ಸ್ಪರ್ಧಾ ಆಯೋಗದ ತನಿಖೆಗೆ ತಡೆ ನೀಡಬೇಕೆಂಬ ಅಮೆಜಾನ್, ಫ್ಲಿಪ್ಕಾರ್ಟ್ ಮನವಿ ತಳ್ಳಿಹಾಕಿದ ಕರ್ನಾಟಕ ಹೈಕೋರ್ಟ್
‘ಈ ಹಂತದಲ್ಲಿ ತನಿಖೆಯನ್ನು ನಿಲ್ಲಿಸಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ನ್ಯಾಯಪೀಠವು ಹೇಳಿತು.
ಬೆಂಗಳೂರು: ಇ-ಕಾಮರ್ಸ್ ದೈತ್ಯ ಕಂಪನಿಗಳಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ಗಳಿಗೆ ಕಾನೂನು ಹೋರಾಟದಲ್ಲಿ ಮತ್ತೆ ಹಿನ್ನಡೆಯಾಗಿದೆ. ಸ್ಪರ್ಧಾ ಆಯೋಗದ (Competition Commission of India – CCI) ತನಿಖೆಗೆ ತಡೆ ನೀಡಬೇಕೆಂಬ ಈ ಕಂಪನಿಗಳ ಬೇಡಿಕೆಯನ್ನು ಕರ್ನಾಟಕ ಹೈಕೋರ್ಟ್ನ ವಿಭಾಗೀಯ ನ್ಯಾಯಪೀಠವು ಶುಕ್ರವಾರ ವಜಾ ಮಾಡಿದೆ. ಸ್ಪರ್ಧಾ ಆಯೋಗವು ತನಿಖೆ ಮುಂದುವರಿಸಲು ಹೈಕೋರ್ಟ್ ಅನುಮತಿ ನೀಡಿದೆ.
‘ಈ ಹಂತದಲ್ಲಿ ತನಿಖೆಯನ್ನು ನಿಲ್ಲಿಸಲು ಸಾಧ್ಯವಿಲ್ಲ’ ಎಂದು ನ್ಯಾಯಮೂರ್ತಿ ಚಂದ್ರ ಶರ್ಮಾ ನೇತೃತ್ವದ ವಿಭಾಗೀಯ ನ್ಯಾಯಪೀಠವು ಹೇಳಿತು. ಸ್ಪರ್ಧಾ ಆಯೋಗವು ತೆಗೆದುಕೊಂಡಿರುವ ಕ್ರಮಗಳು ಅಂತಿಮ ಹಂತಕ್ಕೆ ತಲುಪಬಾರದು ಎನ್ನುವ ಉದ್ದೇಶದಿಂದ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಗಳು ವಜಾರ್ಹವಾದವು, ಪರಿಗಣನೆಗೆ ಯೋಗ್ಯವಾದವಲ್ಲ ಎಂದು ದ್ವಿ ಸದಸ್ಯ ನ್ಯಾಯಪೀಠವು ಅಭಿಪ್ರಾಯಪಟ್ಟಿತು.
ದೆಹಲಿ ವ್ಯಾಪಾರ ಮಹಾಸಂಘವು ಸಲ್ಲಿಸಿರುವ ಅರ್ಜಿಯನ್ನು ಆಧರಿಸಿ ಭಾರತದ ಸ್ವರ್ಧಾ ಆಯೋಗವು ಜನವರಿ 13, 2020ರಂದು ಈ ಸಂಬಂಧ ತನಿಖೆ ನಡೆಸಲು ನಿರ್ದೇಶನ ನೀಡಿತ್ತು. ಈ ಆದೇಶಗಳನ್ನು ಪ್ರಶ್ನಿಸಿ ಇ-ಕಾಮರ್ಸ್ನ ದೈತ್ಯ ಕಂಪನಿಗಳು ನ್ಯಾಯಾಲಯದ ಮೊರೆ ಹೋಗಿದ್ದವು.
ಸ್ಪರ್ಧಾ ನೀತಿಗೆ ಹೊರತಾದ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ಈ ಎರಡೂ ಕಂಪನಿಗಳು 2002ರ ಕಂಪನಿ ಕಾಯ್ದೆ ಉಲ್ಲಂಘಿಸಿವೆ ಎಂಬ ದೂರಿಗೆ ಸಂಬಂಧಿಸಿದಂತೆ ಕಳೆದ ಜೂನ್ 11ರಂದು ಏಕ ಸದಸ್ಯ ನ್ಯಾಯಪೀಠವು ಆದೇಶ ನೀಡಿತ್ತು. ತಮ್ಮ ಮಾರಾಟ ವೇದಿಕೆಗಳ ಮೂಲಕ ಕೆಲವೇ ವ್ಯಾಪಾರಿಗಳನ್ನು ಪ್ರೋತ್ಸಾಹಿಸುತ್ತಿರುವ ಈ ಕಂಪನಿಗಳು, ಅತಿಯಾಗಿ ರಿಯಾಯ್ತಿಗಳನ್ನು ಘೋಷಿಸುವ ಮೂಲಕ ಸ್ಪರ್ಧೆಯನ್ನು ಹೊಸಕಿಹಾಕಲು ಯತ್ನಿಸುತ್ತಿವೆ ಎಂಬ ದೂರು ಸಹ ಸಿಸಿಐಗೆ ಸಲ್ಲಿಕೆಯಾಗಿತ್ತು.
ವ್ಯಾಪಾರಿಗಳ ಸಂಘದ ಪರವಾಗಿ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ವಿರುದ್ಧ ಅರ್ಜಿ ಸಲ್ಲಿಸಿರುವ ಸರ್ವದಾ ಲೀಗಲ್ ಸಂಸ್ಥೆಯ ವಕ್ತಾರರು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಿಸಿದ್ದಾರೆ. ವಿದೇಶಿ ಸುದ್ದಿಸಂಸ್ಥೆಗಳು ಈ ತೀರ್ಪನ್ನು ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ಗೆ ಆದ ಹಿನ್ನಡೆ ಎಂದೇ ವ್ಯಾಖ್ಯಾನಿಸಿವೆ.
(Karnataka High Court quashes Amazon Flipkart plea against antitrust probe by CCI)
ಇದನ್ನೂ ಓದಿ: ಟ್ವಿಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿಗೆ ಕರ್ನಾಟಕ ಹೈಕೋರ್ಟ್‌ನಿಂದ ರಿಲೀಫ್
ಇದನ್ನೂ ಓದಿ: ಸಾವಿನಂಚಿನಲ್ಲಿರುವ ಗಂಡನಿಂದ ಗರ್ಭಿಣಿಯಾಗಬೇಕೆಂದ ಹೆಂಡತಿ; ವೀರ್ಯ ಸಂಗ್ರಹಿಸಲು ಹೈಕೋರ್ಟ್ ಅನುಮತಿ