ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ 1 ಕೋಟಿ ರೂ ಅಪಘಾತ ವಿಮಾ ಪರಿಹಾರ ನೀಡಿಕೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ನೌಕರರ ಅವಲಂಬಿತರಿಗೆ ಅಪಘಾತ ಪರಿಹಾರ ವಿಮೆ ರೂ.1 ಕೋಟಿ ಹಾಗೂ ಇತರೆ ಕಾರಣಗಳಿಂದ ಮೃತಪಟ್ಟ (ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್) 16 ನೌಕರರ ಕುಟುಂಬದವರಿಗೆ ಮೊದಲ ಬಾರಿಗೆ ಕುಟುಂಬ ಕಲ್ಯಾಣ ಯೋಜನೆಯ ಪರಿಹಾರ ಹಣ ರೂ.10 ಲಕ್ಷ ನೀಡಲಾಗಿದೆ. ಯೋಜನೆ ಜಾರಿ ನಂತರದಲ್ಲಿ 17 ಜನ ನೌಕರರು ವೈಯಕ್ತಿಕ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಬೆಂಗಳೂರು, ಫೆಬ್ರವರಿ 14: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (Karnataka State Road Transport Corporation) ವು ತನ್ನ ಸಿಬ್ಬಂದಿಗಳ ಅವಲಂಬಿತರ ಜೀವನಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ತವ್ಯದಲ್ಲಿರುವಾಗ ಅಥವಾ ಕರ್ತವ್ಯದಲ್ಲಿಲ್ಲದ ಸಂದರ್ಭದಲ್ಲಿ ಅಪಘಾತದಿಂದ ಮೃತಪಟ್ಟ ಅಥವಾ ಅಂಗನ್ಯೂನತೆಗೆ ಒಳಗಾದಲ್ಲಿ 1 ಕೋಟಿ ರೂ. ಅಪಘಾತ ವಿಮಾ ಪರಿಹಾರ ಒದಗಿಸುವ ಅಪಘಾತ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆ ಜಾರಿ ನಂತರದಲ್ಲಿ 17 ಜನ ನೌಕರರು ವೈಯಕ್ತಿಕ ಅಥವಾ ಕರ್ತವ್ಯ ನಿರತ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇದುವರೆಗೂ 12 ಜನ ನೌಕರರ ಕುಟುಂಬದವರಿಗೆ ತಲಾ 1 ಕೋಟಿ ರೂ. ಅಪಘಾತ ವಿಮಾ ಮೊತ್ತವನ್ನು ಈಗಾಗಲೇ ವಿತರಿಸಲಾಗಿದೆ.
ಅರಕಲಗೂಡು ಘಟಕ ಹಾಸನ ವಿಭಾಗದ ಚಾಲಕ-ಕಂ-ನಿರ್ವಾಹಕ ರಾಜೇಶ್ ಡಿ.ಸಿ ಎಂಬುವವರು 2023 ಜುಲೈ 29 ರಂದು ಮೃತಪಟ್ಟಿದ್ದರು. ಮೃತರ ಅವಲಂಬಿತರಿಗೆ 1 ಕೋಟಿ ರೂ. ಗಳ ಅಪಘಾತ ಪರಿಹಾರ ವಿಮಾ ಜೊತೆಗೆ, ಉಪಧನ, ಭವಿಷ್ಯ ನಿಧಿ, ನೌಕರರ ಕುಟುಂಬ ಕಲ್ಯಾಣ ಯೋಜನೆ, ಡಿಆರ್ಬಿಎಫ್ ಹಾಗೂ ಗುಂಪು ವಿಮಾ ಯೋಜನೆಯಿಂದ ರೂ.14,19,980/- ಪರಿಹಾರವನ್ನು ನೀಡಲಾಗಿದೆ.
ಇದನ್ನೂ ಓದಿ: ಟಿಕೆಟ್ ರಹಿತ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿದ ಕೆಎಸ್‌ಆರ್‌ಟಿಸಿ: 5,71,286 ರೂ. ದಂಡ ವಸೂಲಿ
ಆದರೆ ಹೃದಯಾಘಾತ, ಕ್ಯಾನ್ಸರ್, ಸ್ಟ್ರೋಕ್ ಮತ್ತಿತರ ಕಾರಣಗಳಿಂದ ಮರಣವನ್ನಪ್ಪುವ ನೌಕರರ ಸಂಖ್ಯೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ವಿಷಯವನ್ನು ಮನಗಂಡು, ಈ ಕಾರಣದಿಂದ ಮೃತರಾಗುವ ಕುಟುಂಬದ ಅವಲಂಬಿತರು ಅನುಭವಿಸುವ ಕಷ್ಟಗಳನ್ನು ಗಮನಿಸಿ, ಅವರಿಗೆ ನೆರವಾಗಲು ಹೆಚ್ಚಿನ ಮೊತ್ತದ ಪರಿಹಾರವನ್ನು ನೀಡುವ ಸದುದ್ದೇಶದಿಂದ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳಿಂದ ಬೇಡಿಕೆ ಬಂದ ಹಿನ್ನಲೆಯಲ್ಲಿ ನೌಕರರ ಕುಟುಂಬ ಕಲ್ಯಾಣ ಯೋಜನೆಯಡಿ ನೀಡಲಾಗುತ್ತಿದ್ದ ಪರಿಹಾರ ಮೊತ್ತ 3 ಲಕ್ಷ ರೂ. ಗಳನ್ನು 2023 ನವೆಂಬರ್ 01 ರಂದು ಜಾರಿಗೆ ಬರುವಂತೆ 10 ಲಕ್ಷ ರೂ. ಗಳಿಗೆ ಪರಿಹಾರ ಮೊತ್ತವನ್ನು ಹೆಚ್ಚಿಸಿ ಮುಂದುವರೆದ ಮರಣ ಪ್ರಕರಣಗಳಿಗೆ ಅನ್ವಯವಾಗುವಂತೆ ಜಾರಿಗೆ ತರಲಾಗಿದೆ.
ನಿಗಮದ ಕುಟುಂಬ ಕಲ್ಯಾಣ ಪರಿಹಾರ ಯೋಜನೆ ಅಡಿಯಲ್ಲಿ ಕಳೆದ ನವೆಂಬರ್ 2023 ಮತ್ತು ಡಿಸೆಂಬರ್ 2023 ರವರೆಗೆ ಮರಣ ಹೊಂದಿದ 16 ಸಿಬ್ಬಂದಿಗಳ ಅರ್ಹ ಪ್ರಕರಣಗಳಲ್ಲಿ ಕುಟುಂಬದ ಸದಸ್ಯರಿಗೆ ತಲಾ 10 ಲಕ್ಷ ರೂ. ಪರಿಹಾರ ಚೆಕ್ನ್ನು ವಿತರಿಸಲಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಸ್ಆರ್. ಶ್ರೀನಿವಾಸ್ (ವಾಸು) ರವರು ಕೇಂದ್ರ ಕಛೇರಿಯಲ್ಲಿ ನಿಗಮದ ಸೇವೆಯಲ್ಲಿರುವಾಗ ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿಯ ಅವಲಂಬಿತರಿಗೆ 1 ಕೋಟಿ ರೂ. ಪರಿಹಾರ ಮೊತ್ತದ ಚೆಕ್ಕನ್ನು ಹಾಗೂ ಇತರೆ ಕಾರಣಗಳಿಂದ ಮೃತಪಟ್ಟಿದ್ದ 16 ಸಿಬ್ಬಂದಿಗಳ ಅವಲಂಭಿತರಿಗೆ ಕುಟುಂಬ ಕಲ್ಯಾಣ ಯೋಜನೆಯಡಿ ತಲಾ 10 ಲಕ್ಷ ರೂ. ಗಳು ಹಾಗೂ ಅವರಿಗೆ ನಿಗಮದಿಂದ ಪಾವತಿಸಬೇಕಾದ ಭವಿಷ್ಯನಿಧಿ, ಉಪದನ ಚೆಕ್ಕನ್ನು ಇಂದು ವಿತರಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಕೆಎಸ್‌ಆರ್‌ಟಿಸಿ ರವರು ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಅತೀ ಶ್ರಮ ಜೀವಿಗಳಾಗಿದ್ದು, ನಿಗಮವು ಅವರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿರುವುದನ್ನು ತಿಳಿದು ಬಹಳ ಸಂತೋಷವಾಯಿತು. ಈ ಯೋಜನೆಗಳ ಅನುಷ್ಠಾನಕ್ಕಾಗಿ ಸಾರಿಗೆ ಸಚಿವರನ್ನು ಹಾಗೂ ಆಡಳಿತ ಮಂಡಳಿಯನ್ನು ಅಭಿನಂದಿಸಿದರು.
ತಮಗೆ ದೊರೆತಿರುವ ಪರಿಹಾರ ಹಣವನ್ನು ಯಾರಿಗೂ ಕೊಡದೇ ಮುಂದಿನ ಜೀವನ ನಿರ್ವಹಣೆಗಾಗಿ ಸೂಕ್ತವಾಗಿ ವಿನಿಯೋಗಿಸಿ ಕಾಪಾಡಿಕೊಳ್ಳುವಂತೆ ಹಾಗೂ ಅವಲಂಭಿತರಲ್ಲಿ ನೌಕರಿಗೆ ಅರ್ಹರಿರುವವರಿಗೆ ಕಾಲವಿಳಂಬವಿಲ್ಲದೇ ನೌಕರಿಯನ್ನು ಒದಗಿಸಲು ಕ್ರಮ ಜರುಗಿಸಲು ತಿಳಿಸಿ ಎಲ್ಲರಿಗೂ ಶುಭ ಹಾರೈಸಿ, ಕಾರ್ಮಿಕ ಪರವಾದ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಹಮ್ಮಿಕೊಂಡು ಅನುಷ್ಠಾನಗೊಳಿಸುವಂತೆ ತಿಳಿಸಿದರು.
ಇದಕ್ಕೆ ಮುನ್ನ ಸಾರಿಗೆ ಮತ್ತು ಮುಜರಾಯಿ ಸಚಿವರು, ಸಿಬ್ಬಂದಿಗಳ ಅವಲಂಬಿತರನ್ನು ಭೇಟಿ ಮಾಡಿ, ನಿಗಮವು ಕಳೆದ ಎರಡು ತಿಂಗಳ ಹಿಂದಷ್ಟೇ ಪರಿಹಾರ ಮೊತ್ತವನ್ನು 3 ಲಕ್ಷ ದಿಂದ 10 ಲಕ್ಷ ರೂ. ಗಳಿಗೆ ಏರಿಕೆ ಮಾಡಿದ್ದು, ಇದರಿಂದ ಇಂದು 16 ಕುಟುಂಬಗಳಿಗೆ ಆರ್ಥಿಕವಾಗಿ ಸ್ವಲ್ಪ ಹೆಚ್ಚು ಹಣ ದೊರೆಯುವಂತಾಗಿದ್ದು, ಜೀವಕ್ಕೆ ಬೆಲೆ ಕಟ್ಟುವುದು ಸಾಧ್ಯವಿಲ್ಲ, ಆದರೂ ಪರಿಹಾರ ಮೊತ್ತವನ್ನು ಸದುಪಯೋಗ ಪಡಿಸಿಕೊಂಡು ಸುಸೂತ್ರ ಜೀವನ ನಿರ್ವಹಣೆ ಮಾಡುವಂತೆ ತಿಳಿಸಿ ಎಲ್ಲರಿಗೂ ಶುಭ ಹಾರೈಸಿದರು.
ಇದನ್ನೂ ಓದಿ: ಕೆಎಸ್ಆರ್ಟಿಸಿಯ ಶಕ್ತಿ ಯೋಜನೆಗೆ ಒಲಿದು ಬಂದ SKOCH ರಾಷ್ಟ್ರೀಯ ಪ್ರಶಸ್ತಿ; ಕಾರ್ಮಿಕ ಕಲ್ಯಾಣಕ್ಕೂ ಪ್ರಶಸ್ತಿ
ಕಾರ್ಯಕ್ರಮದಲ್ಲಿ ವಿ.ಅನ್ಬುಕುಮಾರ್, ಭಾ.ಆ.ಸೇ, ವ್ಯವಸ್ಥಾಪಕ ನಿರ್ದೇಶಕರು, ಡಾ.ನಂದಿನಿದೇವಿ. ಭಾ.ಆ.ಸೇ, ನಿರ್ದೇಶಕರು (ಸಿಬ್ಬಂದಿ ಮಾತ್ತು ಜಾಗೃತ), ಕಾರ್ಮಿಕ ಸಂಘಟನೆಗಳ ಮುಖಂಡರು, ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:11 pm, Wed, 14 February 24