ಸಿದ್ದರಾಮಯ್ಯ ಪವರ್ ಬ್ಯಾಂಕ್ ಸತೀಶ್ ಜಾರಕಿಹೊಳಿಗೆ 2 ಬಿಗ್ ಆಫರ್ ಕೊಟ್ಟ ಡಿಕೆಶಿ

ನವೆಂಬರ್ 20 ಕಳೆದಿದ್ದೇ ಕಳಿದಿದ್ದು ಸಿಎಂ ಕುರ್ಚಿ ಸಂಬಂಧ ಕರ್ನಾಟಕ ಕಾಂಗ್ರೆಸ್​​ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಿದ್ದರಾಮಯ್ಯ ಮತ್ತು ಡಿಕೆ ನಡುವಿನ ಪವರ್ ಶೇರಿಂಗ್ ಜಟಾಪಟಿ ಹೊಸ ತಿರುವಿಗೆ ಸಾಕ್ಷಿಯಾಗಿದೆ. ಯಾಕಂದ್ರೆ, ಸಿಎಂ ಸ್ಥಾನ ಬೇಕು ಎಂದು ಪಣ ತೊಟ್ಟಂತೆ ಕಾಣಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಇದೀಗ ಸೀದಾ ಸೀದಾ ಸಿದ್ದರಾಮಯ್ಯ ಬಣದ ನಾಯಕರ ಜೊತೆಗೆ ಮಾತುಕತೆಗೆ ಇಳಿದಿದ್ದು, ಸತೀಶ್ ಜಾರಕಿಹೊಳಿ ಜೊತೆ ರಹಸ್ಯ ಸಭೆ ನಡೆಸಿದ್ದಾರೆ. ಅಲ್ಲದೇ ಸಾಹುಕಾರ್​ಗೆ ಡಿಕೆಶಿ ಬಿಗ್ ಆಫರ್​ ಸಹ ನೀಡಿದ್ದಾರೆ.

ಸಿದ್ದರಾಮಯ್ಯ ಪವರ್ ಬ್ಯಾಂಕ್ ಸತೀಶ್ ಜಾರಕಿಹೊಳಿಗೆ 2 ಬಿಗ್ ಆಫರ್ ಕೊಟ್ಟ ಡಿಕೆಶಿ
Satish Jarkiholi And Dk Shivakumar
Updated By: ರಮೇಶ್ ಬಿ. ಜವಳಗೇರಾ

Updated on: Nov 26, 2025 | 11:03 PM

ಬೆಂಗಳೂರು, (ನವೆಂಬರ್ 26): ಹೇಗಾದರೂ ಮಾಡಿ ಇನ್ನುಳಿದ ಎರಡುವರೆ ವರ್ಷದ ಅವಧಿಗೆ ಸಿಎಂ ಗದ್ದುಗೆ ಏರಲೇ ಬೇಕು ಎಂದು ಡಿಕೆ ಶಿವಕುಮಾರ್ (DK Shivakumar) ಪಣ ತೊಟ್ಟಿದ್ದಾರೆ. ಇನ್ನೊಂದೆಡೆ ಸಿಎಂ ಕುರ್ಚಿಯಿಂದ ತಮ್ಮನ್ನು ಅದ್ಹೇಗೆ ಇಳಿಸುತಾರೆ ನೋಡೋಣ ಎಂದು ಸಿದ್ದರಾಮಯ್ಯ ಸಿದ್ಧರಾಗಿ ನಿಂತಿದ್ದಾರೆ. ಇಬ್ಬರ ನಡುವಿನ ಪಟ್ಟದಾಟ ಜೋರಾಗಿ ಇರುವಾಗಲೇ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಬಣದ ಶಾಸಕರು, ಸಚಿವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ನಡೆಸಿದ್ದಾರೆ. ಮೊನ್ನೆಯಷ್ಟೇ ಸಚಿವ ಜಾರ್ಜ್, ಸಿಎಂ ಆಪ್ತ ಜಮೀರ್ ಭೇಟಿಯಾಗಿದ್ದ ಡಿಕೆ, ನಿನ್ನೆ (ನವೆಂಬರ್ 25) ಸಿದ್ದರಾಮಯ್ಯ ಪಾಲಿಗೆ ಒಂದು ರೀತಿ ಪವರ್ ಬ್ಯಾಂಕ್ ಆಗಿರುವ ಸತೀಶ್ ಜಾರಕಿಹೊಳಿ (Satish Karkiholi) ಅವರನ್ನ ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆ ಡಿಸಿಎಂ ಆಫರ್ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸತೀಶ್ ಜಾರಕಿಹೊಳಿಗೆ 2 ಬಿಗ್ ಆಫರ್ ನೀಡಿದ ಡಿಕೆಶಿ

ಸತೀಶ್ ಜಾರಕಿಹೊಳಿ ಸಿಎಂ ಸಿದ್ದರಾಮಯ್ಯರ ಉತ್ತರಾಧಿಕಾರಿ ಅಂತ್ಲೇ ಗುರುತಿಸಿಕೊಂಡವರು. ಇದನ್ನ ಖುದ್ದು ಸಿಎಂ ಪುತ್ರ ಯತೀಂದ್ರ ಅವರೇ ಬಹಿರಂಗವಾಗಿಯೇ ಹೇಳಿದ್ದಾರೆ. ಅಹಿಂದ ನಾಯಕತ್ವದ ಹಕ್ಕು ಮಂಡನೆಯಾದ್ರೆ, ಸತೀಶ್ ಅವರನ್ನೇ ಮುಂದಾಳು ಮಾಡ್ಬೇಕೆಂಬುದು ಕೈ ಪಾಳಯದಲ್ಲಿ ಬಹಿರಂಗ ಚರ್ಚೆ. ಆದ್ರೆ, ಇದೀಗ ಸಿದ್ದರಾಮಯ್ಯ ಬಲಗೈಯಂತಿದ್ದ ಸತೀಶ್ ಜಾರಕಿಹೊಳಿ ಜೊತೆಗೆನೇ ಡಿಕೆ ರಹಸ್ಯ ಸಭೆ ನಡೆಸಿದ್ದಾರೆ. ನಿನ್ನೆ (ನವೆಂಬರ್ 25) ತಡರಾತ್ರಿ ಇಬ್ಬರು ನಾಯಕರ ನಡುವೆ 1ಗಂಟೆಗೂ ಹೆಚ್ಚು ಕಾಲ ರಹಸ್ಯ ಸಭೆ ನಡೆದಿದೆ. ಹೈಕಮಾಂಡ್ ಏನಾದರೂ ಸಿಎಂ ಸ್ಥಾನ ಕೊಟ್ರೆ ಸಹಕರಿಸುವಂತೆ ಜಾರಕಿಹೊಳಿಗೆ ಡಿಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಸಿಎಂ ಕುರ್ಚಿ ಕಿತ್ತಾಟಕ್ಕೆ ಸ್ಫೋಟಕ ತಿರುವು: ಡಿಕೆಶಿ ಭೇಟಿ ಬೆನ್ನಲ್ಲೇ ಆಟ ಶುರು ಮಾಡಿದ ಸತೀಶ್ ಜಾರಕಿಹೊಳಿ

ಇಷ್ಟೇ ಅಲ್ಲದೇ ಸಿದ್ದರಾಮಯ್ಯನವರ ಮನವೊಲಿಕೆ ಜೊತೆಗೆ ತಮ್ಮ ಸಹಕಾರವೂ ಬೇಕು. ಇನ್ನು ನಿಮ್ಮ ವಿಶ್ವಾಸವನ್ನು ಹೀಗೆ ಮುಂದುವರಿಸುತ್ತೇನೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆ ಡಿಸಿಎಂ ಆಗಿ ಮುಂದುವರಿಯಬಹುದು ಡಿಕೆಶಿ ಆಫರ್ ಕೊಟ್ಟಿದ್ದಾರೆ ಎನ್ನಲಾಗಿದೆ. ಆದ್ರೆ ಡಿಕೆ ಮಾತಿಗೆ ಪ್ರತಿಕ್ರಿಯೆ ನೀಡಿರುವ ಸತೀಶ್, ತಾವು ಸಿದ್ದರಾಮಯ್ಯರನ್ನ ಬಿಟ್ಟು ಬರಲ್ಲ ಎನ್ನುವ ಮಾತನ್ನ ಕಡ್ಡಿ ಮುರಿದಂತೆ ಹೇಳಿದ್ದಾರೆ.

ಜಾರಕಿಹೊಳಿ ಜತೆಗಿನ ಸಭೆಯ ರಹಸ್ಯ ಬಿಚ್ಚಿಟ್ಟ ಡಿಕೆಶಿ

ಇನ್ನು ಈ ಭೇಟಿಯನ್ನ ಒಪ್ಪಿಕೊಂಡಿರುವ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ ಏನು ಬೇರೆ ಅಲ್ಲ. ಅವರೂ ಪಕ್ಷಕ್ಕಾಗಿ ದುಡಿದಿದ್ದಾರೆ. ಈಗ ಎರಡೂವರೆ ವರ್ಷ ಆಯ್ತು, ಮುಂದಿನ ಎರಡೂವರೆ ವರ್ಷಕ್ಕೆ ಹೊಸ ರೂಪ ಕೊಡುವುದರ ಬಗ್ಗೆ ಚರ್ಚಿಸಿದ್ದೇವೆ ಎಂದಿದ್ದಾರೆ. ಅಷ್ಟೇ ಅಲ್ಲ ನನ್ನದು ಯಾವುದೇ ಬಣವೂ ಇಲ್ಲ ಎಂದಿದ್ದಾರೆ.

ಡಿಕೆಶಿ ಭೇಟಿಗೆ ಬಗ್ಗೆ ಸಾಹುಕಾರ್ ಹೇಳಿದ್ದಿಷ್ಟು

ಇನ್ನೊಂದೆಡೆ ಡಿಕೆ ಶಿವಕುಮಾರ್ ಜೊತೆಗಿನ ಭೇಟಿ ಕುರಿತು ಪ್ರತಿಕ್ರಿಯೆ ನೀಡಿರುವ ಸತೀಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್​ ಅವರಿಗೂ ಸಿಎಂ ಆಗುವ ಆಸೆ ಇರುತ್ತದೆ. ಆದ್ರೆ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನ ಸಿಎಂ ಎಂದು ತೀರ್ಮಾನಿಸಿದೆ. ಬದಲಾವಣೆ ಏನೂ ಇಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ ಸಿದ್ದರಾಮಯ್ಯ ಜೊತೆಗೆ ಗುರುತಿಸಿಕೊಂಡಿದ್ದೇವೆ ಮುಂದೆಯೂ ಇರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ ಆತ್ಮಸಾಕ್ಷಿಯನ್ನೇ ನಂಬಿದ್ದೇನೆ ಎನ್ನುತ್ತಿರುವ ಡಿಕೆ ಶಿವಕುಮಾರ್, ಪವರ್ ಶೇರಿಂಗ್ ಆಟಕ್ಕೆ ಹೊಸ ತಿರುವು ಕೊಟ್ಟಿದ್ದಾರೆ. ಆದ್ರೆ, ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.