Karnataka Transport Workers Strike: ಮೆಜೆಸ್ಟಿಕ್ ಬಸ್ನಿಲ್ದಾಣಕ್ಕೆ ಖಾಸಗಿ ಬಸ್ಗಳು
KSRTC BMTC Employees Strike LIVE: ಬಂದ್ ನಿರ್ಧಾರ ಒಪ್ಪಲು ಸಾಧ್ಯವಿಲ್ಲ ಎಂದಿರುವ ರಾಜ್ಯ ಸರ್ಕಾರ ಗಂಭೀರ ಎಚ್ಚರಿಕೆ ನೀಡಿದೆ. ಮುಷ್ಕರ ನಾಳೆಯಿಂದ ಎಂದು ಘೋಷಣೆಯಾಗಿದ್ದರೂ ಈಗಿನಿಂದಲೇ ಬಸ್ಗಳ ಸಂಚಾರ ವಿರಳವಾಗಿದ್ದು ಜನರು ಪರದಾಡುತ್ತಿದ್ದಾರೆ.
ಕರ್ನಾಟಕದ ಎಲ್ಲ ನಾಲ್ಕೂ ಸಾರಿಗೆ ನಿಗಮಗಳ ಸಿಬ್ಬಂದಿ ನಾಳೆಯಿಂದ (ಏಪ್ರಿಲ್ 7) ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಿದ್ದಾರೆ. ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC), ವಾಯವ್ಯ ಕರ್ನಾಟಕ ಸಾರಿಗೆ ನಿಗಮ (NWKRTC) ಮತ್ತು ಈಶಾನ್ಯ ಕರ್ನಾಟಕ ಸಾರಿಗೆ ನಿಗಮದ (NEKRTC) ಸಿಬ್ಬಂದಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಸ್ ಮುಷ್ಕರದ ಬಿಸಿ ಈಗಿನಿಂದಲೇ ಜನರಿಗೆ ತಟ್ಟುತ್ತಿದೆ. ಬೆಂಗಳೂರಿನ ಮೆಜೆಸ್ಟಿಕ್ ಸೇರಿದಂತೆ ರಾಜ್ಯದ ಹಲವೆಡೆ ಬಸ್ ಸಿಗದೆ ಜನರು ಪರದಾಡುತ್ತಿದ್ದಾರೆ. 6ನೇ ವೇತನ ಆಯೋಗದ ಪ್ರಕಾರ ತಮಗೆ ವೇತನ ನೀಡಬೇಕು ಎಂಬುದು ಸಾರಿಗೆ ನಿಗಮದ ಸಿಬ್ಬಂದಿಯ ಬಹುದೊಡ್ಡ ಬೇಡಿಕೆ. ಆದರೆ ಸರ್ಕಾರ ಇದನ್ನು ಒಪ್ಪುತ್ತಿಲ್ಲ.
‘ಕೊವಿಡ್ ಕಾರಣ ಮುಷ್ಕರ ಮಾಡದಂತೆ ಸಾರಿಗೆ ಇಲಾಖೆ ನೌಕರರಲ್ಲಿ ಮನವಿ ಮಾಡುತ್ತೇವೆ. ಸಾರಿಗೆ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. 6ನೇ ವೇತನ ಆಯೋಗ ಜಾರಿಗೆ ಮನವಿ ಮಾಡಿದ್ದಾರೆ. ಆದರೆ ಉಪಚುನಾವಣೆಗಳು ಘೋಷಣೆಯಾಗಿರುವುದರಿಂದ ನೀತಿಸಂಹಿತೆ ಜಾರಿಯಾಗಿದೆ. ಈಗ 6ನೇ ವೇತನ ಆಯೋಗದ ಬೇಡಿಕೆ ಈಡೇರಿಸಲು ಆಗಲ್ಲ. ಸಾರಿಗೆ ಇಲಾಖೆಗೆ ಆದಾಯ ಇಲ್ಲದಿದ್ದರೂ ಲಾಕ್‌ಡೌನ್ ಸಮಯದಲ್ಲೂ ಸಂಬಳ ನೀಡಲಾಗಿದೆ. ನಾಳೆ ಸಾರಿಗೆ ನೌಕರರ ಮುಷ್ಕರ ಮಾಡಲು ಮುಂದಾದರೆ ಸಾರಿಗೆ ಇಲಾಖೆಯಿಂದ ಪರ್ಯಾಯ ವ್ಯವಸ್ಥೆ ಮಾಡ್ತೇವೆ. ಸಾರಿಗೆ ನೌಕರರ ಜತೆ ಸಂಧಾನದ ಪ್ರಶ್ನೆಯೇ ಇಲ್ಲ’ ಎಂದು ರಾಜ್ಯ ಸರ್ಕಾರ ಗಂಭೀರ ಎಚ್ಚರಿಕೆ ನೀಡಿದೆ. ಮುಷ್ಕರ ನಾಳೆ ಇದ್ದರೂ ಸಹ ಈಗಿನಿಂದಲೇ ಬಸ್ಗಳ ಬಂದ್ ಬಿಸಿ ಸಾರ್ವಜನಿಕರಿಗೆ ತಟ್ಟುತ್ತಿದೆ.
LIVE NEWS & UPDATES
-
ಮೆಜೆಸ್ಟಿಕ್ ಬಸ್ನಿಲ್ದಾಣಕ್ಕೆ ಖಾಸಗಿ ಬಸ್ಗಳು
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಖಾಸಗಿ ಬಸ್ಗಳು ಪ್ರವೇಶಿಸಲು ಅವಕಾಶ ನೀಡಲಾಗಿದೆ. ಬಸ್ಗಳಿಲ್ಲದೆ ಬಿಕೋ ಎನ್ನುತ್ತಿರುವ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲೂ ಗಣನೀಯವಾಗಿ ಇಳಿಮುಖವಾಗಿದೆ. ಬಸ್ಗಳಿಲ್ಲದಿದ್ದರಿಂದ ಆಟೋದಲ್ಲಿ ಪ್ರಯಾಣಿಕರು ಅನಿವಾರ್ಯವಾಗಿ ಪ್ರಯಾಣಿಸುತ್ತಿದ್ದಾರೆ. ಮೆಜೆಸ್ಟಿಕ್ನಲ್ಲಿ ಕೆಲ ಆಟೊ ಚಾಲಕರು ಸಂಕಷ್ಟ ಸಂದರ್ಭವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಪ್ರಯಾಣಿಕರಿಂದು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ.
-
ಬೆಳಗಾವಿ ರಾಣಿ ಚೆನ್ನಮ್ಮ ವಿವಿ ಪರೀಕ್ಷೆ ಮುಂದೂಡಿಕೆ
ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ ಮುಷ್ಕರ ಹಿನ್ನೆಲೆಯಲ್ಲಿ ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪದವಿ, ಸ್ನಾತಕೋತ್ತರ, ಎಂಬಿಎ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪದವಿ ಪರೀಕ್ಷೆಗಳು ಏಪ್ರಿಲ್ 15ಕ್ಕೆ, ಎಂಬಿಎ ಪರೀಕ್ಷೆಗಳು ಏಪ್ರಿಲ್ 25ಕ್ಕೆ, ಸ್ನಾತಕೋತ್ತರ ಪರೀಕ್ಷೆಗಳು ಏಪ್ರಿಲ್ 26ಕ್ಕೆ ಮುಂದೂಡಿ ವಿವಿ ಮೌಲ್ಯಮಾಪನ ಕುಲಸಚಿವರು ಆದೇಶ ಹೊರಡಿಸಿದ್ದಾರೆ.
-
ಪರ್ಮಿಟ್ ಸರೆಂಡರ್ ಮಾಡಿದ್ದ ವಾಹನಗಳಿಗೆ ವಿನಾಯಿತಿ
ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಿಬ್ಬಂದಿ ಮುಷ್ಕರ ಹಿನ್ನೆಲೆಯಲ್ಲಿ ಪರ್ಮಿಟ್ ಸರೆಂಡರ್ ಮಾಡಿದ್ದ ವಾಹನಗಳಿಗೆ ವಿನಾಯಿತಿ ನೀಡಲು ರಾಜ್ಯ ಸರ್ಕಾರ ಮುದಾಗಿದೆ. ಪ್ರಯಾಣಿಕರ ಸಂಚಾರಕ್ಕೆ ಮುಂದಾಗುವ ಖಾಸಗಿ ವಾಹನಗಳಿಗೆ ತೆರಿಗೆ ಪಾವತಿಯಿಂದ ಒಂದು ತಿಂಗಳ ಅವಧಿಗೆ ವಿನಾಯಿತಿ ನೀಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ದಾವಣಗೆರೆ ವಿವಿ ವ್ಯಾಪ್ತಿಯಲ್ಲಿ ನಾಳೆಯೇ ಪರೀಕ್ಷೆ
ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ, ಅಂದರೆ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪದವಿ ಕಾಲೇಜುಗಳಲ್ಲಿ ನಿಗದಿಯಂತೆ ಪರೀಕ್ಷೆಗಳು ನಡೆಯಲಿವೆ ಎಂದು ದಾವಣಗೆರೆ ವಿವಿ ಪರೀಕ್ಷಾಂಗ ವಿಭಾಗದ ರಿಜಿಸ್ಟ್ರಾರ್ ಮಾಹಿತಿ ನೀಡಿದ್ದಾರೆ. ನಾಳೆಯಿಂದ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ ಮುಷ್ಕರ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಈ ಮಾಹಿತಿ ನೀಡಿದೆ.
ಮಂಗಳೂರು ವಿವಿ ಪರೀಕ್ಷೆ ಮುಂದೂಡಿಕೆ
ನಾಳೆಯಿಂದ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ ಅನಿರ್ದಿಷ್ಟಾವಧಿ ಮುಷ್ಕರ ಕರೆ ನೀಡಿರುವ ಹಿನ್ನೆಲೆಯಲ್ಲಿ, ನಾಳೆ ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾಲಯ ಪರೀಕ್ಷೆ ಮುಂದೂಡಲಾಗಿದೆ. ಮುಂದೂಡಿಕೆಯಾದ ಪರೀಕ್ಷೆಯ ದಿನಾಂಕವನ್ನು ವಿಶ್ವವಿದ್ಯಾಲಯ ಇನ್ನೂ ಘೋಷಿಸಿಲ್ಲ. ಈ ಕುರಿತು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ.ಪಿ.ಎಲ್.ಧರ್ಮ ಟಿವಿ9ಗೆ ತಿಳಿಸಿದರು.
ನಿಗದಿಯಂತೆ ನಡೆಯಲಿವೆ ನಾಳೆ ಕುವೆಂಪು ವಿವಿ ಪರೀಕ್ಷೆಗಳು
ನಾಳೆಯಿಂದ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ ಅನಿರ್ದಿಷ್ಟಾವಧಿ ಮುಷ್ಕರ ಕರೆ ನೀಡಿರುವ ಹಿನ್ನೆಲೆಯಲ್ಲಿ, ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ. ನಾಳೆ ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ ಎಂದು ಕುವೆಂಪು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಕಣ್ಣನ್ ಮಾಹಿತಿ ನೀಡಿದ್ದಾರೆ. ವೇಳಾಪಟ್ಟಿಯಂತೆ ಪದವಿ, ಸ್ನಾತಕೋತ್ತರ ಪರೀಕ್ಷೆ ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ಉತ್ತರ ವಿವಿ ಪರೀಕ್ಷೆ ಮುಂದೂಡಿಕೆ
ನಾಳೆಯಿಂದ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ ಮುಷ್ಕರ ಹಿನ್ನೆಲೆಯಲ್ಲಿ ಏಪ್ರಿಲ್ 7ಕ್ಕೆ ನಡೆಯಬೇಕಿದ್ದ ಬೆಂಗಳೂರು ಉತ್ತರ ವಿವಿಯ ಎಲ್ಲ ಪರೀಕ್ಷೆಗಳನ್ನೂ ಮುಂದೂಡಲಾಗಿದೆ ಎಂದು ಬೆಂಗಳೂರು ಉತ್ತರ ವಿವಿ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಬೆಂಗಳೂರು ನಗರ ವಿವಿ ಪರೀಕ್ಷೆ ಮುಂದೂಡಿಕೆ
ಸಾರಿಗೆ ನಿಗಮ ಸಿಬ್ಬಂದಿ ಮುಷ್ಕರದ ಹಿನ್ನೆಲೆಯಲ್ಲಿ ಏಪ್ರಿಲ್ 7ರಂದು ನಡೆಯಬೇಕಿದ್ದ ಬೆಂಗಳೂರು ನಗರ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮುಂದೂಡಿದ ಪರೀಕ್ಷೆಗಳನ್ನು ಎಂದು ನಡೆಸಲಾಗುವುದು ಎಂಬ ಮಾಹಿತಿಯನ್ನು ನಂತರದ ದಿನಗಳಲ್ಲಿ ತಿಳಿಸಲಾಗುವುದು ಎಂದು ಕುಲಸಚಿವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆಲಸಕ್ಕೆ ಬರುವವರಿಗೆ ಭದ್ರತೆ: ಬಿಎಂಟಿಸಿ ಭರವಸೆ
ಕೆಲಸಕ್ಕೆ ಬರುವ ಎಲ್ಲ ಸಿಬ್ಬಂದಿಗೂ ನಾವು ಸೂಕ್ತ ಭದ್ರತೆ ನೀಡುತ್ತೇವೆ. ಭದ್ರತೆ ನೀಡುವಂತೆ ಮುಖ್ಯಮಂತ್ರಿಯೇ ಸಭೆಯಲ್ಲಿ ಸೂಚಿಸಿದ್ದಾರೆ. ಖಾಸಗಿ ವಾಹನ, ಪ್ರಯಾಣಿಕರಿಗೆ ಪೊಲೀಸ್ ಹಾಗೂ ನಮ್ಮ ಭದ್ರತಾ ಸಿಬ್ಬಂದಿ ಸೂಕ್ತ ಭದ್ರತೆ ನೀಡಲಿದ್ದಾರೆ. ಬಸ್ಸುಗಳಿಗೆ, ಬಸ್ ನಿಲ್ದಾಣಗಳಿಗೆ ಯಾರೇ ಹಾನಿ ಮಾಡಿದ್ರು ಕಠಿಣ ಕ್ರಮ ಕೈಗೊಳ್ಳಲಾಗುತ್ತೆ. ಕಳೆದ ಪ್ರತಿಭಟನೆ ವೇಳೆ ಬಸ್ಸುಗಳಿಗೆ ಹಾನಿ ಮಾಡಿದ್ದಕ್ಕೆ ಸಾರಿಗೆ ಸಚಿವರು ತೀವ್ರ ಬೇಸರ ಮಾಡಿಕೊಂಡಿದ್ದರು ಎಂದು BMTC ಭದ್ರತಾ ವಿಭಾಗದ ನಿರ್ದೇಶಕ ಅರುಣ್ ಕೆ. ಹೇಳಿದ್ದಾರೆ.
ಬಸ್ ಓಡಿಸಲು ಮುಂದೆ ಬಂದ ನಿವೃತ್ತ ಸಿಬ್ಬಂದಿ
ಸಾರಿಗೆ ನಿಗಮಗಳ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬಸ್ ಓಡಿಸಲು ಬಿಎಂಟಿಸಿ ನಿವೃತ್ತ ಸಿಬ್ಬಂದಿ ಮುಂದೆ ಬಂದಿದ್ದಾರೆ ಎಂದು ಬಿಎಂಟಿಸಿ ಭದ್ರತೆ ವಿಭಾಗದ ನಿರ್ದೇಶಕ ಡಾ.ಕೆ.ಅರುಣ್ ಮಾಹಿತಿ ನೀಡಿದ್ದಾರೆ. ನಾಳೆ ತರಬೇತಿ ನೌಕರರಿಂದ ಬಸ್ ಚಾಲನೆ ಮಾಡಿಸುವುದಿಲ್ಲ. ನಿವೃತ್ತ ಸಿಬ್ಬಂದಿಯಿಂದ ಬಸ್ ಓಡಿಸುವ ಬಗ್ಗೆಯೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.
ನಾಳೆಯ ಮುಷ್ಕರ; ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಸಿ.ಹೆಚ್.ಪ್ರತಾಪ್ ರೆಡ್ಡಿ ನಿರ್ದೇಶನ
ನಾಳೆಯಿಂದ ಕರೆ ನೀಡಲಾಗಿರುವ ಸಾರಿಗೆ ಸಿಬ್ಬಂದಿ ಮುಷ್ಕರ ಸಂಬಂಧಿಸಿ ಪೊಲೀಸ್ ಆಯುಕ್ತರು ಅಥವಾ ಜಿಲ್ಲಾ ಪೊಲೀಸ್ ಅಧೀಕ್ಷಕರು ತಮ್ಮ ವ್ಯಾಪ್ತಿಯ ರಸ್ತೆ ಸಾರಿಗೆ ಸಂಸ್ಥೆ ಅಥವಾ ನಗರ ಸಾರಿಗೆ ಸಂಸ್ಥೆಯ ಮುಖ್ಯಸ್ಥರೊಂದಿಗೆ ಸಹಕಾರ ಮತ್ತು ಸಂಯೋಜನೆ ಮಾಡಿಕೊಂಡು ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಸಿ.ಹೆಚ್,ಪ್ರತಾಪ್ ರೆಡ್ಡಿ ನಿರ್ದೇಶನ ನೀಡಿದ್ದಾರೆ.
ನಾಳೆಯಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯವಲ್ಲ
ನಾಳೆಯಿಂದ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ ಮುಷ್ಕರ ಇರುವ ಕಾರಣ 10ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗೆ ಹಾಜರಾತಿ ಕಡ್ಡಾಯವಲ್ಲ ಎಂದು ರಾಜ್ಯದ ಎಲ್ಲಾ ಶಾಲೆಗಳಿಗೂ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಸಾರಿಗೆ ಸಂಚಾರ ಸುಗಮ ಆಗುವವರೆಗೆ ವರ್ಚುವಲ್ ಅಥವಾ ಪರ್ಯಾಯ ಮಾರ್ಗ ಅನುಸರಿಸಿ ಬೋಧನೆ ಮಾಡುವಂತೆ ಸೂಚನೆಯಲ್ಲಿ ತಿಳಿಸಲಾಗಿದೆ
ಧಾರವಾಡ: ಖಾಸಗಿ ವಾಹನಗಳನ್ನು ರಸ್ತೆಗಿಳಿಸಲು ಜಿಲ್ಲಾಡಳಿತದಿಂದ ಸಿದ್ಧತೆ
ನಾಳೆಯಿಂದ ಸಾರಿಗೆ ಸಿಬ್ಬಂದಿ ಮುಷ್ಕರ ಇರುವ ಕಾರಣ ಧಾರವಾಡ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದೆ. ಸಂಚಾರ ವ್ಯವಸ್ಥೆಗಾಗಿ ನಾಳೆ ಖಾಸಗಿ ವಾಹನಗಳನ್ನು ರಸ್ತೆಗಿಳಿಸಲು ಧಾರವಾಡ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಮುಂಜಾನೆ 6 ಗಂಟೆಯಿಂದಲೇ ಖಾಸಗಿ ವಾಹನಗಳ ವ್ಯವಸ್ಥೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಪೊಲೀಸ್ ರಕ್ಷಣೆ ನೀಡಲಾಗುವುದು ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರಿಗೆ ಮುಷ್ಕರ; ಬೆಂಗಳೂರು ಕೇಂದ್ರ ವಿವಿ ಪರೀಕ್ಷೆ ಮುಂದೂಡಿಕೆ
ನಾಳೆಯಿಂದ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಪರೀಕ್ಷೆಗಳು ಮುಂದೂಡಿಕೆಯಾಗಿವೆ. ವಿದ್ಯಾರ್ಥಿಗಳ ಮನವಿ ಮೇರೆಗೆ ಪರೀಕ್ಷೆಗಳು ಮುಂದೂಡಿಕೆಯಾಗಿದ್ದು, ಶೀಘ್ರದಲ್ಲೇ ಮುಂದಿನ ದಿನಾಂಕ ಪ್ರಕಟಿಸಲಾಗುವುದು ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಮಾಧ್ಯಮ ಪ್ರಕಟಣೆ ತಿಳಿಸಿದೆ.
‘ನಮ್ಮ ಮೆಟ್ರೋ’ದಿಂದ ನಾಳೆ ಹೆಚ್ಚುವರಿ ಸೇವೆ
ನಾಳೆ ‘ನಮ್ಮ ಮೆಟ್ರೋ’ ಹೆಚ್ಚುವರಿ ರೈಲುಗಳನ್ನು ಬಿಡಲಿದೆ. ‘ನಮ್ಮ ಮೆಟ್ರೋ’ದ ನೇರಳೆ ಮಾರ್ಗದಲ್ಲಿ 4.5 ನಿಮಿಷಕ್ಕೆ ಒಂದು ರೈಲು, ಹಸಿರು ಮಾರ್ಗದಲ್ಲಿ 5 ನಿಮಿಷಕ್ಕೆ ಒಂದು ರೈಲು ಸಂಚರಿಸಲಿದೆ. ಸಾರಿಗೆ ಸಿಬ್ಬಂದಿ ಮುಷ್ಕರದಿಂದ ಜನರಿಗೆ ತೊಂದರೆಯಾಗದಂತೆ ಹೆಚ್ಚುವರಿ ಸೇವೆ ಒದಗಿಸಲು ‘ನಮ್ಮ ಮೆಟ್ರೋ’ ನಿರ್ಧರಿಸಿದೆ. ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ಹೆಚ್ಚುವರಿ ರೈಲು ಸಂಚರಿಸಲಿದೆ. ‘ನಮ್ಮ ಮೆಟ್ರೋ‘ದಲ್ಲಿ ಪ್ರಯಾಣಿಸಲು ಸ್ಮಾರ್ಟ್ ಕಡ್ಡಾಯವಾಗಿದ್ದು ಹೆಚ್ಚುವರಿ ಸೇವೆ ಒದಗಿಸುತ್ತಿರುವ ಕುರಿತು ಬಿಎಂಆರ್ಸಿಎಲ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಮುಷ್ಕರ ಕೈಬಿಟ್ಟು ಸರ್ಕಾರಕ್ಕೆ ಸಹಕಾರ ನೀಡಿ: ಸಿಎಂ ಬಿ ಎಸ್ ಯಡಿಯೂರಪ್ಪ ಮನವಿಪೂರ್ವಕ ಎಚ್ಚರಿಕೆ
ಹಠ ಮಾಡದೇ ಸಾರಿಗೆ ನೌಕರರು ಮುಷ್ಕರ ಹಿಂಪಡೆಯಬೇಕು. ನಿಮ್ಮ 9 ಬೇಡಿಕೆಗಳ ಪೈಕಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ. ನಾವು ಒಟ್ಟಾಗಿ ಜನರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಅವಕಾಶ ನೀಡಬೇಡಿ. ಮುಷ್ಕರ ಕೈಬಿಟ್ಟು ಸರ್ಕಾರಕ್ಕೆ ಸಹಕಾರ ನೀಡಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸಾರಿಗೆ ಸಿಬ್ಬಂದಿ ನೌಕರರಿಗೆ ಹುಬ್ಬಳ್ಳಿಯಲ್ಲಿ ಮನವಿ ಮಾಡಿದ್ದಾರೆ. ನೌಕರರ ಮುಷ್ಕರಕ್ಕೆ ಪ್ರತಿಯಾಗಿ ಸರ್ಕಾರ ವ್ಯವಸ್ಥೆ ಮಾಡಿಕೊಂಡಿದೆ. ಸಾರ್ವಜನಿಕರ ಅನುಕೂಲಕ್ಕೆ ಏನು ಬೇಕೋ ಎಲ್ಲ ವ್ಯವಸ್ಥೆಗಳನ್ನೂ ಸರ್ಕಾರ ಮಾಡಿಕೊಂಡಿದೆ. ಖಾಸಗಿ ಬಸ್ಗಳು, ರೈಲು ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಅವರ ಮನವಿಪೂರ್ವಕ ಎಚ್ಚರಿಕೆ ನೀಡಿದ್ದಾರೆ.
ನಾಳೆ ಬೆಳಗ್ಗೆ 6 ಗಂಟೆಯಿಂದ ಮುಷ್ಕರ ಆರಂಭ-ಕೋಡಿಹಳ್ಳಿ
ನಾಳೆ ಬೆಳಗ್ಗೆ 6 ಗಂಟೆಯಿಂದ ಮುಷ್ಕರ ಆರಂಭವಾಗುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಎಲ್ಲರೂ ಕರ್ತವ್ಯಕ್ಕೆ ಗೈರಾಗಿ ಮುಷ್ಕರದಲ್ಲಿ ಪಾಲ್ಗೊಳ್ಳಲು ಕರೆ ನೀಡಿದ್ದಾರೆ.
ತುಮಕೂರಿನಲ್ಲಿ ಖಾಸಗಿ ಬಸ್ಗಳ ಸಂಚಾರಕ್ಕೆ ಮುಕ್ತ ಅವಕಾಶ
ನಾಳೆ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಸರ್ಕಾರಿ ಬಸ್ ಗಳ ರೂಟ್ನಲ್ಲಿ ಖಾಸಗಿ ಬಸ್ ಗಳ ಸಂಚಾರಕ್ಕೆ ಮುಕ್ತ ಅವಕಾಶವನ್ನು ನೀಡಲಾಗಿದೆ. ಬೆಂಗಳೂರು, ಮಂಡ್ಯ, ಮೈಸೂರು, ಚಿತ್ರದುರ್ಗ ಸೇರಿದಂತೆ ಯಥಾಸ್ಥಿತಿ ಖಾಸಗಿ ಬಸ್ ಸಂಚರಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಇದುವರೆಗೂ ಇರುವ ದರವನ್ನೇ ಮುಂದುವರೆಸಿ ಬಸ್ ಸಂಚರಿಸಿ ಎಂದು ಡಿಸಿ ತಿಳಿಸಿದ್ದಾರೆ. ತುಮಕೂರು ಎಸ್ಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಡಿಪೋ ಹಾಗೂ ಸರ್ಕಾರಿ ಬಸ್ ನಿಲ್ದಾಣದಲ್ಲಿ ಯಾರು ಪ್ರತಿಭಟನೆ ಮಾಡಬಾರದು ಎಂದು ಹೇಳಿದ್ದಾರೆ.
ನಾಳೆ ನಡೆಯಬೇಕಿದ್ದ ತುಮಕೂರು ವಿವಿ ಪರೀಕ್ಷೆ ಮುಂದೂಡಿಕೆ
ನಾಳೆಯಿಂದ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ ಮುಷ್ಕರ ಹಿನ್ನೆಲೆ ನಾಳೆ ನಡೆಯಬೇಕಿದ್ದ ತುಮಕೂರು ವಿವಿ ಪರೀಕ್ಷೆಯನ್ನು ಏಪ್ರಿಲ್ 19ಕ್ಕೆ ಮುಂದೂಡಲಾಗಿದೆ. ಈ ಬಗ್ಗೆ ತುಮಕೂರು ವಿವಿ ಕುಲಪತಿ ಪ್ರೋ.ಸಿದ್ದೇಗೌಡ ಟಿವಿ9 ತಿಳಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚು ಇರುವ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ಬಸ್ಗಳಿಲ್ಲದೇ ಪ್ರಯಾಣಿಕರು ಕಂಗಾಲು
ಕೋಲಾರ ಸರ್ಕಾರಿ ಬಸ್ ನಿಲ್ದಾಣದಲ್ಲಿ ಬಸ್ಗಳಿಲ್ಲದೇ ಜನರು ಪರದಾಟ ಪಡುತ್ತಿದ್ದಾರೆ. ನಾಳಿನ ಬಂದ್ ಹಿನ್ನೆಲೆಯಲ್ಲಿ ಈಗಿನಿಂದಲೇ ಬಸ್ ನಿಲ್ದಾಣದತ್ತ ಬಸ್ಗಳು ಬರುತ್ತಿಲ್ಲ. ಇದೇ ಪರಿಸ್ಥಿತಿ ಧಾರವಾಡ, ಗದಗ, ಬೆಂಗಳೂರಿನ ಯಶವಂತಪುರ ಮುಂತಾದೆಡೆ ಕಂಡುಬರುತ್ತಿದೆ. ಯಶವಂತಪುರ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಪ್ರಯಾಣಿಕರು ಕಾದು ಕುಳಿತಿದ್ದಾರೆ. ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್ಗೆ ತೆರಳಲು ಗಂಟೆಗೊಂದರಂತೆ ಬಸ್ಗಳು ಆಗಮಿಸುತ್ತಿವೆ.
ಸರ್ಕಾರಿ ಬಸ್ ಏಕಸ್ವಾಮ್ಯ ಮುರಿದು ಖಾಸಗಿಯವರಿಗೆ ಅವಕಾಶ ನೀಡಿ; ಉದ್ಯಮಿ ಕುಯಿಲಾಡಿ ಸುರೇಶ್ ನಾಯಕ್
ನಾಳೆಯಿಂದ 8,000 ಬಸ್ಗಳು 20 ಸಾವಿರ ಕ್ಯಾಬ್ಗಳು ಓಡಾಟ ಮಾಡಲಿವೆ. 4,000 ಸ್ಟೇಜ್ ಕ್ಯಾರೇಜ್ ವಾಹನಗಳು ನಮ್ಮ ಬಳಿ ಇವೆ. ಸಾರ್ವಜನಿಕರ ಸೇವೆಗೆ ಎಲ್ಲ ವಾಹನ ರಸ್ತೆಗೆ ಇಳಿಯುತ್ತವೆ. ಉತ್ತರ ಕರ್ನಾಟಕದಲ್ಲಿ ಸರ್ಕಾರಿ ಬಸ್ ಏಕಸ್ವಾಮ್ಯತೆ ಇದೆ. ಖಾಸಗಿ ವಾಹನಗಳಿಗೆ ಲೈಸೆನ್ಸ್ ನೀಡಿ. ರಾಜ್ಯಾದ್ಯಂತ ಬಸ್ಗಳಲ್ಲಿ 60:40 ಅನುಪಾತ ಜಾರಿಗೆ ತನ್ನಿ. ರಾಜ್ಯಾದ್ಯಂತ ಖಾಸಗೀಕರಣ ವ್ಯವಸ್ಥೆಯನ್ನು ಜಾರಿಗೆ ತನ್ನಿ. ಇದರಿಂದ ಸರ್ಕಾರಕ್ಕೆ ತೆರಿಗೆ ಸಂಗ್ರಹಕ್ಕೆ ಬಹಳ ಉಪಯೋಗ ಆಗುತ್ತದೆ ಎಂದು ಉಡುಪಿಯಲ್ಲಿ ಉದ್ಯಮಿ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.
ನಾಳೆ ಚಳವಳಿ ನಡೆಸುವ ದಿನ; ಕೋಡಿಹಳ್ಳಿ ಚಂದ್ರಶೇಖರ್
ಸರ್ಕಾರ ಈಗ ಕೈಗೊಂಡಿರೋದು ತಪ್ಪು ನಿರ್ಧಾರ. ನೆರೆ ರಾಜ್ಯಗಳಂತೆ ಕರ್ನಾಟಕದಲ್ಲೂ ಸಾರಿಗೆ ಸಿಬ್ಬಂದಿಗಳನ್ನು ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು. ಸರ್ಕಾರಕ್ಕೆ ಮೂರು ತಿಂಗಳು ಗಡುವು ನೀಡಲಾಗಿತ್ತು. ಅದು ಇಂದಿಗೆ ಮುಕ್ತಾಯವಾಗಿದೆ. ನಾಳೆ ಚಳವಳಿ ನಡೆಸುವ ದಿನವಾಗಿದೆ. ನಾಳೆಯ ಮುಷ್ಕರದಲ್ಲಿ ಯಾವುದೇ ಬದಲಾವಣೆ ಇಲ್ಲ.ಅದು ಯಥಾವತ್ತಾಗಿ ನಡೆಯುತ್ತದೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಳೆ ಮೈಸೂರು ವಿವಿ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ
ನಾಳೆ ಸಾರಿಗೆ ನೌಕರರ ಮುಷ್ಕರ ಇದ್ದರೂ ಸಹ ಮೈಸೂರು ವಿಶ್ವವಿದ್ಯಾಲಯದ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ ಎಂದು ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ರಿಜಿಸ್ಟ್ರಾರ್ ಪ್ರೊ ಎ ಪಿ ಜ್ಞಾನಪ್ರಕಾಶ್ ಮಾಹಿತಿ ನೀಡಿದ್ದಾರೆ. ಪದವಿ ವಿಭಾಗದ ಎಲ್ಲಾ ಪರೀಕ್ಷೆಗಳು ಎಂದಿನಂತೆ ನಡೆಯಲಿದೆ. ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ಮತ್ತು ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.
ನಾಳೆ ಪರೀಕ್ಷೆಯಿದೆ, ಆದರೆ ಬಸ್ ಇರಲ್ಲ.. ಏನು ಮಾಡಬೇಕು?
ರಾಜ್ಯದಲ್ಲಿ ಕೆಲ ಪರೀಕ್ಷೆಗಳು ನಾಳೆ ನಡೆಯಲಿದ್ದು, ನಾಳೆಯೇ ನಾಳೆ ಕೆಎಸ್ಆರ್ಟಿಸಿ, ಬಿಎಂಟಿಸಿ ನೌಕರರ ಮುಷ್ಕರವಿದೆ. ಇದರಿಂದ ಪರೀಕ್ಷಾರ್ಥಿಗಳಿಗೆ ತೊಂದರೆ ಆಗುವ ಕುರಿತು ಧಾರವಾಡದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ‘ಕಳೆದ ವರ್ಷ ನಾವು ವಿದ್ಯಾರ್ಥಿಗಳು ಹೇಗೆ ಶಾಲೆ ಕಾಲೇಜು ಮತ್ತು ಪರೀಕ್ಷೆಗಳಿಗೆ ಬರುತ್ತಾರೆ ಎಂಬುದನ್ನು ಸರ್ವೆ ಮಾಡಿದ್ದೆವು. ಶೇ 10-15 ವಿದ್ಯಾರ್ಥಿಗಳು ಸಾಮೂಹಿಕ ಸಾರಿಗೆ ವ್ಯವಸ್ಥೆ ಮೇಲೆ ಅವಲಂಬಿತರಾಗಿದ್ದಾರೆ. ಸರ್ವೆಯಲ್ಲಿ ಇದು ತಿಳಿದುಬಂದಿತ್ತು. ಇವತ್ತು ಈ ಭಾಗದ ಅಧಿಕಾರಿಗಳನ್ನು ಕೇಳಿದ್ದೇನೆ. ಪರ್ಯಾಯ ವ್ಯವಸ್ಥೆ ಮಾಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರೀಕ್ಷೆಗಳು ಇರುವ ಕಡೆ ಸ್ಥಳೀಯ ಜಿಲ್ಲಾಡಳಿತಗಳು ಪರ್ಯಾಯ ಸಾರಿಗೆ ವ್ಯವಸ್ಥೆಯನ್ನು ಪರೀಕ್ಷಾರ್ಥಿಗಳಿಗೆ ಮಾಡಿಕೊಡಲಿವೆ’ ಎಂದು ಅವರು ತಿಳಿಸಿದ್ದಾರೆ.
ಖಾಸಗಿ ಬಸ್ ಮತ್ತು ಶಾಲಾ ಬಸ್ಗಳನ್ನು ಸರ್ಕಾರಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಲು ಅನುಮತಿ ಕೋರಿಕೆ
ನಾಲೆಯ ಬಸ್ ಬಂದ್ ನಿಮಿತ್ತ ಖಾಸಗಿ ಮತ್ತು ಶಾಲಾ ಬಸ್ಗಳನ್ನು ಸರ್ಕಾರಿ ಬಸ್ಗಳಲ್ಲಿ ನಿಲ್ಲಿಸಲು ಅವಕಾಶ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಮನವಿಯ ಪತ್ರ ಟಿವಿ9 ಕನ್ನಡ ಡಿಜಿಟಲ್ಗೆ ಲಭ್ಯವಾಗಿದೆ. ಸಾರ್ವಜನಿಕರಿಗೆ ಬಸ್ ಇಲ್ಲದೇ ಯಾವುದೇ ತೊಂದರೆಯಾಗಬಾರದು, ಸಂಚಾರ ಸೌಲಭ್ಯ ಒದಗಿಸಬೇಕು ಎಂಬ ನಿಟ್ಟಿನಲ್ಲಿ ಈ ಮನವಿ ಮಾಡಲಾಗಿದೆ.
ಇನ್ನೇನು ಕೆಲವೇ ಕ್ಷಣಗಳಲ್ಲಿ ನಾಳೆಯ ಬಸ್ ಬಂದ್ ಬಗ್ಗೆ ಸುದ್ದಿಗೋಷ್ಠಿ
ನಾಳೆಯ ಬಸ್ ಬಂದ್ ಕುರಿತು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಯಲಿದೆ. ನಾಳೆ ಯಾವ ರೀತಿಯಲ್ಲಿ ಹೋರಾಟ ನಡೆಯಲಿದೆ ಮಾಹಿತಿಯನ್ನು ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಲಿದ್ದಾರೆ. ನಾಳೆಯ ಬಸ್ ಬಂದ್ ಇಂದಿನಿಂದಲೇ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿದೆ. ಈಗಾಗಲೆ ಹಲವೆಡೆ ಬಸ್ ಇಲ್ಲೇ ಪ್ರಯಾಣಿಕರು ಕಂಗಾಲಾಗುತ್ತಿದ್ದಾರೆ.
Published On - Apr 06,2021 11:14 PM