ಬೆಂಗಳೂರು, ಮೇ 2: ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ ಸಹೋದರರದ್ದು ‘420 ಕುಟುಂಬ’ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ಡಿಕೆ ಸುರೇಶ್ (DK Suresh) ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಅವರ ಕುಟುಂಬವನ್ನು 420 ಎಂದು ಕರೆಯುವುದಿಲ್ಲ. ಏಕೆಂದರೆ ಅದು ಮಾಜಿ ಪ್ರಧಾನಿಗಳ ಕುಟುಂಬ. ಅವರ ಕುಟುಂಬ, ಅಭಿಮಾನಿಗಳಿಗೆ ಬೇಸರ ಆಗಬಹುದು. ದೇವೇಗೌಡರ ಕುಟುಂಬದ ಆಸ್ತಿ ಪೆನ್ಡ್ರೈವ್ ಎಂದು ವ್ಯಂಗ್ಯವಾಡಿದರು.
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಕುಟುಂಬದ ಆಸ್ತಿ ಪೆನ್ಡ್ರೈವ್ ಆಗಿದೆ. ಇನ್ನು ತೆನೆ ಹೊತ್ತ ಮಹಿಳೆ ಪೆನ್ಡ್ರೈವ್ ಹೊರಬೇಕಾಗುತ್ತದೆ. ಇದು ಪೆನ್ಡ್ರೈವ್ ಕುಟುಂಬ ಎಂದು ಡಿಕೆ ಸುರೇಶ್ ಲೇವಡಿ ಮಾಡಿದರು.
ಎಲ್ಲವನ್ನೂ ದೇಶ ಹಾಗೂ ರಾಜ್ಯದ ಜನ ಗಮನಿಸುತ್ತಿದ್ದಾರೆ. ಬೇಕಿದ್ದರೆ ಅವರಿಗೆ ಮನಸ್ಸಿಗೆ ಬಂದಹಾಗೆ ಬೈದುಕೊಳ್ಳಲಿ. ಹಾಸನದ ಹೆಣ್ಮಕ್ಕಳ ಮರ್ಯಾದೆ ಉಳಿಸಬೇಕು ಅಷ್ಟೇ. ನಾವು ಅವರನ್ನ ಕೆಣಕಿಲ್ಲ ಎಂದು ಸುರೇಶ್ ಹೇಳಿದರು.
ಪೆನ್ಡ್ರೈವ್ ಬಿಡುಗಡೆ ಮಾಡಿದ್ದು ಅವರದೇ ಮೈತ್ರಿ ಪಾರ್ಟರ್ನರ್. ಅವರ ಬಗ್ಗೆ ಮಾತನಾಡುವುದಕ್ಕೆ ಕುಮಾರಸ್ವಾಮಿಗೆ ಧೈರ್ಯ ಇಲ್ಲ. ಹಾಗಾಗಿ ನಮ್ಮ ಮೇಲೆ ಮಾತನಾಡುತ್ತಿದ್ದಾರೆ ಎಂದು ಸುರೇಶ್ ಕಿಡಿ ಕಾರಿದರು.
ಪ್ರಜ್ವಲ್ ರೇವಣ್ಣನ ಡ್ರೈವರ್ ಆಗಿದ್ದ ಕಾರ್ತಿಕ್ನನ್ನ ಮಲೆಷ್ಯಾಗೆ ಕಳಿಸಿದ್ಯಾರು ಎಂದು ಪ್ರಶ್ನಿಸಿದ್ದ ಕುಮಾರಸ್ವಾಮಿ, ಆತ ವಿಡಿಯೋ ಬಿಡುಗಡೆ ಮಾಡಿದ್ದಾನಲ್ಲವೇ? ಆತ ಮಾತನಾಡಿರುವ ವಿಡಿಯೋ ಯಾರು ಮಾಡಿಸಿದ್ದು? ಅವನ ಕೈಯಲ್ಲಿ ವಿಡಿಯೋ ಬಿಡುಗಡೆ ಮಾಡಿಸದರು. ಆತ ದೇವರಾಜೇಗೌಡ ಕೈಯಲ್ಲಿ ಪೆನ್ಡ್ರೈವ್ ಕೊಟ್ಟಿದ್ದೆ ಎಂದು ಹೇಳಿದ್ದ. ಆದರೆ, ಈಗ ಈ ಚಿಲ್ಲರೆ ಸಹೋದರರು ಕುಮಾರಸ್ವಾಮಿನೇ ಬಿಟ್ಟಿರಬೇಕು ಎಂದು ಹೇಳಿಕೆ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಕಾರ್ತಿಕ್ನ ಮಲೆಷ್ಯಾಗೆ ಕಳಿಸಿದ್ಯಾರು? ನನ್ನ ಕೆಣಿಕಿದ್ದಾರೆ ಸುಮ್ಮನೆ ಬಿಡಲ್ಲ: ಕುಮಾರಸ್ವಾಮಿ ರೋಷಾವೇಶ
ಮುಂದುವರಿದು, ದೇವರಾಜೇಗೌಡ ಮೊದಲು ನನ್ನನ್ನು ಭೇಟಿಯಾಗಿದ್ದಾನೆಂದು ಈ 420ಗಳು ಹೇಳಿದ್ದಾರೆ. ಎಲ್ಲಿಂದ ವಿಡಿಯೋ ಮಾಡಿ ಬಿಟ್ಟಿದ್ದಾನೆ ಅದನ್ನು ಮೊದಲು ತಿಳಿದುಕೊಳ್ಳಿ. ಸುಲಭವಾಗಿ ನಮ್ಮನು ಕೆಣಕಿದರೆ ನಾವು ಸುಮ್ಮನೇ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ