ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆ ಬಗ್ಗೆ ಕರ್ನಾಟಕ ಗೃಹ ಮಂತ್ರಿ ಹೇಳಿದ್ದೇನು?
ಶಾಂತವಾಗಿರುವ ಬೆಳಗಾವಿಯನ್ನು ಕದಡುವ ಯತ್ನ ಮಾಡಬೇಡಿ. ಯಾವುದೇ ಕಾರಣಕ್ಕೂ ಕರ್ನಾಟಕದ ಒಂದಿಂಚು ಭೂಮಿಯನ್ನೂ ಕೊಡುವುದಿಲ್ಲ. ಬದಲಾಗಿ ಕನ್ನಡಿಗರು ಹೆಚ್ಚಿರುವ ಸಾಂಗ್ಲಿ, ಸೊಲ್ಲಾಪುರವನ್ನೇ ಕರ್ನಾಟಕಕ್ಕೆ ಸೇರಿಸಿಕೊಳ್ಳುತ್ತೇವೆ..
ಬೆಳಗಾವಿ: ಬೆಳಗಾವಿಯ ಮೇಲೆ ಕಣ್ಣು ಹಾಕಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶಾಂತಿ ಕದಡುವ ಯತ್ನ ಮಾಡುತ್ತಿದ್ದಾರೆ. ನಾವು ಯಾವುದೇ ಕಾರಣಕ್ಕೂ ಕರ್ನಾಟಕದ ಒಂದಿಂಚು ಭೂಮಿಯನ್ನೂ ಕೊಡುವುದಿಲ್ಲ. ಬದಲಾಗಿ ಕನ್ನಡಿಗರು ಹೆಚ್ಚಿರುವ ಸಾಂಗ್ಲಿ, ಸೊಲ್ಲಾಪುರವನ್ನೇ ಕರ್ನಾಟಕಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಕಾಸಸೌಧದಲ್ಲಿ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಸಿಎಂ ಜವಾಬ್ದಾರಿ ಮರೆತು ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ನಾವು ಲೋಕಸಭೆ ಒಪ್ಪಿಕೊಂಡಿರುವ ಮಹಾಜನ ವರದಿಗೆ ಬದ್ಧರಾಗಿದ್ದೇವೆ. ಆದರೆ, ಅವರು ರಾಜಕೀಯ ಲಾಭಕ್ಕಾಗಿ ಶಾಂತಯುತವಾಗಿರುವ ಬೆಳಗಾವಿಯನ್ನು ಕದಡಲು ನೋಡುತ್ತಿದ್ದಾರೆ. ಇಂತಹ ಪ್ರಯತ್ನಕ್ಕೆ ನಾವು ಜಗ್ಗುವುದಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ.
ಗಡಿ, ನೆಲ, ಜಲ, ಭಾಷೆ ವಿಚಾರದಲ್ಲಿ ನಾವು ಎಂದೆಂದಿಗೂ ಒಂದಾಗಿ ಇರ್ತೇವೆ. ಈ ವಿಷಯಗಳಲ್ಲಿ ನಮ್ಮ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಉದ್ಧವ್ ಠಾಕ್ರೆ ಅನಾವಶ್ಯಕ ಹೇಳಿಕೆಗಳನ್ನು ನೀಡುವ ಮೂಲಕ ವಿವಾದ ಸೃಷ್ಟಿಸಬಾರದು. ಶಾಂತಿ ಕದಡುವ ಪ್ರಯತ್ನಕ್ಕೆ ಕೈ ಹಾಕಬಾರದು ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧಟತನ ತೋರುತ್ತಿದ್ದಾರೆ.. ಗಡಿ ಸೌಹಾರ್ದತೆ ಕದಡುತ್ತಿದ್ದಾರೆ: ಸಿಎಂ ಯಡಿಯೂರಪ್ಪ ಆಕ್ರೋಶ