Karnataka PU Classes: ಮೇ 4ರವರೆಗಿನ ಪಿಯು ತರಗತಿ, ಪೂರ್ವ ಸಿದ್ಧತಾ ಪರೀಕ್ಷೆ ಸ್ಥಗಿತ
Karnataka PUC Exams: ದ್ವಿತೀಯ ಪಿಯು ಪೂರ್ವ ಸಿದ್ಧತೆ ಪರೀಕ್ಷೆಗಳೂ ಸ್ಥಗಿತಗೊಳ್ಳಲಿದ್ದು, ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಪ್ರಶ್ನೆ ಪತ್ರಿಕೆಗಳಾಗಿ ವಿದ್ಯಾರ್ಥಿಗಳಿಗೆ ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಕಾಲೇಜುಗಳಿಗೆ ನಿರ್ದೇಶನ ನೀಡಿದೆ.
ಬೆಂಗಳೂರು: ಕೊರೊನಾ ಹೆಚ್ಚಳದ ಹಿನ್ನೆಲೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿಗಳನ್ನು ಸ್ಥಗಿತಗೊಳಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಮೇ 4ರವರೆಗೆ ಪಿಯುಸಿ ಭೌತಿಕ ತರಗತಿಗಳು ಸ್ಥಗಿತಗೊಳ್ಳಲಿದ್ದು, ಪ್ರಥಮ, ದ್ವಿತೀಯ ಪಿಯು ತರಗತಿಗಳಿಗೆ ಆನ್‌ಲೈನ್ ಕ್ಲಾಸ್ ಮಾತ್ರ ನಡೆಯಲಿದೆ. ದ್ವಿತೀಯ ಪಿಯು ಪೂರ್ವ ಸಿದ್ಧತೆ ಪರೀಕ್ಷೆಗಳೂ ಸ್ಥಗಿತಗೊಳ್ಳಲಿದ್ದು, ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಪ್ರಶ್ನೆ ಪತ್ರಿಕೆಗಳಾಗಿ ವಿದ್ಯಾರ್ಥಿಗಳಿಗೆ ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಕಾಲೇಜುಗಳಿಗೆ ನಿರ್ದೇಶನ ನೀಡಿದೆ.
ಮೇ 4ರವರೆಗೆ ಪಿಯುಸಿ ತರಗತಿಗಳು ಬಂದ್ ಆಗುವ ಕಾರಣ ವರ್ಕ್ ಫ್ರಂ ಹೋಂ ನೀಡಲು ಪಿಯು ಉಪನ್ಯಾಸಕರು ಮನವಿ ಸಲ್ಲಿಸಿದ್ದಾರೆ. ಮನೆಯಿಂದಲೆ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡುವಂತೆ ಉಪನ್ಯಾಸಕರ ಸಂಘದಿಂದ ಶಿಕ್ಷಣ ಸಚಿವ ಸುರೇಶ್ ಕುಮಾರ್ಗೆ ಮನವಿ ಸಲ್ಲಿಸಲಾಗಿದೆ.
ಈಗಾಗಲೇ ಮೆಡಿಕಲ್ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮೈಸೂರು ಜಿಲ್ಲೆಯ ಮೇಟಗಳ್ಳಿಯಲ್ಲಿರುವ ಕೊವಿಡ್ ಆಸ್ಪತ್ರೆಗೆ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿ, ವೈದ್ಯಕೀಯ ಪರೀಕ್ಷೆ ಮುಂದೂಡಿಕೆ ಕುರಿತು ಮಾತನಾಡಿದ್ದರು. ಇಂದು ನಡೆಯಬೇಕಿದ್ದ ವೈದ್ಯಕೀಯ ಸ್ನಾತಕೋತ್ತರ, ಪದವಿ ಸೇರಿ ಎಲ್ಲಾ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ. ವೈದ್ಯಕೀಯ ಶಿಕ್ಷಣದ ಅಂತಿಮ ವರ್ಷದ ವಿದ್ಯಾರ್ಥಿಗಳನ್ನ ಕೊವಿಡ್ ಕೆಲಸಕ್ಕೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಎಸ್ಎಸ್ಎಲ್ ಪರೀಕ್ಷೆಗಳ ಕುರಿತು ಇತ್ತೀಚಿಗೆ ಮಾತನಾಡಿದ್ದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆಯುವುದರ ಕುರಿತು ವದಂತಿಗಳಿಗೆ ಕಿವಿಗೊಡಬೇಡಿ. ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ರಾಜ್ಯ ಸರ್ಕಾರದಿಂದ ಕೊವಿಡ್ 19 ಸೋಂಕು ತಡೆಗೆ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆಯಾಗಿದೆ. ರಾಜ್ಯಾದ್ಯಂತ ವಿವಿಧ ನಗರಗಳಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಎಲ್ಲಾ ಬಂದ್ ಮಾಡಲಾಗುತ್ತಿದೆ. ಬೆಂಗಳೂರಿನ ಚಿಕ್ಕಪೇಟೆ, ಮೆಜೆಸ್ಟಿಕ್,ಮೈಸೂರು ದಾವಣಗೆರೆ ಮಂಡ್ಯ ಸೇರಿದಂತೆ ಹಲವೆಡೆ ಅಗತ್ಯ ಸೇವೆ ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲಾಗುತ್ತಿದೆ. ವಾರಾಂತ್ಯದ ಕರ್ಫ್ಯೂ ನಾಳೆ ಸಂಜೆಯಿಂದ ಜಾರಿಗೆ ಬರಲಿದ್ದರೂ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಬಟ್ಟೆ ಅಂಗಡಿಗಳನ್ನು ಪೊಲೀಸರು ಮುಚ್ಚಿಸುತ್ತಿದ್ದಾರೆ.
ಮೇ 4ರವರೆಗೆ ಬಟ್ಟೆ ಅಂಗಡಿ ತೆರೆಯದಂತೆ ಸೂಚಿಸಿದ್ದಾರೆ ಎಂದು ಬೆಂಗಳೂರಿನ ಚಿಕ್ಕಪೇಟೆಯ ಬಟ್ಟೆ ಅಂಗಡಿ ವ್ಯಾಪಾರಿ ಹೇಳಿದ್ದಾರೆ. ಅಂಗಡಿ ಮುಚ್ಚಿಸಲು ಆದೇಶ ಬಂದಿದೆ. ಹೀಗಾಗಿ ಬಟ್ಟೆ ಅಂಗಡಿ ಮುಚ್ಚಿಸುತ್ತಿದ್ದೇವೆ. ಅಂಗಡಿ ಮುಚ್ಚದಿದ್ದರೆ ಪೊಲೀಸ್ ಠಾಣೆಗೆ ಬನ್ನಿ ಎಂದು ಪೊಲೀಸರು ತಿಳಿಸಿದ್ದಾರೆ.ಯಾವ ಅಂಗಡಿಗಳಿಗೂ ಇಲ್ಲದ ರೂಲ್ಸ್ ನಮಗೆ ಮಾತ್ರ ಏಕೆ ಎಂದು ಸದ್ಯ ಚಿಕ್ಕಪೇಟೆಯ ಬಟ್ಟೆ ಅಂಗಡಿ ವ್ಯಾಪಾರಿ ಅಳಲು ತೋಡಿಕೊಂಡಿದ್ದಾರೆ. ಬಟ್ಟೆ ಅಂಗಡಿಗಳನ್ನ ಮಾತ್ರ ಯಾಕೆ ಬಂದ್ ಮಾಡಬೇಕು. ಇದ್ದಕ್ಕಿದ್ದಂತೆ ಹೀಗೆ ಹೇಳಿದರೆ ಏನು ಮಾಡುವುದು ಎಂದು ಅವೆನ್ಯೂ ರಸ್ತೆಯ ಬಟ್ಟೆ ಮಾರಾಟ ಮಾಡುವ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Explainer: ಮಕ್ಕಳನ್ನೂ ಬಾಧಿಸುತ್ತಿದೆ ಕೊರೊನಾ; ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಈ ಸ್ಟೋರಿ ಮಿಸ್ ಮಾಡದೇ ಓದಿ
Published On - 7:13 pm, Thu, 22 April 21