ಬೆಂಗಳೂರು: ಕರ್ನಾಟಕದ 11 ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಂಗಳೂರು ನಗರ ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಸೋಮವಾರದಿಂದ (ಜೂನ್ 14) ಅನ್ಲಾಕ್ ಪ್ರಕ್ರಿಯೆ ಆರಂಭವಾಗಲಿದೆ. ಅಂತರ ಜಿಲ್ಲಾ ಸಂಚಾರಕ್ಕೂ ಅವಕಾಶ ನೀಡಲಾಗಿದೆ. ಆದರೆ ರಾಜ್ಯದಲ್ಲಿ ಅನ್ಲಾಕ್ ಪ್ರಕ್ರಿಯೆ ಆರಂಭವಾಗುವ ಜಿಲ್ಲೆಗಳೂ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಬಸ್ ಸಂಚಾರಕ್ಕೆ ನಿರ್ಬಂಧ ಎಂದಿನಂತೆ ಮುಂದುವರಿಯಲಿದೆ. ರಾಜ್ಯಾದ್ಯಂತ KSRTC, BMTC, ಖಾಸಗಿ ಬಸ್ ಸಂಚಾರಕ್ಕೆ ಅವಕಾಶವಿಲ್ಲ. ಬೆಂಗಳೂರಿನಲ್ಲಿ ಮೆಟ್ರೊ ರೈಲುಗಳ ಸಂಚಾರವೂ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಆಟೊ, ಟ್ಯಾಕ್ಸಿಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಆಟೊ, ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರು ಮಾತ್ರ ಇರಬೇಕು ಎಂಬ ನಿರ್ಬಂಧ ವಿಧಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಮದ್ಯದ ಪಾರ್ಸೆಲ್ ಪಡೆಯಲು ಮಧ್ಯಾಹ್ನ 2ರವರೆಗೆ ಬಾರ್ ರೆಸ್ಟೋರೆಂಟ್, ವೈನ್ ಸ್ಟೋರ್ಗಳಲ್ಲಿ ಅವಕಾಶ ಸಿಗಲಿದೆ. ಎಂಎಸ್ಐಎಲ್ಗಳಲ್ಲಿ ಮಧ್ಯಾಹ್ನ 2ರವರೆಗೆ ಪಾರ್ಸೆಲ್ ಸಿಗಲಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಿರುವ ಮಂಡ್ಯ, ಮೈಸೂರು, ಹಾಸನ, ಶಿವಮೊಗ್ಗ, ಬೆಳಗಾವಿ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ಡೌನ್ ಮುಂದುವರೆಯಲಿದೆ. ಈ ಜಿಲ್ಲೆಗಳಲ್ಲಿ ಈಗ ಅನುಷ್ಠಾನದಲ್ಲಿರುವ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಉಳಿದ ಎಲ್ಲ ಜಿಲ್ಲೆಗಳಲ್ಲಿ ಜೂನ್ 14ರಿಂದ ನಿರ್ಬಂಧ ಸಡಿಲಿಕೆ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಪ್ರತಿದಿನ ರಾತ್ರಿ 7ರಿಂದ ಬೆಳಿಗ್ಗೆ 5ರವರೆಗೆ ಕೊವಿಡ್ ಕರ್ಪ್ಯೂ ಜಾರಿಯಲ್ಲಿರುತ್ತದೆ ಎಂದು ಅವರು ಹೇಳಿದರು.
(Karnataka Unlock Guidelines No permission for METRO, KSRTC, BMTC bus transportation)
ಇದನ್ನೂ ಓದಿ: Bengaluru Unlock : ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ಬೆಂಗಳೂರು ಅನ್ಲಾಕ್