ಅಕ್ರಮ ಲೇಔಟ್ ನಿರ್ಮಾಣಕ್ಕೆ ಸರ್ಕಾರದ ಹಣ ಬಳಕೆ! ತನಿಖೆ ನಡೆಸುವಂತೆ ಗದಗ ಜಿಲ್ಲಾಧಿಕಾರಿಗೆ ಸಾರ್ವಜನಿಕರಿಂದ ಒತ್ತಾಯ
ಖಾಸಗಿ ಲೇಔಟ್ಗಳಲ್ಲಿ ಸರ್ಕಾರದ ಅನುದಾನ ಬಳಸಿ ಯಾವುದೇ ಕಾಮಗಾರಿ ಮಾಡುವಂತಿಲ್ಲ. ಈ ಬಗ್ಗೆ ಸಮಗ್ರ ಮಾಹಿತಿ ಪಡೆದು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗದಗದ ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.
ಗದಗ: ಅವಳಿ ನಗರಗಳಾದ ಗದಗ-ಬೆಟಗೇರಿಯ ಖಾಸಗಿ ಲೇಔಟ್ನ ಮಾಲೀಕರ ತಾಳಕ್ಕೆ ತಕ್ಕಂತೆ ನಗರಸಭೆ ಅಧಿಕಾರಿಗಳು ಕುಣಿಯುತ್ತಿದ್ದು, ನಗರಸಭೆ ಅಧಿಕಾರಿಗಳು ಅಕ್ರಮ ಲೇಔಟ್ಗಳಲ್ಲಿ ಸರ್ಕಾರದ ಕೋಟಿ ಕೋಟಿ ಹಣವನ್ನು ಖರ್ಚು ಮಾಡಿ ಯುಜಿಡಿ, 24×7 ಕುಡಿಯವ ನೀರಿನ ಕಾಮಗಾರಿ ಮಾಡಿದ್ದಾರೆ. ಇದರಲ್ಲಿ ಅಧಿಕಾರಿಗಳು ಭಾರಿ ಡೀಲ್ ಮಾಡಿಕೊಂಡು ಸರ್ಕಾರಕ್ಕೆ ಟೋಪಿ ಹಾಕಿರುವುದು ಮೇಲ್ನೋಟಕ್ಕೆ ಬಯಲಾಗಿದೆ. ಈ ಗೋಲ್ಮಾಲ್ ಬಗ್ಗೆ ಜನರು ಸದ್ಯ ಆಕ್ರೋಶ ವ್ಯಕ್ತಪಡಿಸಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ.
ಗದಗ ಜಿಲ್ಲೆಯಲ್ಲಿ ಖಾಸಗಿ ಲೇಔಟ್ ಮಾಲೀಕರ ಅಟ್ಟಹಾಸಕ್ಕೆ ಕಡಿವಾಣ ಹಾಕುವವರೆ ಇಲ್ಲದಂತಾಗಿದ್ದು, ಅವರು ಆಡಿದ್ದೇ ಆಟ ಮಾಡಿದ್ದೇ ಕಾನೂನಾಗಿದೆ. ಅಕ್ರಮ ತಡೆಯಬೇಕಾದ ಅಧಿಕಾರಿಗಳೇ ಉಂಡ ಮನೆಗೆ ದ್ರೋಹ ಬಗೆಯುತ್ತಿದ್ದಾರೆ. ಸರ್ಕಾರದ ಸಂಬಳ ಪಡೆದು ಸರ್ಕಾರಕ್ಕೆ ಭಾರಿ ಪ್ರಮಾಣದ ಮಕ್ಮಲ್ ಟೋಪಿ ಹಾಕಿದ್ದಾರೆ. ಹೌದು ಗದಗ-ಬೆಟಗೇರಿ ನಗರಸಭೆ ಅಧಿಕಾರಿಗಳು ಖಾಸಗಿ ಲೇಔಟ್ಗಳಲ್ಲಿ ಸರ್ಕಾರ ಕೋಟಿ ಕೋಟಿ ಅನುದಾನ ಖರ್ಚು ಮಾಡಿ ಕಾಮಗಾರಿ ಮಾಡಿದ್ದಾರೆ.
ಅವಳಿ ನಗರದಲ್ಲಿ ಈ ಅಕ್ರಮ ಲೇಔಟ್ನ ಮಾಲೀಕರ ದರ್ಬಾರ್ಗೆ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ಒಂದು ಲೇಔಟ್ ಕಂಪ್ಲೀಟ್ ಆಗಿ ಅಂತಿಮ ಅನುಮೋದನೆ ಸಿಗಬೇಕಾದರೆ ಆ ಲೇಔಟ್ನಲ್ಲಿ ರಸ್ತೆ, ಯುಜಿಡಿ, ಚರಂಡಿ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯವನ್ನು ಮಾಲೀಕರು ಮಾಡಬೇಕು. ಆಗ ಗದಗ ನಗರಾಭಿವೃದ್ಧಿ ಪ್ರಾಧಿಕಾರ ಅಂತಿಮ ಅನುಮೋದನೆ ನೀಡುತ್ತದೆ. ನಂತರವಷ್ಟೇ ಸೈಟ್ ಮಾರಾಟ ಮಾಡಬೇಕು. ಆದರೆ ಇಲ್ಲಿ ಕೆಲ ಖಾಸಗಿ ಲೇಔಟ್ ಮಾಲೀಕರು ಏನೂ ಮಾಡದೇ ಸೈಟ್ ಮಾರಾಟ ಮಾಡಿದ್ದಾರೆ.
ಇಂತಹ ಲೇಔಟ್ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ನಗರಸಭೆ ಹಾಗೂ ಜಿಲ್ಲಾಡಳಿತ ಅಕ್ರಮ ಲೇಔಟ್ ಮಾಲೀಕರ ಜೊತೆ ಡೀಲ್ ಮಾಡಿಕೊಂಡು ಸರ್ಕಾರದ ಕೋಟಿ ಕೋಟಿ ಹಣ ಖರ್ಚು ಮಾಡಿ ಯುಜಿಡಿ, 24×7 ಕುಡಿಯುವ ನೀರಿನ ಯೋಜನೆ ಮಾಡಿದ್ದಾರೆ ಎಂದು ಸೈಟ್ ಖರೀದಿ ಮಾಡಿ ಮೋಸ ಹೋದ ಹಾಲಪ್ಪ ಕಿಡಿಕಾರಿದ್ದಾರೆ.
ಗದಗ ನಗರಾಭಿವೃದ್ಧಿ ಪ್ರಾಧಿಕಾರದ ಅಂತಿಮ ಅನುಮೋದನೆ ಇಲ್ಲದೇ ನಗರಸಭೆ ತನ್ನ ವ್ಯಾಪ್ತಿಗೆ ಪಡೆದುಕೊಳ್ಳಲು ಬರುವುದಿಲ್ಲ. ಎಲ್ಲ ಅಭಿವೃದ್ಧಿ ನೋಡಿಯೇ ನಗರಸಭೆ ತನ್ನ ವ್ಯಾಪ್ತಿಗೆ ಪಡೆದು ಫಾರ್ಮ್-3 ನೀಡಬೇಕು. ಆದರೆ ಅದ್ಯಾವೂದು ಇಲ್ಲದೇ ಫಾರ್ಮ್-3 ನೀಡಿದ್ದು, ಒಂದುಕಡೆ ಆದರೆ ಈಗ ನಗರಸಭೆಯ ಅಧಿಕಾರಿಗಳ ಮತ್ತೊಂದು ದೊಡ್ಡ ಹಗರಣ ಬಯಲಾಗಿದೆ. ಕೇಂದ್ರ ಸರ್ಕಾರದ ಅಮೃತ್ ಯೋಜನೆ ಅಧಿಕಾರಿಗಳು ದುರಪಯೋಗ ಮಾಡಿಕೊಂಡಿದ್ದಾರೆ.
ಖಾಸಗಿ ಲೇಔಟ್ ಮಾಲೀಕರ ಜೊತೆ ಶಾಮೀಲಾಗಿ 50-50 ಅನುಪಾತದಲ್ಲಿ ಡೀಲ್ ಮಾಡಿಕೊಂಡು ಸರ್ಕಾರ ಅನುದಾನ ದುರಪಯೋಗ ಮಾಡಿಕೊಂಡಿದ್ದಾರೆ. ಈಗ ನಗರಸಭೆ ಅಧಿಕಾರಿಗಳ ಅಸಲಿ ಬಣ್ಣ ಬಯಲಾಗಿದ್ದು, ಗದಗ-ಬೆಟಗೇರಿ ಅವಳಿ ನಗರದಲ್ಲಿನ ಹತ್ತಾರು ಲೇಔಟ್ಗಳಲ್ಲಿ ಕೇಂದ್ರ ಸರ್ಕಾರದ ಅಮೃತ್ ಯೋಜನೆ ಇದ್ದು, ಯುಜಿಡಿ ಕಾಮಗಾರಿ ಮಾಡಿದ್ದಾರೆ.
ಈ ಲೇಔಟ್ಗೆ ಅಂತಿಮ ಅನುಮೋದನೆ ಸಿಕ್ಕಿಲ್ಲ. ಇದೊಂದೆ ಅಲ್ಲ ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಹುತೇಕ ಖಾಸಗಿ ಲೇಔಟ್ಗಳಲ್ಲಿ ಕೇಂದ್ರ ಸರ್ಕಾರ ಅನುದಾನ ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳು ಭರ್ಜರಿ ಕಮಾಯಿ ಮಾಡಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಖಾಸಗಿ ಲೇಔಟ್ಗಳಲ್ಲಿ ಸರ್ಕಾರದ ಅನುದಾನ ಬಳಸಿ ಯಾವುದೇ ಕಾಮಗಾರಿ ಮಾಡುವಂತಿಲ್ಲ. ಈ ಬಗ್ಗೆ ಸಮಗ್ರ ಮಾಹಿತಿ ಪಡೆದು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗದಗದ ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.
ಈ ಕೋಟ್ಯಾಂತರ ಹಗರಣದಲ್ಲಿ ಕರ್ನಾಟಕ ಒಳಚರಂಡಿ ಹಾಗೂ ನೀರು ಸರಬುರಾಜು ಮಂಡಳಿ ಹಾಗೂ ನಗರಸಭೆ ಅಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನುವುದು ಪಕ್ಕಾ ಗೊತ್ತಾಗಿದೆ. ಮೊದಲೇ ಸರ್ಕಾರಗಳು ಕರೊನಾ ಹೊಡೆತಕ್ಕೆ ಸಿಲುಕಿ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಈ ನಡುವೆ ಸರ್ಕಾರದ ಕೋಟ್ಯಂತರ ಅನುದಾನವನ್ನು ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಜೊತೆ ಶಾಮೀಲಾಗಿ ಲಪಟಾಯಿಸುತ್ತಿವೆ. ಇಷ್ಟೆಲ್ಲಾ ನಡೆದರೂ ಗದಗ ಜಿಲ್ಲಾಡಳಿತ ಮಾತ್ರ ಜಾಣ ಕುರುಡತನ ಪ್ರದರ್ಶನ ಮಾಡುತ್ತಿದೆ. ಹೀಗಾಗಿ ಈ ಹಗರಣ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗದಗದ ಜಿಲ್ಲಾಧಿಕಾರಿ ಸುಂದರೇಶ ಬಾಬು ಅವರಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಅನಧಿಕೃತ ಕಟ್ಟಡ ನಿರ್ಮಿಸಿದವರಿಗೆ ಗುಡ್ನ್ಯೂಸ್: ಅಕ್ರಮ ಕಟ್ಟಡ ಸಕ್ರಮಗೊಳಿಸಲು BDA ಸಮ್ಮತಿ