ಬೆಳಗಾವಿ: ಜಮ್ಮುವಿನಲ್ಲಿ ಭಾರತೀಯ ಸೇನೆ ಹಾಗೂ ಭಯೋತ್ಪಾದಕರ ಜೊತೆ ನಡೆದ ಗುಂಡಿನ ಕಾಳಗದಲ್ಲಿ ಬೆಳಗಾವಿ ಮೂಲದ ವೀರ ಯೋಧ ಹುತಾತ್ಮರಾಗಿದ್ದಾರೆ.
22 ವರ್ಷದ ರಾಹುಲ್ ಸುಳಗೇಕರ್ ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ವೀರ ಯೋಧ. ಎಂ ಎಲ್‌ಐ ಆರ್ ಸಿ ಯಲ್ಲಿ ತರಬೇತಿ ಪಡೆದು ಜಮ್ಮುವಿನ 4ನೇ ಮರಾಠ ಯೂನಿಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಇತ್ತೀಚೆಗೆ ಭಯೋತ್ಪಾದಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಗುಂಡು ತಗುಲಿ ಅಸುನೀಗಿದ್ದಾರೆ. ಯೋಧನ ಕುಟುಂಬಸ್ಥರಲ್ಲಿ ಆಕ್ರಂದನ ಮನೆ ಮಾಡಿದೆ.
ನಾಳೆ ಅಂತ್ಯ ಸಂಸ್ಕಾರ:
ಹುತಾತ್ಮ ಯೋಧನಿಗೆ ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಂತಾಪ ಸೂಚಿಸಿದ್ದಾರೆ. ನಾಳೆ ಸಂಜೆ ಯೋಧನ ಪಾರ್ಥಿವ ಶರೀರ ಬೆಳಗಾವಿಗೆ ಆಗಮಿಸಲಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.