ಮೊದಲ ಬಾರಿ ನಮ್ಮ ಮೆಟ್ರೋದಲ್ಲಿ ಯಶಸ್ವಿಯಾಗಿ ಅಂಗಾಂಗ ಸಾಗಾಟ
ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ದೇಣಿಗೆಯಾದ ಯಕೃತ್ತನ್ನು ಯಶಸ್ವಿಯಾಗಿ ಸಾಗಿಸಲಾಯಿತು. ವೈದ್ಯಕೀಯ ತಂಡವು ವೈಟ್‌ಫೀಲ್ಡ್ ನಿಲ್ದಾಣದಿಂದ ಆರ್‌ಆರ್ ನಗರ ನಿಲ್ದಾಣಕ್ಕೆ ಮೆಟ್ರೋ ಮೂಲಕ ಯಕೃತ್ತನ್ನು ಸಾಗಿಸಿತು. ಮೆಟ್ರೋ ಸಿಬ್ಬಂದಿ ಮತ್ತು ಭದ್ರತಾ ಅಧಿಕಾರಿಗಳು ಸಮಯೋಚಿತ ಸಹಾಯ ನೀಡಿದರು. ಈ ಕಾರ್ಯಾಚರಣೆಯು ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ಬಿಎಂಆರ್‌ಸಿಎಲ್‌ನ ಮಾರ್ಗಸೂಚಿಗಳ ಅಡಿಯಲ್ಲಿ ನಡೆಯಿತು.

ಬೆಂಗಳೂರು, ಆಗಸ್ಟ್ 2: ಪ್ರಥಮ ಬಾರಿಗೆ, ನಮ್ಮ ಮೆಟ್ರೋದಲ್ಲಿ (Namma Metro) ದೇಣಿಗೆಯಾದ ಮಾನವ ಯಕೃತ್ತನ್ನು (Liver) ಶಸ್ತ್ರಚಿಕಿತ್ಸೆಗಾಗಿ ಯಶಸ್ವಿಯಾಗಿ ಸಾಗಿಸಲಾಯಿತು. ಶುಕ್ರವಾರ (ಆಗಸ್ಟ್ 1) ರಾತ್ರಿ 8:38ಕ್ಕೆ ವೈದೇಹಿ ಆಸ್ಪತ್ರೆಯ ಓರ್ವ ವೈದ್ಯ ಮತ್ತು ಏಳು ಮಂದಿ ವೈದ್ಯಕೀಯ ಸಿಬ್ಬಂದಿ ಯಕೃತ್ತನ್ನು ತೆಗೆದುಕೊಂಡು ವೈಟ್ಫಿಲ್ಡ್ ಮೆಟ್ರೋ ನಿಲ್ದಾಣಕ್ಕೆ ಅಂಬ್ಯುಲೆನ್ಸ್ನಲ್ಲಿ ಸುರಕ್ಷಿತವಾಗಿ ಬಂದರು. ವೈದ್ಯರ ತಂಡ ಮೆಟ್ರೋ ನಿಲ್ದಾಣಕ್ಕೆ ತಲುಪಿದ ತಕ್ಷಣ, ಸಹಾಯಕ ಭದ್ರತಾ ಅಧಿಕಾರಿ (ASO) ಮತ್ತು ಮೆಟ್ರೋ ಸಿಬ್ಬಂದಿ ತಂಡವನ್ನು ಸ್ವಾಗತಿಸಿ, ದಾಖಲೆ ಪರಿಶೀಲನೆ ನಡೆಸಿ ಬಳಿಕ ಭದ್ರತೆಯನ್ನು ಒದಗಿಸಿದರು.
ಆ ಬಳಿಕ, ಯಕೃತ್ತನ್ನು ಹೊತ್ತ ಮೆಟ್ರೋ ರೈಲು ರಾತ್ರಿ 8:42ಕ್ಕೆ ವೈಟ್ಫಿಲ್ಡ್ ನಿಲ್ದಾಣದಿಂದ ಹೊರಟು, ರಾತ್ರಿ 9.48ಕ್ಕೆ ರಾಜರಾಜೇಶ್ವರಿ ನಗರ (RR ನಗರ) ಮೆಟ್ರೋ ನಿಲ್ದಾಣಕ್ಕೆ ತಲುಪಿತು. ಅಲ್ಲಿ ಮತ್ತೊಬ್ಬ ASO ಮತ್ತು ಮೆಟ್ರೋ ಸಿಬ್ಬಂದಿ ವೈದ್ಯಕೀಯ ತಂಡವನ್ನು ಸ್ವಾಗತಿಸಿ, ಕಾಯುತ್ತಿರುವ ಅಂಬ್ಯುಲೆನ್ಸ್ಗೆ ಯಕೃತ್ತನ್ನು ವರ್ಗಾವಣೆ ಮಾಡುವಲ್ಲಿ ನೆರವಾದರು. ಅಂಗಾಂಗ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಸಮಯಕ್ಕೆ ಅಂಗವನ್ನು ಸ್ಪರ್ಶ ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿಸಲಾಯಿತು.
ಈ ಜೀವ ಉಳಿಸುವ ಕಾರ್ಯಾಚರಣೆಯಲ್ಲಿ ಸಮಯೋಚಿತ ಸಹಕಾರ ಮತ್ತು ಜವಾಬ್ದಾರಿ ತೋರ್ಪಡಿಸಿದ ಸಹಾಯಕ ಭದ್ರತಾ ಅಧಿಕಾರಿಗಳು, ಹೋಮ್ ಗಾರ್ಡುಗಳು ಮತ್ತು ಮೆಟ್ರೋ ಸಿಬ್ಬಂದಿಗೆ ವೈದ್ಯಕೀಯ ತಂಡದವರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Metro Yellow Line: ಕೊನೆಗೂ ಮೆಟ್ರೋ ಹಳದಿ ಮಾರ್ಗ ಸಂಚಾರಕ್ಕೆ ಮುಹೂರ್ತ ಬಹುತೇಕ ಫಿಕ್ಸ್, ಮೋದಿಯಿಂದ ಚಾಲನೆ ಸಾಧ್ಯತೆ
ಈ ಕಾರ್ಯಚರಣೆ ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ಸಂಯುಕ್ತ ಕಾರ್ಯವಿಧಾನ ಆದೇಶ (PO)ದ ಮಾರ್ಗಸೂಚಿಗಳಡಿ ನೆರವೇರಿತು. ಇದು ಮೆಟ್ರೋ ರೈಲು ಮೂಲಕ ಅಂಗಾಂಗ ಸಾಗಣೆ ನಡೆಸಿದ ದೇಶದ ಎರಡನೇ ಸಾಧನೆಯಾಗಿದೆ.
ಮೆಟ್ರೋದಲ್ಲಿ ಯಕೃತ್ತು ಸಾಗಣೆ ವಿಡಿಯೋ
ಹೈದರಾಬಾದ್ ಮೆಟ್ರೋದಲ್ಲಿ ಹೃದಯ ಸಾಗಿಸಲಾಗಿತ್ತು
ಇದೇ ವರ್ಷ ಜನವರಿಯಲ್ಲಿ ಹೈದರಾಬಾದ್ ಮೆಟ್ರೋ ರೈಲಿನಲ್ಲಿ ಹೃದಯವನ್ನು ಸಾಗಿಸಲಾಗಿತ್ತು. ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಯುವಕನ ಅಂಗಾಗಳನ್ನು ಆತನ ಪೋಷಕರು ದಾನ ಮಾಡಿದ್ದರು. ದೇಣಿಗೆಯಾದ ಯುವಕನ ಮೆದುಳನ್ನು ವೈದ್ಯರು ಮೆಟ್ರೋದಲ್ಲಿ ಮತ್ತೊಂದು ಆಸ್ಪತ್ರೆಗೆ ಸಾಗಿಸಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:03 pm, Sat, 2 August 25



