
ಬೆಂಗಳೂರು, ಆಗಸ್ಟ್ 2: ವೇತನ ಪರಿಷ್ಕರಣೆ, ವೇತನ ಹಿಂಬಾಕಿ ಸೇರಿ ವಿವಿಧ ಬೇಡಿಕೆ ಮುಂದಿಟ್ಟು ಸರ್ಕಾರಿ ಸಾರಿಗೆ ನಿಗಮಗಳ ನೌಕರರು ಆಗಸ್ಟ್ 5 ರಂದು ಕರೆ ಕೊಟ್ಟಿರುವ ಅನಿರ್ದಿಷ್ಟಾವಧಿ ಮುಷ್ಕರ ಸಾರಿಗೆ ಇಲಾಖೆಯ (KSRTC, BMTC Employees Strike) ತಲೆ ಕೆಡಿಸಿದೆ. ಈಗಾಗಲೇ ನೌಕರರ ಜೊತೆ ಹಲವು ಸುತ್ತಿನ ಸಭೆ ನಡೆಸಿ ನೌಕರರನ್ನು ಸಮಾಧಾನಪಡಿಸಲು ವಿಫಲವಾಗಿದೆ. ಹೀಗಾಗಿ ಅಗಸ್ಟ್ 5 ಮುಷ್ಕರ ದಟ್ಟವಾಗಿದ್ದು, ಪ್ರಯಾಣಿಕರ ಪಾಡೇನು ಎಂಬ ಆತಂಕ ಹೆಚ್ಚಾಗಿದೆ. ಹೀಗಾಗಿ ಮುಷ್ಕರದ (Transport Strike) ವೇಳೆ ಎದುರಾಗಬಹುದಾದ ಅನಾನುಕೂಲ, ಅವಾಂತರಗಳನ್ನು ತಪ್ಪಿಸಲು ಸಾರಿಗೆ ಇಲಾಖೆ ಪರ್ಯಾಯ ವ್ಯವಸ್ಥೆ ಏನು ಎಂಬುದರ ಬಗ್ಗೆ ಚಿತ್ತ ಹರಿಸಿದೆ. ಹೀಗಾಗಿ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಪ್ರಮುಖರ ಜೊತೆ ಸಾರಿಗೆ ಇಲಾಖೆ ಮಹತ್ವದ ಸಭೆ ನಡೆಸಿದೆ.
ಸಭೆಯಲ್ಲಿ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತ ಯೋಗೀಶ್, ಅಪರ ಆಯುಕ್ತ ಮಲ್ಲಿಕಾರ್ಜುನ್ ಸೇರಿ ಹಿರಿಯ ಅಧಿಕಾರಿಗಳು ಭಾಗಿ ಆಗಿದ್ದರು. ಈ ವೇಳೆ ಖಾಸಗಿ ಬಸ್ ಮಾಲೀಕರಿಗೆ ಮನವಿ ಮಾಡಿರುವ ಸಾರಿಗೆ ಇಲಾಖೆ, ಮುಷ್ಕರ ಶುರುವಾದರೆ ಖಾಸಗಿ ಬಸ್ ಗಳ ಮೂಲಕ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಸೇವೆ ಒದಗಿಸಿ ಎಂದು ಹೇಳಿದ್ದಾರೆ.
ಸಭೆಯಲ್ಲಿ ಭಾಗಿ ಆಗಿದ್ದ ಖಾಸಗಿ ಸಾರಿಗೆ ಸಂಘಟನೆಗಳ ಪ್ರಮುಖರು, ಮುಷ್ಕರದ ವೇಳೆ ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿ ಸರ್ಕಾರಿ ನಿಗಮ ಬಸ್ಗಳಿಗೆ ಪರ್ಯಾಯವಾಗಿ ಖಾಸಗಿ ಬಸ್ಗಳನ್ನು ರಸ್ತೆಗೆ ಇಳಿಸಲು ಹಲವು ಬೇಡಿಕೆ ಮುಂದಿಟ್ಟಿದ್ದಾರೆ.
ಕಾರ್ಮಿಕ ಇಲಾಖೆ ಕೂಡ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ನೌಕರರ ಜೊತೆ ಎರಡನೇ ಸುತ್ತಿನ ಸಂಧಾನ ಸಭೆ ನಡೆಸಿದ್ದು, ಫಲಪ್ರದವಾಗಿಲ್ಲ. ಕೊನೆಗೆ ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ಎಲ್ಲರ ಚಿತ್ತ ಸಿಎಂ ಸಿದ್ದರಾಮಯ್ಯರತ್ತ ತಿರುಗಿದೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರಕ್ಕೆ ಟಕ್ಕರ್ ಕೊಡಲು ಮುಂದಾದ ರಾಜ್ಯ ಸರ್ಕಾರ!
ಆಗಸ್ಟ್ 4, ಅಂದರೆ ಸೋಮವಾರದಂದು ಸಿಎಂ ಸಿದ್ದರಾಮಯ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಮುಷ್ಕರಕ್ಕೆ ಮುಂದಾಗಿರುವ ನೌಕರರ ಜೊತೆ ನಿರ್ಣಾಯಕ ಸಭೆ ನಡೆಸಲಿದ್ದು, ಅಗಸ್ಟ್ 5 ರ ಮುಷ್ಕರದ ಭವಿಷ್ಯ ನಿರ್ಧಾರವಾಗಲಿದೆ. ಒಟ್ಟಾರೆ ಈ ಎಲ್ಲಾ ವಿದ್ಯಮಾನಗಳ ಮಧ್ಯೆ ರಾಜ್ಯದ ಲಕ್ಷಾಂತರ ಪ್ರಯಾಣಿಕರು ಆತಂಕದಲ್ಲಿ ಇರುವುದಂತೂ ಸತ್ಯ.
ವರದಿ: ಲಕ್ಷ್ಮಿ ನರಸಿಂಹ, ಟಿವಿ9, ಬೆಂಗಳೂರು