2.84 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ, 24300ರ ಭರ್ತಿಗೆ ಕ್ರಮ: ಸಿಎಂ ಸಿದ್ದರಾಮಯ್ಯ

ಕರ್ನಾಟಕದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಹಣಕಾಸು ಇಲಾಖೆಯು ಕೇವಲ 24,300 ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ನೀಡಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯಲ್ಲೇ ಗರಿಷ್ಠ 79,694 ಹುದ್ದೆಗಳು ಖಾಲಿ ಇವೆ. ಸರ್ಕಾರಿ ನೇಮಕಾತಿ ವಿಳಂಬ ಹಾಗೂ ಕಡಿಮೆ ಭರ್ತಿ ಕುರಿತು ಬಸನಗೌಡ ಪಾಟೀಲ್ ಯತ್ನಾಳ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2.84 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ, 24300ರ ಭರ್ತಿಗೆ ಕ್ರಮ: ಸಿಎಂ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ಧರಾಮಯ್ಯ

Updated on: Dec 10, 2025 | 1:51 PM

ಬೆಳಗಾವಿ, ಡಿಸೆಂಬರ್ 10: ಸರ್ಕಾರಿ ಇಲಾಖೆಗಳಲ್ಲಿ 2.84 ಲಕ್ಷ ಹುದ್ದೆಗಳು ಖಾಲಿ ಇದ್ದು, 24,300 ಹುದ್ದೆಗಳನ್ನು (Government Jobs)  ಭರ್ತಿ ಮಾಡಲು ಹಣಕಾಸು ಇಲಾಖೆ ಅನುಮತಿ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ (Siddaramaiah) ಮಂಗಳವಾರ ವಿಧಾನಸಭೆಗೆ ತಿಳಿಸಿದ್ದಾರೆ. ಇದರೊಂದಿಗೆ, ಖಾಲಿ ಇರುವ ಹುದ್ದೆಗಳ ಸಂಖ್ಯೆ ಹೆಚ್ಚಾಗಿರುವುದು ತಿಳಿದುಬಂದಿದೆ. ಕಳೆದ ವರ್ಷ ಸರ್ಕಾರಿ ಇಲಾಖೆಗಳಲ್ಲಿ 2.76 ಲಕ್ಷ ಹುದ್ದೆಗಳು ಖಾಲಿ ಇದ್ದವು. ಅವುಗಳಸಂಖ್ಯೆ ಈಗ ಹೆಚ್ಚಾಗಿದೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಪ್ರಶ್ನೆಗೆ ಸಿದ್ದರಾಮಯ್ಯ ಲಿಖಿತ ಉತ್ತರ ನೀಡಿದ್ದು, ಅದರ ಪ್ರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಅತಿ ಹೆಚ್ಚು ಅಂದರೆ 79,694 ಹುದ್ದೆಗಳು ಖಾಲಿ ಇವೆ.

ರಾಜ್ಯದಲ್ಲಿ ಸುಮಾರು 2,80,000 ಸರ್ಕಾರಿ ಹುದ್ದೆಗಳು ಖಾಲಿ ಇದ್ದು ಅದನ್ನು ಸಮರೋಪಾದಿಯಲ್ಲಿ ಭರ್ತಿ ಮಾಡಬೇಕಾಗಿದ್ದ ಸರ್ಕಾರ ಕೇವಲ 24300 ಹುದ್ದೆಗಳನ್ನು ಭರ್ತಿ ಮಾಡಲು ಮಾತ್ರ ಆರ್ಥಿಕವಾಗಿ ಶಕ್ತವಾಗಿದೆ ಎಂದು ಮುಖ್ಯ ಮಂತ್ರಿಗಳು ಸದನದಲ್ಲಿ ತಿಳಿಸಿದ್ದಾರೆ. ಅಂದರೆ ಖಾಲಿ ಇರುವ ಹುದ್ದೆಗಳ ಶೇ 9 ರಷ್ಟು ಮಾತ್ರ ಭರ್ತಿ ಮಾಡಿಕೊಳ್ಳುವುದಕ್ಕೆ ಮಾತ್ರ ಹಣಕಾಸು ಇಲಾಖೆ ಅನುಮೋದನೆ ನೀಡಿದೆ ಎಂದು ಎಕ್ಸ್​ ಸಂದೇಶದಲ್ಲಿ ಯತ್ನಾಳ್ ತಿಳಿಸಿದ್ದಾರೆ.

ಅರ್ಹ ಯುವಕ ಯುವತಿಯರಿಗೆ ಉದ್ಯೋಗ ನೀಡಬೇಕಾಗಿದ್ದ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣಕ್ಕೆ ತನ್ನ ಹಣವನ್ನೆಲ್ಲ ಬಳಸಿ ಉದ್ಯೋಗಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೊಂದರಲ್ಲೇ 79694 ಹುದ್ದೆಗಳು ಖಾಲಿ ಇರುವುದು ಉಲ್ಲೇಖಾರ್ಹ ಎಂದು ಯತ್ನಾಳ್ ಹೇಳಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಎಕ್ಸ್ ಸಂದೇಶ


ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಸಾವಿರಾರು ಉದ್ಯೋಗಾಂಕ್ಷಿಗಳ ವಯೋಮಿತಿ ಮೀರುತ್ತಿದ್ದರೆ ಇನ್ನೊಂದು ಕಡೆ ಸರ್ಕಾರದ ವಿಳಂಬ ಧೋರಣೆಯಿಂದ, ಕರ್ನಾಟಕ ಲೋ(ಪ)ಕ ಸೇವಾ ಆಯೋಗ ಎಂಬ ಭ್ರಷ್ಟ ನೇಮಕಾತಿ ಸಂಸ್ಥೆಯಿಂದ ಅರ್ಹ ಅಭ್ಯರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ ಎಂದು ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 500ಕ್ಕೂ ಹೆಚ್ಚು RSS ಕಾರ್ಯಕ್ರಮ, ಪಥಸಂಚಲನ: ಒಂದೇ ಒಂದು ಕಡೆಯೂ ಗಲಾಟೆ, ದೊಂಬಿ ಆಗಿಲ್ಲವೆಂದ ಕಾಂಗ್ರೆಸ್ ಸರ್ಕಾರ!

ಸರ್ಕಾರ ಅವೈಜ್ಞಾನಿಕ ಯೋಜನೆಗಳನ್ನು ನಿಲ್ಲಿಸಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಂಡು ಆಡಳಿತಕ್ಕೆ ಚುರುಕು ನೀಡಬೇಕು ಹಾಗೂ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ನೀಡಬೇಕೆಂದು ಯತ್ನಾಳ್ ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ