Karnataka Transport Workers Strike: ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಂದ್​, ಸರ್ಕಾರಿ ಬಸ್​ ನಿಲ್ದಾಣದಲ್ಲಿ ಖಾಸಗಿ ಬಸ್​ಗಳ ದರ್ಬಾರ್​​

|

Updated on: Apr 07, 2021 | 6:32 AM

KSRTC BMTC Employees Strike: ಕೊಪ್ಪಳ, ತುಮಕೂರು, ಹಾವೇರಿ, ಮಂಡ್ಯ, ಬಾಗಲಕೋಟೆ, ಚಿತ್ರದುರ್ಗ, ರಾಮನಗರ, ನೆಲಮಂಗಲ, ಯಾದಗಿರಿ, ಕೋಲಾರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆಎಸ್​ಆರ್​ಟಿಸಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಆಗಿದೆ. ಬೀದರ್​ನಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಶೇ.40ರಷ್ಟು ಬಸ್​ ಮಾತ್ರ ಸಂಚಾರ ಆರಂಭಿಸಿವೆ.

Karnataka Transport Workers Strike: ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಂದ್​, ಸರ್ಕಾರಿ ಬಸ್​ ನಿಲ್ದಾಣದಲ್ಲಿ ಖಾಸಗಿ ಬಸ್​ಗಳ ದರ್ಬಾರ್​​
ಸಾರಿಗೆ ನೌಕರರ ಮುಷ್ಕರ
Follow us on

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಮುನಿಸಿಕೊಂಡಿರುವ ಕೆಎಸ್​ಆರ್​ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮದ ನೌಕರರು ತಮ್ಮ ಬೇಡಿಕೆಗಳನ್ನು ಈ ಕೂಡಲೇ ಈಡೇರಿಸುವಂತೆ ಆಗ್ರಹಿಸಿ ಮುಷ್ಕರದ ಮಾರ್ಗ ಹಿಡಿದಿದ್ದಾರೆ. ಪರಿಣಾಮವಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳಗ್ಗಿನಿಂದಲೇ ಕೆಎಸ್​ಆರ್​ಟಿಸಿ ಬಸ್ ಸಂಚಾರ ಸ್ತಬ್ಧವಾಗಿದ್ದು, ಬೆಂಗಳೂರಿನಲ್ಲೂ ಬಿಎಂಟಿಸಿ ಬಸ್​ಗಳು ರಸ್ತೆಗಿಳಿಯದ ಕಾರಣ ದಿನನಿತ್ಯ ಕೆಲಸ ಕಾರ್ಯಗಳಿಗೆ ಬಸ್​ಗಳನ್ನೇ ನೆಚ್ಚಿಕೊಂಡ ಜನ ಬೇರೆ ವ್ಯವಸ್ಥೆ ಹುಡುಕಿಕೊಳ್ಳಲು ಪರದಾಡುತ್ತಿದ್ದಾರೆ.

ಬೆಂಗಳೂರಿನ ಸ್ಯಾಟಲೈಟ್​ ಬಸ್​ ನಿಲ್ದಾಣ ಬಿಕೋ ಎನ್ನುತ್ತಿದ್ದು, ಕೇವಲ ಬೆರಳಿಕೆಯಷ್ಟು ಅಂತರರಾಜ್ಯ ಬಸ್​ಗಳು ಮಾತ್ರ ಓಡಾಟ ಆರಂಭಿಸಿವೆ. ಮೆಜೆಸ್ಟಿಕ್​ ಬಸ್ ನಿಲ್ದಾಣವೂ ಖಾಲಿ ಖಾಲಿಯಾಗಿದ್ದು ಬೆಳಗ್ಗೆ ಬೇಗ ಬಂದರೆ ಬಸ್​ ಸಿಗಬಹುದೆಂಬ ನಿರೀಕ್ಷೆಯಲ್ಲಿ ಆಗಮಿಸಿದ್ದ ಜನ ನಿರಾಶರಾಗಿದ್ದಾರೆ. ಪ್ರತಿನಿತ್ಯಕ್ಕೆ ಹೋಲಿಸಿದರೆ ಇಂದು ಪ್ರಯಾಣಿಕರ ಸಂಖ್ಯೆಯೂ ಇಳಿಮುಖವಾಗಿದೆ. ಅಂತೆಯೇ, ನಗರ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್​ ಸಂಚಾರ ಸ್ಘಗಿತಗೊಂಡಿರುವ ಹಿನ್ನೆಲೆಯಲ್ಲಿ ಯಶವಂತಪುರ, ಗೊರಗುಂಟೆ ಪಾಳ್ಯ, ಪೀಣ್ಯ ಸೇರಿದಂತೆ ಬಹುತೇಕ ಎಲ್ಲಾ ಭಾಗಗಳಲ್ಲೂ ಪ್ರಯಾಣಿಕರಿಗೆ ತೊಂದರೆಯಾಗಿದೆ.

ಕೊಪ್ಪಳ, ತುಮಕೂರು, ಹಾವೇರಿ, ಮಂಡ್ಯ, ಬಾಗಲಕೋಟೆ, ಚಿತ್ರದುರ್ಗ, ರಾಮನಗರ, ನೆಲಮಂಗಲ, ಯಾದಗಿರಿ, ಕೋಲಾರ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆಎಸ್​ಆರ್​ಟಿಸಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಸಾರಿಗೆ ಸಂಚಾರದಲ್ಲಿ ವ್ಯತ್ಯಯ ಆಗಿದೆ. ಬೀದರ್​ನಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಶೇ.40ರಷ್ಟು ಬಸ್​ ಮಾತ್ರ ಸಂಚಾರ ಆರಂಭಿಸಿವೆ.

ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎನ್ನುವುದು ನಿಶ್ಚಿತವಾಗುತ್ತಿದ್ದಂತೆಯೇ ಬೆಂಗಳೂರಿನ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣಕ್ಕೆ ಖಾಸಗಿ ಬಸ್​ಗಳು ಲಗ್ಗೆ ಇಟ್ಟಿವೆ. ಆರಂಭದಲ್ಲಿ ಒಂದೆರೆಡು ಬಿಎಂಟಿಸಿ ಬಸ್​ ಕಣ್ಣಿಗೆ ಬಿದ್ದವಾದರೂ ಅದರಲ್ಲಿದ್ದ ಚಾಲಕರು ಹಾಗೂ ನಿರ್ವಾಹಕರು ನಮ್ಮ ಪಾಳಿ ಮುಗಿದಿದೆ. ಬಸ್​ ಅನ್ನು ಡಿಪೋಕ್ಕೆ ಬಿಟ್ಟು ಮನೆಗೆ ತೆರಳಲು ಬಂದಿದ್ದೇವೆ ಎಂದು ಹೇಳುವ ಮೂಲಕ ಇಂದು ಯಾರೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂಬುದನ್ನು ಹೇಳಿದರು.

ಇದನ್ನೂ ಓದಿ:
Karnataka Transport Workers Strike: ಮೆಜೆಸ್ಟಿಕ್ ಬಸ್​ನಿಲ್ದಾಣಕ್ಕೆ ಖಾಸಗಿ ಬಸ್​ಗಳು 

Bus Strike: ಸಾರಿಗೆ ನೌಕರರ ಜತೆ ಸಂಧಾನ ಪ್ರಶ್ನೆಯೇ ಇಲ್ಲ; ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಎಚ್ಚರಿಕೆ

Published On - 6:30 am, Wed, 7 April 21