AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಕ್ಕೆಜೋಳ ಖರೀದಿ ವಿಚಾರವಾಗಿ ಡಿಸ್ಟಿಲರಿಗಳಿಗೆ ಪತ್ರ: ಸಿಎಂಗೆ ಈಗ ಜ್ಞಾನೋದಯವಾಯ್ತು ಎಂದ ಜೋಶಿ

ಸಿಎಂ ಸಿದ್ದರಾಮಯ್ಯ ಮೆಕ್ಕೆಜೋಳ ಖರೀದಿಗೆ ಎನ್​ಸಿಸಿಎಫ್, ನಾಫೆಡ್ ಜೊತೆ ಒಪ್ಪಂದ ಮಾಡಿಕೊಳ್ಳಲು ಡಿಸ್ಟಿಲರಿಗಳಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಿಎಂಗೆ ಈಗ ಜ್ಞಾನೋದಯವಾಗಿದೆ ಎಂದು ಟೀಕಿಸಿದ್ದಾರೆ. ಇನ್ನಾದರೂ ಕೇಂದ್ರದತ್ತ ಬೆರಳು ತೋರಿಸುವುದನ್ನು ಬಿಡಲಿ ಎಂದು ಕಿಡಿಕಾರಿದ್ದಾರೆ.

ಮೆಕ್ಕೆಜೋಳ ಖರೀದಿ ವಿಚಾರವಾಗಿ ಡಿಸ್ಟಿಲರಿಗಳಿಗೆ ಪತ್ರ: ಸಿಎಂಗೆ ಈಗ ಜ್ಞಾನೋದಯವಾಯ್ತು ಎಂದ ಜೋಶಿ
ಸಿದ್ದರಾಮಯ್ಯ, ಪ್ರಲ್ಹಾದ್​ ಜೋಶಿ
ಗಂಗಾಧರ​ ಬ. ಸಾಬೋಜಿ
|

Updated on: Nov 23, 2025 | 2:57 PM

Share

ಹುಬ್ಬಳ್ಳಿ, ನವೆಂಬರ್​ 23: ಮೆಕ್ಕೆಜೋಳ ಖರೀದಿಯ ವಿಷಯದಲ್ಲಿ ಎಥೆನಾಲ್ ಉತ್ಪಾದನೆಗಾಗಿ ಮೆಕ್ಕೆಜೋಳದ ಖರೀದಿಗೆ ಎನ್​ಸಿಸಿಎಫ್ (NCCF) ಹಾಗೂ ನಾಫೆಡ್ (NAFED) ನೊಂದಿಗೆ ಒಪ್ಪಂದ ಮಾಡಿಕೊಂಡು ಡಿಸ್ಟಿಲರಿಗಳು ಖರೀದಿ ಮಾಡಿಕೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಸದ್ಯ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್​​ ಜೋಶಿ (Pralhad Joshi), ಕಬ್ಬು ಮತ್ತು ಮೆಕ್ಕೆಜೋಳ ಬೆಳೆಗಾರರ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಈಗ ಜ್ಞಾನೋದಯ ಆದಂತಿದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಎಥೆನಾಲ್ ಉತ್ಪಾದನೆಗಾಗಿ ಮೆಕ್ಕೆಜೋಳ ಖರೀದಿಗೆ NCCF ಮತ್ತು NAFED ಜತೆ ಒಪ್ಪಂದ ಮಾಡಿಕೊಳ್ಳುವಂತೆ ಡಿಸ್ಟಿಲರಿಗಳಿಗೆ ಪತ್ರ ಬರೆಯುವ ಬುದ್ಧಿ ಈಗಲಾದರೂ ಬಂದಿತಲ್ಲ ಎಂದಿರುವ ಜೋಶಿ, ಇಷ್ಟು ದಿನ ಪ್ರತಿಯೊಂದಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುತ್ತಿದ್ದ ಸಿಎಂಗೆ ಈಗ ಜ್ಞಾನೋದಯವಾಗಿದೆ ಎಂದಿದ್ದಾರೆ.

ಸಚಿವ ಪ್ರಲ್ಹಾದ್​​ ಜೋಶಿ ಟ್ವೀಟ್​

ಎಥೆನಾಲ್ ಉತ್ಪಾದನೆಗಾಗಿ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸಿಕೊಳ್ಳಲು NCCF ಮತ್ತು NAFED ನೊಂದಿಗೆ ಒಪ್ಪಂದ ಮಾಡಿಕೊಳ್ಳತಕ್ಕದ್ದೆಂದು ಸಿಎಂ ಇದೀಗ ಡಿಸ್ಟಿಲರಿಗಳಿಗೆ ಪತ್ರ ಬರೆದಿದ್ದಾರೆ. ರಾಜ್ಯ ಸರ್ಕಾರಕ್ಕೆ ತನ್ನ ಕಾರ್ಯದ ಬಗ್ಗೆ ಅರಿವಾದಂತಿದೆ ಎಂದು ಜೋಶಿ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಮೆಕ್ಕೆಜೋಳ ಖರೀದಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ; ಪ್ರಲ್ಹಾದ್ ಜೋಶಿ ಆರೋಪ

ರಾಜ್ಯ ಸರ್ಕಾರ ಹೊಣೆಗಾರಿಕೆ ಮರೆತ ಬಗ್ಗೆ ನಿನ್ನೆ ನಾನು ಮಾಧ್ಯಮದ ಎದುರು ಪ್ರಸ್ತಾಪಿಸಿದ್ದೆ. ಮೆಕ್ಕೆಜೋಳ ಖರೀದಿ ವಿಚಾರವಾಗಿ ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೊರಡಿಸಿರುವ ಮಾರ್ಗಸೂಚಿಗಳನ್ನು (SOP) ಪಾಲಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿತ್ತು. ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆ ರಾಜ್ಯ ಸರ್ಕಾರಕ್ಕೆ ಇದೀಗ ಬುದ್ಧಿ ಬಂದಿದೆ ಎಂದು ಹೇಳಿದ್ದಾರೆ.

ಇನ್ನಾದರೂ ಕೇಂದ್ರದತ್ತ ಬೆರಳು ತೋರದಿರಲಿ

ಸಿಎಂ ಸಿದ್ದರಾಮಯ್ಯ ಇನ್ನಾದರೂ ರೈತರಲ್ಲಿ ಇಲ್ಲ ಸಲ್ಲದ ಗೊಂದಲ ಸೃಷ್ಟಿಸುವುದನ್ನು ಬಿಡಲಿ. ತಮ್ಮ ಸರ್ಕಾರದ ಆಡಳಿತ ವೈಫಲ್ಯ ಮರೆಮಾಚುವುದಕ್ಕಾಗಿ ಕೇಂದ್ರ ಸರ್ಕಾರದತ್ತ ಬೆರಳು ತೋರುವುದನ್ನು ಇಲ್ಲಿಗೆ ನಿಲ್ಲಿಸಲಿ. ರಾಜ್ಯದಲ್ಲಿ ಜನ ಕೊಟ್ಟ ಅಧಿಕಾರವನ್ನು ಜನರಿಗಾಗಿ ಸದ್ವಿನಿಯೋಗ ಆಗುವಂತೆ ಪಾರದರ್ಶಕ ಆಡಳಿತ ನಿರ್ವಹಿಸಲಿ ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.