ಬೆಂಗಳೂರು, (ಆಗಸ್ಟ್ 28): ಇದೊಂದು ಅಪರೂಪದ ಪ್ರಕರಣ. ಕಲಬುರಗಿ (Kalaburagi) ಮೂಲದ ಸಾಯಿಬಣ್ಣ ಎಂಬಾತ ಮೂವರ ಕೊಲೆ ಮಾಡಿದ್ದ ಪಾತಕಿ. ಈತನಿಗೆ ಗಲ್ಲು ಶಿಕ್ಷೆಯಾಗಿತ್ತು. ಇದರಿಂದ ತಪ್ಪಿಸಿಕೊಳ್ಳಲು ಸಾಯಿಬಣ್ಣ, ಸುಪ್ರೀಂಕೋರ್ಟ್(supreme court), ರಾಷ್ಟ್ರಪತಿ ಹಾಗೂ ರಾಜ್ಯಪಾಲ ಮೊರೆ ಹೋಗಿದ್ದರು. ಆದ್ರೆ, ಸಾಯಿಬಣ್ಣ ಸಲ್ಲಿಸಿದ್ದ ಗಲ್ಲು ಶಿಕ್ಷೆಯಿಂದ ಕ್ಷಮಾದಾನ ಕೋರಿ ಅರ್ಜಿಗಳು ವಜಾಗೊಂಡಿದ್ದವು. ಆದ್ರೆ, ಸಾಲು-ಸಾಲು ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ ವಿಳಂಬವಾಗಿದ್ದರಿಂದ ಇದೀಗ ಸಾಯಿವಣ್ಣ ನೇಣಿನ ಕುಣಿಕೆಯಿಂದ ಪಾರಾಗಿದ್ದಾನೆ. ಹೌದು…ಈತನ ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ 7 ವರ್ಷ 8 ತಿಂಗಳು ವಿಳಂಬ ಜೊತೆಗೆ 70 ವರ್ಷದ ಸಾಯಿಬಣ್ಣ 30 ವರ್ಷದಿಂದ ಜೈಲಿನಲ್ಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್(Karnataka High Court), ಜೀವದಾನ ನೀಡಿದೆ. ಆರೋಪಿಗೆ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚರಿದ್ದ ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡಿದೆ.
ಸಾಯಿಬಣ್ಣ ಎಂಬಾತ ಮೂವರ ಕೊಲೆ ಮಾಡಿದ ಪಾತಕಿ. ಜನವರಿ 9, 1988 ರಲ್ಲಿ ಸಾಯಿಬಣ್ಣ ತನ್ನ ಪತ್ನಿ ಮಾಲಕವ್ವಳನ ಶೀಲ ಶಂಕಿಸಿ ಕೊಲೆ ಮಾಡಿದ್ದ. ಅಫ್ಜಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪತ್ನಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಜೈಲಿನಲ್ಲಿರುವಾಗಲೇ ಈತನಿಗೆ ದತ್ತು ಎಂಬ ಮತ್ತೊಬ್ಬ ಕೈದಿಯ ಪರಿಚಯವಾಗಿತ್ತು. ಸಾಯಿಬಣ್ಣ ಮೇಲೆ ವಿಶ್ವಾಸವಿಟ್ಟ ದತ್ತು ತನ್ನ ಪುತ್ರಿಯನ್ನು ಸಾಯಿಬಣ್ಣನಿಗೇ ಕೊಟ್ಟು ಮದುವೆ ಮಾಡುವುದಾಗಿ ಭರವಸೆ ನೀಡಿದ್ದ. ಮೊದಲ ಪತ್ನಿಯ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಸಾಯಿಬಣ್ಣ ಜುಲೈ 1988 ರಲ್ಲಿ ಸಹ ಕೈದಿ ದತ್ತು ಎಂಬಾತನ ಪುತ್ರಿ ನಾಗಮ್ಮಳನ್ನು ವಿವಾಹವಾದ. ಇವರ ದಾಂಪತ್ಯಕ್ಕೆ ವಿಜಯಲಕ್ಷ್ಮಿ ಎಂಬ ಪುತ್ರಿಯೂ ಜನಿಸಿದ್ದಳು. ಫೆಬ್ರವರಿ 2, 1993 ರಲ್ಲಿ ಮೊದಲ ಪತ್ನಿಯ ಕೊಲೆ ಆರೋಪ ಸಾಬೀತಾಗಿ ಸಾಯಿಬಣ್ಣ ಮತ್ತೆ ಜೈಲು ಸೇರಿದ್ದ. ಕೋರ್ಟ್ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆಗಸ್ಟ್ 19, 1994 ರಂದು ಒಂದು ತಿಂಗಳ ಪೆರೋಲ್ ಪಡೆದು ಬಿಡುಗಡೆಯಾದ ಸಾಯಿಬಣ್ಣ, ಪೆರೋಲ್ ಅವಧಿ ಇನ್ನೇನು ಮುಗಿಯಬೇಕೆಂಬ ವೇಳೆಯಲ್ಲೇ ಸೆಪ್ಟೆಂಬರ್ 13, 1994 ರಂದು ಎರಡನೇ ಪತ್ನಿ ನಾಗಮ್ಮ ಹಾಗೂ ಪುತ್ರಿ ವಿಜಯಲಕ್ಷ್ಮಿಯನ್ನೂ ಕೊಲೆ ಮಾಡಿದ್ದ, ಇದನ್ನು ಕಂಡ ಜನ ಅವನನ್ನೂ ಥಳಿಸಿದ್ದರಿಂದ ಆಸ್ಪತ್ರೆ ಸೇರಿದ್ದ ಸಾಯಿಬಣ್ಣನನ್ನು ನಂತರ ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದರು. ಪೆರೋಲ್ ನಲ್ಲಿರುವಾಗಲೇ ಮತ್ತೆರಡು ಕೊಲೆ ಮಾಡಿದ ಪಾತಕಿ ಸಾಯಿಬಣ್ಣನಿಗೆ ಕಲಬುರಗಿಯ ವಿಚಾರಣಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು.
ಇದನ್ನೂ ಓದಿ: ಕಲಬುರಗಿ: ಕಾಂಗ್ರೆಸ್ ಶಾಸಕ ಅಜಯ್ ಸಿಂಗ್ ನಿವಾಸದ ಆವರಣದಲ್ಲಿ ವ್ಯಕ್ತಿ ಆತ್ಮಹತ್ಯೆ
ಹೈಕೋರ್ಟ್ ವಿಭಾಗೀಯ ಪೀಠ ಗಲ್ಲು ಶಿಕ್ಷೆಯ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ 3ನೇ ನ್ಯಾಯಮೂರ್ತಿಗೆ ಪ್ರಕರಣ ಒಪ್ಪಿಸಲಾಗಿತ್ತು. ಅಕ್ಟೋಬರ್ 10, 2003 ರಲ್ಲಿ ವಿಚಾರಣಾ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದ ಹೈಕೋರ್ಟ್ ಸಾಯಿಬಣ್ಣನಿಗೆ ಗಲ್ಲು ಶಿಕ್ಷೆ ಖಚಿತಪಡಿಸಿತ್ತು. ಆದರೆ ಮತ್ತೆ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದ ಸಾಯಿಬಣ್ಣನ ಅರ್ಜಿಯನ್ನು 2005 ರಲ್ಲಿ ಮುಲಾಜಿಲ್ಲದೇ ವಜಾಗೊಳಿಸಿತ್ತು.
ಆಮೇಲೆ 2005 ರಲ್ಲಿಯೇ ಗಲ್ಲು ಶಿಕ್ಷೆಯಿಂದ ಕ್ಷಮಾದಾನ ಕೋರಿ ರಾಜ್ಯಪಾಲರಿಗೆ ಸಾಯಿಬಣ್ಣ ಅರ್ಜಿ ಸಲ್ಲಿಸಿದ್ದ. ರಾಜ್ಯಪಾಲರು 1 ವರ್ಷ 7 ತಿಂಗಳ ನಂತರ ಅರ್ಜಿಯನ್ನು ವಜಾಗೊಳಿಸಿದ್ದರು. ನಂತರ ಎನ್‌ಜಿಒ ಈತನ ಪರವಾಗಿ ಕ್ಷಮಾದಾನ ಅರ್ಜಿ ಸಲ್ಲಿಸಿತ್ತು. 2011 ರಲ್ಲಿ ಈತನೂ ವಕೀಲರ ಮೂಲಕ ರಾಷ್ಟ್ರಪತಿಗಳಿಗೆ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದ. ಜನವರಿ 4, 2013 ರಲ್ಲಿ ಈತನ ಕ್ಷಮಾದಾನ ಅರ್ಜಿಗಳನ್ನು ರಾಷ್ಟ್ರಪತಿಗಳು ತಿರಸ್ಕರಿಸಿದ್ದರು. ನಂತರ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದ ಸಾಯಿಬಣ್ಣ ಗಲ್ಲು ಶಿಕ್ಷೆಯಿಂದ ಕ್ಷಮಾದಾನ ಕೋರಿದ್ದ ಅರ್ಜಿ ಇತ್ಯರ್ಥಪಡಿಸಲು 7 ವರ್ಷ 8 ತಿಂಗಳು ವಿಳಂಬವಾಗಿತ್ತು.
ಈ ಅವಧಿಯಲ್ಲಿ ನನ್ನನ್ನು ಒಂಟಿಯಾಗಿ ಬೆಳಗಾವಿಯ ಅಂಧೇರಿ ಬ್ಲಾಕ್ ನ ಜೈಲುಕೋಣೆಯಲ್ಲಿ ಕೂಡಿಹಾಕಲಾಗಿತ್ತು. 16 ವರ್ಷಗಳ ಕಾಲ ಇದೇ ಕೋಣೆಯಲ್ಲಿ ಒಬ್ಬಂಟಿಯಾಗಿ ಕೂಡಿಹಾಕಲಾಗಿದೆ. ಇದರಿಂದಾಗಿ ಮಾನಸಿಕ, ದೈಹಿಕ ಒತ್ತಡಗಳನ್ನು ಅನುಭವಿಸಿದ್ದೇನೆ. 70 ವರ್ಷದ ತಾನು ಇಲ್ಲಿಯವರೆಗೆ ಒಟ್ಟಾರೆಯಾಗಿ 30 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದೇನೆ. ಹೀಗಾಗಿ ವ್ಯವಸ್ಥೆಯ ತಪ್ಪಿನಿಂದಾಗಿ ಮಾನಸಿಕ ದೈಹಿಕ ಹಿಂಸೆ ಅನುಭವಿಸಿದ್ದರಿಂದ ತನಗೆ ಗಲ್ಲು ಶಿಕ್ಷೆಯಿಂದ ಕ್ಷಮಾದಾನ ನೀಡಬೇಕೆಂದು ಹೈಕೋರ್ಟ್ ಗೆ ಸಾಯಿಬಣ್ಣ ಮನವಿ ಮಾಡಿದ್ದ.
ಸಾಯಿಬಣ್ಣ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ಹಾಗೂ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚರವರಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಸಾಯಿಬಣ್ಣ 30 ವರ್ಷಗಳಿಂದ ಸೆರೆಮನೆಯಲ್ಲಿದ್ದಾನೆ, 2003 ರಿಂದಲೂ ಒಬ್ಬಂಟಿಯಾಗಿ ಸೆರೆಯಲ್ಲಿಡಲಾಗಿದೆ. ಹೀಗಾಗಿ ಈತನ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವುದೇ ಸೂಕ್ತವೆಂದು ತೀರ್ಪು ನೀಡಿದೆ. ಅಲ್ಲದೇ ಸಾಯಿಬಣ್ಣನೇನಾದರೂ ಜೀವಾವಧಿ ಶಿಕ್ಷೆಯಿಂದ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದರೆ ಅದನ್ನು ಅರ್ಹತೆ ಆಧರಿಸಿ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೂ ನಿರ್ದೇಶನ ನೀಡಿದೆ.
ಒಟ್ಟಾರೆ ಪತ್ನಿಯರು ಹಾಗೂ ಮಗುವನ್ನು ಕೊಂದವನಿಗೆ ಕ್ಷಮಾದಾನದ ವಿಳಂಬ ಪ್ರಕ್ರಿಯೆ ಜೀವದಾನ ಕೊಡಿಸುವಲ್ಲಿ ಯಶಸ್ವಿಯಾಗಿದೆ.
ನಿಮ್ಮ ನಿಮ್ಮ ಜಿಲ್ಲೆಗಳ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:07 pm, Mon, 28 August 23