ಜಲಾಶಯಗಳಲ್ಲಿ ನೀರಿನ ಮಟ್ಟ ಭಾರಿ ಇಳಿಕೆ: ಒಟ್ಟು ಸಂಗ್ರಹ ಸಾಮರ್ಥ್ಯದ ಶೇ 25ರಷ್ಟೂ ಇಲ್ಲ ನೀರು

ರಾಜ್ಯದಲ್ಲಿ ಬಿಸಿಲಿನ ಬೇಗೆ ಮೇರೆ ಮೀರಿದ್ದು, ನೀರಿನ ಅಭಾವ ಕೂಡ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ, ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಪ್ರಮಾಣ ಭಾರಿ ಕಡಿಮೆಯಾಗಿರುವುದು ತಿಳಿದು ಬಂದಿದೆ. ಸಂಗ್ರಹ ಸಾಮರ್ಥ್ಯಕ್ಕೆ ಹೋಲಿಸಿದರೆ ರಾಜ್ಯದ ಬಹುತೇಕ ಎಲ್ಲ ಜಲಾಶಯಗಳಲ್ಲಿ ಮಟ್ಟ ಬಹಳ ಕಡಿಮೆಯಾಗಿದೆ.

ಜಲಾಶಯಗಳಲ್ಲಿ ನೀರಿನ ಮಟ್ಟ ಭಾರಿ ಇಳಿಕೆ: ಒಟ್ಟು ಸಂಗ್ರಹ ಸಾಮರ್ಥ್ಯದ ಶೇ 25ರಷ್ಟೂ ಇಲ್ಲ ನೀರು
ಜಲಾಶಯಗಳಲ್ಲಿ ನೀರಿನ ಮಟ್ಟ ಭಾರಿ ಇಳಿಕೆ
Follow us
Ganapathi Sharma
|

Updated on: Apr 26, 2024 | 11:25 AM

ಬೆಂಗಳೂರು, ಏಪ್ರಿಲ್ 26: ಮಳೆ ಕೊರತೆ, ಭೀಕರ ಬರ ಮತ್ತು ಬಿಸಿಲಿನ ತೀವ್ರೆತಿಂದಾಗಿ ರಾಜ್ಯದ (Karnataka) ಪ್ರಮುಖ ಜಲಾಶಯಗಳಲ್ಲಿ (Reservoirs) ನೀರಿನ ಮಟ್ಟವು ಅವುಗಳ ಒಟ್ಟು ಸಂಗ್ರಹ ಸಾಮರ್ಥ್ಯದ ಶೇ 25 ಕ್ಕಿಂತಲೂ ಕಡಿಮೆಯಾಗಿರುವುದು ತಿಳಿದುಬಂದಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ರಾಜ್ಯದ 14 ಪ್ರಮುಖ ಜಲಾಶಯಗಳು ಈಗ 217.75 ಟಿಎಂಸಿ ಅಡಿ ನೀರನ್ನು ಹೊಂದಿವೆ. ಅವುಗಳ ಒಟ್ಟು ಸಂಗ್ರಹ ಸಾಮರ್ಥ್ಯ 895.62 ಟಿಎಂಸಿ ಅಡಿ. ಹಾಗಾಗಿ ಈಗಿನ ಸಂಗ್ರಹ ಒಟ್ಟು ಸಂಗ್ರಹ ಸಾಮರ್ಥ್ಯದ ಶೇ 25ಕ್ಕಿಂತ ಕಡಿಮೆಯಾಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ರಾಜ್ಯದ ಜಲಾಶಯಗಳಲ್ಲಿ 269 ಟಿಎಂಸಿ ಅಡಿ ನೀರು ಇತ್ತು. ತುಂಗಭದ್ರೆಯಲ್ಲಿ 105.79 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದರೆ 3.77 ಟಿಎಂಸಿ ಅಡಿ ನೀರು ಇದೆ. ಕೆಆರ್​ಎಸ್ ಮತ್ತು ಕಬಿನಿಯಲ್ಲಿ ಕ್ರಮವಾಗಿ 11.74 ಟಿಎಂಸಿ ಅಡಿ ಮತ್ತು 7.72 ಟಿಎಂಸಿ ಅಡಿ ನೀರು ಇದ್ದು, ಇವುಗಳ ಒಟ್ಟು ಸಂಗ್ರಹ ಸಾಮರ್ಥ್ಯ ಕ್ರಮವಾಗಿ 49.45 ಟಿಎಂಸಿ ಅಡಿ ಮತ್ತು 19.52 ಟಿಎಂಸಿ ಅಡಿ ಆಗಿದೆ.

ಸಾಮಾನ್ಯವಾಗಿ ಮಾರ್ಚ್‌ನಿಂದ ಮೇ ವರೆಗೆ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತದೆ. ಜಲಾಶಯಗಳು ವರ್ಷಕ್ಕೆ ಎರಡು ಬಾರಿ, ಆಗಸ್ಟ್ ಮತ್ತು ಅಕ್ಟೋಬರ್ ಅಥವಾ ನವೆಂಬರ್​​ನಲ್ಲಿ ತುಂಬಿರುತ್ತವೆ. ಇದರಿಂದ ರೈತರಿಗೆ ವರ್ಷದಲ್ಲಿ ಎರಡು ಬೆಳೆ ತೆಗೆಯಲು ಅನುಕೂಲವಾಗುತ್ತದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ಮಾಜಿ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ. ಆದರೆ, ಈ ವರ್ಷ ಒಮ್ಮೆ ಮಾತ್ರ ಜಲಾಶಯಗಳು ಭರ್ತಿಯಾಗಿದ್ದವು. ಅಲ್ಲದೆ ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಜಲಾಶಯಗಳ ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. ಈ ಎಲ್ಲಾ ಅಂಶಗಳು ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಲು ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದ 11ಕ್ಕೂ ಅಧಿಕ ಜಿಲ್ಲೆಗಳಲ್ಲಿ ಏಪ್ರಿಲ್ 29ರಿಂದ 3 ದಿನ ಮಳೆ, ಯೆಲ್ಲೋ ಅಲರ್ಟ್​

ಬಿಸಿಲಿನ ಬೇಗೆಯಿಂದ ಆವಿಯಾಗುವಿಕೆಯ ಮೂಲಕವೂ ನೀರು ನಷ್ಟವಾಗುತ್ತದೆ. ಈ ಬಾರಿ ಬಿರು ಬೇಸಿಗೆಯಿಂದಾಗಿ ನಷ್ಟವೇ ಹೆಚ್ಚು. ಕರ್ನಾಟಕವು ಏಪ್ರಿಲ್‌ನಲ್ಲಿ ಸುಮಾರು 50 ಮಿಮೀ ಮಳೆಯನ್ನು ಪಡೆಯುತ್ತದೆ, ಆದರೆ ಆವಿಯಾಗುವಿಕೆಯಿಂದ ದಿನಕ್ಕೆ ಸುಮಾರು 5 ಮಿಮೀ ನಷ್ಟವಾಗುತ್ತದೆ. ಇದರರ್ಥ ತಿಂಗಳಿಗೆ 150 ಮಿಮೀ ನೀರು ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ