ಬೇಲಿಯೇ ಎದ್ದು ಹೊಲ ಮೇಯ್ದಂತೆ: ಸರ್ಕಾರಿ ವಾಹನಗಳಿಂದಲೇ ರೂಲ್ಸ್ ಬ್ರೇಕ್; 19 ಕೋಟಿ ರೂ ದಂಡ ಬಾಕಿ

ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಸರ್ಕಾರಿ ಹಾಗೂ ಪೋಲೀಸ್ ವಾಹನಗಳಿಂದಲೇ ಸಂಚಾರಿ ನಿಯಮಗಳ ವ್ಯಾಪಕ ಉಲ್ಲಂಘನೆಯಾಗಿದೆ ಎಂದು ಗೃಹ ಇಲಾಖೆಯ ಅಧಿಕೃತ ವರದಿ ತಿಳಿಸಿದೆ. 85,000ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬರೋಬ್ಬರಿ 19.23 ಕೋಟಿ ರೂ ದಂಡ ಬಾಕಿಯಿದೆ. ನಿಯಮ ಪಾಲಿಸಬೇಕಾದ ವಾಹನಗಳೇ ನಿಯಮಗಳನ್ನು ಮುರಿದಿರುವುದು ಜನಸಾಮಾನ್ಯರಲ್ಲಿ ಆಕ್ರೋಶ ಮೂಡಿಸಿದೆ.

ಬೇಲಿಯೇ ಎದ್ದು ಹೊಲ ಮೇಯ್ದಂತೆ: ಸರ್ಕಾರಿ ವಾಹನಗಳಿಂದಲೇ ರೂಲ್ಸ್ ಬ್ರೇಕ್; 19 ಕೋಟಿ ರೂ ದಂಡ ಬಾಕಿ
ಪ್ರಾತಿನಿಧಿಕ ಚಿತ್ರ
Image Credit source: google
Edited By:

Updated on: Sep 04, 2026 | 5:24 PM

ಬೆಂಗಳೂರು, ಸೆಪ್ಟೆಂಬರ್​​ 04: ಸಾಮಾನ್ಯ ನಾಗರಿಕ ಹೆಲ್ಮೆಟ್ ಹಾಕದಿದ್ದರೆ, ಸಿಗ್ನಲ್ ಜಂಪ್ ಮಾಡಿದರೆ ಅಥವಾ ಸೀಟ್‌ಬೆಲ್ಟ್ ಮರೆತರೆ ಸಾಕು, ಕ್ಷಣಾರ್ಧದಲ್ಲಿ ಮೊಬೈಲ್‌ಗೆ ಇ-ಚಲನ್ ಮೆಸೇಜ್ ಬರುತ್ತದೆ. ಟ್ರಾಫಿಕ್ ಪೊಲೀಸರು ದಂಡ ವಸೂಲಿ ಮಾಡದೇ ಬಿಡುವುದಿಲ್ಲ. ಆದರೆ ಸಮಾಜಕ್ಕೆ ಮಾದರಿಯಾಗಬೇಕಾದ, ಕಾನೂನು ಸುವ್ಯವಸ್ಥೆ ಕಾಯಬೇಕಾದ ಸರ್ಕಾರಿ ಹಾಗೂ ಖುದ್ದು ಪೊಲೀಸ್ ವಾಹನಗಳೇ ನಿತ್ಯ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿವೆ. ಸ್ವತಃ ಗೃಹ ಇಲಾಖೆಯೇ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ-ಅಂಶಗಳು ಈ ಸತ್ಯವನ್ನು ಬಟಾಬಯಲು ಮಾಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪೊಲೀಸ್​ ವಾಹನಗಳ ಮೇಲೆಯೇ 3,366 ಕೇಸ್

ಜನರಿಗೆ ಸಂಚಾರ ನಿಯಮಗಳ ಪಾಠ ಹೇಳಿ, ಅನುಷ್ಠಾನಕ್ಕೆ ತರಬೇಕಾದ ಪೊಲೀಸ್ ಇಲಾಖೆಯ ವಾಹನಗಳೇ ರಾಜಾರೋಷವಾಗಿ ನಿಯಮಗಳನ್ನು ಉಲ್ಲಂಘಿಸಿವೆ. ಕಳೆದ ಮೂರೂವರೆ ವರ್ಷಗಳಲ್ಲಿ ಪೊಲೀಸ್ ಇಲಾಖೆಯ ವಾಹನಗಳ ವಿರುದ್ಧವೇ ಬರೋಬ್ಬರಿ 3,366 ಪ್ರಕರಣಗಳು ದಾಖಲಾಗಿವೆ. 2023ರಲ್ಲಿ ಕೇವಲ 21 ಪ್ರಕರಣಗಳು ದಾಖಲಾಗಿದ್ದರೆ, 2024ರಲ್ಲಿ ಈ ಸಂಖ್ಯೆ 1,494ಕ್ಕೆ ಏರಿಕೆಯಾಗಿತ್ತು. 2025ರಲ್ಲಿ 1,251 ಮತ್ತು 2026ರ ಜುಲೈ ಅಂತ್ಯದ ವೇಳೆಗೆ ಮತ್ತೆ 600 ಪ್ರಕರಣಗಳು ದಾಖಲಾಗಿವೆ.

ಸರ್ಕಾರಿ ಇಲಾಖೆಗಳ ವಾಹನಗಳ ಮೇಲೆ ಬರೋಬ್ಬರಿ 82 ಸಾವಿರಕ್ಕೂ ಹೆಚ್ಚು ಕೇಸ್​​​

ಇನ್ನು ಪೊಲೀಸ್ ಇಲಾಖೆ ಮಾತ್ರವಲ್ಲದೆ ಇತರೆ ಸರ್ಕಾರಿ ಕಚೇರಿಗಳ ವಾಹನಗಳು ಸಂಚಾರ ನಿಯಮಗಳನ್ನು ಗಾಳಿಗೆ ತೂರಿವೆ. ಕಳೆದ ಮೂರೂವರೆ ವರ್ಷಗಳಲ್ಲಿ ವಿವಿಧ ಸರ್ಕಾರಿ ಇಲಾಖೆಯ ವಾಹನಗಳ ಮೇಲೆ ಬರೋಬ್ಬರಿ 82,478 ಕೇಸ್‌ಗಳು ದಾಖಲಾಗಿವೆ. 2023ರಲ್ಲಿ 1,055 ಕೇಸ್‌ಗಳಿದ್ದರೆ, 2024ರಲ್ಲಿ ಅತಿ ಹೆಚ್ಚು ಅಂದರೆ 35,832 ಹಾಗೂ 2025ರಲ್ಲಿ ದಾಖಲೆಯ 38,282 ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ವಾಹನ ಸವಾರರಿಗೆ ಗುಡ್‌ನ್ಯೂಸ್: ಟ್ರಾಫಿಕ್ ಫೈನ್ ಪಾವತಿಗೆ ಮತ್ತೆ ಶೇ 50 ವಿನಾಯಿತಿ

ಪ್ರಸಕ್ತ 2026ರ ಜುಲೈವರೆಗೆ 7,309 ಕೇಸ್‌ಗಳು ದಾಖಲಾಗಿವೆ. ಒಟ್ಟಾರೆಯಾಗಿ ಪೊಲೀಸ್ ಹಾಗೂ ಸರ್ಕಾರಿ ಇಲಾಖೆಗಳೆರಡೂ ಸೇರಿ ಬರೋಬ್ಬರಿ 85,844 ಬಾರಿ ನಿಯಮ ಉಲ್ಲಂಘಿಸಿದ್ದು, ಸರ್ಕಾರಿ ಬೋರ್ಡ್ ಇರುವುದರಿಂದ ಯಾರೂ ಏನೂ ಮಾಡಲಾಗಲ್ಲ ಎಂಬ ಉಡಾಫೆ ಮನಸ್ಥಿತಿಯನ್ನು ಇದು ಎತ್ತಿ ತೋರಿಸುವಂತಿದೆ.

ಸರ್ಕಾರಿ ವಾಹನಗಳಿಗೆ ಕೇವಲ ನೋಟಿಸ್: ಕೋಟ್ಯಂತರ ರೂ ಹಣ ಬಾಕಿ!

ಸಾಮಾನ್ಯ ವಾಹನ ಸವಾರರು ದಂಡ ಕಟ್ಟದಿದ್ದರೆ ವಾಹನ ತಡೆಯುವ ಅಥವಾ ಜಪ್ತಿ ಮಾಡುವ ವ್ಯವಸ್ಥೆ ಇದೆ. ಆದರೆ ಸರ್ಕಾರಿ ಮತ್ತು ಪೊಲೀಸ್ ವಾಹನಗಳಿಂದ ದಂಡ ವಸೂಲಿ ಮಾಡಲು ಹೋದಾಗ ಮಾತ್ರ ಆಡಳಿತಕ್ಕೆ ವೇಗವೇ ಸಿಗುತ್ತಿಲ್ಲ.

  • 2023: ವಿಧಿಸಲಾದ ದಂಡ 5,41,500 ರೂ, ವಸೂಲಾಗಿದ್ದು 1,19,000; ಬಾಕಿ ಉಳಿದದ್ದು 4,22,500 ರೂ.
  • 2024: ಅತಿ ಹೆಚ್ಚು ಅಂದರೆ 17,48,60,700 ರೂ ದಂಡ ವಿಧಿಸಲಾಗಿದ್ದು, ವಸೂಲಾಗಿದ್ದು ಕೇವಲ 35,27,700 ರೂ ಬರೋಬ್ಬರಿ 17,13,33,000 ರೂ ಬಾಕಿ ಉಳಿದಿದೆ.
  • 2025: 2,09,19,000 ರೂ ದಂಡದಲ್ಲಿ 6,61,250 ರೂ, ಮಾತ್ರ ಸಂಗ್ರಹವಾಗಿದ್ದು, 2,02,56,500 ರೂ. ಬಾಕಿಯಾಗಿದೆ.
  • 2026 (ಜುಲೈವರೆಗೆ): 40,10,000 ರೂ ದಂಡದಲ್ಲಿ 4,64,750 ರೂ ಮಾತ್ರ ಜಮೆಯಾಗಿದ್ದು, 36,05,000 ರೂ ಬಾಕಿ ಇದೆ.

ಇದನ್ನೂ ಓದಿ: ತಪ್ಪು ಮಾಡಿದ್ರೆ ದಂಡ ಹಾಕಿ, ಕೈ ಮಾಡುವ ಹಕ್ಕಿಲ್ಲ: ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಟ್ರಾಫಿಕ್ ಪೊಲೀಸರ ದೌರ್ಜನ್ಯ

ಒಟ್ಟಾರೆಯಾಗಿ ಸರ್ಕಾರಿ ಹಾಗೂ ಪೊಲೀಸ್ ವಾಹನಗಳಿಂದ ಸರ್ಕಾರಕ್ಕೆ ಬರಬೇಕಾದ ದಂಡದ ಮೊತ್ತ ಬರೋಬ್ಬರಿ 19.23 ಕೋಟಿ ರೂ ಬಾಕಿ ಇದೆ.

Govt Vehicles Including Police Dept Break Traffic Rules! ₹19.23 Crore Fine Pending

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:21 pm, Fri, 4 September 26

ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More
Loading...
Unable to load recommendations.
Follow Us