ಬೆಂಗಳೂರು, (ಜನವರಿ 12): ಬಿಜೆಪಿಯಲ್ಲಿನ ಬಣ ಬಡಿದಾಟದಂತೆಯೇ, ದಳ ಮನೆಯಲ್ಲೂ ಅಸಮಾಧಾನ ಇದೆ. ಬಿಜೆಪಿ ಜೊತೆ ಮೈತ್ರಿಯನ್ನೇ ಶಾಸಕ ಜಿಟಿ.ದೇವೇಗೌಡ ಬಹಿರಂಗವಾಗಿಯೇ ವಿರೋಧ ಮಾಡಿದ್ರು, ಇದಿಷ್ಟೇ ಅಲ್ಲ, ಇದೀಗ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟಕ್ಕೆ ನಿಖಿಲ್ ಕುಮಾರಸ್ವಾಮಿಯನ್ನ ಕೂರಿಸಲು ದೇವೇಗೌಡರು ಪ್ರಯತ್ನದಲ್ಲಿದ್ದಾರೆ. ಇದು ಜೆಡಿಎಸ್ ಹಿರಿಯ ನಾಯಕರ ಕಣ್ಣು ಕೆಂಪಗಾಗಿಸಿದೆ. ಹಿರಿಯರ ಕಡೆಗಣನೆ ಎಂದು ಆಕ್ರೋಶಕ್ಕೂ ಕಾರಣವಾಗಿದೆ. ದಳ ಮನೆಯಲ್ಲಿನ ಭಿನ್ನರಾಗವೇ ಆಪರೇಷನ್ ಹಸ್ತಕ್ಕೆ ಚಾನ್ಸ್ ಕೊಟ್ಟಂತಾಗುತ್ತೆ ಅನ್ನೋ ಭಯದಲ್ಲಿರೋ ಕುಮಾರಸ್ವಾಮಿ ಮುನ್ನೆಚ್ಚರಿಕೆಯಾಗಿ ಸಭೆ ಮಾಡೋ ಮೂಲಕ ವಿಶ್ವಾಸಕ್ಕೆ ತೆಗೆದಕೊಳ್ಳೋ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕರ ಆಟಕ್ಕೆ ಬ್ರೇಕ್ ಹಾಕುವ ಪ್ರಯತ್ನವನ್ನೂ ನಡೆಸುತ್ತಿದ್ದಾರೆ.
ಬೆಂಗಳೂರಿನ ಶೇಷಾದ್ರಿಪುರಂನ ಜೆಡಿಎಸ್ ಕಚೇರಿಯಲ್ಲಿ ಸಭೆ ನಡೆಸಲಾಯ್ತು, ಮಾಜಿ ಪ್ರಧಾನಿ ದೇವೇಗೌಡರು, ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೀತು. ಸಭೆಯಲ್ಲಿ ಜೆಡಿಎಸ್ನ ಹಾಲಿ, ಮಾಜಿ ಶಾಸಕರು, ಪರಿಷತ್ ಸದಸ್ಯರು ಭಾಗಿಯಾದ್ರು, ಪಕ್ಷದಲ್ಲಿನ ಬೆಳವಣಿಗೆ ಬಗ್ಗೆ ಮುಕ್ತವಾಗಿ ಅಭಿಪ್ರಾಯ ಪಡೆದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳೋ ಪ್ರಯತ್ನ ನಡೆಸಿದರು.
ಇನ್ನು ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಏಪ್ರಿಲ್ನೊಳಗೆ JDS ರಾಜ್ಯಾಧ್ಯಕ್ಷರ ಆಯ್ಕೆ ಮಾಡುತ್ತೇವೆ. ಚುನಾವಣೆ ಮೂಲಕ JDS ರಾಜ್ಯಾಧ್ಯಕ್ಷರ ಆಯ್ಕೆ ಮಾಡುತ್ತೇವೆ. ನಾನು ನಾಲ್ಕು ದಿನಗಳ ಕಾಲ ನವದೆಹಲಿಯಲ್ಲಿ ಇರುತ್ತೇನೆ. ಹೀಗಾಗಿ ನಮ್ಮ ಪಕ್ಷದ ಎಲ್ಲ ಪ್ರಮುಖರಿಗೆ ಕಟ್ಟು ನಿಟ್ಟಾಗಿ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನಾನು ನಾಲ್ಕು ದಿನಗಳ ಕಾಲ ನವದೆಹಲಿಯಲ್ಲಿ ಇರುತ್ತೇನೆ. ಒಂದು ಅಥವಾ ಎರಡು ದಿನ ದೇಶದ ಕೈಗಾರಿಕೆಗಳಿಗೆ ಭೇಟಿ ನೀಡುತ್ತೇನೆ. ಇತರೆ ಕೆಲಸಗಳ ಬಗ್ಗೆ ಗಮನ ಕೊಡುತ್ತೇನೆ. ಪಕ್ಷ ಸಂಘಟನೆಗೆ, ಮಂಡ್ಯ ಕ್ಷೇತ್ರಕ್ಕೂ ಗಮನ ಕೊಡುತ್ತೇನೆ. ನನ್ನ ಪಕ್ಷದ ಶಾಸಕರ ಸೆಳೆಯುವ ಕೆಲಸ ಎಲ್ಲೂ ಆಗುತ್ತಿಲ್ಲ. ಯಾವ ಜೆಡಿಎಸ್ ಶಾಸಕರೂ ಸಹ ಪಕ್ಷ ಬಿಡುವುದಿಲ್ಲ ಎಂದು ತಿಳಿಸಿದರು.
ಒಟ್ಟಿನಲ್ಲಿ ಜೆಡಿಎಸ್ ಹೊಸ ರಾಜ್ಯಾಧ್ಯಕ್ಷ ಆಯ್ಕೆಗೆ ಮುಹೂರ್ತ ಫಿಕ್ಸ್ ಆಗಿದ್ದು, ನಿಖಿಲ್ಗೆ ಪಟ್ಟ ಕಟ್ಟುವುದು ಗ್ಯಾರಂಟಿಯಾಗಿದೆ.
ಇನ್ನಷ್ಟು ಕರ್ನಾಟಕ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ