ಕೊವಿಡ್ ಪರೀಕ್ಷೆ ಸಂಖ್ಯೆಯಲ್ಲಿ.. ಉಳಿದೆಲ್ಲಾ ರಾಜ್ಯಗಳನ್ನು ಹಿಂದಿಕ್ಕಿದ ಕರ್ನಾಟಕ
ಬೆಂಗಳೂರು: ಕೊವಿಡ್ ಪರೀಕ್ಷೆ ನಡೆಸುವ ವಿಚಾರದಲ್ಲಿ ಕರ್ನಾಟಕ ಉಳಿದೆಲ್ಲಾ ರಾಜ್ಯಗಳಿಗಿಂತ ಮುಂದಿದ್ದು ಮೊದಲನೇ ಸ್ಥಾನ ಪಡೆದಿದೆ.

ಬೆಂಗಳೂರು: ಕೊವಿಡ್ ಪರೀಕ್ಷೆ ನಡೆಸುವ ವಿಚಾರದಲ್ಲಿ ಕರ್ನಾಟಕ ಉಳಿದೆಲ್ಲಾ ರಾಜ್ಯಗಳಿಗಿಂತ ಮುಂದಿದ್ದು ಮೊದಲನೇ ಸ್ಥಾನ ಪಡೆದಿದೆ. ಭಾನುವಾರಕ್ಕೆ ಹೋಲಿಸಿದರೆ ನಿನ್ನೆಯ ಪರೀಕ್ಷಾ ಪ್ರಮಾಣ 30 ಸಾವಿರದಷ್ಟು ಕಡಿಮೆಯಾಗಿದ್ದರೂ ಇದರ ಹೊರತಾಗಿ ಅತಿ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ . ರಾಜ್ಯದಲ್ಲಿ 6.11 ಕೋಟಿ ಜನಸಂಖ್ಯೆ ಇದ್ದು ಅದರಲ್ಲಿ ಪ್ರತಿ ಲಕ್ಷಕ್ಕೆ 16,360 ಮಂದಿ ಪರೀಕ್ಷೆಗೆ ಒಳಪಟ್ಟಿದ್ದಾರೆ.
ಕರ್ನಾಟಕದ ನಂತರ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಎರಡನೇ ಸ್ಥಾನ ಪಡೆದುಕೊಂಡಿದೆ. ಲಡಾಖ್ನ ಜನಸಂಖ್ಯೆ ಸುಮಾರು 2.90 ಲಕ್ಷದಷ್ಟಿದ್ದು ಪ್ರತಿ ಲಕ್ಷಕ್ಕೆ 14,769 ಜನ ಪರೀಕ್ಷೆಗೆ ಒಳಗಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಪುದುಚೆರಿಯಲ್ಲಿ ಪ್ರತಿ ಲಕ್ಷಕ್ಕೆ 14,488 ಜನ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ತೆಲಂಗಾಣ ಕೊನೆಯ ಸ್ಥಾನದಲ್ಲಿದ್ದು ಒಂದು ಲಕ್ಷ ಮಂದಿಯಲ್ಲಿ ಕೇವಲ 221 ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂಬ ಅಂಶ ಬಯಲಾಗಿದೆ. ಇನ್ನು ಉತ್ತರಪ್ರದೇಶ, ಬಿಹಾರ, ಆಂಧ್ರಪ್ರದೇಶ, ಲಕ್ಷದ್ವೀಪಗಳ ಮಾಹಿತಿ ಲಭ್ಯವಾಗಿಲ್ಲ.
ರಾಜ್ಯದಲ್ಲಿ ಭಾನುವಾರದಂದು ಒಟ್ಟು 1,26,904 ಜನ ಕೊವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು ಅದರಲ್ಲಿ 1,704 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಸೋಮವಾರ ನಡೆದ 8,682 ಆ್ಯಂಟಿಜೆನ್ ಮತ್ತು 87,413 RT PCR ಪರೀಕ್ಷೆಗಳು ಸೇರಿ ಒಟ್ಟು 96,905 ಕೊವಿಡ್ ಪರೀಕ್ಷೆಗಳಾಗಿದೆ. ಈ ಪೈಕಿ 1,509 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಒಟ್ಟು 1.03 ಕೋಟಿ ಮಂದಿ ಪರೀಕ್ಷೆಗೆ ಒಳಗಾಗಿದ್ದು 8,74,555 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅವರಲ್ಲಿ 8,38,150 ಜನ ಸಂಪೂರ್ಣ ಗುಣಮುಖರಾಗಿದ್ದು 11,678 ಮಂದಿ ಮೃತಪಟ್ಟಿದ್ದಾರೆ.
ಸದ್ಯ ರಾಜ್ಯದಲ್ಲಿರುವ ಸಕ್ರಿಯ ಪ್ರಕರಣಗಳಲ್ಲಿ 438 ಜನರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು 24,708 ಮಂದಿ ಕೊವಿಡ್ ಆರೈಕೆ ಕೇಂದ್ರ, ಆಸ್ಪತ್ರೆ ಮತ್ತು ಮನೆಗಳಲ್ಲೇ ಇದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
Published On - 5:37 pm, Tue, 24 November 20