ್ ಕೊಟ್ಟಿದೆ. ಇನ್ಮುಂದೆ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳಿಗೆ ಅನುದಾನ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹಿಂದಿನ ಬಿಜೆಪಿ ಸರ್ಕಾರ ಸಾರಿಗೆ ನೌಕರರಿಗೆ 15% ವೇತನ ಪರಿಷ್ಕರಣೆ ಮಾಡಿತ್ತು. ಆ ಹೆಚ್ಚುವರಿ ಅನುದಾನವನ್ನು ರಾಜ್ಯ ಸರ್ಕಾರವೇ ಭರಿಸುತ್ತಿತ್ತು. ಆದರೆ ನೂತನ ಕಾಂಗ್ರೆಸ್ ಸರ್ಕಾರ ಅನುದಾನ ನೀಡಲು ಆಗುವುದಿಲ್ಲ ಎಂದು ಆದೇಶಿಸಿದೆ. ಇನ್ಮುಂದೆ ವೇತನ ಪಾವತಿಗಾಗಿ ಹಾಗೂ ಇಂಧನ ವೆಚ್ಚಕ್ಕಾಗಿ ಹೆಚ್ಚುವರಿ ಅನುದಾನವನ್ನು ಒದಗಿಸಲು ಅವಕಾಶವಿಲ್ಲವೆಂದು ಆದೇಶದಲ್ಲಿ ತಿಳಿಸಿದೆ.
ನಿಗಮಗಳ ಸಿಬ್ಬಂದಿ ವೇತನ ಪರಿಷ್ಕರಣೆಯ ಹೆಚ್ಚುವರಿ ವೆಚ್ಚ ನಿಭಾಯಿಸಲು ವಿಶೇಷ ಅನುದಾನಕ್ಕಾಗಿ ನಿಗಮಗಳು ಬೇಡಿಕೆ ಇಟ್ಟಿದ್ದವು. ಆದ್ರೆ, ನಿಗಮಗಳ ಮನವಿಯನ್ನು ರಾಜ್ಯ ಸಾರಿಗೆ ಇಲಾಖೆ ಸಾರಾಸಗಟಾಗಿ ತಿರಸ್ಕರಿಸಿದೆ. ಅಲ್ಲದೇ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಯಿಂದ ಉಂಟಾಗುವ ವೆಚ್ಚವನ್ನು ನಿಗಮಗಳು ಆಂತರಿಕ ಸಂಪನ್ಮೂಲಗಳಿಂದ ಭರಿಸುವಂತೆ ಸೂಚಿಸಿದೆ.
ರಾಜ್ಯ ಸರ್ಕಾರದ ಈ ಆದೇಶದಿಂದ ಸಾರಿಗೆ ನಿಗಮಗಳಿಗೆ ಬಿಗ್ ಶಾಕ್ ಆಗಿದ್ದು, ಸಿಬ್ಬಂದಿ ವೇತನ ಹಾಗೂ ಇತರೆ ವೆಚ್ಚಗಳ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಇನ್ನು ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟಿವಿ9ಗೆ ಪ್ರತಿಕ್ರಿಯಿಸಿದ್ದು, ಈ ಹಿಂದೆ ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರ ಹಣ ನೀಡುತ್ತಿರಲಿಲ್ಲ. ನಿಗಮಗಳ ಆದಾಯದಲ್ಲೇ ವೇತನ, ಇಂಧನಕ್ಕೆ ಹೊಂದಿಸಿಕೊಳ್ಳುತ್ತಿದ್ದರು. ಸಾರಿಗೆ ನಿಗಮಗಳ ಆದಾಯದಲ್ಲೇ ವೇತನ ಮತ್ತು ಇಂಧನಕ್ಕೆ ಹಣ ಹೊಂದಿಸಿಕೊಳ್ಳುತ್ತಿದ್ದರು. ಎರಡು ವರ್ಷ ಕೊರೊನಾ ಸಂದರ್ಭದಲ್ಲಿ ಸರ್ಕಾರ ಸಾರಿಗೆ ನಿಗಮಗಳ ಸಹಾಯಕ್ಕೆ ಬಂದಿತ್ತು. ಈಗ ಕೊರೊನಾ ಇಲ್ಲದ ಕಾರಣ ಆ ದೃಷ್ಟಿಯಿಂದ ಈ ಆದೇಶವನ್ನು ಆರ್ಥಿಕ ಇಲಾಖೆ ಹೊರಡಿಸಿರಬೇಕು. ಸದ್ಯ ನಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಿದ್ರೆ ನಾವೇ ಎಲ್ಲವನ್ನೂ ಭರಿಸಬೇಕಾಗುತ್ತದೆ. ಇಲ್ಲಾಂದ್ರೆ ಸಹಾಯ ಕೇಳುವಂತ ಪರಿಸ್ಥಿತಿ ಬಂದ್ರೆ ಸರ್ಕಾರದ ಬಳಿ ಕೇಳಲೇಬೇಕು ಎಂದು ಹೇಳಿದರು.