ಬೆಂಗಳೂರು: ಕರ್ನಾಟಕದಲ್ಲಿ ರಾಜ್ಯದಲ್ಲಿ ಇಂದಿನಿಂದ 6 ರಿಂದ 8ನೇ ತರಗತಿಗಳು ಆರಂಭಗೊಂಡಿದೆ. ಈ ನಿಟ್ಟಿನಲ್ಲಿ ಬೆಳ್ಳಂಬೆಳಿಗ್ಗೆ ವಿದ್ಯಾರ್ಥಿಗಳು ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ. ಪ್ರತಿ ವಿದ್ಯಾರ್ಥಿಗಳಿಗೂ ಪ್ರವೇಶ ದ್ವಾರದ ಬಳಿ ಥರ್ಮಲ್ ಸ್ಕ್ಯಾನಿಂಗ್, ಹ್ಯಾಂಡ್ ಸ್ಯಾನಿಟೈಸ್ ವ್ಯವಸ್ಥೆ ಮಾಡಿ, ದೈಹಿಕ ಉಷ್ಣಾಂಶ ಪರಿಶೀಲಿಸಿ ತರಗತಿಗೆ ತೆರಳಲು ಅವಕಾಶ ಕಲ್ಪಿಸಲಾಗಿದೆ. ಶಾಲೆಗಳು ಬೆಳಿಗ್ಗೆ 10 ಗಂಟೆಗೆ ಆರಂಭಗೊಂಡಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಶಾಲೆ ಮುಖ್ಯೋಪಾಧ್ಯಾಯರು ಸೂಚನೆ ನೀಡಿದ್ದಾರೆ. ಆರೋಗ್ಯದಲ್ಲಿ ಏರುಪೇರಿದ್ದರೆ ಮಾಹಿತಿ ನೀಡಿ, ಹೆದರದಂತೆ ತರಗತಿಗೆ ಹಾಜರಾಗುವಂತೆ ಕಿವಿಮಾತು ಹೇಳಿದ್ದಾರೆ.
ಬೆಂಗಳೂರು ನಗರ, ಕೇರಳ ಗಡಿ ಪ್ರದೇಶಗಳಲ್ಲಿ 8ನೇ ತರಗತಿಗಳು ಮಾತ್ರ ಆರಂಭಗೊಂಡಿದೆ. ಈ ಭಾಗದಲ್ಲಿ 6, 7ನೇ ತರಗತಿಗಳನ್ನು ಆರಂಭ ಮಾಡಿಲ್ಲ. ವಿದ್ಯಾರ್ಥಿಗಳು ಶಾಲೆಗೆ ಬರಲೇಬೇಕೆಂದು ಕಡ್ಡಾಯ ಮಾಡಿಲ್ಲ. ಶಾಲೆಗೆ ಬರುವ ಮಕ್ಕಳಿಗೆ ಪೋಷಕರ ಅನುಮತಿ ಕಡ್ಡಾಯಗೊಳಿಸಿದ್ದು, ಕೇರಳ ಭಾಗದಿಂದ ಬರುವ ಮಕ್ಕಳು, ಶಿಕ್ಷಕರಿಗೆ ಕೊವಿಡ್ ಟೆಸ್ಟ್ ಮಾಡಿ, ನೆಗೆಟಿವ್ ವರದಿ ಖಾತರಿಯಾದರೆ ಶಾಲೆಗೆ ಬರಲು ಅನುಮತಿ ನೀಡಲಾಗಿದೆ.
ವಿಜಯಪುರದಲ್ಲಿ ಶಾಲೆ ಆರಂಭಕ್ಕೆ ಸಿದ್ಧತೆ:
ಸರ್ಕಾರದ ಆದೇಶದ ಹಿನ್ನೆಲೆ ಜಿಲ್ಲೆಯಲ್ಲಿ ಇಂದಿನಿಂದ 6-8ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿದೆ. ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4-30 ರವರೆಗೆ ತರಗತಿಗಳು ನಡೆಯಲಿವೆ. ಶಾಲಾ ಆವರಣ ಪ್ರವೇಶಕ್ಕೂ ಮುನ್ನ ಥರ್ಮದ ಸ್ಕ್ರೀನಿಂಗ್ , ಸ್ಯಾನಿಟೈಸ್, ಮಾಸ್ಕ್ ಧಾರಣೆ ಕಡ್ಡಾಯ ಮಾಡಲಾಗಿದೆ. ಸಾಮಾಜಿಕ ಅಂತರದ ಮೂಲಕ ತರಗತಿಗಳಲ್ಲಿ ಕೂರಲು ವ್ಯವಸ್ಥೆ ಕಲ್ಪಿಸಲಾಗಿದೆ. ನೆಗಡಿ ಜ್ವರ ಕಂಡುಬಂದ ವಿದ್ಯಾರ್ಥಿಗಳಿಗೆ ತರಗತಿ ಪ್ರವೇಶ ನೀಡುವುದಿಲ್ಲ. ಜಿಲ್ಲೆಯ 864 ಸರ್ಕಾರಿ, 98 ಅನುದಾನಿತ ಹಾಗೂ 698 ಅನುದಾನ ರಹಿತ ಶಾಲೆಗಳಲ್ಲಿ ತರಗತಿಗಳು ಆರಂಭವಾಗಲಿದೆ. ಒಟ್ಟು 1,98,000 ಕ್ಕೂ ಅಧಿಕ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲಿದ್ದಾರೆ ಎಂದು ವಿಜಯಪುರ ಡಿಡಿಪಿಐ ಎಂ.ವಿ ಹೊಸೂರ್ ಮಾಹಿತಿ ನೀಡಿದ್ದಾರೆ.
ಶಾಲೆಗೆ ತೆರಳಲು ಹೊರಟು ನಿಂತ ಹುಬ್ಬಳ್ಳಿ ವಿದ್ಯಾರ್ಥಿಗಳು:
ರಾಜ್ಯಾದ್ಯಂತ 6 ರಿಂದ 8 ನೇ ತರಗತಿ ಶಾಲೆ ಆರಂಭದ ಹಿನ್ನೆಲೆ, ಬೆಳಗ್ಗೆ 10 ಗಂಟೆಗೆ ಜಿಲ್ಲೆಯಲ್ಲಿ ಶಾಲೆಗಳು ಆರಂಭಗೊಂಡಿದೆ. ಕೊವಿಡ್ ನಿಯಮಾವಳಿ ಅನುಸರಿಸಿ ತರಗತಿ ಆರಂಭಗೊಂಡಿದೆ. ಮೊದಲ ದಿನ ಹಾಜರಾತಿ ಕಡ್ಡಾಯವಿಲ್ಲ. ಮಕ್ಕಳು ಶಾಲೆಗೆ ಬರುವಾಗ ಪಾಲಕರ ಒಪ್ಪಿಗೆ ಪತ್ರ ತರಬೇಕು. ಆನ್ ಲೈನ್ ಹಾಗೂ ಆಪ್ ಲೈನ್ ಎರಡಕ್ಕೂ ಅವಕಾಶ ಕಲ್ಪಿಸಲಾಗಿದೆ. ಪೂರ್ಣ ಪ್ರಮಾಣದ ಆಫ್ಲೈನ್ ಕ್ಲಾಸ್ ಆರಂಭಗೊಂಡಿದೆ. ಹುಬ್ಬಳ್ಳಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ತರಗತಿಗಳು ಆರಂಭಗೊಂಡಿದೆ.
ಬಾಗಲಕೋಟೆಯಲ್ಲಿಂದು ವಿದ್ಯಾರ್ಥಿಗಳ ಸಡಗರ:
ಜಿಲ್ಲೆಯಲ್ಲಿ 6 ರಿಂದ 8 ನೇ ತರಗತಿಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಒಟ್ಟು ಮಕ್ಕಳು 1,11,934 ವಿದ್ಯಾರ್ಥಿಗಳು ಇದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಶಾಲೆಗಳು ಆರಂಭಗೊಂಡಿದೆ. ಕೊವಿಡ್ ನಿಯಮಾವಳಿಗಳನ್ನು ಆಧರಿಸಿ ವಿದ್ಯಾರ್ಥಿಗಳನ್ನು ಶಾಲೆಗೆ ಪ್ರವೇಶ ನೀಡಲಾಗಿದೆ.
ಕೊಪ್ಪಳದಲ್ಲಿ ಶಾಲೆ ಆರಂಭ:
6-8ನೇ ತರಗತಿ ಆರಂಭ ಹಿನ್ನಲೆಯಲ್ಲಿ, ಜಿಲ್ಲೆಯಲ್ಲಿ 963 ಶಾಲೆಗಳಲ್ಲಿ ತರಗತಿ ಆರಂಭಗೊಂಡಿದೆ. ಒಟ್ಟು ಒಂದು ಲಕ್ಷ ವಿದ್ಯಾರ್ಥಿಗಳು ಹಾಜರಾಗುವ ಸಾಧ್ಯತೆ ಇದೆ. ಕೊವಿಡ್ ನಿಯಮಗಳನ್ನು ಅನುಸರಿಸೆ ಶಾಲೆಗಳನ್ನು ತೆರೆಯಲಾಗಿದೆ ಎಂದು ಡಿಡಿಪಿಐ ದೊಡ್ಡಬಸಪ್ಪ ನಿರಲಕೇರಿ ಮಾಹಿತಿ ಹಂಚಿಕೊಂಡಿದ್ದಾರೆ.
ಚಿತ್ರದುರ್ಗದಲ್ಲೂ ಶಾಲೆಗಳು ಆರಂಭ:
ಬೆಳ್ಳಂ ಬೆಳಿಗ್ಗೆ ವಿದ್ಯಾರ್ಥಿಗಳೆಲ್ಲ ಶಾಲೆಯತ್ತ ಹೆಜ್ಜೆ ಹಾಕಿದ್ದಾರೆ. ಕೊವಿಡ್ ಭೀತಿಯಲ್ಲೇ ವಿದ್ಯಾರ್ಥಿಗಳು ಶಾಲೆಯತ್ತ ಆಗಮಿಸಿದ್ದಾರೆ. ಶಾಲೆಗಳಲ್ಲಿ ಸ್ಯಾನಿಟೈಸ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 6-8ನೇ ತರಗತಿಯವರೆಗೆ 78,214 ವಿದ್ಯಾರ್ಥಿಗಳಿದ್ದಾರೆ.
ಚಾಮರಾಜನಗರ:
ಬೆಳಿಗ್ಗೆ 10 ರಿಂದ 4.30 ರ ವರಗೆ ತರಗತಿಗಳು ನಡೆಯಲಿವೆ. ಜಿಲ್ಲೆಯಲ್ಲಿ ಸರ್ಕಾರದ ಸೂಚನೆಯಂತೆ ಮಕ್ಕಳು ಶಾಲೆಗೆ ಬರಬೇಕಾದರೆ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯಮಾಡಲಾಗಿದೆ. ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ.
ಇಂದಿನಿಂದ ರಾಜ್ಯದಲ್ಲಿ 6 ರಿಂದ 8ನೇ ತರಗತಿಗಳು ಆರಂಭದ ಹಿನ್ನೆಲೆ ಬಿಬಿಎಂಪಿ ಮತ್ತು ಕೇರಳ ಗಡಿ ಭಾಗದ 6 ಮತ್ತು 7ನೇ ತರಗತಿಗೆ ವಿದ್ಯಾಗಮನ ನಡೆಯಲಿದೆ. ಹಾಗೂ 8ನೇ ತರಗತಿ ಮಾತ್ರ ಆರಂಭಗೊಂಡಿದೆ. 6 ರಿಂದ 10ನೇ ತರಗತಿಗೆ ವಾರದಲ್ಲಿ 5 ದಿನ ಬೆಳಗ್ಗೆ 10 ರಿಂದ 4.30ರವರೆಗೆ ಶಾಲೆಗಳು ನಡೆಯಲಿದ್ದು, ಶನಿವಾರದಂದು ಬೆಳಗ್ಗೆ 10.30ರಿಂದ 12.30ರವರೆಗೆ ತರಗತಿ ನಡೆಯಲಿದೆ. ಆರೋಗ್ಯ ಇಲಾಖೆಯ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.
ಶಾಲೆ ಆರಂಭಕ್ಕೆ ಸೂಚನೆಗಳು :
* 6 ರಿಂದ ಮೇಲಿನ ತರಗತಿಗಳ ವಿದ್ಯಾರ್ಥಿಗಳು ಮನೆಯಿಂದಲೇ ಊಟ ತರಬೇಕು
* ದೈಹಿಕ ಅಂತರ, ಶುಚಿತ್ವ ಮತ್ತು ಮಾಸ್ಕ್ ಹಾಕುವುದು ಕಡ್ಡಾಯ
* ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಟೆಸ್ಟ್
* ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪೋಷಕರಿಂದ ಅನುಮತಿ ಪತ್ರ ಕಡ್ಡಾಯ
* ಕೇರಳದಿಂದ ಬರುವ ಮಕ್ಕಳು, ಶಿಕ್ಷಕರು ಮತ್ತು ಸಿಬ್ಬಂದಿ ಕೊವಿಡ್ ಟೆಸ್ಟ್ ಕಡ್ಡಾಯ
* ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಲ್ಲ
* ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೊವಿಡ್ ನೆಗೆಟಿವ್ ವರದಿ ಅಗತ್ಯ
* ವಸತಿ ನಿಲಯಗಳು ಆರೋಗ್ಯ ಇಲಾಖೆ SOP ಪಾಲಿಸಬೇಕು
* ಶಾಲೆಗೆ ಹಾಜರಾಗಲು ಬಯಸದ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಶಿಕ್ಷಣ
ಇದನ್ನೂ ಓದಿ: School Reopen: ಫೆ. 22ರಿಂದ 6-8 ತರಗತಿಗಳಿಗೆ ಪೂರ್ಣ ಶಾಲೆ ಆರಂಭ -ಶಿಕ್ಷಣ ಸಚಿವ ಸುರೇಶ್ ಕುಮಾರ್ ಘೋಷಣೆ
ಇದನ್ನೂ ಓದಿ: Tv9 Facebook live | ಶಾಲೆ ಆರಂಭವಾದ ಖುಷಿಯಲ್ಲಿ ಕೊರೊನಾ ಎಚ್ಚರ ಮರೆಯದಿರೋಣ