
ಬೆಂಗಳೂರು, ಮೇ 5: ಜಾತಿ ಜನಗಣತಿ ವಿಚಾರ ದೇಶದಾದ್ಯಂತ ಚರ್ಚೆಯಲ್ಲಿದೆ. ಕರ್ನಾಟಕ ಜಾತಿ ಗಣತಿ (Caste Census) ಕೂಡ ಸಾಕಷ್ಟು ಕೋಲಾಹಲ ಸೃಷ್ಟಿಸಿದೆ. ಇದೇ ಸಂದರ್ಭದಲ್ಲಿ, ಒಳಮೀಸಲಾತಿ ಬಗ್ಗೆ ನಿಖರವಾದ ವರದಿ ಕೊಡಲು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಗಣತಿಯನ್ನು (Internal Reservation Caste Census) ಕರ್ನಾಟಕ ಸರ್ಕಾರ ಆರಂಭಿಸಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಒಳಮೀಸಲಾತಿ ಬಗ್ಗೆ ನಿಖರವಾದ ವರದಿ ಕೊಡಲು ಆಯೋಗ ರಚಿಸಲಾಗಿದೆ. ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕಸದಸ್ಯ ಆಯೋಗ ರಚಿಸಿದ್ದೇವೆ ಎಂದು ಅವರು ತಿಳಿಸಿದರು.
ನಾಗಮೋಹನ್ ದಾಸ್ ಸಮಿತಿ ಇಂದಿನಿಂದ ಗಣತಿದಾರರು, ಮೇಲ್ವಿಚಾರಕರಿಗೆ ತರಬೇತಿ ನೀಡಲಿದ್ದು, ಅವರು ಮನೆ ಮನೆಗೆ ತೆರಳಲಿದ್ದಾರೆ. ಒಳಮೀಸಲಾತಿ ಸಮೀಕ್ಷೆ ಎರಡು ಹಂತಗಳಲ್ಲಿ ನಡೆಯಲಿದೆ. ಇಂದಿನಿಂದ ಮೇ 17ರವರೆಗೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಗಣತಿ ನಡೆಯಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಪರಿಶಿಷ್ಟ ಜಾತಿಗಳಲ್ಲಿ 101 ಉಪ ಜಾತಿಗಳು ಇವೆ. ಪರಿಶಿಷ್ಟ ಜಾತಿಗಳಲ್ಲಿ ಎಡ, ಬಲ, ಕೊರಚ, ಕೊರಮ, ಲಂಬಾಣಿಗಳು ಇದ್ದಾರೆ. ಒಳ ಮೀಸಲಾತಿ ಕೊಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಎಂಬುದಾಗಿ ಎಡಗೈ ಹಾಗೂ ಬಲಗೈ ಸಮುದಾಯದವರು ಬರೆಸಿರುತ್ತಾರೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ಒಳಮೀಸಲಾತಿ ಜಾತಿ ಗಣತಿ ಸಮೀಕ್ಷೆ ಕಾರ್ಯಕ್ಕೆ 65 ಸಾವಿರ ಶಿಕ್ಷಕರನ್ನು ನೇಮಿಸಲಾಗಿದೆ. ಅವರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ. ಪರಿಶಿಷ್ಟ ಜಾತಿಗಳ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಲಿದ್ದಾರೆ. ಮೊದಲ ಹಂತದಲ್ಲಿ ಮನೆ ಮನೆಗೆ ತೆರಳಿ ಅಂಕಿ ಅಂಶ ಸಂಗ್ರಹ ಮಾಡಲಾಗುತ್ತದೆ. 2ನೇ ಹಂತದಲ್ಲಿ ಮೇ 19 ರಿಂದ 21 ರವರೆಗೆ ವಿಶೇಷ ಶಿಬಿರ ಆಯೋಜನೆ ಮಾಡಲಾಗಿದೆ. ಆ ಶಿಬಿರಗಳಿಗೂ ಬಂದು ಜನರು ಮಾಹಿತಿಗಳನ್ನು ನೀಡಬಹುದು. 3ನೇ ಹಂತ ಮೇ 19 ರಿಂದ 23 ರವರೆಗೆ ನಡೆಯಲಿದೆ. ಮೂರನೇ ಹಂತದಲ್ಲಿ ಆನ್ಲೈನ್ ಮೂಲಕ ಮಾಹಿತಿ ಸಂಗ್ರಹ ಮಾಡಲಾಗುತ್ತದೆ. ಎಸ್ಸಿಗಳು ತಮ್ಮ ಜಾತಿಯನ್ನು ಸ್ವಯಂ ಆಗಿ ಘೋಷಿಸಿಕೊಳ್ಳಬಹುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಒಳಮೀಸಲಾತಿ ಜಾರಿ ಸಂಬಂಧ ಸಮೀಕ್ಷೆ ನಡೆಯುತ್ತಿದ್ದು, ಸಹಾಯವಾಣಿ ಸಂಖ್ಯೆ (9481359009) ಕರೆ ಮಾಡುವ ಮೂಲಕವೂ ಜನರು ಮಾಹಿತಿ ನೀಡಬಹುದು. ಇದಕ್ಕಾಗಿ ದಿನದ 24 ಗಂಟೆಯೂ ಕರೆ ಮಾಡಬಹುದು ಎಂದು ಸಿದ್ದರಾಮಯ್ಯ ಹೇಳಿದರು. ಈ ಕುರಿತ ವರದಿ ಕೊಡಲು 60 ದಿನಗಳ ಕಾಲಾವಕಾಶ ಕೊಟ್ಟಿದ್ದೇವೆ. ಅದರ ಒಳಗಾಗಿ ವರದಿ ನೀಡಲು ಆಯೋಗಕ್ಕೆ ಸೂಚಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಜನಗಣತಿಯಲ್ಲಿ ಜಾತಿ ಗಣತಿ ಸೇರ್ಪಡೆ; ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಹೇಳಿದ್ದೇನು?
ಒಳಮೀಸಲಾತಿ ಜಾತಿ ಗಣತಿ ಸಮೀಕ್ಷೆ ಕಾರ್ಯ ಇಂದಿನಿಂದ ಆರಂಭವಾಗುತ್ತಿರುವ ಸಂಬಂಧ, ಈ ಕುರಿತು ಸಮುದಾಯದವರಲ್ಲಿ ಜಾಗೃತಿ ಮೂಡಿಸಲು ಎಸ್ಸಿ ಹಾಗೂ ಎಸ್ಟಿ ಸಮುದಾಯಗಳ ಸಂಘಟನೆಗಳು ಭಾನುವಾರ ವಿವಿಧ ಮಾಧ್ಯಮಗಳ ಮೂಲಕ ಜಾಹೀರಾತುಗಳನ್ನು ನೀಡಿದ್ದವು. ಸಮೀಕ್ಷೆಗೆ ಬಂದವರಿಗೆ ಯಾವ ರೀತಿ ಜಾತಿ ಮಾಹಿತಿ ನೀಡಬೇಕು ಎಂಬ ವಿವರಗಳು ಅದರಲ್ಲಿ ಅಡಕವಾಗಿದ್ದವು.
Published On - 12:00 pm, Mon, 5 May 25