ಬೆಂಗಳೂರು, ಮೇ 2: ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅಶ್ಲೀಲ ವಿಡಿಯೋ ಪ್ರಕರಣ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಈ ಮಧ್ಯೆ ಸಚಿವ ಆರ್ಬಿ ತಿಮ್ಮಾಪುರ (RB Timmapur) ವಿಜಯಪುರದಲ್ಲಿ (Vijayapura) ನೀಡಿರುವ ಹೇಳಿಕೆ ಕೂಡ ವಿವಾದಕ್ಕೀಡಾಗುತ್ತಿದೆ. ಪ್ರಜ್ವಲ್ರನ್ನು ಭಗವಾನ್ ಶ್ರೀಕೃಷ್ಣನ (Lord Sri Krishna) ಜತೆ ಹೋಲಿಕೆ ಮಾಡಿ ತಿಮ್ಮಾಪುರ ಹೇಳಿಕೆ ನೀಡಿದ್ದಾರೆ. ಶ್ರೀಕೃಷ್ಣನ ದಾಖಲೆಯನ್ನು ಕೂಡ ಮುರಿಯಬೇಕು ಎಂದು ಪ್ರಜ್ವಲ್ ಅಂದುಕೊಂಡಿರಬೇಕು. ಆದರೆ, ಇದು ಗಿನ್ನಿಸ್ ದಾಖಲೆಯಾಗಬಹುದೇನೋ ಎಂದು ಅವರು ಹೇಳಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಈಗ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಈ ಪೆನ್‌ಡ್ರೈವ್ ಪ್ರಕರಣವನ್ನು ನೋಡಿದರೆ ದೇಶದಲ್ಲಿ ಇದಕ್ಕಿಂತ ಕೆಟ್ಟದ್ದೇನೂ ನಡೆದಿಲ್ಲ ಎಂಬಂತೆ ಭಾಸವಾಗುತ್ತಿದೆ. ಇದು ಗಿನ್ನಿಸ್ ದಾಖಲೆ ಮಾಡಬಹುದು. ಭಗವಾನ್ ಶ್ರೀಕೃಷ್ಣನ ಭಕ್ತಿಭಾವಕ್ಕೆ ಸ್ತ್ರೀಯರು ಪರವಶರಾಗುತ್ತಿದ್ದರು. ಆದರೆ, ಈ ಪ್ರಕರಣದಲ್ಲಿ ಹಾಗಲ್ಲ. ಕೃಷ್ಣನ ದಾಖಲೆಯನ್ನು ಮುರಿಯಲು ಪ್ರಜ್ವಲ್ ಬಯಸಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ತಿಮ್ಮಾಪುರ ಹೇಳಿದ್ದರು.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವಿಚಾರವಾಗಿ ತನಿಖೆಗೆ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡಿದ್ದು, ಸದ್ಯ ವಿದೇಶದಲ್ಲಿರುವ ಪ್ರಜ್ವಲ್ ವಿರುದ್ಧ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ತಿಳಿಸಿದ್ದಾರೆ.
ವಿಜಯಪುರ ಎಸ್ಸಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜೂ ಆಲಗೂರು ಪರ ಚುನಾವಣಾ ಪ್ರಚಾರ ನಡೆಸಿದ ವೇಳೆ ತಿಮ್ಮಾಪುರ ಈ ಹೇಳಿಕೆ ನೀಡಿದ್ದಾರೆ. ವಿಜಯಪುರ ನಗರದ ಪಾಟೀಲ್ ಗಾರ್ಡೇನಿಯಾದಲ್ಲಿ ಸಭೆ ನಡೆಸಿದ ಅವರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ದ ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಸರ್ಕಾರದ ಕೊಡುಗೆಗಳಿಗೆ ಜನರು ಮೆಚ್ಚಿದ್ದಾರೆ. ನಮ್ಮ ಯೋಜನೆಗಳ ಕಾರಣ ಜನರು ಕಾಂಗ್ರೆಸ್ ಪರವಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟಿಸ್, ಏನಿದು ನೋಟಿಸ್? ಪ್ರಜ್ವಲ್ ಮೇಲಾಗುವ ಪರಿಣಾಮವೇನು?
ಬಿರು ಬೇಸಿಗೆ ಹಾಗೂ ತಾಪಮಾನ ಏರಿಕೆಯಿಂದ ಬಿಯರ್ ದರ ಏರಿಕೆ ಹಾಗೂ ಬೇಡಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಯರ್ ಬೇಡಿಕೆ ಹೆಚ್ಚಿದ್ದನ್ನು ಅಂಕಿ ಅಂಶ ನೋಡಿ ಹೇಳುತ್ತೇನೆ. ಬಿಯರ್ ದರ ಏರಿಕೆಯಾಗಿಲ್ಲ, ಅದು ಮೊದಲಿನಂತೆಯೇ ಇದೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ