ಕರ್ನಾಟಕದ ಕೆಲವು ಬಿಜೆಪಿ ಸಚಿವರಿಗೆ ಹೊಸ ಸಂಕಷ್ಟ; ಕ್ರಿಮಿನಲ್ ಕೇಸ್ ರದ್ದುಪಡಿಸಲು ಸಾಧ್ಯವಿಲ್ಲ ಎಂದ ಹೈಕೋರ್ಟ್
Karnataka News: ಕರ್ನಾಟಕ ಸರ್ಕಾರ ಕಳೆದ ವರ್ಷ ಆಗ ಕಾನೂನು ಸಚಿವರಾಗಿದ್ದ ಜೆ.ಸಿ. ಮಾಧುಸ್ವಾಮಿ, ಪ್ರವಾಸೋದ್ಯಮ ಸಚಿವರಾಗಿದ್ದ ಸಿ.ಟಿ. ರವಿ, ಕೃಷಿ ಸಚಿವರಾಗಿದ್ದ ಬಿ.ಸಿ. ಪಾಟೀಲ್ ಸೇರಿದಂತೆ ಹಲವು ರಾಜಕಾರಣಿಗಳ ಮೇಲಿನ ಕೇಸ್ಗಳನ್ನು ರದ್ದುಪಡಿಸುವಂತೆ ಸೂಚಿಸಿತ್ತು.
ಬೆಂಗಳೂರು: ಕಳೆದ ವರ್ಷ ಚುನಾಯಿತ ಪ್ರತಿನಿಧಿಗಳ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವಂತೆ ಸೂಚನೆ ನೀಡಿದ್ದ ಕರ್ನಾಟಕ ಸರ್ಕಾರದ ಆದೇಶವನ್ನು ರಾಜ್ಯ ಹೈಕೋರ್ಟ್ ತಿರಸ್ಕರಿಸಿದೆ. ಆಗಸ್ಟ್ 31ರಂದು ಚುನಾಯಿತ ಪ್ರತಿನಿಧಿಗಳ ವಿರುದ್ಧದ ಪ್ರಕರಣ ಸೇರಿ ಒಟ್ಟು 61 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ರಾಜ್ಯ ಸರ್ಕಾರ ಆದೇಶ ನೀಡಿತ್ತು. ಆದರೆ, ಸುಪ್ರೀಂ ಕೋರ್ಟ್ ಮಂಗಳವಾರ ನೀಡಿರುವ ತೀರ್ಪಿನ ಅನ್ವಯ ಆ ಆದೇಶ ಹಾಲಿ ಹಾಗೂ ಮಾಜಿ ಶಾಸಕ ಅಥವಾ ಸಂಸದರಿಗೆ ಅನ್ವಯವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮಂಗಳವಾರ ಈ ಬಗ್ಗೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಸಂಸದರು ಮತ್ತು ಶಾಸಕರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಕೇಸ್ಗಳನ್ನು ಆಯಾ ರಾಜ್ಯದ ಹೈಕೋರ್ಟ್ನ ಅನುಮತಿ ಇಲ್ಲದೆ ಹಿಂಪಡೆಯಲು ಸಾಧ್ಯವಿಲ್ಲ. ಹಾಗೇ, ಜನಪ್ರತಿನಿಧಿಗಳ ಕೇಸ್ಗಳ ವಿಚಾರಣೆ ಮಾಡುತ್ತಿರುವ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ಆ ಪ್ರಕರಣದ ವಿಚಾರಣೆ ಮುಗಿಯುವವರೆಗೂ ಬೇರೆಡೆ ವರ್ಗಾವಣೆ ಮಾಡುವಂತಿಲ್ಲ ಎಂಬ ಮಹತ್ವದ ಆದೇಶ ಹೊರಡಿಸಿತ್ತು.
ಕರ್ನಾಟಕ ಮಾತ್ರವಲ್ಲದ ಉತ್ತರ ಪ್ರದೇಶ ಸರ್ಕಾರ ಕೂಡ ಕೆಲವು ಪ್ರಭಾವಿ ವ್ಯಕ್ತಿಗಳು ಹಾಗೂ ರಾಜಕಾರಣಿಗಳ ಮೇಲಿನ ಕೇಸನ್ನು ಹಿಂಪಡೆಯಲು ಪ್ರಯತ್ನಿಸಿತ್ತು. ಆದರೆ, ಸುಪ್ರೀಂ ಕೋರ್ಟ್ನ ಆದೇಶದಿಂದ ರಾಜ್ಯ ಸರ್ಕಾರಗಳಿಗೆ ಆ ಅವಕಾಶ ತಪ್ಪಿದಂತಾಗಿದೆ. ಕರ್ನಾಟಕ ಸರ್ಕಾರ ಕಳೆದ ವರ್ಷ ಆಗ ಕಾನೂನು ಸಚಿವರಾಗಿದ್ದ ಜೆ.ಸಿ. ಮಾಧುಸ್ವಾಮಿ, ಪ್ರವಾಸೋದ್ಯಮ ಸಚಿವರಾಗಿದ್ದ ಸಿ.ಟಿ. ರವಿ, ಕೃಷಿ ಸಚಿವರಾಗಿದ್ದ ಬಿ.ಸಿ. ಪಾಟೀಲ್ ಸೇರಿದಂತೆ ಹಲವು ರಾಜಕಾರಣಿಗಳ ಮೇಲಿನ ಕೇಸ್ಗಳನ್ನು ಹಿಂಪಡೆಯುವಂತೆ ಸೂಚಿಸಿತ್ತು. ಹಾಗೇ, 2017ರಲ್ಲಿ ಶಾಸಕ ಆನಂದ್ ಸಿಂಗ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಕೇಸ್ ಅನ್ನು ಕೂಡ ರದ್ದುಪಡಿಸಲು ಸೂಚಿಸಲಾಗಿತ್ತು. ಆದರೆ, ಇದೀಗ ಚುನಾಯಿತ ಪ್ರತಿನಿಧಿಗಳ ವಿರುದ್ಧದ ಪ್ರಕರಣಗಳನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿಕೆ ನೀಡಿರುವುದರಿಂದ ಕರ್ನಾಟಕದ ಹಲವು ರಾಜಕಾರಣಿಗಳಿಗೆ ಮತ್ತೆ ತಲೆನೋವು ಶುರುವಾಗಿದೆ. ಈ ವಿಚಾರವಾಗಿ ಸೆಪ್ಟೆಂಬರ್ 3ಕ್ಕೆ ಕೋಟ್ ವಿಚಾರಣೆಯನ್ನು ಮುಂದೂಡಿದೆ.
ಈ ಕುರಿತು ನಿನ್ನೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ವಿನೀತ್ ಸರನ್ ಅವರನ್ನೊಳಗೊಂಡ ತ್ರಿಸದಸ್ಯ ನ್ಯಾಯಪೀಠ ತೀರ್ಪು ಪ್ರಕಟಿಸಿತ್ತು. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಲ್ಲಿ ಬಾಕಿ ಉಳಿದಿರುವ ಸಂಸದರು ಹಾಗೂ ಶಾಸಕರ ವಿರುದ್ಧದ ಕೇಸ್ಗಳ ಮಾಹಿತಿಯನ್ನು ನೀಡುವಂತೆ ಹೈಕೋರ್ಟ್ಗಳ ರಿಜಿಸ್ಟ್ರಾರ್ಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.
ಕೇರಳ ಸರ್ಕಾರ ವರ್ಸಸ್ ಕೆ. ಅಜಿತ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಳಿಕ 2020ರ ಸೆಪ್ಟೆಂಬರ್ 16ರಿಂದ ಸಂಸದರು ಹಾಗೂ ಶಾಸಕರ ವಿರುದ್ಧದ ಕೇಸ್ಗಳನ್ನು ಹಿಂಪಡೆಯುವ ಬಗ್ಗೆ ಪರಿಶೀಲನೆ ನಡೆಸುವಂತೆ ಹೈಕೋರ್ಟ್ಗಳು ಮನವಿ ಮಾಡಿದ್ದವು. ಅದರಂತೆ ಈಗ ಆದೇಶ ಹೊರಡಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು.
ಇದನ್ನೂ ಓದಿ: ಹೈಕೋರ್ಟ್ ಒಪ್ಪಿಗೆಯಿಲ್ಲದೆ ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಕೇಸ್ ಹಿಂಪಡೆಯುವಂತಿಲ್ಲ; ಸುಪ್ರೀಂ ಕೋರ್ಟ್ ಆದೇಶ
Bengaluru Police: ಕ್ರಿಮಿನಲ್ ಚಟುವಟಿಕೆ ನಡೆಸುತ್ತಿದ್ದವರ ಮನೆ ಮೇಲೆ ದಾಳಿ; ಒಟ್ಟು 74 ಆರೋಪಿಗಳು ವಶಕ್ಕೆ
(Karnataka High Court Says Government Order Withdrawing Criminal Cases on BJP MLAs and Ministers not Possible)