ಇಂದಿನಿಂದ ಆಂಬ್ಯುಲೆನ್ಸ್​ ಸೇವೆ ಬಂದ್​​? ರಾಜ್ಯ ಸರ್ಕಾರಕ್ಕೆ ಕಿವಿ ಹಿಂಡಿದ ಕುಮಾರಸ್ವಾಮಿ

ಆರೋಗ್ಯ ಕವಚ ಅಡಿಯಲ್ಲಿ ರಾಜ್ಯದಲ್ಲಿ 710 ಆಂಬ್ಯುಲೆನ್ಸ್​ಗಳು ಕಾರ್ಯನಿರ್ವಹಿಸುತ್ತಿದ್ದು, 3600 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಿಬ್ಬಂದಿಗೆ ಕಳೆದ 3 ತಿಂಗಳಿಂದ ಸರ್ಕಾರ ವೇತನ ನೀಡಿಲ್ಲ. ಇದರಿಂದ ಜಿವಿಕೆ ಮತ್ತು ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ 108 ಆಂಬ್ಯಲೆನ್ಸ್​ ಸಿಬ್ಬಂದಿ ಇಂದಿನಿಂದ ಕೆಲಸಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾರೆ.

ಇಂದಿನಿಂದ ಆಂಬ್ಯುಲೆನ್ಸ್​ ಸೇವೆ ಬಂದ್​​? ರಾಜ್ಯ ಸರ್ಕಾರಕ್ಕೆ ಕಿವಿ ಹಿಂಡಿದ ಕುಮಾರಸ್ವಾಮಿ
108 ಆಂಬುಲೆನ್ಸ್‌
Follow us
|

Updated on:May 06, 2024 | 2:06 PM

ಬೆಂಗಳೂರು, ಮೇ 06: ಆರೋಗ್ಯ ಕವಚ 108 ಆಂಬುಲೆನ್ಸ್‌ (108 Ambulance) ಸಿಬ್ಬಂದಿಗೆ ಕಳೆದ ಮೂರು ತಿಂಗಳಿನಿಂದ ವೇತನ ನೀಡಿಲ್ಲ. ಇದರಿಂದ ಆಂಬುಲೆನ್ಸ್‌ ಸಿಬ್ಬಂದಿ ಕುಟುಂಬ ನಿರ್ವಹಣೆಗೂ ಪರದಾಡುತ್ತಿದ್ದಾರೆ. ಜಿವಿಕೆ (GVK) ಎಂಬ ಸಂಸ್ಥೆಯಡಿ 710 ಆಂಬುಲೆನ್ಸ್ ಕಾರ್ಯನಿರ್ವಹಿಸುತ್ತಿದ್ದು, ಅಂದಾಜು 3,600 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಜಿವಿಕೆ ಮತ್ತು ಸರ್ಕಾರದ ವಿರುದ್ಧ ಸಿಬ್ಬಂದಿ ತಿರುಗಿಬಿದ್ದಿದ್ದು, ಇಂದು (ಮೇ 06) ರಾತ್ರಿ 8 ಗಂಟೆಯಿಂದ ಆಂಬ್ಯುಲೆನ್ಸ್​ ಸೇವೆ ಸ್ಥಗಿತಗೊಳ್ಳಲಿದೆ.

ಕೊರೊನಾ ನಂತರ ಸಿಬ್ಬಂದಿಗೆ ಹಲವು ಬಾರಿ ವೇತನ ಪಾವತಿ ಸಮಸ್ಯೆಯಾಗುತ್ತಲೇ ಇತ್ತು. 2022 ಸೆಪ್ಟೆಂಬರ್‌ನಲ್ಲಿ ಸಿಬ್ಬಂದಿ ನ್ಯಾಯಾಲಯದ ಮೊರೆ ಹೋಗಿದ್ದರು. ಕರ್ತವ್ಯ ನಿಲ್ಲಿಸಿ ಮುಷ್ಕರ ನಡೆಸಿದ ನಂತರ ಸಂಬಳ ನೀಡಿದ್ದರು. ಆದರೆ, ಮುಂದಿನ ಎರಡು ತಿಂಗಳಲ್ಲಿ ಸರಿಯಾಗಿ ವೇತನ ಪಾವತಿಯಾಯಿತು. ನಂತರ ಮತ್ತೆ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಈ ವಿಚಾರ ತಿಳಿಯುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಟ್ವೀಟ್​ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರಾಜ್ಯ ಕಾಂಗ್ರೆಸ್​ ಸರಕಾರಕ್ಕೆ ಜನರಿಗಿಂತ ಜನಪ್ರಿಯತೆಯ ವ್ಯಸನವೇ ಹೆಚ್ಚು. ಬರ ನಿರ್ವಹಣೆಗಿಂತ ಬೇಜವಾಬ್ದಾರಿಯೇ ಜಾಸ್ತಿ. ಗ್ಯಾರಂಟಿ ಕೊಟ್ಟು ಜನರ ಬದುಕು ಹಸನು ಮಾಡಿದ್ದೇವೆನ್ನುವ ಇವರಿಗೆ 108 ಆಂಬುಲೆನ್ಸ್ ಚಾಲಕರಿಗೆ ಸಂಬಳ ಕೊಡಲಿಕ್ಕೂ ಹಣವಿಲ್ಲ! ತಮ್ಮ ಜೀವ ಪಣಕ್ಕಿಟ್ಟು ಜನರ ಜೀವ ರಕ್ಷಿಸುವ ಈ ಚಾಲಕರಿಗೆ ಸಂಬಳದ ಗ್ಯಾರಂಟಿ ಕೊಡಲು ಸಾಧ್ಯವಾಗಿಲ್ಲ. 3 ತಿಂಗಳಿಂದ ಅವರಿಗೆ ವೇತನ ಪಾವತಿ ಮಾಡಿಲ್ಲ ಎಂದರೆ ನಾಚಿಕೆಗೇಡು!” ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ರಾಜ್ಯದ ‘108’ ಸೇವೆಗೆ 262 ಆಂಬುಲೆನ್ಸ್​ಗಳ ಸೇರ್ಪಡೆ

“ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಷಣ ಬಿಗಿದಿದ್ದಾರೆ. “ರಾಜ್ಯದ ಒಬ್ಬನೇ ಒಬ್ಬ ಸರಕಾರಿ ನೌಕರ ನನ್ನ ಬಳಿ ಬಂದು ಸಂಬಳ ಪಾವತಿಯಾಗಿಲ್ಲ ಎಂದು ಹೇಳಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ” ಎಂದು ಗುಡುಗಿದ್ದರು. ಹಾಗಾದರೆ, ಮಾನ್ಯ ಸಿದ್ದರಾಮಯ್ಯನವರೇ.. ನೀವು ರಾಜೀನಾಮೆ ನೀಡುವುದು ಯಾವಾಗ? ಕುರ್ಚಿ ಬಿಡುವ ಮೊದಲು ಆಂಬುಲೆನ್ಸ್ ಚಾಲಕರಿಗೆ ವೇತನ ಕೊಡಿಸಿ” ಎಂದು ಹರಿಹಾಯ್ದರು.

ವೇತನ ಪಾವತಿ ಸಂಬಂಧ ಆಂಬ್ಯುಲೆನ್ಸ್​ ಸಿಬ್ಬಂದಿ ಜೊತೆ ಆರೋಗ್ಯ ಇಲಾಖೆ ಸಭೆ ನಡೆಸಿದೆ. ಇಲಾಖೆ ಸಂಜೆ 6 ಗಂಟೆಯವರೆಗೂ ಕಾಲಾವಕಾಶ ಕೇಳಿದೆ. ಇಲಾಖೆಯ ಏನು ತೀರ್ಮಾನ ಕೈಗೊಳ್ಳುತ್ತೆ ಅಂತ ನೋಡಿಕೊಂಡು ಆಂಬ್ಯುಲೆನ್ಸ್​ ಸಿಬ್ಬಂದಿ ಮುಂದಿನ ಹೆಜ್ಜೆ ಇಡುತ್ತಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:02 pm, Mon, 6 May 24