ಟಿಕೆಟ್ ದರ ಏರಿಕೆ ನಿರ್ಧಾರ ಬೆನ್ನಲ್ಲೇ ಸಾರಿಗೆ ನೌಕರರಿಗೆ ಸರ್ಕಾರದಿಂದ ಗುಡ್ ನ್ಯೂಸ್
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕು ನಿಗಮಗಳ ನೌಕರರ 2792 ಕೋಟಿ ರೂಪಾಯಿಗಳ ಪಿಎಫ್ ಹಣವನ್ನು ದುರ್ಬಳಕೆ ಮಾಡಲಾಗಿದೆ ಎಂಬ ಟಿವಿ9 ವರದಿಯ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿಗಳು 2000 ಕೋಟಿ ರೂಪಾಯಿಗಳನ್ನು ಪಿಎಫ್ ಟ್ರಸ್ಟ್‌ಗೆ ಬಿಡುಗಡೆ ಮಾಡಲು ಅನುಮೋದನೆ ನೀಡಿದ್ದಾರೆ. ನಿಗಮಗಳು ಬ್ಯಾಂಕ್‌ನಿಂದ ಸಾಲ ಪಡೆದು ತಕ್ಷಣ ಹಣವನ್ನು ಪಿಎಫ್ ಟ್ರಸ್ಟ್‌ಗೆ ಜಮಾ ಮಾಡಲಿದ್ದು, ಬಳಿಕ ರಾಜ್ಯ ಬಜೆಟ್‌ನಲ್ಲಿ ಈ ಹಣವನ್ನು ಮರುಪಾವತಿ ಮಾಡಲಾಗುವುದು.
ಬೆಂಗಳೂರು ಜನವರಿ 03: ಕರ್ನಾಟಕ ಸಾರಿಗೆಯ (RTC) ನಾಲ್ಕೂ ನಿಗಮದ ನೌಕರರ ಬರೋಬ್ಬರಿ 2792 ಕೋಟಿ ರೂಪಾಯಿ ಪಿಎಫ್ ಹಣವನ್ನು ಅಧಿಕಾರಿಗಳು ದುರ್ಬಳಕೆ ಮಾಡಿದ್ದಾರೆ, ನಿಗಮದ ಖರ್ಚಿಗಾಗಿ ಬಳಕೆ ಮಾಡಿದ್ದಾರೆ ಎಂದು ಟಿವಿ9 ಕಳೆದ ವರ್ಷ ನವೆಂಬರ್ನಲ್ಲಿ ಸುದ್ದಿ ಪ್ರಸಾರ ಮಾಡಿತ್ತು. ಇದೀಗ ನೌಕರರ ಪಿಎಫ್ ಹಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಎರಡು ಸಾವಿರ ಕೋಟಿ ರೂಪಾಯಿ ನೀಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲೂಕೆಆರ್ಟಿಸಿ, ಕೆಕೆಆರ್ಟಿಸಿ ನಾಲ್ಕು ನಿಗಮಗಳ ನೌಕರರ ಪಿಎಫ್ ಹಣ ದುರ್ಬಳಕೆಯಾಗಿರುವ ಬಗ್ಗೆ 2024ರ ನವೆಂಬರ್ 25 ರಂದು ಟಿವಿ9 ಸುದ್ದಿ ಪ್ರಸಾರ ಮಾಡಿತ್ತು. ನಾಲ್ಕು ಸಾರಿಗೆ ನಿಗಮಗಳು 2972 ಕೋಟಿ ರೂ. ನೌಕರರ ಹಣವನ್ನು ಪಿಎಫ್ ಟ್ರಸ್ಟ್‌ಗೆ ಜಮೆ ಮಾಡದ ಬಗ್ಗೆ ಸುದ್ದಿ ಪ್ರಸಾರ ಮಾಡಿತ್ತು. ಟಿವಿ9ನಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಸರ್ಕಾರ, ಸಾರಿಗೆ ಸಿಬ್ಬಂದಿಗಳ ಪಿಎಫ್ ಟ್ರಸ್ಟ್‌ಗೆ ಎರಡು ಸಾವಿರ ಕೋಟಿ ರೂಪಾಯಿ ನೀಡಲು ನಿರ್ಧರಿಸಿದ್ದು, ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಸದ್ಯಕ್ಕೆ ನಾಲ್ಕು ನಿಗಮಗಳು ಬ್ಯಾಂಕ್‌ನಿಂದ ಸಾಲ ಪಡೆದು, ಪಿಎಫ್ ಟ್ರಸ್ಟ್‌ಗೆ ಹಣ ನೀಡಲಿವೆ. ಬಳಿಕ, ಫೆಬ್ರವರಿಯಲ್ಲಿ ಮಂಡನೆಯಾಗುವ ರಾಜ್ಯ ಬಜೆಟ್‌ನಲ್ಲಿ ಎರಡು ಸಾವಿರ ಕೋಟಿ ರೂಪಾಯಿ ಅನುದಾನ ಪಡೆದು, ಅಸಲು ಮತ್ತು ಬಡ್ಡಿ ಸಮೇತ ತೀರಿಸಲಿವೆ.
ಇದನ್ನೂ ಓದಿ: ಕರ್ನಾಟಕದ ಜನರಿಗೆ ಬಿಗ್ ಶಾಕ್ ನೀಡಿದ ಸರ್ಕಾರ: ಬಸ್ ಪ್ರಯಾಣ ದರ ಶೇ 15ರಷ್ಟು ಏರಿಕೆ
ಮುಂದಿನ ಒಂದು ವಾರದಲ್ಲಿ ಯಾವುದಾದರೂ ಬ್ಯಾಂಕ್ಗಳಿಂದ ಸಾರಿಗೆ ಇಲಾಖೆ 2 ಸಾವಿರ ಕೋಟಿ ರೂ. ಸಾಲ ಪಡೆಯಲಿದೆ. ಇದಕ್ಕೆ ರಾಜ್ಯ ಸರ್ಕಾರ ಶೂರಿಟಿಯಾಗಲಿದೆ.
ಎರಡು ಸಾವಿರ ಕೋಟಿ ರೂ.ನಲ್ಲಿ ಯಾವ್ಯಾವ ನಿಗಮಕ್ಕೆ ಎಷ್ಟು ಹಣ?
- ಕೆಎಸ್ಆರ್ಟಿಸಿಗೆ – 623.80 ಕೋಟಿ ರೂ.
- ಬಿಎಂಟಿಸಿಗೆ – 589.20 ಕೋಟಿ ರೂ.
- ಎನ್ಡಬ್ಲೂಕೆಆರ್ಟಿಸಿಗೆ – 646.00 ಕೋಟಿ ರೂ.
- ಕೆಕೆಆರ್ಟಿಸಿಗೆ – 141 ಕೋಟಿ ರೂಪಾಯಿ ಹಣ ಬರಲಿದೆ.
ಈ ಬಗ್ಗೆ ಸಾರಿಗೆ ಮುಖಂಡ ಜಗದೀಶ್ ಮಾತನಾಡಿ, ಟಿವಿ9 ಸುದ್ದಿ ಪ್ರಸಾರದಿಂದ ಎಚ್ಚೆತ್ತ ಸರ್ಕಾರ ಎರಡು ಸಾವಿರ ಕೋಟಿ ರೂ. ನೀಡಲು ಗ್ರೀನ್ ಸಿಗ್ನಲ್ ನೀಡಿದೆ. ಟಿವಿ9ಗೆ ಧನ್ಯವಾದಗಳು ಎಂದು ಹೇಳಿದರು.
ಒಟ್ಟಿನಲ್ಲಿ ಸಾರಿಗೆ ನೌಕರರು ಹೊಟ್ಟೆ, ಬಟ್ಟೆ, ಕಟ್ಟಿ ಸಂಬಳದಲ್ಲಿ ಪಿಎಫ್ ಹಣ ಕಟ್ಟಿರುತ್ತಾರೆ. ಆದರೆ, ಅಧಿಕಾರಿಗಳು ನೌಕರರ ಹಣ ಖರ್ಚು ಮಾಡಿದ್ದ ಬಗ್ಗೆ ಟಿವಿ9 ಸುದ್ದಿ ಪ್ರಸಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಿಎಫ್ ಟ್ರಸ್ಟ್‌ಗೆ ಹಣ ಪಾವತಿ ಮಾಡಲು ಎರಡು ಸಾವಿರ ಕೋಟಿ ರೂಪಾಯಿ ನೀಡುತ್ತಿರುವುದಕ್ಕೆ ನೌಕರರು ಸಂತೋಷಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ