ಕಾಲ್ತುಳಿತ: 11 ಜನರ ಸಾವಿನ 1 ದುರಂತದಲ್ಲಿ ಸಿಲುಕಿ ಒದ್ದಾಡುತ್ತಿರುವ ಸಿದ್ದರಾಮಯ್ಯ ಸರ್ಕಾರ
ಬೆಂಗಳೂರಿನ ಇತಿಹಾಸದಲ್ಲೇ ಕರಾಳ ಅಧ್ಯಾಯ. ಬೆಂಗಳೂರಿಗೆ ಮಾತ್ರವಲ್ಲ ಜೂನ್ 4, 2025 ಕರ್ನಾಟಕದ ಪಾಲಿಗೆ ಕರಾಳ ದಿನ. ಆರ್‌ಸಿಬಿ ಸಂಭ್ರಮಾಚರಣೆಯಿಂದಾಗಿ ಕಪ್ಪು ಚುಕ್ಕೆ. ಚಿನ್ನಸ್ವಾಮಿ ಸ್ಟೇಡಿಯಿಂ ಬಳಿ ಕಾಲ್ತುಳಿತಕ್ಕೆ 11ಮಂದಿ ಸಾವಿಗೆ ಕಾರಣವೇನು? ಹೊಣೆ ಯಾರು? ವೈಫಲ್ಯ ಯಾರದು ಹೀಗೆ ಹಲವು ಪ್ರಶ್ನೆಗಳು ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಒಂದೇ ದುರಂತದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಿಲುಕಿ ಒದ್ದಾಡುವಂತಾಗಿದೆ.

ಬೆಂಗಳೂರು, (ಜೂನ್ 10): ಆರ್‌ಸಿಬಿ ವಿಜಯೋತ್ಸವ ವೇಳೆ ನಡೆದ ಕಾಲ್ತುಳಿತ ದುರಂತ ಪ್ರಕರಣ ಮಹತ್ವದ ತಿರುವು ಪಡೆದುಕೊಳ್ಳುತ್ತಲೇ ಇದೆ. ಒಂದೆಡೆ ರಾಜ್ಯ ಸರ್ಕಾರ, ಕೆಎಸ್ ಸಿಎ, ಡಿಎನ್ ಎ ಹಾಗೂ ಆರ್ ಸಿಬಿ ಮ್ಯಾನೇಜ್ ಮೆಂಟ್ ನತ್ತ ಬೊಟ್ಟು ಮಾಡಿ ತೋರಿಸುತ್ತಿದೆ. ಮತ್ತೊಂದೆಡೆ ಸರ್ಕಾರದ ವಿರುದ್ಧ ಕೋರ್ಟ್ ನಲ್ಲಿ ಸಾಲು ಸಾಲು ರಿಟ್ ಅರ್ಜಿಗಳು ಸಲ್ಲಿಕೆಯಾಗಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನ ಮಾಡಲಾಗಿದೆ. ಮತ್ತೊಂದೆಡೆ ಪೊಲೀಸ್ ಅಧಿಕಾರಿಗಳ ಅಮಾನತು ಮಾಡಿರುವುದಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿವೆ. ಅಲ್ಲದೇ ಸಸ್ಪೆಂಡ್ ಪ್ರಶ್ನಿಸಿ ಪೊಲೀಸ್ ಅಧಿಕಾರಿಯೊಬ್ಬರು ಸರ್ಕಾರದ ವಿರುದ್ಧ ಸಿಎಟಿ ಮೊರೆ ಹೋಗಿದ್ದಾರೆ. ಇನ್ನು ಕೆಲ ಮಠಾಧೀಶರು ಸಹ ಸರ್ಕಾರದ ವಿರುದ್ಧ ದೂರು ನೀಡಿದ್ದಾರೆ. ಹೀಗೆ 11 ಜನರ ಸಾವು, ಒಂದೇ ದುರಂತದಲ್ಲಿ ರಾಜ್ಯ ಸರ್ಕಾರ ಸಿಲುಕಿಕೊಂಡು ಒದ್ದಾಡುತ್ತಿದೆ.
ಕೋರ್ಟ್ ಕಟಕಡೆಯಲ್ಲಿ ರಾಜ್ಯ ಸರ್ಕಾರ
ಆರ್‌ಸಿಬಿ ಮೇಲೆ, ಈವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಡಿಎನ್ಎ, ಕೆಎಸ್‌ಸಿಎ ಅನ್ನು ಯಾರೆಲ್ಲ ಪ್ರತಿನಿಧಿಸುತ್ತಾರೋ ಅವರ ವಿರುದ್ಧ ಕೇಸ್ ದಾಖಲಿಸಿ ಅರೆಸ್ಟ್ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದು, ಅದರಂತೆ ಪೊಲೀಸರು ಸಂಬಂಧಪಟ್ಟವರನ್ನು ಬಂಧಿಸಿದ್ದಾರೆ. ಜೊತೆಗೆ ಈ ಕಾಲ್ತುಳಿತ ಪ್ರಕರಣದಲ್ಲಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ RCB, DNA, KSCA ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದ್ದು, ಇದರ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ DNA, KSCA , ಮಠಾಧೀಶರು ಸರ್ಕಾರದ ವಿರುದ್ಧವೇ ಸಿಡಿದೆದ್ದಿದ್ದು, ಸರ್ಕಾರದ ನಡೆ ಈ ಬಗ್ಗೆ ಕ್ರಮಕೈಗೊಳ್ಳುವಂತೆ DNA, KSCA, ಸರ್ಕಾರವನ್ನು ಹೈಕೋರ್ಟ್ನ ಕಟಕಟೆಯಲ್ಲಿ ನಿಲ್ಲಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ದುರಂತಕ್ಕೆ ಕಾರಣವೇನು? ಮತ್ತಷ್ಟು ಸ್ಫೋಟಕ ಅಂಶಗಳು ಬಯಲಿಗೆ
ಸರ್ಕಾರದ ವಿರುದ್ಧ ಕೋರ್ಟ್ ನಲ್ಲಿ ಡಿಎನ್ಎ ಗಂಭೀರ ಆರೋಪ
ಅರ್ಜಿಯಲ್ಲಿ ಡಿಎನ್ ಎ ಸರ್ಕಾರದ ವಿರುದ್ಧವೇ ಹಲವು ಆರೋಪಗಳನ್ನು ಮಾಡಲಾಗಿದೆ. ಭಾರತ ಟಿ20 ವಿಶ್ವಕಪ್ ಗೆದ್ದಾಗ ವಿಕ್ಟರಿ ಪೆರೇಡ್ ನಡೆಸಲಾಗಿತ್ತು. ಡಿಎನ್‌ಎ ಆಯೋಜಿಸಿದ್ದ ಪೆರೇಡ್ ನಲ್ಲಿ 3 ಲಕ್ಷ ಜನರಿದ್ದರೂ ಅವಘಡಗಳಾಗಿರಲಿಲ್ಲ. ವಾಂಖೇಡೆ ಸ್ಟೇಡಿಯಂನ ಪ್ರೇಕ್ಷಕರ ಸಾಮರ್ಥ್ಯ 32 ಸಾವಿರವಿದ್ದರೂ ಸಮಸ್ಯೆ ಆಗಿರಲಿಲ್ಲ. ಆರ್‌ಸಿಬಿ ವಿಕ್ಟರಿ ಪೆರೇಡ್ ನಡೆಸಲು ಅನುಮತಿಗಾಗಿ ಜೂ. 3ರಂದು ಪತ್ರ ಬರೆದಿದ್ದೇವು. ತೆರೆದ ಬಸ್ ಪೆರೇಡ್ ಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ರಾಜ್ಯ ಸರ್ಕಾರ ವಿಧಾನಸೌಧದ ಮುಂದೆ ಕಾರ್ಯಕ್ರಮಕ್ಕೆ ನಿರ್ಧರಿಸಿತ್ತು. ಪೊಲೀಸರು ವಿಧಾನಸೌಧದ ಕಾರ್ಯಕ್ರಮಕ್ಕೆ ಹೆಚ್ಚಿನ ಭದ್ರತೆ ನೀಡಿದರು. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಗತ್ಯವಿದ್ದಷ್ಟು ಪೊಲೀಸರು ಇರಲಿಲ್ಲ. ಡಿಎನ್ಎ ನಿಂದಲೇ 584 ಖಾಸಗಿ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಸರ್ಕಾರ ತನ್ನ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಬಂಧನಕ್ಕೆ ಆದೇಶಿಸಿದೆ ಎಂದು ರಿಟ್ ಅರ್ಜಿಯಲ್ಲಿ ಕೋರ್ಟ್ ಗೆ ತಿಳಿಸಿದೆ.
ಸಿಎಂ ಸೂಚನೆ ಮೇರೆಗೆ ಡಿಎನ್‌ಎ ನ ಇಬ್ಬರು ಸಿಬ್ಬಂದಿಯನ್ನು ಬಂಧಿಸಲಾಗಿದೆ. ಘಟನೆ ದಿನ ಪೊಲೀಸರಿಗೆ 2450 ಆಹಾರ ಪೊಟ್ಟಣ ಸಿದ್ದಪಡಿಸಲಾಗಿತ್ತು. ಆದರೆ ಪೊಲೀಸರು ಕಡಿಮೆ ಸಂಖ್ಯೆಯಲ್ಲಿದ್ದಿದ್ದರಿಂದ ಮಧ್ಯಾಹ್ನ 600 ಊಟದ ಬಾಕ್ಸ್ ಸ್ವೀಕರಿಸಿದರು. ರಾತ್ರಿ ಭೋಜನಕ್ಕೆ ಮಾತ್ರ 2,450 ಆಹಾರ ಬಾಕ್ಸ್ ಸ್ವೀಕರಿಸಿದರು. 3.30ಕ್ಕೆ ಗೇಟ್ ತೆರೆದ ಬಳಿಕವೂ ಅಭಿಮಾನಿಗಳ ದಟ್ಟಣೆ ಇತ್ತು. ಬಳಿಕ ಬಂದ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರಿಂದ ಕಾಲ್ತುಳಿತವಾಗಿದೆ. ವಿಧಾನಸೌಧ, ಚಿನ್ನಸ್ವಾಮಿ ಸ್ಟೇಡಿಯಂನ ಕಾರ್ಯಕ್ರಮದ ಪ್ಲಾನ್ ಸರ್ಕಾರ ಹಾಗೂ ಕೆಎಸ್‌ಸಿಎ ನದ್ದು. ಆರ್‌ಸಿಬಿ ವಿಜಯೋತ್ಸವದಲ್ಲಿ ಭಾಗಿಯಾಗಲು ಸರ್ಕಾರವೇ ಕರೆ ಕೊಟ್ಟಿತ್ತು. ಸರ್ಕಾರದ ಮುಖ್ಯ ಕಾರ್ಯದರ್ಶಿ ಚರ್ಚಿಸಿ ಕ್ಷಣಕ್ಷಣದ ಪ್ಲಾನ್ ರೂಪಿಸಿದ್ದರು. ಸರ್ಕಾರ ವಿಧಾನಸೌಧದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರಿಂದಲೇ ಕಾಲ್ತುಳಿತ ಅಗಿದೆ. ಲಕ್ಷಾಂತರ ಜನ ವಿಧಾನಸೌಧಕ್ಕೆ ಬಂದು, ಸ್ಟೇಡಿಯಂಗೂ ಬಂದಿದ್ದೇ ಕಾರಣ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯ ಸರ್ಕಾರಕ್ಕೆ ಕೆಎಸ್‌ಸಿಎ ತಿರುಗೇಟು
ಚಿನ್ನಸ್ವಾಮಿ ಕಾಲ್ತುಳಿತ ಘಟನೆಗೆ ನಿಮ್ಮ ಬೇಜವಾಬ್ಧಾರಿ ಕಾರಣ ಎಂಬಂತೆ ಬಿಂಬಿಸಲು ಹೊರಟ ರಾಜ್ಯ ಸರ್ಕಾರಕ್ಕೆ ಕೆಎಸ್ ಸಿಎ ತಿರುಗೇಟು ನೀಡಿದೆ. ಸರ್ಕಾರದ ವಿರುದ್ಧವೇ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಸಂಭ್ರಮಾಚರಣೆಗೆ ಕರೆ ಕೊಟ್ಟಿದ್ದೇ ಸರ್ಕಾರ. ಆದರೆ ಈಗ ಜನರ ಆಕ್ರೋಶ ತಪ್ಪಿಸಲು ನಮ್ಮ ಮೇಲೆ ಆರೋಪ ಮಾಡುತ್ತಿದೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಮಾಡುವ ಯೋಜನೆ ಸರ್ಕಾರದ್ದೇ ಆಗಿತ್ತು. ಈಗ ಘಟನೆಯ ಹೊಣೆಯನ್ನು ಕೆಎಸ್ ಸಿಎ ಮೇಲೆ ಹಾಕಲು ನೋಡಲಾಗುತ್ತಿದೆ. ಆದರೆ ಪೊಲೀಸರಿಂದ ರಕ್ಷಣೆ ಕೊಡಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಕೆಎಸ್ ಸಿಎ ರಿಟ್ ಅರ್ಜಿಯಲ್ಲಿ ಹೇಳಿದೆ.
ಪೊಲೀಸರನ್ನು ಅಮಾನತು ಮಾಡಿ ಸ್ವತಃ ಸಿಎಂ ಅವರೇ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ. ಇದರ ಮೇಲೆ ಕೆಎಸ್ ಸಿಎ ಅಧಿಕಾರಿಗಳನ್ನು ಬಂಧಿಸಲು ಮಾಧ್ಯಮಗಳ ಮೂಲಕ ಆದೇಶ ನೀಡಿದ್ದಾರೆ ಎಂದು ಕೆಎಸ್ ಸಿಎ ಆರೋಪಿಸಿದೆ.
ಸರ್ಕಾರಕ್ಕೆ ಮುಜುಗರ ತಂದಿಟ್ಟ ಡಿಸಿಪಿ ಪತ್ರ
ಆರ್ ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಆಯೋಜನೆ ಮಾಡಿದ್ದು KSCA. ತಪ್ಪು ಅವರದ್ದೇ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಸರ್ಕಾರವೇ ಸನ್ಮಾನದ ಪ್ರಸ್ತಾಪ ಮಾಡಿದ್ದು, ಅವರಿಂದಲೇ ಲೋಪವಾಗಿದೆ ಎಂದಯ KSCA ಹೇಳುತ್ತಿದೆ. ಈ ಆರೋಪ ಪ್ರತ್ಯಾರೋಪಗಳ ಮಧ್ಯೆ ಜೀವ ಕಳೆದುಕೊಂಡ 11 ಜನರ ಕುಟುಂಬಗಳು ಕಣ್ಣೀರಿಡುತ್ತಿವೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ನ್ಯಾಯಕ್ಕಾಗಿ ಆಗ್ರಹಿಸ್ತಿವೆ. ಈ ನಡುವೆ ಸ್ಫೋಟಕ ಅಂಶವೊಂದು ಬೆಳಕಿಗೆ ಬಂದಿದ್ದು, ಘಟನೆಗೆ ಡಿಪಿಆರ್ ಎ ಕಾರ್ಯದರ್ಶಿ ಸತ್ಯವತಿ ನಿರ್ಲಕ್ಷ್ಯ ಬಯಲಿಗೆ ಬಂದಿದೆ. ವಿಧಾನಸೌಧ ಭದ್ರತಾ ವಿಬಾಗ ಡಿಸಿಪಿ ಜೂನ್ 4ರಂದೇ ಅಪಾಯದ ಎಚ್ಚರಿಕೆ ನೀಡಿದ್ದು, ಇದನ್ನು ಡಿಪಿಆರ್ ಎ ನಿರ್ಲಕ್ಷ್ಯ ಮಾಡಿರುವುದು ಕಂಡುಬಂದಿದೆ. ಡಿಸಿಪಿಯ ಈ ಪತ್ರದಿಂದಾಗಿ ಸರ್ಕಾರಕ್ಕೆ ಮುಂಜುಗರ ಉಂಟು ಮಾಡಿದೆ.
ಸರ್ಕಾರದ ವಿರುದ್ಧ ಸಿಡಿದೆದ್ದ ಮಠಾಧೀಶರು
ಕೆಎಸ್ ಸಿಎ, ಡಿಎನ್ ಎ ಮಾತ್ರವಲ್ಲ ಕರ್ನಾಟಕದ ಪ್ರಮುಖ ಸಮುದಾಯಗಳ ಮಠಾಧೀಶರು ಸಹ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧವೂ ದೂರು ನೀಡಿದ್ದಾರೆ. ಅತೀ ಹಿಂದುಳಿದ ಮಠಾಧೀಶರ ಸಭಾ ಬೆಂಗಳೂರಿನ ಕಬ್ಬನ್ಪಾರ್ಕ್ ಠಾಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಗೃಹ ಸಚಿವ ಪರಮೇಶ್ವರ್ ಮತ್ತು ಆರ್‌ಸಿಬಿ ಆಡಳಿತ ಮಂಡಳಿ ವಿರುದ್ಧ ದೂರು ನೀಡಿದೆ. ಇವರ ನಿರ್ಲಕ್ಷ್ಯದಿಂದಲೇ ಆರ್ಸಿಬಿಯ 11 ಅಭಿಮಾನಿಗಳ ಸಾವಾಗಿದೆ. ಹೀಗಾಗಿ ನಾಲ್ವರ ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಸರ್ಕಾರದ ವಿರುದ್ಧ ಎಸಿಪಿ ಸಿಎಟಿ ಮೊರೆ
ಆರ್ಸಿಬಿಯ 11 ಅಭಿಮಾನಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕರ್ತವ್ಯ ಲೋಪದ ಕಾರಣ ನೀಡಿ ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ವಿಕಾಸ್ ಕುಮಾರ್ (Vikas Kumar) ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಿತ್ತು. ಇದೀಗ ಸರ್ಕಾರದ ಅಮಾನತು ಆದೇಶವನ್ನು ಪ್ರಶ್ನಿಸಿ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಅವರು ಸಿಎಟಿ ಮೊರೆ ಹೋಗಿದ್ದಾರೆ. ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (CAT)ಗೆ ಅರ್ಜಿ ಸಲ್ಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ ಕಿಡಿ
ಇನ್ನು ಘಟನೆ ಸಂಬಂಧ ರಾಜ್ಯ ಸರ್ಕಾರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಏಕಾಏಕಿ ವಿಜಯೋತ್ಸವ ಆಚರಣೆ ಮಾಡಿದ್ದು, ಹೊರಗಡೆ ಕಾಲ್ತುಳಿತ ಆಗುತ್ತಿದ್ದರು ಸ್ಟೇಡಿಯಂ ಒಳಗಡೆ ಡಿಸಿಎಂ ಡಿಕೆ ಶಿವಕುಮಾರ್ ಕಪ್ ಎತ್ತಿ ಹಿಡಿದು ಸಂಭ್ರಮಿಸಿರುವುದಕ್ಕೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ತಮ್ಮ ತಪ್ಪು ಮುಚ್ಚಿಕೊಳ್ಳಲು ಪೊಲೀಸರನ್ನು ಅಮಾನತು ಮಾಡಲಾಗಿದೆ ಅಂತಲೂ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ನಡೆಗೆ ಟೀಕೆಗಳು ವ್ಯಕ್ತವಾಗುತ್ತಿವೆ.
ಹೀಗೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸುತ್ತಲು ಬಾಣಗಳು ಬಿಡಲಾಗುತ್ತಿದ್ದು, ಒಂದೇ ಒಂದು ಘಟನೆಯಲ್ಲಿ ರಾಜ್ಯ ಸರ್ಕಾರ ಇಕ್ಕಳದಲ್ಲಿ ಸಿಲುಕಿ ಒದ್ದಾಡುವಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.