ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಒಳನಾಡಿನಲ್ಲಿ ಕೆಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಈ ಭಾರೀ ಮಳೆಯಿಂದಾಗಿ ಹಲವೆಡೆ ಭೂ ಕುಸಿತ, ಪ್ರವಾಹ ಪರಿಸ್ಥಿತಿಗಳು ಎದುರಾಗಿದೆ. ನದಿಗಳು ಉಕ್ಕಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಹಲವೆಡೆ ಜಲಾವೃತವಾಗಿದೆ. ನದಿ ಪಾತ್ರದ ಗ್ರಾಮಗಳು ಜಲಾವೃತವಾಗಿದ್ದು, ಅಲ್ಲಿ ಸಿಲುಕಿರುವ ಗ್ರಾಮಸ್ಥರನ್ನು ಹಾಗೂ ಜಾನುವಾರುಗಳನ್ನು ಕರ್ನಾಟಕ ರಾಜ್ಯ ವಿಪತ್ತು ಸ್ಪಂದನಾ ಪಡೆ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಸಿಬ್ಬಂದಿಗಳು ರಕ್ಷಣೆ ಮಾಡಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ. ಇಂದು (ಜುಲೈ 24) ಕರ್ನಾಟಕದಲ್ಲಿ ಈವರೆಗೆ ನಡೆದ ಪ್ರವಾಹ ರಕ್ಷಣಾ ಕಾರ್ಯಾಚರಣೆಗಳ ವಿವರ ಇಲ್ಲಿದೆ.
ಕುಮಟಾ ತಾಲೂಕಿನ ಐಗಳ ಕುರ್ವೆ ಗ್ರಾಮದಲ್ಲಿ ಅಘನಾಶಿನಿ ನದಿಯ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿದ್ದು, ಸುಮಾರು 15 ಜನರನ್ನು ರಾತ್ರಿ ರಕ್ಷಣೆ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತಾಲೂಕು ಕಛೇರಿ ಆವರಣದಲ್ಲಿ ಅತಿಯಾದ ಮಳೆಯ ಕಾರಣ ನುಗ್ಗಿದ್ದ ನೀರನ್ನು ಸಂಪೂರ್ಣ ಹೊರತೆಗೆಯಲಾಗಿದೆ.
ಸೊರಬ ತಾಲೂಕಿನ ಬಾಡದ ಬೈಲು ಗ್ರಾಮದಲ್ಲಿ ಒಂದು ವಾಸದ ಮನೆ ಸಂಪೂರ್ಣ ಮುಳುಗಿದ ಕಾರಣ ಓಬಿಎಂ ಬೋಟ್ ಹಾಗೂ ರಕ್ಷಣಾ ಸಾಮಾಗ್ರಿಗಳ ಸಹಾಯದಿಂದ ಸಿಲುಕಿದ 4 ಜನರನ್ನು ಹಾಗೂ ಪ್ರಾಣಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಲೋಳಸೂರ ಗ್ರಾಮದಲ್ಲಿ ಘಟಪ್ರಭಾ ನದಿ ಪ್ರವಾಹದಲ್ಲಿ ಸಿಲುಕಿದ್ದ 18 ಜನ ಬಿಹಾರಿ ಕೂಲಿ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
ತೀರ್ಥಹಳ್ಳಿ ತಾಲೂಕಿನ ಇಂದಾವರ ಗ್ರಾಮದ ಮನೆಯಲ್ಲಿ ಸಿಲುಕಿದ್ದ 5 ಜನ, ಶಿರುಪತಿ ಗ್ರಾಮದ ಮನೆಯಲ್ಲಿ ಸಿಲುಕಿದ್ದ 3 ಜನ, ಕುಶಾವತಿ ಗ್ರಾಮದ ನದಿ ಪಕ್ಕದ ಮನೆಯಲ್ಲಿ ಸಿಲುಕಿದ್ದ 2 ಜನರನ್ನು ರಕ್ಷಿಸಲಾಗಿದೆ.
ಸಂಕೇಶ್ವರ ಪಟ್ಟಣದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 100 ಜನರನ್ನು ರಕ್ಷಣೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆ ಖಾನಾಪುರ ಪಟ್ಟಣದ ದುರ್ಗಾ ನಗರದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 55 ಜನರನ್ನು ರಕ್ಷಣೆ ಮಾಡಲಾಗಿದೆ.
ಈ ಬಗ್ಗೆ ಪೊಲೀಸ್ ಮಹಾನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾ ನಿರ್ದೇಶಕರು ಅಧಿಕೃತ ಮಾಹಿತಿ ಪತ್ರ ಹೊರಡಿಸಿದ್ದಾರೆ.