Karnataka Rainn Highlights: ವಯನಾಡಿನಲ್ಲಿ ಮಳೆ ಅಬ್ಬರ: ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ

| Updated By: Digi Tech Desk

Updated on: Jul 31, 2024 | 9:52 AM

ಕರ್ನಾಟಕದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ವಾಸಿಸಲು ಸೂರಿಲ್ಲ... ಇರಲು ಊರಿಲ್ಲ... ಬೆಳೆದ ಬೆಳೆಯೇ ಜಲಾವೃತ... ರಸ್ತೆ ಕಾಣ್ತಿಲ್ಲ.. ಸೇತುವೆಗಳ ಸಂಪರ್ಕವೇ ಇಲ್ಲ.. ಜನರ ಕಷ್ಟ ಕೇಳಬೇಕಿದ್ದ ಜನಪ್ರತಿನಿಧಿಗಳ ಸುಳಿವಿಲ್ಲ.. ಕಷ್ಟ ಹೇಳಿಕೊಳ್ಳೋಣ ಅಂದ್ರೆ ದೇಗುಲ.. ಚರ್ಚ್, ಮಸೀದಿ ಗಳೆಲ್ಲವೂ ಜಲಮಯವಾಗಿವೆ. ಕರ್ನಾಟಕದ ಯಾವೆಲ್ಲ ಕಡೆ ಪ್ರವಾಹ, ಗುಡ್ಡಕುಸಿತ ಸೇರಿದಂತೆ ಮಳೆ ಏನೆಲ್ಲಾ ಅವಾಂತರ ಸೃಷ್ಟಿಸಿದೆ ಎನ್ನುವ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ ನೋಡಿ.

Karnataka Rainn Highlights: ವಯನಾಡಿನಲ್ಲಿ ಮಳೆ ಅಬ್ಬರ: ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ

ಕರ್ನಾಟಕದಾದ್ಯಂತ ಅಬ್ಬರದ ಮಳೆಯಾಗುತ್ತಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಭಾಗದ ಹಲವು ದಿನಗಳು ಉಕ್ಕಿಹರಿಯುತ್ತಿದ್ದು, ರಸ್ತೆಗಳು ಜಲಾವೃತವಾಗಿವೆ. ಇನ್ನು ನದಿಗಳ ನೀರು ಗ್ರಾಮಗಳಿಗೆ ನುಗ್ಗಿದ್ದು, ಜನರು ಕಂಗಾಲಾಗಿದ್ದಾರೆ. ಇನ್ನು ಉತ್ತರ ಕನ್ನಡ, ಕೊಡಗು, ಕರಾವಳಿ ಭಾಗಗಳಲ್ಲಿ ಭೂಕುಸಿತ ಉಂಟಾಗಿದೆ. ಶಿರಾಡಿ ಘಾಟ್​ನಲ್ಲೂ ಗುಡ್ಡ ಕುಸಿತವಾಗಿದ್ದು, ಮಂಗಳೂರು-ಬೆಂಗಳೂರು ಸಂಚಾರ ಬಂದ್ ಆಗಿದೆ. ಇನ್ನು ಕೊಡಗು ಜಿಲ್ಲೆಯಾದ್ಯಂತ ರೆಡ್​ ಅಲರ್ಟ್ ಘೋಷಣೆ ಮಾಡಲಾಗಿದ್ದು, ಗುಡ್ಡ, ನದಿಪಾತ್ರದಲ್ಲಿರುವ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ. ಮಳೆ ಕರ್ನಾಟದಲ್ಲಿ ಎಲ್ಲೆಲ್ಲಿ ಅವಾಂತರ ಸೃಷ್ಟಿಸುತ್ತಿದೆ ಎನ್ಜುವ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

LIVE NEWS & UPDATES

The liveblog has ended.
  • 30 Jul 2024 10:18 PM (IST)

    Karnataka Rains Live Updates :ಕಪಿಲಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ

    ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರು ಬಿಟ್ಟ ಹಿನ್ನೆಲೆಯಲ್ಲಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಶುರುವಾಗಿದೆ. ನಂಜನಗೂಡು ತಾಲ್ಲೂಕಿನ ವರುಣ ಕ್ಷೇತ್ರ ವ್ಯಾಪ್ತಿಯ ಬೊಕ್ಕಹಳ್ಳಿ ಗ್ರಾಮದ ಜನರನ್ನು ಕಾಳಜಿ ಕೇಂದ್ರಕ್ಕೆ ಸಂತ್ರಸ್ತರು ಸ್ಥಳಾಂತರಿಸಲಾಗಿದೆ. ಇನ್ನು ಪ್ರವಾಹ ಪೀಡಿತ ಬೊಕ್ಕಹಳ್ಳಿ ಗ್ರಾಮಕ್ಕೆ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದು, ನೀರಿಗಿಳಿಯದಂತೆ ಜನರಿಗೆ ಮನವಿ ಮಾಡಿದರು. ಈ ವೇಳೆ ಜಿಪಂ ಸಿಇಒ ಗಾಯತ್ರಿ ಸೇರಿದಂತೆ ಸ್ಥಳೀಯ ಅಧಿಕಾರಿಗಳ ಸಾಥ್ ನೀಡಿದರು. ಇನ್ನು ಜಿಲ್ಲಾಡಳಿತದ ಅಧಿಕಾರಿಗಳು ಸಂತ್ರಸ್ತರ ಜೊತೆ ಊಟ ಮಾಡಿದರು.

  • 30 Jul 2024 08:32 PM (IST)

    Karnataka Rains Live Updates: 4 ವರ್ಷಗಳ ಬಳಿಕ ಕರಾವಳಿಯ ನೇತ್ರಾವತಿ-ಕುಮಾರಧಾರ ಸಂಗಮ

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಎರಡು ಪವಿತ್ರ ನದಿಗಳ ಸಂಗಮವಾಗಿದ್ದು, ಬರೋಬ್ಬರಿ ನಾಲ್ಕು ವರ್ಷದ ಬಳಿಕ ನೇತ್ರಾವತಿ-ಕುಮಾರಾಧಾರ ನದಿ ಸಂಗಮವಾಗಿದ್ದು, ಈ ಅಪರೂಪದ ಸಂಗಮವನ್ನು ಜನರು ಕಣ್ತುಂಬಿಕೊಂಡು ಸಂತಸಗೊಂಡಿದ್ದಾರೆ. ನಾಲ್ಕು ವರ್ಷದ ಬಳಿಕ ನೇತ್ರಾವತಿ-ಕುಮಾರಾಧಾರ ನದಿ ಸಂಗಮವಾದ ಹಿನ್ನೆಲೆಯಲ್ಲಿ ಸಹಸ್ರಲಿಂಗೇಶ್ವರ ದೇವಳ ಮುಂಭಾಗದ ಧ್ವಜಸ್ತಂಭದ ಬಳಿ ವಿಶೇಷ ಪೂಜೆ ಸಲ್ಲಿಸಲಾಯ್ತು. ಪೂಜೆಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಎಸಿ ಜುಬಿನ್ ಮೊಹಪತ್ರ, ತಹಶೀಲ್ದಾರ್ ಪುರಂದರ ಹೆಗ್ಡೆ, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಭಾಗಿಯಾಗಿದ್ದರು.


  • 30 Jul 2024 05:32 PM (IST)

    Karnataka Rain Live Updates: ಕೊಡಗಿನಲ್ಲಿ ಭಾರೀ ಮಳೆ, ತುರ್ತು ಟಾಸ್ಕ್ ಫೋರ್ಸ್ ಸಭೆ

    ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 400 ಮಿ.ಮೀಟರ್​ಗೂ ಅಧಿಕ ಮಳೆಯಾಗಿದೆ. ಇಂದೂ ಸಹ ಬೆಳಗ್ಗೆಯಿಂದ ಎಡೆಬಿಡದೆ ವರುಣ ಅಬ್ಬರಿಸುತ್ತಿದ್ದಾನೆ. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿ ತುರ್ತು ಟಾಸ್ಕ್​ಫೋರ್ಸ್ ಸಭೆ ನಡೆಸಿದೆ. ಸಭೆಯಲ್ಲಿ ಕೊಡಗು ಜಿಲ್ಲಾಧಿಕಾರಿ, ಎಸ್​ಪಿ ಭಾಗಿಯಾಗಿದ್ದು, ಸಂಭಾವ್ಯ ಅಪಾಯ ಎದುರಿಸುವ ಸಂಬಂಧ ಚರ್ಚೆ ನಡೆದಿದೆ.

  • 30 Jul 2024 05:20 PM (IST)

    Karnataka Rain Live Updates: ಶಿರೂರು ಗುಡ್ಡ ಕುಸಿತ ಪ್ರಕರಣ, ಕಾರ್ಯಾಚರಣೆ ಸ್ಥಗಿತ

    ಉತ್ತರ ಕನ್ನಡ ಜಿಲ್ಲೆಯ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಹಲವರು ನಾಪತ್ತೆಯಾಗಿದ್ದು, ಈವರೆಗೆ ಒಟ್ಟು 8 ಜನರ ಮೃತದೇಹಗಳು ಪತ್ತೆಯಾಗಿವೆ. ಇನ್ನು ಹಲವರ ಮೃತದೇಹಗಳು ಪತ್ತೆಯಾಗಿಲ್ಲ. ಕಳೆದ 15 ದಿನಗಳಿಂದಲೂ ವಿವಿಧ ರಕ್ಷಣಾ ತಂಡಗಳು ಕಾರ್ಯಚರಣೆ ನಡೆಸಿದರೂ ಸಹ ಕೇರಳದ ಅರ್ಜುನ್ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜಗನ್ನಾಥ್, ಹಾಗೂ ಲೊಕೇಶ್ ಸುಳಿವು ಸಿಕ್ಕಿಲ್ಲ. ಮತ್ತೊಂದೆಡೆ ಮಳೆ ಅಬ್ಬರ ಜೋರಾಗಿದ್ದರಿಂದ ಗಂಗಾವಳಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಉತ್ತರ ಕನ್ನಡ ಜಿಲ್ಲಾಡಳಿ ಕಾರ್ಯಚರಣೆಯನ್ನು ಸ್ಥಗಿತಗೊಳಿಸಿದೆ.

  • 30 Jul 2024 04:50 PM (IST)

    3 ವರ್ಷಗಳ ನಂತರ ಭರ್ತಿಯಾದ ಭದ್ರಾ ಜಲಾಶಯ

    ಮಳೆ ಕೊರತೆಯಿಂದ ಬರಿದಾಗಿದ್ದ ಭದ್ರಾ ಈ ಬಾರಿ ಭರ್ತಿಯಾಗಿದೆ. ಬರೋಬ್ಬರಿ 3 ವರ್ಷಗಳ ನಂತರ ಭದ್ರಾ ಜಲಾಶಯ ಭರ್ತಿಯಾಗಿದೆ. 71.5 TMC ನೀರಿನ ಸಾಮರ್ಥ್ಯದ, 186 ಅಡಿ ಎತ್ತರದ ಡ್ಯಾಂನಲ್ಲಿ 183.2 ಅಡಿ ನೀರು ಸಂಗ್ರಹವಾಗಿದ್ದು, ಇದೀಗ ಜಲಾಶಯದಿಂದ 20 ಸಾವಿರ ಕ್ಯೂಸೆಕ್​​ ನೀರು ಹೊರಕ್ಕೆ ಬಿಡುಗಡೆ ಮಾಡಲಾಗಿದೆ.

  • 30 Jul 2024 04:11 PM (IST)

    Karnataka Rain Live Updates: ಶೃಂಗೇರಿ-ಮಂಗಳೂರು ಸಂಪರ್ಕ ಬಂದ್

    ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಮತ್ತೆ ಮಳೆ ಅಬ್ಬರ ಮುಂದುವರಿದಿದ್ದರಿಂದ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈ ಹಿನ್ನೆಯಲ್ಲಿ ರಾಷ್ಟ್ರೀಯ ಹೆದ್ದಾರಿ 169ರ ಮೇಲೆ ತುಂಗಾ ನದಿ ನೀರು ಹರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಶೃಂಗೇರಿ-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಮಾಡಲಾಗಿದೆ.

  • 30 Jul 2024 03:50 PM (IST)

    Karnataka Rains Live Updates: ಘಟಪ್ರಭಾ ಪ್ರವಾಹಕ್ಕೆ ಮಾಚಕನೂರು ಗ್ರಾಮ ಜಲಾವೃತ

    ಬಾಗಲಕೋಟೆ ಜಿಲ್ಲೆಯಲ್ಲೂ ಸಹ ಘಟಪ್ರಭಾ ನದಿ ಉಕ್ಕಿಹರಿಯುತ್ತಿದೆ. ಇದರಿಂದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಾಚಕನೂರು ಗ್ರಾಮದ ಮನೆಗಳು ಜಲಾವೃತವಾಗಿವೆ. ನೀರಿನ ರಭಸಕ್ಕೆ ಗ್ರಾಮದಲ್ಲಿ ಬೃಹತ್ ಆಲದ ಮರ ನೆಲಕ್ಕೆ ಉರುಳಿದೆ. ಅಲ್ಲದೇ ಸಲೂನ್,ಅಟೋವರ್ಕ್,ಎಲೆಕ್ಟ್ರಿಕ್, ಪೈಪ್ ಅಂಗಡಿಗಳು ಜಖಂಗೊಂಡಿವೆ. ಇನ್ನು ಗ್ರಾಮದ ಹೊಳೆಬಸವೇಶ್ವರ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದ್ದು, ದೇಗುಲದ ಗೋಪುರ ಮಾತ್ರ ಕಾಣಿಸುತ್ತಿದೆ. ಅಷ್ಟರ ಮಟ್ಟಿಗೆ ನೀರು ಗ್ರಾಮಕ್ಕೆ ನುಗ್ಗಿದೆ.

  • 30 Jul 2024 03:47 PM (IST)

    Karnataka Rains Live Updates: ಮಲಪ್ರಭಾ ನದಿಗೆ ನೀರು, ಗದಗ ಜಿಲ್ಲೆಯಲ್ಲಿ ಪ್ರವಾಹದ ಭೀತಿ

    ಮಲಪ್ರಭಾ ನದಿಗೆ 5 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಿದ್ದರಿಂದ ಗದಗ ಜಿಲ್ಲೆಯ ಕೊಣ್ಣೂರು, ವಾಸನ, ಲಖಮಾಪುರ ಗ್ರಾಮಗಳಿಗೆ ಪ್ರವಾಹದ ಭೀತಿ ಎದುರಾಗಿದೆ. ಈಗಾಗಲೇ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಬಳಿಯ ಸೇತುವೆ ಮುಳುಗಡೆಯಾಗಿದೆ. ಹೀಗಾಗಿ ಹುಬ್ಬಳ್ಳಿ-ವಿಜಯಪುರ ಸಂಪರ್ಕ ಕಲ್ಪಿಸುವ ಹಳೆ ಸೇತುವೆ ಮೇಲೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಹೊಸ ಸೇತುವೆ ಮೇಲೆ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

  • 30 Jul 2024 03:40 PM (IST)

    Karnataka Rains Live Updates: ಶಿರಾಡಿಘಾಟ್​ನಲ್ಲಿ ಸಿಲುಕಿದ ನೂರಾರು ವಾಹನಗಳು

    ಶಿರಾಡಿಘಾಟ್​ನಲ್ಲಿ ಭಾರೀ ಭೂಕುಸಿತ ಉಂಟಾಗಿದ್ದರಿಂದ ಸಂಚಾರ ಬಂದ್ ಆಗಿದೆ. ಇನ್ನೊಂದೆಡೆ ಶಿರಾಡಿಘಾಟ್ ನಲ್ಲಿ ಮಣ್ಣು ತೆರವು ಕಾರ್ಯಾಚರಣೆ ಮುಂದುವರಿದಿದೆ. ಇತ್ತ ಬಸ್, ಕಾರಿ, ಕಾರು ಹಾಗು ಟ್ಯಾಂಕರ್ ಗಳು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಿಲುಕಿಕೊಂಡಿವೆ. ಇದರಿಂದ ಜನರು ಗಂಟೆಗಟ್ಟಲೆ ಕಾದು ಸುಸ್ತಾಗಿದ್ದು, ವಾಪಸ್ ಹೋಗಲಾಗದೆ, ಸ್ಥಳದಲ್ಲಿ ಯಾವುದೇ ಸೌಲಭ್ಯ ಇಲ್ಲದೆ ಪರದಾಡುತ್ತಿದ್ದಾರೆ.

  • 30 Jul 2024 03:36 PM (IST)

    Karnataka Rains Live Updates: ಆಗಸ್ಟ್ 3ರವರೆಗೆ ವ್ಯಾಪಕ ಮಳೆ ಸಾಧ್ಯತೆ

    ಈಗಾಗಲೇ ಮಳೆಯಿಂದಾಗಿ ಕರಾವಳಿ ಭಾಗದ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಇದರ ಮಧ್ಯ ಆಗಸ್ಟ್ 3ರ ವರೆಗೂ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್.ಪಾಟೀಲ್ ಹೇಳಿದ್ದಾರೆ. ರಾಜ್ಯದ ಉತ್ತರ ಒಳನಾಡಿನಲ್ಲೂ ಭಾರಿ ಮಳೆಯಾಗಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 3ರವರೆಗೆ ವ್ಯಾಪಕ ಮಳೆ ಸಾಧ್ಯತೆ ಇದೆ. ಉತ್ತರ, ದಕ್ಷಿಣ ಒಳನಾಡಿನ ಕೆಲವೆಡೆ ಆಗಸ್ಟ್ 3ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞ ಸಿ.ಎಸ್.ಪಾಟೀಲ್ ಹೇಳಿದ್ದಾರೆ.

    ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಇಂದು, ನಾಳೆ ರೆಡ್ ಅಲರ್ಟ್. ಆ.1ರಂದು ಆರೆಂಜ್ ಅಲರ್ಟ್, ಆ.2 & 3ರಂದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಜು.31, ಆಗಸ್ಟ್ 1ರಂದು ಆರೆಂಜ್ ಅಲರ್ಟ್, ಉತ್ತರ ಕನ್ನಡ ಜಿಲ್ಲೆಯಲ್ಲಿ ಆ.2, 3ರಂದು ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಿನಲ್ಲಿ ಇಂದು, ನಾಳೆ ರೆಡ್ ಅಲರ್ಟ್, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಿನಲ್ಲಿ ಆ.1ರಂದು ಆರೆಂಜ್ ಅಲರ್ಟ್, ಬೆಳಗಾವಿ ಜಿಲ್ಲೆಯಲ್ಲಿ ಜು.30, 31, ಆಗಸ್ಟ್ 1, 2ರಂದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕ ರಾಜ್ಯಾದ್ಯಂತ 30ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ಬೆಂಗಳೂರಿನಲ್ಲಿ ಇಂದಿನಿಂದ ಆಗಸ್ಟ್ 3ರವರೆಗೆ ಹಗುರವಾದ ಮಳೆ ಸಾಧ್ಯತೆ ಇದೆ ಎಂದು ಸಿ.ಎಸ್.ಪಾಟೀಲ್ ಮಾಹಿತಿ ನೀಡಿದ್ದಾರೆ.

  • 30 Jul 2024 03:25 PM (IST)

    Karnataka Rains Live Updates: ಬಂಟ್ವಾಳ ತಾಲೂಕಿನ ಬಿ ಕಸ್ಬಾ ಗ್ರಾಮದಲ್ಲಿ ಪ್ರವಾಹ

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಬಂಟ್ವಾಳ ತಾಲೂಕಿನ ಬಿ ಕಸ್ಬಾ ಗ್ರಾಮದಲ್ಲಿ ಪ್ರವಾಹ ಉಂಟಾಗಿದೆ. ನೆತ್ರಾವತಿ ನದಿ. ಅಪಾಯದ ಮಟ್ಟಮೀರಿ ಹರಿಯುತ್ತಿದ್ದರಿಂದ ಬಿ ಕಸ್ಬಾ ಗ್ರಾಮದ ಮೀನು ಮಾರುಕಟ್ಟೆ, ದಿನಸಿ, ತರಕಾರಿ ಅಂಗಡಿಗಳೆಲ್ಲಾ ಜಲಾವೃತವಾಗಿವೆ.

  • 30 Jul 2024 03:16 PM (IST)

    Karnataka Rains Live Updates: ಕೊಡಗಿನಲ್ಲಿ ರೆಡ್ ಅಲರ್ಟ್

    ಕೊಡಗು(Kodagu) ಜಿಲ್ಲಾಡಳಿತ ಮುಂದಿನ ಎರಡು ದಿನಗಳ ಕಾಲ ಕೊಡಗು ಜಿಲ್ಲೆಗೆ ರೆಡ್​ ಅಲರ್ಟ್​ ಘೋಷಣೆ ಮಾಡಿ, ಗುಡ್ಡ, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದೆ. ಇದರಿಂದ ಸಧ್ಯ ಕೊಡಗು ಜಿಲ್ಲೆಯ ಜನ ಆತಂಕದಲ್ಲಿದ್ದಾರೆ.

  • 30 Jul 2024 03:13 PM (IST)

    Karnataka Rains Live Updates: ಮುಧೋಳ-ಸಾಂಗ್ಲಿ ರಸ್ತೆ ಬಂದ್

    ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾದ ಪರಿಣಾಮ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಇದ ಉಪ ನದಿಗಳಾದ ಘಟಪ್ರಭಾ ಮತ್ತು ಮಲಪ್ರಭಾ ನದಿಗಳು ತುಂಬಿ ಹರಿಯುತ್ತಿವೆ. ಇದರಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

  • 30 Jul 2024 03:04 PM (IST)

    Karnataka Rains Live Updates: ಹಾಸನ ಜಿಲ್ಲೆಯಲ್ಲಿ ಭಾರೀ ಮಳೆ

    ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿವೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಠಸಾಗರದ ಸೇತುವೆ ಮುಳುಗಡೆಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇನ್ನು ಹೆನ್ಲಿ-ಕೃಷ್ಣಾಪುರ-ಮಠಸಾಗರ ಸಕಲೇಶಪುರ ಮಾರ್ಗದ ಸಂಪರ್ಕ ಕಡಿತವಾಗಿದೆ.

  • 30 Jul 2024 03:00 PM (IST)

    Karnataka Rains Live Updates: ಶಿರಾಡಿ ಘಾಟ್​​​ನಲ್ಲಿ ಭಾರೀ ಭೂಕುಸಿತ

    ಕಳೆದ ವಾರವಷ್ಟೇ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿಯ ದೊಡ್ಡತಪ್ಲೆ ಬಳಿ ಭೂಕುಸಿತ ಸಂಭವಿಸಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ಅದೇ ಜಾಗದಲ್ಲಿ ಭೂಕುಸಿತ ಸಂಭವಿಸಿದೆ. ಹಲವು ವಾಹನಗಳು ಮಣ್ಣಿನಡಿ ಸಿಲುಕಿವೆ.

Published On - 2:58 pm, Tue, 30 July 24

Follow us on