AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಕೆಲಸಕ್ಕೆ ಜನ ನೇಮಿಸೋದಾದ್ರೂ ಪಾವತಿಸಬೇಕು ಶೇ 5 ಶುಲ್ಕ! ಬರಲಿದೆ ಹೊಸ ಕಾನೂನು

ಗೃಹ ಕೆಲಸಗಳ ಕಾರ್ಮಿಕರ ಸಂಘಟನೆ ಮತ್ತು ಅವರ ಸಾಮಾಜಿಕ ಭದ್ರತೆ ನಿಟ್ಟಿನಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಮಹತ್ವದ ಮಸೂದೆ ರೂಪಿಸುವ ಸುಳಿವು ನೀಡಿದೆ. ಮನೆ ಕೆಲಸದವರ ನೇಮಕ ಮಾಡಿದರೆ ಶೇ 5ರ ಕಲ್ಯಾಣ ಶುಲ್ಕ ವಿಧಿಸುವ ಬಗ್ಗೆ ಮಸೂದೆ ರೂಪಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಮನೆ ಕೆಲಸಕ್ಕೆ ಜನ ನೇಮಿಸೋದಾದ್ರೂ ಪಾವತಿಸಬೇಕು ಶೇ 5 ಶುಲ್ಕ! ಬರಲಿದೆ ಹೊಸ ಕಾನೂನು
ಸಾಂದರ್ಭಿಕ ಚಿತ್ರ
Ganapathi Sharma
|

Updated on:Sep 22, 2025 | 10:58 AM

Share

ಬೆಂಗಳೂರು, ಸೆಪ್ಟೆಂಬರ್ 22: ಮನೆ ಕೆಲಸಗಳಿಗೆ ಸೇರುವ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಸಂಘಟನೆ ಖಾತರಿಪಡಿಸುವ ನಿಟ್ಟಿನಲ್ಲಿ ಉದ್ಯೋಗದಾತರಿಗೆ ಶೇ 5ರ ಕಲ್ಯಾಣ ಶುಲ್ಕ ವಿಧಿಸುವ ಗೃಹ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆ (Domestic Workers Social Security and Welfare Bill, 2025) ರೂಪಿಸಲು ಕರ್ನಾಟಕ (Karnataka) ಸರ್ಕಾರ ಮುಂದಾಗಿರುವ ಬಗ್ಗೆ ವರದಿಯಾಗಿದೆ. ಇದು ಅಸಂಘಟಿತ ವಲಯದ ಗೃಹ ಕೆಲಸಗಳ ಕಾರ್ಮಿಕರ ಹಿತದೃಷ್ಟಿಯ ನಿಟ್ಟಿನಲ್ಲಿ ಮಹತ್ವದ್ದಾಗಲಿದೆ. ಇತ್ತೀಚೆಗಷ್ಟೇ ಸರ್ಕಾರವು ಗಿಗ್ ವರ್ಕರ್ಸ್ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆಗೆ ಮುಂಗಾರು ಅಧಿವೇಶನದಲ್ಲಿ ಅನುಮೋದನೆ ಪಡೆದಿತ್ತು. ಇದೀಗ ಗೃಹ ಕಾರ್ಮಿಕರ ಹಿತದೃಷ್ಟಿಯ ನಿಟ್ಟಿನಲ್ಲಿ ಮಹತ್ವದ ಕ್ರಮಕ್ಕೆ ಮುಂದಾಗಿದೆ.

ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಸೂದೆಯ ಉದ್ದೇಶವೇನು?

ಗೃಹ ಕಾರ್ಮಿಕರಿಗೆ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆಯಂತಹ ಪ್ರಮುಖ ಭದ್ರತೆಗಳನ್ನು ಒದಗಿಸುವುದೇ ಗೃಹ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಮಸೂದೆಯ ಪ್ರಮುಖ ಉದ್ದೇಶ. ಮಸೂದೆ ಜಾರಿಗೆ ಬಂದರೆ, ಮನೆಗಳಲ್ಲಿ ಕೆಲಸ ಮಾಡುವವರು, ಸೇವಕಿಯರು, ಅಡುಗೆಯವರು, ಚಾಲಕರು, ದಾದಿಯರು ಮತ್ತು ಇತರರು ಸರ್ಕಾರಕ್ಕೆ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಮನೆಕೆಲಸಗಾರರನ್ನು ನೇಮಿಸಿಕೊಳ್ಳುವವರು, ಮಸೂದೆಯ ಅಧೀನದಲ್ಲಿ ಸ್ಥಾಪಿಸಲಾಗುವ ಕಲ್ಯಾಣ ನಿಧಿಗೆ ವೇತನದ ಶೇ 5 ರಷ್ಟನ್ನು ಪಾವತಿಸಬೇಕಾಗುತ್ತದೆ. ಇದರೊಂದಿಗೆ, ಗೃಹ ಕೆಲಸದ ಕಾರ್ಮಿಕರಿಗೂ ವೇತನ ಭದ್ರತೆ, ಕೆಲಸದ ಸಮಯ ಇತ್ಯಾದಿ ಚೌಕಟ್ಟು ರೂಪಿತಗೊಳ್ಳಲಿದೆ.

ವರದಿಗಳ ಪ್ರಕಾರ, ಮಸೂದೆಯು ಗೃಹ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲು ಒಂದು ಚೌಕಟ್ಟನ್ನು ನಿಗದಿಪಡಿಸಲಿದೆ. ಮುಖ್ಯವಾಗಿ ಮಹಿಳಾ ಕಾರ್ಮಿಕರ ಹಿತವನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ಜತೆಗೆ, ಗೃಹ ಕೆಲಸಗಾರರ ನೋಂದಣಿಗೆಂದೇ ಆರಂಭಿಸಲಾಗುವ ವೆಬ್​ಸೈಟ್​​ನಲ್ಲಿ ಕೆಲಸಕ್ಕೆ ಸೇರಿದ 30 ದಿನಗಳ ಒಳಗಾಗಿ ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ. ಇದು ಕಡ್ಡಾಯವೂ ಆಗಿರಲಿದೆ.

ಇದನ್ನೂ ಓದಿ: ಸ್ವಿಗ್ಗಿ, ಜೊಮಾಟೊನಂತಹ ಗಿಗ್‌ ಕಾರ್ಮಿಕರಿಗೆ ಸಿಹಿ ಸುದ್ದಿ; ಜೀವ, ಅಪಘಾತ ವಿಮೆ ಜಾರಿಗೊಳಿಸಿದ ಸರ್ಕಾರ

ನೋಂದಾಯಿತ ಗೃಹ ಕಾರ್ಮಿಕರು ಕನಿಷ್ಠ ವೇತನಕ್ಕೆ ಅರ್ಹರಾಗಿರಲಿದ್ದಾರೆ. ಅಲ್ಲದೆ, ಓವರ್ ಟೈಂ ಡ್ಯೂಟಿ ವೇತನ, ಮಾತೃತ್ವ ಸೌಲಭ್ಯಗಳು, ಸಾಪ್ತಾಹಿಕ ರಜಾದಿನಗಳು, ವೈದ್ಯಕೀಯ ಮರುಪಾವತಿ, ಶಿಕ್ಷಣ ಬೆಂಬಲ ಮತ್ತು ಕೆಲಸದ ಸ್ಥಳದಲ್ಲಿ ಗಾಯಗೊಂಡರೆ ಪರಿಹಾರವನ್ನು ಪಡೆಯಲು ಅರ್ಹರಾಗಿರುತ್ತಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:16 am, Mon, 22 September 25