ಬೆಂಗಳೂರು, ಮಾರ್ಚ್ 13: ಕಳೆದುಹೋದ ಮೊಬೈಲ್ ಫೋನ್‌ಗಳನ್ನು (Mobile Phones) ಸೆಂಟ್ರಲ್ ಈಕ್ವಿಪ್ಮೆಂಟ್ ಐಡೆಂಟಿಟಿ ರಿಜಿಸ್ಟ್ರಿ (CEIR) ನೆರವಿನೊಂದಿಗೆ ಪತ್ತೆಹಚ್ಚಿ ಮರು ವಶಪಡಿಸಿಕೊಳ್ಳುವಲ್ಲಿ ಕರ್ನಾಟಕವು (Karnataka) ದೇಶದಲ್ಲೇ ಅಗ್ರಸ್ಥಾನದಲ್ಲಿದೆ ಎಂದು ವರದಿಯಾಗಿದೆ. 2022 ರ ಸೆಪ್ಟೆಂಬರ್ನಿಂದ ಸಿಇಐಆರ್ ಬಳಸಿಕೊಂಡು ರಾಜ್ಯವು 89,546 ಕಳೆದುಹೋದ ಫೋನ್‌ಗಳನ್ನು ಪತ್ತೆಹಚ್ಚಲಾಗಿದೆ. ಈ ಪೈಕಿ ಪೊಲೀಸರು 29,509 ಫೋನ್‌ಗಳನ್ನು ಯಶಸ್ವಿಯಾಗಿ ಮರುವಶಪಡಿಸಿಕೊಂಡಿದ್ದಾರೆ. ದೇಶಾದ್ಯಂತ, 1,00,303 ಫೋನ್‌ಗಳನ್ನು ಮರುವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ ಶೇ 30 ರಷ್ಟು ಕರ್ನಾಟಕದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಸಿಇಐಆರ್ ಎಂಬುದು ಕಳೆದುಹೋದ ಅಥವಾ ಕದ್ದ ಫೋನ್‌ಗಳನ್ನು ಪತ್ತೆಹಚ್ಚಲು ದೂರಸಂಪರ್ಕ ಇಲಾಖೆಯು ನೀಡುವ ಸೇವಾ ಮಾಡ್ಯೂಲ್ ಆಗಿದೆ. ಇದನ್ನು ಬಳಸಿಕೊಂಡು, ಐಎಂಇಐ (IMEI) ಸಂಖ್ಯೆಯನ್ನು ಒದಗಿಸುವ ಮೂಲಕ ಕಳೆದುಹೋದ ಮೊಬೈಲ್ ಫೋನನ್ನು ತಕ್ಷಣವೇ ಬ್ಲಾಕ್ ಮಾಡಬಹುದಾಗಿದೆ. ಆ ಮೊಬೈಲ್ ಫೋನನ್ನು ಯಾರಾದರೂ ಬಳಸಲು ಪ್ರಯತ್ನಿಸಿದರೆ, ಪೋರ್ಟಲ್ ಬಳಸಿ ಪೊಲೀಸರು ಅವರನ್ನು ಪತ್ತೆಹಚ್ಚಬಹುದಾಗಿದೆ.
ಈ ಹಿಂದೆ, ಕಳೆದುಹೋದ ಫೋನ್‌ಗಳನ್ನು ಪತ್ತೆಹಚ್ಚಲು ಪೊಲೀಸರಿಗೆ ಯಾವುದೇ ಮಾರ್ಗಗಳಿರಲಿಲ್ಲ. ಈ ಕಾರಣದಿಂದ ಕಳೆದು ಹೋದ ಫೋನ್ಗಳ ಪತ್ತೆ ಹಾಗೂ ಮರು ವಶಪಡಿಸಿಕೊಳ್ಳುವಿಕೆ ಸಾಧ್ಯವಾಗಿರಲಿಲ್ಲ.
ಪ್ರತಿ ಬಾರಿ ಮೊಬೈಲ್ ಕಳೆದುಹೋದ ದೂರು ಬಂದಾಗ, ಸಿಇಐಆರ್ ಬಳಸಿಕೊಂಡು ಫೋನ್ ಬ್ಲಾಕ್ ಮಾಡಲು ನಾವು ಮಾಲೀಕರನ್ನು ಕೇಳುತ್ತೇವೆ. ಅದರಿಂದ, ಆ ಫೋನ್ ಮರುಬಳಕೆ ಮಾಡಿದಾಗ ನಮಗೆ ಟ್ರೇಸ್ ಅಲರ್ಟ್ ಬರುತ್ತದೆ. ಅದನ್ನು ಬಳಸಿಕೊಂಡು ನಾವು ಫೋನ್ ಮರುಪಡೆಯಲು ಪ್ರಯತ್ನಿಸಬಹುದು ಎಂದು ಹೆಚ್ಚುವರಿ ಪೂರ್ವ ವಲಯದ ಪೊಲೀಸ್ ಕಮಿಷನರ್ ರಮಣ್ ಗುಪ್ತಾ ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಇವರು ಸಿಇಐಆರ್ ವ್ಯವಸ್ಥೆಯನ್ನು ಕರ್ನಾಟಕದಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ಕಾರಣಕರ್ತರಾದ ಅಧಿಕಾರಿಯೂ ಹೌದು.
ಆದಾಗ್ಯೂ, ಕಳವಾದ ಮೊಬೈಲ್ ಫೋನ್ಗಳು ಪತ್ತೆಯಾದರೂ ಕೆಲವೊಮ್ಮೆ ಮರುವಶ ಕಷ್ಟವಾಗುತ್ತಿದೆ. ಈವರೆಗೆ ಪತ್ತೆಯಾದ ಫೋನ್‌ಗಳಲ್ಲಿ ಸುಮಾರು ಶೇ 32 ರಷ್ಟನ್ನು ಮಾತ್ರವೇ ವಶಕ್ಕೆ ಪಡೆಯಲು ಪೊಲೀಸರಿಂದ ಸಾಧ್ಯವಾಗಿದೆ. ಪೊಲೀಸ್ ಕಾರ್ಯಾಚರಣೆಗೆ ಇರುವ ಇತಿಮಿತಿಗಳು, ನಿರ್ಬಂಧಗಳೇ ಇದಕ್ಕೆ ಕಾರಣ ಎಂದು ಅವರು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.
ಸಾಮಾನ್ಯವಾಗಿ ಕದ್ದ ಫೋನ್‌ಗಳನ್ನು ಕಳ್ಳರು ದೂರದ ಊರುಗಳಿಗೆ ಕಳುಹಿಸುತ್ತಾರೆ. ಉದಾಹರಣೆಗೆ, ಕಳವಾದ ಫೋನ್ ಛತ್ತೀಸ್‌ಗಢದಲ್ಲಿ ಪತ್ತೆಯಾದರೆ ಅದನ್ನು ಮರುಪಡೆಯಲು ನಾವು ಇಲ್ಲಿಂದ ತಂಡವನ್ನು ಕಳುಹಿಸಲು ಸಾಧ್ಯವಿಲ್ಲ. ಪತ್ತೆಯಾದ ಪ್ರತಿ ಫೋನ್ ಅನ್ನು ಮರುಪಡೆಯಲು ತಂಡವನ್ನು ಕಳುಹಿಸುವುದು ಆರ್ಥಿಕ ಹೊರೆ. ಅಲ್ಲದೆ, ಕಳೆದುಹೋದ ಪ್ರತಿಯೊಂದು ಫೋನ್ ಅನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಸಿಬ್ಬಂದಿ ಇಲ್ಲ. ಅಲ್ಲದೆ, ಫೋನ್‌ನ ಮೌಲ್ಯವನ್ನು ಪರಿಗಣಿಸಿದಾಗ ಇದು ಪೊಲೀಸರಿಗೆ ಆದ್ಯತೆಯಾಗುವುದಿಲ್ಲ ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೇಸಿಗೆಯ ಬಿಸಿಲಿನಲ್ಲಿ ಬಾಂಬ್ನಂತೆ ಸಿಡಿಯುತ್ತೆ ಮೊಬೈಲ್ಗಳು: ನಿರ್ಲಕ್ಷಿಸದಿರಿ
ಆದಾಗ್ಯೂ, ಹೆಚ್ಚಿನ ಫೋನ್‌ಗಳನ್ನು ಮರುಪಡೆಯಲು ಪೊಲೀಸರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ರಮಣ್ ಗುಪ್ತಾ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ