ಹೈಕಮಾಂಡ್ ಡೋಂಟ್ ಕೇರ್:ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಡಿಕೆಶಿ ಬಣ ದಿಲ್ಲಿಯಿಂದ ವಾಪಸ್

ಕಳೆದ ಐದಾರು ದಿನಗಳಿಂದ ನಡೆಯುತ್ತಿರುವ ರಾಜ್ಯ ಬೆಳವಣಿಗೆ ಕೊಂಚ ತಣ್ಣಗಾದಂತೆ ಕಾಣುತ್ತಿದೆ. ಕಾರಣ ಡಿಕೆ ಶಿವಕುಮಾರ್ ಮಾತಿನ ವರಸೆ. ಹೌದು...ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಕೆಲಸ ಮಾಡ್ತೀವಿ, ಅವರು ಪಕ್ಷಕ್ಕೆ ದೊಡ್ಡ ಆಸ್ತಿ ಎಂದು ಸಾಫ್ಟ್​ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಅತ್ತ ದೆಹಲಿಯಲ್ಲಿ ಡಿಕೆ ಶಿವಕುಮಾರ್ ಪರವಾಗಿ ಹೈಕಮಾಂಡ್ ನಾಯಕರ ಮುಂದೆ ಪರೇಡ್ ನಡೆಸಲು ಯತ್ನಿಸಿದ್ದ ಶಾಸಕರ ಬಣವೂ ಸಹ ಬರಿಗೈನಲ್ಲಿ ವಾಪಸ್ ಆಗಿದ್ದಾರೆ.

ಹೈಕಮಾಂಡ್ ಡೋಂಟ್ ಕೇರ್:ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಡಿಕೆಶಿ ಬಣ ದಿಲ್ಲಿಯಿಂದ ವಾಪಸ್
Dk Shivakumar Camp Mlas

Updated on: Nov 25, 2025 | 3:08 PM

ಬೆಂಗಳೂರು, (ನವೆಂಬರ್ 24): ಕರ್ನಾಟಕದಲ್ಲಿ (Karnataka)  ಸಿಎಂ ಕುರ್ಚಿಗಾಗಿ ಕಳೆದ ಐದಾರು ದಿನಗಳಿಂದ ನಡೆಯುತ್ತಿರುವ ರಾಜಕೀಯ ಕದನ ಕೊಂಚ ತಣ್ಣಗಾದಂತೆ ಕಾಣುತ್ತಿದೆ. ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ (DK Shivakumar) ಬಣ ಕಿತ್ತಾಟಕ್ಕೆ ಬ್ರೇಕ್ ಬಿದ್ದಂತೆ ಕಾಣುತ್ತಿದೆ. ಯಾಕಂದ್ರೆ ಸಿಎಂ ಪಟ್ಟಕ್ಕಾಗಿ ಹಠಕ್ಕೆ ಬಿದ್ದ ಡಿಕೆ ಶಿವಕುಮಾರ್, ಇದೀಗ ಏಕಾಏಕಿ ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಕೆಲಸ ಮಾಡ್ತೀವಿ, ಅವರು ಪಕ್ಷಕ್ಕೆ ದೊಡ್ಡ ಆಸ್ತಿ ಎಂದು ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಅತ್ತ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ಡಿಕೆ ಶಿವಕುಮಾರ್ ಬಣದ ಶಾಸಕರು ಸಹ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಹೈಕಮಾಂಡ್ ನಾಯಕರು ಸೊಪ್ಪು ಹಾಕದಿರುವುದರಿಂದ ಡಿಕೆಶಿ ಬಣ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬರಿಗೈನಲ್ಲಿ ನಿರಾಸೆಯಿಂದ ಬೆಂಗಳೂರಿಗೆ ಆಗಮಿಸಿದೆ. ಹೀಗಾಗಿ ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವಿನ ಕುರ್ಚಿ ಕದನ ಸೈಲೆಂಟ್ ಆಯ್ತಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಡಿಕೆಶಿ ಬಣ ದಿಲ್ಲಿಯಿಂದ ವಾಪಸ್

ಮೊನ್ನೆ ಮೊನ್ನೆಯಷ್ಟೇ ಡಿಕೆ ಬೆಂಬಲಿತ ಶಾಸಕರ ಒಂದು ಗುಂಪು ದೆಹಲಿಗೆ ಹೋಗಿ ತೆರಳಿತ್ತು. ಬಳಿಕ ನಿನ್ನೆ ತಡರಾತ್ರಿ 6 ಶಾಸಕರ 2ನೇ ಟೀಂ ದೆಹಲಿಗೆ ತೆರಳಿತ್ತು. ಮಾಗಡಿ ಶಾಸಕ H.C ಬಾಲಕೃಷ್ಣ, ಕದಲೂರು ಉದಯ್, ಶಿವಗಂಗಾ ಬಸವರಾಜ್, ಇಕ್ಬಾಲ್ ಹುಸೇನ್​, ಶಾಸಕಿ ನಯನ ಮೋಟಮ್ಮ, ಹೊಸಕೋಟೆ ಶಾಸಕ ಶರತ್​ ಬಚ್ಚೇಗೌಡ ಇರುವ 2ನೇ ಟೀಂ ದೆಹಲಿಯ ಖಾಸಗಿ ಹೋಟೆಲ್​ನಲ್ಲಿ ಸಭೆ ನಡೆಸಿದ್ದು, ಹೈಕಮಾಂಡ್​ ನಾಯಕರ ಭೇಟಿಗೆ ಕಸರತ್ತು ನಡೆಸಿತ್ತು. ಆದ್ರೆ, ಹೈಕಮಾಂಡ್ ನಾಯಕರು ಸಿಗದಿದ್ದರಿಂದ ಡಿಕೆ ಬಣ ನಿರಾಸೆಯಿಂದ ಬೆಂಗಳೂರಿಗೆ ವಾಪಸ್ ಆಗಿದೆ.

ಇದನ್ನೂ ಓದಿ: ಕುರ್ಚಿ ಕದನಕ್ಕೆ ಸ್ಫೋಟಕ ತಿರುವು:ವೈಲೆಂಟ್ ಆಗಿದ್ದ ಡಿಕೆಶಿ ಏಕಾಏಕಿ ಸಿದ್ದರಾಮಯ್ಯ ಬಗ್ಗೆ ಸೈಲೆಂಟ್ ಮಾತು

ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅವರಿಗೆ ಸಿಕ್ಕ ರಾಹುಲ್ ಗಾಂಧಿ ಡಿಕೆ ಶಿವಕುಮಾರ್ ಬಣಕ್ಕೆ ಸಿಕ್ಕಿಲ್ಲ. ಇನ್ನು ಇಂದು (ನವೆಂಬರ್ 25) ಸಚಿವ ಪ್ರಿಯಾಂಕ್ ಖರ್ಗೆ ಅವರ ಭೇಟಿಗೂ ರಾಹುಲ್ ಗಾಂಧಿ ಸಮಯ ಕೊಟ್ಟಿದ್ದಾರೆ. ಆದ್ರೆ, ಡಿಕೆ ಬಣದ ಶಾಸಕರ ಭೇಟಿಗೆ ರಾಹುಲ್ ಗಾಂಧಿ ಸಯಮ ಕೊಟ್ಟಿಲ್ಲ. ಇದರಿಂದ ಡಿಕೆ ಬಣ ಬರಿಗೈನಲ್ಲೇ ವಾಪಸ್ ಆಗಿದ್ದಾರೆ.

ಸೈಲೆಂಟ್ ಆದ್ರಾ ಡಿಕೆ ಶಿವಕುಮಾರ್?

ಹೌದು..ಮೊನ್ನೆ ಸರ್ಕಾರಕ್ಕೆ ಎರಡುವರೆ ವರ್ಷ ಪೂರೈಸುತ್ತಿದ್ದಂತೆಯೇ ಡಿಕೆ ಶಿವಕುಮಾರ್ ತಮ್ಮ ಬೆಂಬಲಿಗರ ಮೂಲಕ ಅಧಿಕಾರ ಹಂಚಿಕೆ ಬಗ್ಗೆ ಸಂದೇಶ ರವಾನಿಸಿದ್ದರು. ತಮ್ಮ ಬೆಂಬಲಿತ ಶಾಸಕರ ಜತೆ ರಹಸ್ಯ ಸಭೆ ನಡೆಸಿದ್ದರು. ಬಳಿಕ ಶಾಸಕರು ಹೈಕಮಾಂಡ್​ ನಾಯಕರನ್ನ ಗಮನಸೆಳೆಯಲು ಎರಡು ತಂಡವಾಗಿ ದೆಹಲಿಗೆ ತೆರಳಿದ್ದರು. ಹೀಗೆ ಡಿಕೆಶಿ ತಮ್ಮ ಆಪ್ತರ ಮೂಲಕ ಸಿಎಂ ಪಟ್ಟಕ್ಕಾಗಿ ಭಾರೀ ಕಸರತ್ತು ನಡೆಸಿದ್ದರು. ಆದ್ರೆ, ಅದು ಸಾಧ್ಯವಿಲ್ಲ ಎನ್ನುವುದು ಖಾತ್ರಿಯಾಯ್ತೋ ಏನೋ ಏಕಾಏಕಿ ಸಾಫ್ಟ್​ ಆಗಿದ್ದಾರೆ. ಇದರ ಬೆನ್ನಲ್ಲೇ ಅವರ ಬೆಂಬಲಿತ ಶಾಸಕರು ದೆಹಲಿಯಿಂದ ಬೆಂಗಳೂರಿಗೆ ಮರಳಿದ್ದಾರೆ. ಹೀಗಾಗಿ ಕಳೆದ ಐದಾರು ದಿನಗಳಿಂದ ಕಾಂಗ್ರೆಸ್​​ನಲ್ಲಿ ನಡೆಯುತ್ತಿದ್ದ ಕುರ್ಚಿ ಕದನ ತಣ್ಣಗಾಯ್ತಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.